29/08/2017
ಶ್ರೀಮದ್ ಭಾಗವತದ ಅರ್ಥಾನುಸಂಧಾನವನ್ನು ಮಾಡುವದಕ್ಕಿಂತ ಮುಂಚೆ ಅದರ ಮಾಹಾತ್ಮ್ಯವನ್ನು ಕೀರ್ತನೆ ಮಾಡಿ ಅರ್ಥಾನುಸಂಧಾನ ಮಾಡಬೇಕು ಎನ್ನುವದು ಶ್ರೀ ವೇದವ್ಯಾಸದೇವರೇ ಹಾಕಿಕೊಟ್ಟ ಸತ್ಸಂಪ್ರದಾಯ. ಶ್ರೀ ಶುಕಾಚಾರ್ಯರು, ಶ್ರೀ ಸನಕಾದಿಗಳು ಮುಂತಾದ ಮಹಾನುಭಾವರು ಅಚರಿಸಿದ ಶ್ರೇಷ್ಠ ಸಂಪ್ರದಾಯ. ಪ್ರಾಯಃ ಎಲ್ಲ ಪುರಾಣಗಳಲ್ಲಿಯೂ ಭಾಗವತದ ಮಾಹಾತ್ಮ್ಯವನ್ನು ಶ್ರೀ ವೇದವ್ಯಾಸದೇವರು ತಿಳಿಸಿದ್ದಾರೆ. ಅದರಲ್ಲಿಯೂ ಪದ್ಮಪುರಾಣ ಮತ್ತು ಸ್ಕಂದಪುರಾಣಗಳಲ್ಲಿ ವಿಸ್ತೃತವಾಗಿ ಅದು ನಿರೂಪಿತವಾಗಿದೆ. ಅಜ್ಞಾನವನ್ನು ಕಳೆಯುವ ಕಥೆ, ಕರ್ಣಾನಂದಕರವಾದ ಕಥೆ, ವಿವೇಕವನ್ನು ಕರುಣಿಸುವ ಕಥೆ, ನಮ್ಮ ಮಾಯಾಮೋಹವನ್ನು ಕಳೆಯುವ ಕಥೆ ಭಾಗವತದ ಕಥೆ. ಕ್ಷೀರಸಾಗರವನ್ನು ಮಥನ ಮಾಡಿ ಪಡೆದ ಅಮೃತವೂ ಈ ಭಾಗವತದ ಕಥೆಗೆ ಸಾಟಿಯಾದುದಲ್ಲ ಎಂಬ ಮಹತ್ತ್ವದ ಮಾತನ್ನು ವಿವರಿಸಿ ಸೂತರು ಶೌನಕಾದಿಗಳಿಗೆ ತಿಳಿಸಿ ಭಾಗವತದ ಮಾಹಾತ್ಮ್ಯವನ್ನು , ಸಪ್ತಾಹದ ಮಹತ್ತ್ವವನ್ನು ತಿಳಿಸುತ್ತಾರೆ. ಪದ್ಮಪುರಾಣದ ಆ ಭಾಗದ ಅನುವಾದ ಇಲ್ಲಿದೆ. ಪರೀಕ್ಷಿದ್ರಾಜರು ಪ್ರಾಯೋಪವೇಶಕ್ಕೆ ಕುಳಿತಿದ್ದಾರೆ. ಅಲ್ಲಿಗೆ ಸಮಸ್ತ ಋಷಿಗಳೂ ಆಗಮಿಸುತ್ತಾರೆ. ಶುಕಾಚಾರ್ಯರೂ ಬರುತ್ತಾರೆ. ಪರೀಕ್ಷಿದ್ರಾಜ ಅವರನ್ನು ಪ್ರಶ್ನೆ ಮಾಡಿದಾಗ ಉತ್ತರವಾಗಿ ಭಾಗವತವನ್ನು ಹೇಳಲು ಶುಕಾಚಾರ್ಯರು ಉಪಕ್ರಮಿಸುತ್ತಾರೆ. ಆಗ ಸಮಸ್ತ ದೇವತೆಗಳೂ ಅಮೃತದ ಕೊಡವನ್ನೇ ತೆಗೆದುಕೊಂಡು ಬಂದು ಪರೀಕ್ಷಿತರಿಗೆ ಈ ಅಮೃತ ಕೊಡಿ, ನಮಗೆ ಕಥಾಮೃತವನ್ನು ನೀಡಿ ಎಂದು ಕೇಳುತ್ತಾರೆ. ಆಗ ಶುಕಾಚಾರ್ಯರು क्व सुधा क्व कथा लोके क्व काचः क्व मणिर्महान् । ಎಲ್ಲಿಯ ಅಮೃತ, ಎಲ್ಲಿಯ ಭಾಗವತ, ಗಾಜಿಗೂ ರತ್ನಕ್ಕೂ ಸಾಮ್ಯವೇ ಎಂದು ಭಾಗವತದ ಮಾಹಾತ್ಮ್ಯವನ್ನು ತಿಳಿಸುವ ಅಪೂರ್ವ ಘಟನೆಯ ವಿವರ ಇಲ್ಲಿದೆ. -- ಈ ಪವಿತ್ರ ಜ್ಞಾನಯಜ್ಞ ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರರಾದ ಶ್ರೀರಂಗಕ್ಷೇತ್ರನಿವಾಸಿಗಳಾದ ಶ್ರೀಮದ್ ವಿದ್ಯಾವಾರಿಧಿತೀರ್ಥಗುರುಸಾರ್ವಭೌಮರಿಗೆ ಅವರಲ್ಲಿ ಸನ್ನಿಹಿತರಾದ ಸಮಸ್ತ ಗುರು ದೇವತೆಗಳಿಗೆ ಅವರಲ್ಲಿ ನೆಲೆನಿಂತ ಕಮಲೇಶ ನರಸಿಂಹ, ಶ್ರೀ ಭೂ ದುರ್ಗಾಸಮೇತ ಶ್ರೀ ವೇದವ್ಯಾಸ, ಮಾರುತಿ-ಸೀತಾಸಮೇತ ಪಟ್ಟಾಭಿರಾಮ, ಶ್ರೀ ಭೈಷ್ಮೀಸತ್ಯಾಸಮೇತ ಶ್ರೀ ಮೂಲಗೋಪಾಲಕೃಷ್ಣದೇವರ ಚರಣಾರವಿಂದಗಳಿಗೆ ಸಮರ್ಪಿತ. ಶ್ರೀಪುರಂದರದಾಸಾರ್ಯಾದಿ ಸಮಸ್ತ ದಾಸವರೇಣ್ಯರು, ಆಚಾರ್ಯರ ಪವಿತ್ರಪರಂಪರೆಗಳ ಸಮಸ್ತ ಭೂಷಾಮಣಿಗಳಾದ ಯತಿವರೇಣ್ಯರು, ವಿಶೇಷವಾಗಿ ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದಾಚಾರ್ಯರೆಂಬ ಮುನಿತ್ರಯರು, ಸಮಸ್ತ ತತ್ವಾಭಿಮಾನಿದೇವತೆಗಳು, ಹನುಮಭೀಮಮಧ್ವಾತ್ಮಕ ಭಾರತೀಪತಿ ಮುಖ್ಯಪ್ರಾಣದೇವರು, ಅವರ ಹೃದಯಸಿಂಹಾಸನಾಧೀಶ್ವರನಾದ ಶ್ರೀ ಲಕ್ಷ್ಮೀಪತಿವಿಷ್ಣುನಾಮಕನಾದ ಭಗವಂತ ನಿಮ್ಮೆಲ್ಲರಿಂದ ನಿರ್ವಿಘ್ನವಾಗಿ ಶ್ರವಣ ಮಾಡಿಸಲೆಂದು ಅವರೆಲ್ಲರನ್ನೂ ಭಕ್ತಿಯಿಂದ ಪ್ರಾರ್ಥಿಸುತ್ತೇನೆ. - ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 39:06
Size: 7.10 MB