ಬಿಳುಪು ಖಾಯಿಲೆಯವರ ಸಾಧನೆ ಹೇಗೆ?
ನಮಸ್ಕಾರ ಆಚಾರ್ಯರೇ,ನನ್ನ ಮೈಮೇಲೆ ಬಿಳುಪು ಕಲೆಗಳಾಗಿವೆ, ಈ ಕಾಯಿಲೆ ಯಿಂದ ಬಳಲುವವರು ಈ ಕಾರಣದಿಂದ ದೇವರ ಪೂಜೆ ಹಾಗೂ ಮಾಡಿ ಕಾರ್ಯಕ್ಕೆ ನಿಷಿಧ್ದವೇ ದಯವಿಟ್ಟು ತಿಳಿಸಿ ಆಚಾರ್ಯರೇ.ಪರಿಹಾರ ತಿಳಿಸಿರಿ. ಹರೇ ಶ್ರೀನಿವಾಸ. — ಹೆಸರು ಬೇಡ. ಹೌದು. ಎಲ್ಲ ರೀತಿಯ ಮಡಿಯ ಕಾರ್ಯಕ್ಕೆ ನಿಷಿದ್ಧ. ಮೈಮೇಲೆ ಬಿಳಿಪು ಕಲೆ ಇರುವವರು, ಅಥವಾ ಶಾಸ್ತ್ರದ ದೃಷ್ಟಿಯಲ್ಲಿ ಬ್ರಾಹ್ಮಣ್ಯ ಕಳೆದುಕೊಂಡವರು ತಮ್ಮ ಮಟ್ಟಿಗೆ ತಾವು ಸಂಧ್ಯಾವಂದನೆ, ದೇವರಪೂಜೆಗಳನ್ನು ಮಾಡಿಕೊಳ್ಳಬೇಕು. ಅಂದರೆ, ಅವರು ಪೂಜೆ ಮಾಡಿ ಮತ್ತೊಬ್ಬರು ಆ ತೀರ್ಥವನ್ನು ಸ್ವೀಕರಿಸಬೇಕು ಎಂದು ಆಗ್ರಹ ಹಿಡಿಯಬಾರದು. ಅಥವಾ ಮತ್ತೊಬ್ಬರಿಗೆ ಬಡಿಸಲು, ಒಟ್ಟಾರೆ ಯಾವುದೇ ಶುಚಿಯ ಕಾರ್ಯವನ್ನು ಮಾಡಲು ಮುಂದಾಗಬಾರದು. ಸಂಧ್ಯಾವಂದನೆ, ದೇವರಪೂಜೆ ಮುಂತಾದವನ್ನು ತಮ್ಮ ಮಟ್ಟಿಗೆ ತಾವು ಮಾಡಿಕೊಂಡು ಸಾಧನೆ ಮಾಡಿಕೊಳ್ಳಲೇಬೇಕು. ಮಡಿಯ ದೃಷ್ಟಿಯಲ್ಲದಿದ್ದರೂ, ಸೌಂದರ್ಯ ಮುಂತಾದ ದೃಷ್ಟಿಗಳಿಂದ ಸಮಾಜ ಇಂತಹವರನ್ನು ದೂರ ಮಾಡುವದು ಸತ್ಯ. ಹೀಗಾಗಿ ಈ ರೀತಿಯ ಖಾಯಿಲೆಗಳು ನಮ್ಮಲ್ಲಿ ವೈರಾಗ್ಯವನ್ನು ಮೂಡಿಸುವ ದಿವ್ಯಾಸ್ತ್ರಗಳು. “ಈ ಸಮಾಜದ ಜನ ಇಷ್ಟೇ. ಅವರಪೇಕ್ಷಿಸುವ ಗುಣ ನಮ್ಮಲ್ಲಿಲ್ಲದಿದ್ದರೆ, ಅವರಿಗೆ ಬೇಡವಾದ ದೋಷ ನಮ್ಮಲ್ಲಿದ್ದರೆ ನಮ್ಮನ್ನು ದೂರ ಮಾಡಿಯೇ ಮಾಡುತ್ತಾರೆ. ಹೀಗಾಗಿ ನಾನೇ ಅವರಿಂದ ದೂರವಿರಬೇಕು” ಎಂದು ನಿಶ್ಚಯಿಸಬೇಕು. ಯಾವುದೇ ದೋಷವಿದ್ದರೂ ನಮ್ಮನ್ನು ಸ್ವೀಕರಿಸುವ ನಮ್ಮನ್ನು ದೋಷನಿರ್ಮುಕ್ತರನ್ನಾಗಿ ಮಾಡುವ ಶ್ರೀಹರಿಯ ಪಾದಾಶ್ರಯಣವನ್ನು ಮಾಡಬೇಕು. ಮತ್ತು, ನಮಗೆ ಸಲ್ಲದ ಕಾರ್ಯಗಳನ್ನು ಮಾಡಬಾರದು. ಮಾಡಲು ಹೋದರೆ ಶಾಸ್ತ್ರದ ದೃಷ್ಟಿಯಲ್ಲಿ ತಪ್ಪಾಗುತ್ತದೆ ಮತ್ತು ಸಮಾಜದಲ್ಲಿ ಅವಮಾನ. ಎರಡೂ ಬೇಡ. ಹತ್ತಾರು ಜನರು ಪಾಲ್ಗೊಳ್ಳಬೇಕಾದ ಹೋಮ, ಹವನ ಮುಂತಾದ ಯಾವುದನ್ನೂ ಮಾಡದೆ, ಸಂಧ್ಯಾವಂದನೆ, ದೇವರಪೂಜೆ, ಏಕಾದಶೀ, ಚಾತುರ್ಮಾಸ್ಯ, ಭಗವನ್ನಾಮಸ್ಮರಣೆ ಮುಂತಾದವನ್ನು ಮಾಡಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಯಾವುದಕ್ಕಾದರೂ ನಿಷೇಧ ಇರಬಹುದು, ಇಲ್ಲದಿರಬಹುದು. ಹರಿಯ ನಾಮಸ್ಮರಣೆಗೆ, ದಾಸಸಾಹಿತ್ಯದಿಂದ ಶ್ರೀಹರಿಯನ್ನು ಒಲಿಸಿಕೊಳ್ಳುವ ದಿವ್ಯಕ್ರಮಕ್ಕೆ ಯಾರದೂ ವಿರೋಧವಿಲ್ಲ. ಶಕ್ಯವಿದ್ದಷ್ಟು, ಅನುಮತಿಯಿದ್ದಷ್ಟು ಧರ್ಮಾಚರಣೆ. “ನಮ್ಮ ಪಾಪಕರ್ಮದ ಅನುಸಾರವಾಗಿ ಭಗವಂತ ಈ ಶಿಕ್ಷೆ ನೀಡಿದ್ದಾನೆ. ಪಾಪಪ್ರಕ್ಷಾಲನೆಯಾಗಲಿ, ಭಗವಂತನ ಆಜ್ಞೆಯನ್ನು ಪ್ರೀತಿಯಿಂದ ಅನುಸರಿಸುತ್ತೇನೆ” ಎಂಬ ಅನುಸಂಧಾನ ತಪ್ಪದೇ ಮನಸ್ಸಿನಲ್ಲಿರಬೇಕು. ಇದೊಂದಕ್ಕೇ ಅಲ್ಲ, ಸಕಲ ಕಷ್ಟಗಳಲ್ಲಿಯೂ ಇದೇ ಅನುಸಂಧಾನ. ಇಟ್ಟಾಂಗೆ ಇರುವೆನೋ ಹರಿಯೇ, ಎನ್ನ ದೊರೆಯೇ. — ವಿಷ್ಣುದಾಸ ನಾಗೇಂದ್ರಾಚಾರ್ಯ