ವಿದೇಶದಲ್ಲಿ ಸಂಕಲ್ಪ ಹೇಗೆ?
ಆಚಾರ್ಯರೇ, ಈ ಪ್ರಶ್ನೆಯನ್ನು ಎರಡನೆಯ ಬಾರಿಗೆ ಬರೆಯುತ್ತಿದ್ದೇನೆ. ನಾನು ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೇ ಹೊಗಲಿದ್ದೇನೆ. ನಾನು ಸಂಕಲ್ಪ ಹೇಗೆ ಮಾಡಬೇಕು, ದಯವಿಟ್ಟು ತಿಳಿಸಿ. — ಸುಬ್ರಹ್ಮಣ್ಯ ಭಾರದ್ವಾಜ್. ಈ ಪ್ರಶ್ನೆಗೆ ನಾನು ನೀಡುವ ಉತ್ತರ ನಿಮಗೆ ಸಮಾಧಾನ ನೀಡುವದಿಲ್ಲ ಎಂದು ತಿಳಿದಿದ್ದರಿಂದ ನಾನು ಮೊದಲಿಗೆ ಉತ್ತರಿಸಿರಲಿಲ್ಲ. ಶಾಸ್ತ್ರದಲ್ಲಿದ್ದುದನ್ನು ತಿಳಿಸಬೇಕಾದ್ದು ನನ್ನ ಕರ್ತವ್ಯ. ಆದ್ದರಿಂದ ವಸ್ತುಸ್ಥಿತಿಯ ಉತ್ತರವನ್ನು ನೀಡುತ್ತಿದ್ದೇನೆ. 1. ಭಾರತವನ್ನು ಹೊರತುಪಡಿಸಿದ ಬೇರೆ ಯಾವ ಪ್ರದೇಶಗಳೂ ಕರ್ಮಭೂಮಿ ಅಲ್ಲ ಎನ್ನುವದು ಶಾಸ್ತ್ರಗಳ ನಿರ್ಣಯವಾದ ಬಳಿಕ ಅಲ್ಲಿ ಸತ್ಕರ್ಮಗಳನ್ನು ಮಾಡುವದೆಂತು? 2. ಕರ್ಮದ ಆಚರಣೆ ಮಾಡಲು ದೇಶ ಎಷ್ಟು ಮುಖ್ಯವೋ ಅಷ್ಟೇ ಕಾಲವೂ ಮುಖ್ಯ. ಆಸ್ಟ್ರೇಲಿಯಾದಲ್ಲಿ ಭಾರತಕ್ಕಿಂತ ಸುಮಾರು ನಾಕೈದು ಗಂಟೆಗಳ ಮೊದಲು ಸೂರ್ಯೋದಯವಾಗುತ್ತದೆ. ಅಮೇರಿಕೆಗೂ ಭಾರತಕ್ಕೂ ಸರಿಸುಮಾರು ಹನ್ನೆರಡು ಹದಿಮೂರು ಗಂಟೆಗಳ ಅಂತರವಿದೆ. ಅಂದಮೇಲೆ ಭಾರತದ ತಿಥಿ ನಕ್ಷತ್ರಗಳು ಬೇರೆಯ ಕಡೆಯಲ್ಲಿ ಬರುವ ಸಾಧ್ಯತೆಯೇ ಇಲ್ಲ. ಇಲ್ಲಿ ಪಂಚಮಿಯಿದ್ದಾಗ ಅಮೇರಿಕೆಯಲ್ಲಿ ತೃತೀಯಾ ಚತುರ್ಥಿ ಇರುತ್ತದೆ. ಅಸ್ಟ್ರೇಲಿಯಾದಲ್ಲಿ ಷಷ್ಠೀ. ಇನ್ನು ನಾರ್ವೆಯಂತಹ ಪ್ರದೇಶಗಳಿಗೆ ತಿಥಿಯನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ದೃಗ್ಗಣಿತದ ಪ್ರಕಾರ ಇಂದಿಗೆ ಕೆಲವರು ತಿಥಿಗಳ ಲೆಕ್ಕಾಚಾರವನ್ನು ಹಾಕಿದರೂ ಅದು ಅನುಷ್ಠಾನಕ್ಕೆ ಯೋಗ್ಯವಲ್ಲ. ಅಂದಮೇಲೆ, ಅಲ್ಲಿ ಅನುಷ್ಠಾನ ಮಾಡಲು ತಿಥಿಯ ನಿರ್ಣಯವನ್ನೇ ಇನ್ನೂ ಯಾರು ಮಾಡಿಲ್ಲ. ಹೀಗೆ, ದೇಶ-ಕಾಲಗಳಲ್ಲಿ ದೇಶ ನಿಷಿದ್ಧ, ಕಾಲ ಅನಿರ್ಣೀತ. ಅಂದಮೇಲೆ ಸಂಕಲ್ಪ ಹೇಗೆ ಹುಟ್ಟುತ್ತದೆ. ಹಾಗಾದರೆ ಸಂಕಲ್ಪವನ್ನೇ ಮಾಡಬಾರದೇ ಎಂಬ ಪ್ರಶ್ನೆಗೆ ನನ್ನ ಉತ್ತರ ಹೀಗಿದೆ — ವಿದೇಶಗಳಲ್ಲಿ ಕರ್ಮಾಂಗವಾದ ಸಂಕಲ್ಪವಿಲ್ಲ. ಕರ್ಮವೂ ಇಲ್ಲ. ಆದರೆ, ಹರಿಸ್ಮರಣೆಗೆ, ಹರಿಸಂಕೀರ್ತನೆಗೆ, ಉಪವಾಸ ಚಾತುರ್ಮಾಸ್ಯಗಳಿಗೆ (ತಿಥಿಗಳ ಸಮಸ್ಯೆ ಇದ್ದೇ ಇದೆ) ಸರ್ವಥಾ ನಿರ್ಬಂಧವಿಲ್ಲ. ಹೀಗಾಗಿ ದೇಶ-ಕಾಲಗಳ ಭಾಗವನ್ನು ತ್ಯಾಗ ಮಾಡಿ (ತಿಥಿಯ ನಿರ್ಣಯವಾದರೆ ಕಾಲವನ್ನು ಹೇಳಿ) ಅಸ್ಮದ್ಗುರ್ವಂತರ್ಗತ, ಸಮಸ್ತಗುರ್ವಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ … ಕರ್ಮ ಕರಿಷ್ಯೇ ಎಂದು ಸಂಕಲ್ಪ ಮಾಡುವದು ಒಳಿತು. ನಮ್ಮ ಜೀವದ ಉನ್ನತಿ ಅಡಗಿರುವ ಈ ಪವಿತ್ರ ನೆಲವನ್ನು ಬಿಟ್ಟು ಹೋಗದಿರುವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾ? ಮತ್ತೊಮ್ಮೆ ಆಲೋಚಿಸಿ. ಉತ್ತರದ ಸಂಕ್ಷೇಪ ಹೀಗಿದೆ — ಕರ್ಮವೇ ಮಾಡಬಾರದ ಭೂಮಿಯಲ್ಲಿ ಕರ್ಮದ ಸಂಕಲ್ಪ ಹೇಗೆ ಇರಲು ಸಾಧ್ಯ? ಕರ್ಮವೂ ಇಲ್ಲ, ಸಂಕಲ್ಪವೂ ಇಲ್ಲ. ಇನ್ನು ಅನಿವಾರ್ಯವಾಗಿ ಹೋಗಬೇಕಾದವರು, ಹೋಗಿರವವರು, ದೇಶದ ಭಾಗವನ್ನು ಪೂರ್ಣವಾಗಿ ಕೈಬಿಟ್ಟು, ಕಾಲದ ನಿರ್ಣಯವಿದ್ದರೆ ಅದನ್ನು ಹೇಳಿ, ನಿರ್ಣಯವಿಲ್ಲದಿದ್ದರೆ ಅದನ್ನೂ ಬಿಟ್ಟು, ಶ್ರೀವಿಷ್ಣುಪ್ರೇರಣಯಾ ಶ್ರೀ ವಿಷ್ಣುಪ್ರೀತ್ಯರ್ಥಂ ಎಂದಷ್ಟೆ ಸಂಕಲ್ಪ ಮಾಡಿ. — ವಿಷ್ಣುದಾಸ ನಾಗೇಂದ್ರಾಚಾರ್ಯ