ಪುಣ್ಯ-ಭೂಮಿ ಪಾಪ ಭೂಮಿ ಎಂಬ ವಿಭಾಗ ಸರಿಯೇ?
31ನೆಯ ಪ್ರಶ್ನೆಯ [ದುಬೈ ಶ್ರೀಲಂಕಾಗಳಿಗೆ ಹೋದರೆ ತಪ್ಪಿಲ್ಲವೇ] ಮುಂದುವರೆದ ಭಾಗ. ಗುರುಗಳಿಗೆ ನಮನಗಳು. ಪ್ರಪಂಚ ವೆಲ್ಲವು ದೇವರ ಸೃಷ್ಟಿಯೇ ಆದಾಗ ಪಾಪ ಭೂಮಿ ಅಥವಾ ಪುಣ್ಯ ಭೂಮಿ ಎಂದು ಹೇಗಾಗುತ್ತವೆ. ಅಣುರೇಣು ತೃಣ ಕಾಷ್ಠವು ಆ ನಮ್ಮಪ್ಪ ತಿಮ್ಮಪ್ಪನದೆ ಅಲ್ಲವೆ ? ದಯವಿಟ್ಟು ತಿಳಿಸಿಕೊಡಿ 🙏🙏 — ಸಂಗೀತಾ ಪ್ರಸನ್ನ ಸಮಗ್ರವೂ ಭಗವಂತನ ಅಧೀನ, ಇದರಲ್ಲಿ ಸಂಶಯದ ಲೇಶವೂ ಇಲ್ಲ. ಸಮಸ್ತ ಪಾಪಭೂಮಿಗಳಲ್ಲಿನ ಅಣುರೇಣುಗಳಲ್ಲಿಯೂ ಶ್ರೀಹರಿ ವ್ಯಾಪಿಸಿದ್ದಾನೆ. ಇದರಲ್ಲಿಯೂ ಸಂಶಯವಿಲ್ಲ. ದೇವರು ಒಂದು ವಸ್ತುವಿನಲ್ಲಿದ್ದ ಮಾತ್ರಕ್ಕೆ ಅದು ಶುದ್ದವಾಗಬೇಕಾಗಿಲ್ಲ. ಪರಮಾತ್ಮ ಅದಕ್ಕೆ ಶುದ್ದಿಯನ್ನು ನೀಡಿದರೆ ಮಾತ್ರ ಅದು ಶುದ್ದವಾಗುತ್ತದೆ. ಕಲಿಯ ಅಂತರ್ಯಾಮಿಯಾಗಿ ಇರುವದೂ ಶ್ರೀಹರಿಯೇ. ಹಾಗೆಂದು ಕಲಿ ಉತ್ತಮ ಜೀವನಾಗುತ್ತಾನೆಯೇ? ಪೂಜ್ಯನಾಗುತ್ತಾನೆಯೇ? ಖಂಡಿತ ಇಲ್ಲ. ದೇವರಿದ್ದ ಮಾತ್ರಕ್ಕೆ ಎಲ್ಲವೂ ಶುದ್ಧ ವಾಗುವದಾದರೆ ಜಗತ್ತಿನಲ್ಲಿರುವ ಸಕಲ ಜಡಪದಾರ್ಥಗಳೂ, ಚೇತನಪದಾರ್ಥಗಳೂ ಸಮಾನ ಯೋಗ್ಯತೆಯವೇ ಆಗಬೇಕಾಗಿತ್ತು. ಗಂಗೆ ದೊಡ್ಡವಳು, ಕಾವೇರಿ ಸಣ್ಣವಳು ಯಾಕಾಗಬೇಕು. ಕಾವೇರಿ ದೊಡ್ಡವಳು ಯಮುನೆ ಸಣ್ಣವಳು ಯಾಕಾಗಬೇಕು. ಕಾರಣ, ಗಂಗಾ, ಕಾವೇರಿ, ಯಮುನಾದಿ ಸಕಲ ಪದಾರ್ಥಗಳಲ್ಲಿಯೂ ಶ್ರೀಹರಿಯೇ ಅಲ್ಲವೇ ಇರುವದು. ಹಾಗೆ ಪಾಪಕರ್ಮದಲ್ಲಿಯೂ ಶ್ರೀಹರಿಯೇ ಇರುವದು. ಪುಣ್ಯಕರ್ಮದಲ್ಲಿಯೂ ಶ್ರೀಹರಿಯೇ ಇರುವದು. ಮಗುವಿಗೆ ಹಾಲು ಕುಡಿಸುವ ಕ್ರಿಯೆ ಉತ್ತಮ ಕ್ರಿಯೆ, ಮಗುವನ್ನು ಕೊಲ್ಲುವ ಕ್ರಿಯೆ ಪಾಪಕ್ರಿಯೆ ಯಾಕಾಗಬೇಕು. ಎರಡೂ ಕ್ರಿಯೆಗಳಲ್ಲಿ ಶ್ರೀಹರಿಯೇ ಅಲ್ಲವೇ ಇರುವದು. [ ಇಷ್ಟೆಲ್ಲ ಯಾಕೆ, ಎಲ್ಲವೂ ನಮ್ಮಪ್ಪ ತಿಮ್ಮಪ್ಪನಲ್ಲದೇ ಅಲ್ಲವೇ ಅಂದಿದ್ದೀರಿ. ನಮ್ಮನೆಯ ಗುಂಡುಕಲ್ಲಿನದೇ ಅಲ್ಲವೇ ಎಂದು ಯಾಕೆ ಹೇಳಲಿಲ್ಲ. ಗುಂಡುಕಲ್ಲಿನಲ್ಲಿಯೂ, ತಿರುಪತಿಯಲ್ಲಿರುವ ವಿಗ್ರಹದಲ್ಲಿಯೂ ಇರುವದು ಒಬ್ಬನೇ ಶ್ರೀಹರಿಯಲ್ಲವೇ. ನೀವ್ಯಾಕೆ, ಗುಂಡುಕಲ್ಲನ್ನು ಬಿಟ್ಟು ತಿಮ್ಮಪ್ಪನನ್ನು ಹೇಳಿದಿರಿ? ಯಾಕೆಂದರೆ ಗುಂಡುಕಲ್ಲಿನಲ್ಲಿ ಪೂಜಾರ್ಹವಾದ ಸನ್ನಿಧಾನವಿಲ್ಲ. ತಿರುಪತಿಯ ಪ್ರತಿಮೆಯಲ್ಲಿ ಅನಂತ ಮತ್ತು ಅದ್ಭುತವಾದ ಸನ್ನಿಧಾನವಿದೆ. ಎರಡೂ ಕಲ್ಲೇ. ಆದರೆ ಒಂದನ್ನು ಮೈ ತೊಳೆಯಲು ಉಪಯೋಗಿಸುತ್ತೇವೆ. ಇನ್ನೊಂದು ಕಲ್ಲು ಸಮಗ್ರ ದೇವತಾಸಮುದಾಯದಿಂದ, ಸ್ವಯಂ ಬ್ರಹ್ಮದೇವರಿಂದಲೂ ಪೂಜಿತವಾಗುತ್ತಿದೆ. ಯಾಕೆ? ದೇವರ ಪೂಜಾರ್ಹವಾದ ಸನ್ನಿಧಾನವಿದ್ದ ಕಾರಣಕ್ಕೆ. ] ದೇವರಿದ್ದ ಮಾತ್ರಕ್ಕೆ ಅದು ಶುದ್ದವಾಗುವದಿಲ್ಲ. ದೇವರಿರುವದರಿಂದ ಅದು ಅಸ್ತಿತ್ವಕ್ಕೆ ಬರುತ್ತದೆ. ಒಂದು ವಸ್ತು ಉತ್ತಮವಾಗಬೇಕಾದರೆ ಅದು ದೇವರಿಗೆ ಪ್ರಿಯವಾಗಬೇಕು. ಯಾವ ಕರ್ಮಗಳು, ವಸ್ತುಗಳು, ಪ್ರದೇಶಗಳು, ದೇವರಿಗೆ ಪ್ರಿಯವೋ ಅವು ಉತ್ತಮ. ಯಾವ ಕರ್ಮಗಳು, ವಸ್ತುಗಳು, ಪ್ರದೇಶಗಳು ದೇವರಿಗೆ ಅಪ್ರಿಯವೋ ಅವು ಅಧಮ. ಇನ್ನು ದೇವರು ಸೃಷ್ಟಿ ಮಾಡಿದ್ದು ಪಾಪಿಷ್ಠವಾಗಲಿಕ್ಕೆ ಹೇಗೆ ಸಾಧ್ಯ? ದೇವರು ಇದು ಪಾಪಿಷ್ಠವಾಗಲಿ ಎಂದು ಬಯಸಿಯೇ ಸೃಷ್ಟಿ ಮಾಡಿದ್ದಾನೆ, ಅದಕ್ಕಾಗಿ ಅದು ಪಾಪಿಷ್ಠವಾಗುತ್ತದೆ. ಸಂಸಾರವು ನಮಗೆ ಬಂಧಕವಾಗಲಿ ಎಂದು ಭಗವಂತ ಬಯಸಿದ್ದಾನೆ, ಅದಕ್ಕಾಗಿ ಅದು ನಮಗೆ ಬಂಧಕವಾಗಿದೆ. ತೊಂದರೆ ನೀಡುತ್ತದೆ. ಹಾಗೆಯೇ ಸಮಗ್ರ ಪೃಥ್ವಿಯನ್ನು ಸೃಷ್ಟಿ ಮಾಡಿದ ಭಗವಂತ, ಸಾಧನೆಗಾಗಿ ಭರತಭೂಮಿಯನ್ನು, ಭೋಗಕ್ಕಾಗಿ ಕಿಂಪುರುಷಾದಿ ಪ್ರದೇಶಗಳನ್ನು, ಪಾಪಕ್ಕಾಗಿ ಕೆಲವು ಭೂಮಿಗಳನ್ನು ಸೃಷ್ಟಿ ಮಾಡಿದ್ದಾನೆ. ಯಾವುದು ಪುಣ್ಯಪ್ರದೇಶವೋ ಅಲ್ಲಿದ್ದು ಸಾಧನೆಯನ್ನು ಮಾಡಬೇಕು. ಯಾವುದು ಉದಾಸೀನ ಪ್ರದೇಶಗಳೋ ಅಲ್ಲಿಗೆ ಹೋಗಬಾರದು. ಯಾವುದು ನಿಷಿದ್ಧ ಪ್ರದೇಶಗಳೋ ಅಲ್ಲಿಗೆ ಸರ್ವಥಾ ಹೋಗಬಾರದು. ಕೋಟಿಕೋಟಿ ಜನ್ಮಗಳಲ್ಲಿ ಸಾಧನೆ ಮಾಡಿ, ಅನಂತ ಜನ್ಮಗಳನ್ನು ದಾಟಿ ಪಡೆದಿರುವ ಈ ಅದ್ಭುತ ಬ್ರಾಹ್ಮಣ್ಯವನ್ನು ಕೇವಲ ಒಂದು ಊರಿಗಾಗಿ ಬಿಡಲು ಸಾಧ್ಯವೇ? ಬಿಡುವದು ಯುಕ್ತವೇ? — ವಿಷ್ಣುದಾಸ ನಾಗೇಂದ್ರಾಚಾರ್ಯ