ಸ್ನಾನದ ಬಳಿಕ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗಬಹುದೇ?
ಆಚಾರ್ಯರ ಪಾದಕ್ಕೆ ನಮಸ್ಕಾರ. ಆಚಾರ್ಯರೇ, ಸಂಧ್ಯಾವಂದನೆ, ಪೂಜೆ ಬೆಳಗಿನ ತಿಂಡಿ ಆದ ನಂತರ ತಲೆಗೆ ತೆಂಗಿನ ಎಣ್ಣೆ ಹಚ್ಚುವ ಅಭ್ಯಾಸ ನಮ್ಮಲ್ಲಿ ಹಲವರಿಗೆ ಇದೆ. ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿ ಆಫೀಸಿಗೆ ಅಥವಾ ಹೊರಗಡೆಗೆ ಹೋಗ್ತಾರೆ. ನನ್ನ ಪ್ರಶ್ನೆ ಏನೆಂದರೆ, ತಲೆಗೆ ಎಣ್ಣೆ ಹಚ್ಚಿ (ಏಕಾದಶಿ ಹೊರತುಪಡಿಸಿ) ದೇವಸ್ಥಾನ ಮತ್ತು ಮಠಗಳಂತಹ ಪ್ರದೇಶಗಳಿಗೆ ಹೋಗಬಹುದೇ? ತಲೆಯಲ್ಲಿ ಎಣ್ಣೆ ಇದ್ದರೆ ಮಂತ್ರಾಕ್ಷತೆ ಧರಿಸಬಹುದೆ? — ಪ್ರಸಾದ್ ರಾವ್. ತಲೆಗೆ ಎಣ್ಣೆ ಹಚ್ಚುವದು ಎರಡು ಸಂದರ್ಭದಲ್ಲಿ. ಅಭ್ಯಂಗಸ್ನಾನ ಮಾಡಲು, ಮತ್ತು ಕೂದಲನ್ನು ಒಪ್ಪವಾಗಿಡಲು. ಅಭ್ಯಂಗಕ್ಕಾಗಿ ತಲೆಗೆ ಎಣ್ಣೆ ಹಚ್ಚಿದಾಗ, ಮಲಮೂತ್ರ ವಿಸರ್ಜನೆ ಮಾಡಬಾರದು, ಮಠ, ದೇವಸ್ಥಾನಗಳಿಗೆ ಹೋಗಬಾರದು. ಸ್ನಾನವಾದ ಬಳಿಕ, ನೀವು ಹೇಳಿದಂತೆ ತೆಂಗಿನೆಣ್ಣೆಯನ್ನು ಹಚ್ಚಿಕೊಂಡಾಗ ಮಠ ದೇವಸ್ಥಾನಗಳಿಗೆ ಹೋಗಬಹುದು ಮತ್ತು ಮಂತ್ರಾಕ್ಷತೆಯನ್ನೂ ಧರಿಸಬಹುದು. ಮೈಗೆ, ತಲೆಗೆ ಎಣ್ಣೆ ಹಚ್ಚಿಕೊಂಡಾಗ ಏನೆಲ್ಲ ನಿಷೇಧಗಳನ್ನು ಹೇಳಿದ್ದಾರೆ ಅದು ಅಭ್ಯಂಗಕ್ಕಾಗಿ ಎಣ್ಣೆ ಹಚ್ಚಿಕೊಂಡಾಗ ಮಾತ್ರ. ತಲೆಯನ್ನು ಒಪ್ಪ ಇಡುವದಕ್ಕಾಗಿ, ಅಥವಾ ಮೈ ಒಡೆದಿದೆ ಎನ್ನುವ ಕಾರಣಕ್ಕಾಗಿ ಎಣ್ಣೆ ಹಚ್ಚಿಕೊಂಡಾಗ ಆ ನಿಷೇಧವಿಲ್ಲ. ಗಮನಿಸಿ —ಅಭ್ಯಂಗ ಮಾಡಿದ ದಿವಸ, ಅರ್ಥಾತ್ ಎರೆದುಕೊಂಡ ದಿವಸ ಸ್ನಾನದ ನಂತರ, ಹೆಣ್ಣಾಗಲೀ ಗಂಡಾಗಲೀ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು ಎಂದು ಹಿರಿಯರು ಆಚರಿಸಿಕೊಂಡ ಬಂದ ಸಂಪ್ರದಾಯ. ಹಚ್ಚಿಕೊಂಡರೆ ತಾಯಿಯ ತವರುಮನೆಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ. ಗಂಡಸರು ನಿತ್ಯ ತಲೆಗೆ ಸ್ನಾನ ಮಾಡಬೇಕು. ಆ ಸ್ನಾನದ ನಂತರ ಎಣ್ಣೆ ಹಚ್ಚಿಕೊಳ್ಳಬಹುದು. ಆದರೆ, ಎರೆದುಕೊಂಡು ಸ್ನಾನ ಮಾಡಿದ ನಂತರ ಎಣ್ಣೆ ಹಚ್ಚಿಕೊಳ್ಳಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ