Upanyasa - VNU318

MV118 ಪರಿಣಾಮವಾದದ ಖಂಡನೆ

03/10/2016

ಪರಿಣಾಮವಾದದ ಖಂಡನೆ

ಪರಬ್ರಹ್ಮ ಎಂಬ ತತ್ವವನ್ನು ಒಪ್ಪಿ, ಪ್ರಕೃತ್ಯಾದಿ ತತ್ವಗಳನ್ನು ಒಪ್ಪದೇ ಪರಬ್ರಹ್ಮನೇ ಜಗತ್ತಾಗಿ ವಿಕಾರ ಹೊಂದುತ್ತಾನೆ, ಅಂದರೆ, ಪರಬ್ರಹ್ಮನೇ ಜಗತ್ತು ಜಗತ್ತೇ ಪರಬ್ರಹ್ಮ ಎಂಬ ಪರಿಣಾಮವಾದವನ್ನು ಭಾಸ್ಕರ ಮುಂತಾದ ವಾದಿಗಳು ಮಂಡಿಸುತ್ತಾರೆ. ವಿಕಾರ ಎನ್ನುವದು ಚೇತನದ ಧರ್ಮವಲ್ಲ ಕೇವಲ ಅಚೇತನದ ಧರ್ಮ ಎನ್ನುವದನ್ನು ಸಮರ್ಥವಾಗಿ ಪ್ರತಿಪಾದಿಸಿ ಈ ಪರಿಣಾಮವಾದವನ್ನು ಆಚಾರ್ಯರು ಖಂಡಿಸಿರುವ ಬಗೆಯನ್ನು, ಅನುವ್ಯಾಖ್ಯಾನದ ಮಾತುಗಳ ವಿವರಣೆಯೊಂದಿಗೆ ಇಲ್ಲಿ ವಿವರಿಸಲಾಗಿದೆ.


ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಶ್ರೀಮದಾಚಾರ್ಯರ ಪ್ರವಚನಕ್ಕೆ ಆಗಮಿಸುತ್ತಿದ್ದಾರೆ. ಆಚಾರ್ಯರು ಪ್ರತಿಯೊಂದು ದರ್ಶನದ ಪ್ರತಿಪಾದನೆಗಳನ್ನೂ ವಿಮರ್ಶಿಸುತ್ತ ವೇದಸಿದ್ಧಾಂತವನ್ನು ಮಂಡಿಸುತ್ತಿದ್ದಾರೆ. 

ಮೊದಲಿಗೆ ಜಗತ್ತಿನ ಸೃಷ್ಟಿಗೆ ಪ್ರಕೃತಿಯೇ ಸ್ವತಂತ್ರಕಾರಣ, ದೇವರು ಯಾಕೆ ಬೇಕು, ಹಾಲಿನಿಂದ ಮೊಸರಾಗುವಂತೆ ಪ್ರಕೃತಿಯಿಂದ ಜಗತ್ತು ನಿರ್ಮಾಣವಾಗುತ್ತದೆ ಎಂಬ ನಿರೀಶ್ವರ ಸಾಂಖ್ಯರ ಪ್ರಶ್ನೆಗೆ ಆಚಾರ್ಯರು ಉತ್ತರ ನೀಡಿದರು. ಜಡವಾದ ಪ್ರಕೃತಿ ಸ್ವತಂತ್ರವಾಗಲು ಸಾಧ್ಯವಿಲ್ಲ, ದೇವರನ್ನು ಒಪ್ಪುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು. 

ದೇವರನ್ನು ಒಪ್ಪೋಣ, ಆದರೆ ಹಾಲಿಗೆ ಹೆಪ್ಪು ಹಾಕುವ ವ್ಯಕ್ತಿಯಂತೆ ಪ್ರಕೃತಿಯಲ್ಲಿ ವಿಕಾರವನ್ನುಂಟುಮಾಡುವ ವ್ಯಕ್ತಿಯನ್ನಾಗಿ ಒಪ್ಪಿದರೆ ಸಾಕು, ಗುಣಪೂರ್ಣ ದೋಷದೂರ ಎಂದೆಲ್ಲ ಒಪ್ಪಬೇಕಾಗಿಲ್ಲ ಎಂಬ ಸೇಶ್ವರ ಸಾಂಖ್ಯರ ವಾದಕ್ಕೆ ಆಚಾರ್ಯರು ಉತ್ತರ ನೀಡಿದರು. ದೇವರನ್ನು ತಿಳಿಯುವದೇ ವೇದಗಳಿಂದ, ವೇದಗಳು ಹೇಗೆ ತಿಳಿಸುತ್ತವೆಯೋ ಹಾಗೆ ತಿಳಿಯಬೇಕೇ ಹೊರತು ನಮ್ಮಿಚ್ಛೆಗೆ ತಕ್ಕಂತೆ ದೇವರ ಸ್ವರೂಪವನ್ನು ಬದಲಾಯಿಸಬಾರದು ಎಂದು ಪ್ರತಿಪಾದಿಸಿದರು. ನಾವು ಕಲ್ಲಿನ ಆಕಾರವನ್ನು ಕಾಣುವದೇ ಕಣ್ಣಿನಿಂದ. ಕಣ್ಣು ಯಾವ ರೀತಿಯ ಆಕಾರವನ್ನು ಕಾಣುತ್ತದೆಯೋ ಹಾಗೇ ತಿಳಿಯಬೇಕೆ ಹೊರತು ಕಲ್ಲನ್ನು ನೀರು ಎಂದು ತಿಳಿಯಲಾಗುವದಿಲ್ಲ. 

ಈ ದೇವರು ಪ್ರಕೃತಿ ಎಂಬ ಎರಡು ವಸ್ತುಗಳು ಯಾಕೆ? ದೇವರೇ ಜಗತ್ತಾಗಿ ಪರಿಣಾಮವನ್ನು ಹೊಂದಿದ್ದಾನೆ.  ದೇವರೇ ಈ ಜಗತ್ತು, ಈ ಜಗತ್ತೇ ದೇವರು ಎಂದು ಪರಿಣಾಮವಾದಿಗಳು ಪ್ರಶ್ನೆ ಮಾಡುತ್ತಾರೆ. 

ಆ ಪರಿಣಾಮವಾದಕ್ಕೆ ಆಚಾರ್ಯರು ಅದ್ಭುತ ಉತ್ತರವನ್ನು ನೀಡುತ್ತಾರೆ. ಅನುವ್ಯಾಖ್ಯಾನದಲ್ಲಿನ ಆಚಾರ್ಯರ  ಮತ್ತು ನ್ಯಾಯಸುಧಾದಲ್ಲಿನ ಅದರ ವಿವರಣೆಯ ಅನುಸಂಧಾನದೊಂದಿಗೆ ಆಚಾರ್ಯರ ಉತ್ತರದ ಅನುವಾದ ಇಂದಿನ 19 ನಿಮಿಷಗಳ ಪುಟ್ಟ ಉಪನ್ಯಾಸದಲ್ಲಿದೆ. 

Play Time: 19:51

Size: 3.56 MB


Download Upanyasa Share to facebook View Comments
3096 Views

Comments

(You can only view comments here. If you want to write a comment please download the app.)
  • No Comment