02/10/2016
1. ಹದಿನಾಲ್ಕನೆಯ ಸರ್ಗದ ಮಹತ್ತ್ವ ಮತ್ತು ಸಾರಾಂಶ ಸಮಗ್ರ ಮಾಧ್ವಜ್ಞಾನಿಗಳ ಬದುಕಿಗೆ ಆದರ್ಶವಾದ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ದಿನಚರಿಯ ನಿರೂಪಣೆ ಈ ಸರ್ಗದ ವಿಷಯ. ಅದರ ಮಹತ್ತ್ವದ ನಿರೂಪಣೆಯೊಂದಿಗೆ ಈ ಸರ್ಗದಲ್ಲಿರುವ 55 ಶ್ಲೋಕಗಳ ಪಕ್ಷಿನೋಟ ಇಲ್ಲಿದೆ. 2. ಆಚಾರ್ಯರು ಶುದ್ಧಿಪ್ರಿಯರು ಆಚಾರ್ಯರ ಗ್ರಂಥಗಳನ್ನು ಕಳುವು ಮಾಡಿಸಿದ ಪದ್ಮತೀರ್ಥ, ಗ್ರಾಮಸ್ಥರ ಮತ್ತು ಜಯಸಿಂಹನ ಭಯದಿಂದ ಊರು ತೊರೆದು ಓಡಿ ಹೋಗಿರುತ್ತಾನೆ. ಆದರೆ, ಆ ವಾಮಾಚಾರಿ ಪದ್ಮತೀರ್ಥನ ವಶೀಕರಣಕ್ಕೆ ಒಳಗಾಗಿದ್ದ ಗ್ರಾಮಮುಖ್ಯಸ್ಥರನ್ನು ಜಯಸಿಂಹರಾಜ ತನ್ನ ಸಾಮರ್ಥ್ಯದಿಂದ ಸರಿದಾರಿಗೆ ತರುತ್ತಾನೆ. ಗ್ರಾಮಸ್ಥರು, ಗ್ರಾಮಮುಖ್ಯಸ್ಥರು, ರಾಜ ಇವರೆಲ್ಲರೂ ಶುದ್ಧರನ್ನಾಗಿ ಮಾಡಿದ ಶ್ರೀಮದಾಚಾರ್ಯರು ವಿಷ್ಣುಮಂಗಲಕ್ಕೆ ಬಂದರು ಎಂಬ ಮಾತಿನ ವಿವರಣೆ ಇಲ್ಲಿದೆ. 3. ಶ್ರೀಮದಾಚಾರ್ಯರಲ್ಲಿ ಪ್ರಾರ್ಥನೆ ಪ್ರಜೆಗಳನ್ನು ಕಾಯಬೇಕಾದ ಗ್ರಾಮಮುಖ್ಯಸ್ಥರು ಶುದ್ಧರಾಗದ ಹೊರತು ಗ್ರಂಥಗಳನ್ನು ಸ್ವೀಕರಿಸುವದಿಲ್ಲ ಎಂದು ಹೇಳಿ ರಾಜನಿಂದ ಅವರನ್ನು ಸರಿದಾರಿಗೆ ತರಿಸಿದ ಶ್ರೀಮದಾಚಾರ್ಯರಲ್ಲಿ ನಾವು ಮಾಡಬೇಕಾದ, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಹೇಳಿಕೊಟ್ಟ ಒಂದು ದಿವ್ಯ ಪ್ರಾರ್ಥನೆಯ ವಿವರಣೆ ಇಲ್ಲಿದೆ. 4. ಜಯಸಿಂಹರಾಜನಿಂದ ಗ್ರಂಥಗಳ ಸಮರ್ಪಣೆ ಭಕ್ತಿಪೂರ್ವಕವಾಗಿ ಆಚಾರ್ಯರನ್ನು ಕರೆತಂದ ಆ ರಾಜ, ಅಧಿಕಾರಿಗಳು ಮತ್ತು ಗ್ರಾಮಸ್ಥರು ಆಚಾರ್ಯರಲ್ಲಿ ಕ್ಷಮಾಯಾಚನೆಯನ್ನು ಮಾಡಿ ಕಳುವಾಗಿದ್ದ ಗ್ರಂಥಗಳನ್ನು ಆಚಾರ್ಯರಿಗೆ ಸಮರ್ಪಿಸುತ್ತಾರೆ. ಆಚಾರ್ಯರು ಶ್ರೀ ಶಂಕರಪಂಡಿತರಿಗೆ ಗ್ರಂಥಪಾಲನೆಯ ಜವಾಬ್ದಾರಿ ಯನ್ನು ನೀಡಿ ಆ ಗ್ರಂಥಗಳನ್ನು ಸ್ವೀಕರಿಸುತ್ತಾರೆ. ಆ ಘಟನೆಯ ವಿವರ ಇಲ್ಲಿದೆ. 5. ಆಚಾರ್ಯರ ಪಾದಧೂಳಿಯ ವರ್ಣನೆ ಜಯಸಿಂಹರಾಜನ ವಿನಯ, ಗ್ರಾಮಮುಖ್ಯಸ್ಥರಲ್ಲಾದ ಬದಲಾವಣೆ, ಗ್ರಾಮಸ್ಥರ ಭಕ್ತಿ, ಶ್ರೀಮದಾಚಾರ್ಯರ ಮಾಹಾತ್ಮ್ಯ, ಅವರು ತಮ್ಮ ತಮ್ಮಘಿನಾದ ಶಂಕರಪಂಡಿತರ ಮೇಲೆ ತೋರಿದ ವಾತ್ಸಲ್ಯ ಇವೆಲ್ಲವನ್ನು ಕಂಡು ಹಿಗ್ಗಿದ, ಆಸ್ಥಾನವಿದ್ವಾಂಸರಾದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಆ ತುಂಬಿದ ಸಭೆಯಲ್ಲಿ ಶ್ರೀಮದಾಚಾರ್ಯರ ಪಾದಧೂಳಿಯನ್ನು ಸ್ತುತಿಸಿ ಜಯಸಿಂಹರಾಜನನ್ನು ಆಶೀರ್ವದಿಸುತ್ತಾರೆ. ಅವರು ಉತ್ಪ್ರೇಕ್ಷೆ ಮಾಡಿ ಆಚಾರ್ಯರನ್ನು ಸ್ತೋತ್ರ ಮಾಡಿದ್ದಲ್ಲ ಎನ್ನುವದನ್ನು ವಿವರಿಸಿ, ಆ ಪಂಡಿತಾಚಾರ್ಯರು ತತ್ವಪ್ರದೀಪ, ವಾಯುಸ್ತುತಿ ಮುಂತಾದ ಗ್ರಂಥಗಳಲ್ಲಿ ಆಚಾರ್ಯರ ಪಾದಧೂಳಿಯನ್ನು ವರ್ಣಿಸಿರುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. 6. ವಿಷ್ಣುಮಂಗಲದಲ್ಲಿ ಆಚಾರ್ಯರ ವಾಸ ಜಯಸಿಂಹರಾಜನ ಪ್ರಾರ್ಥನೆಯಂತೆ ಹಾಗೂ ತ್ರಿವಿಕ್ರಮಪಂಡಿತಾಚಾರ್ಯರ ಉದ್ಧಾರಕ್ಕಾಗಿ ಆಚಾರ್ಯರು ಅನೇಕ ದಿವಸಗಳವರೆಗೆ ವಾಸವಿರುತ್ತಾರೆ. ಆಚಾರ್ಯರ ವಿಷ್ಣುಮಂಗಲದ ವಾಸದಿಂದ ಅಧಮಜನರು ಕುದ್ದುಹೋದರು, ಮಧ್ಯಮಜನರು ಆಚಾರ್ಯರ ಮಾಹಾತ್ಮ್ಯಗಳನ್ನು ಕಂಡು ಆಶ್ಚರ್ಯಕ್ಕೊಳಗಾದರು, ಉತ್ತಮಜನರು ತಮ್ಮ ಉದ್ಧಾರವನ್ನು ಕಂಡುಕೊಂಡರು ಎಂಬ ಮಾತಿನೊಂದಿಗೆ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 54:31
Size: 9.54 MB