29/09/2017
ಪ್ರಥಮ ಪದ್ಯದ “ಮುಹ್ಯಂತಿ ಯಂ ಸೂರಯಃ” ಎಂಬ ಶಬ್ದಗಳ ಅರ್ಥಾನುಸಂಧಾನ ಇಲ್ಲಿದೆ. ಬ್ರಹ್ಮದೇವರಿಗೆ ಭಗವಂತ ತತ್ವೋಪದೇಶ ಮಾಡಿದ್ದರಿಂದ ದೇವರು ಸರ್ವಜ್ಞ ಎನ್ನುವದು ನಿರ್ವಿವಾದವಾಗಿ ಸಿದ್ಧವಾಗುತ್ತದೆ ಎನ್ನುವದನ್ನು ತಿಳಿದೆವು. ಆದರೆ ಇದರಿಂದ ದೇವರು ಸ್ವತಂತ್ರ ಎನ್ನುವದೂ ಸಹ ಸಿದ್ಧವಾಗುತ್ತದೆ ಎಂದು ಆಚಾರ್ಯರು ತಿಳಿಸುತ್ತಾರೆ. ಅದು ಹೇಗೆ ಸಾಧ್ಯ, ಉಪದೇಶಕ್ಕೂ ಸ್ವಾತಂತ್ರ್ಯಕ್ಕೂ ಏನು ಸಂಬಂಧ ಎನ್ನುವದರ ಕುರಿತು ನಾವಿಲ್ಲಿ ತಿಳಿಯುತ್ತೇವೆ. ಎರಡನೆಯ ವಿಷಯ — ದೇವರ ಪ್ರಸಾದವಿಲ್ಲದೇ ದೇವರ ಜ್ಞಾನ ಉಂಟಾಗಲು ಸಾಧ್ಯವಿಲ್ಲ ಎನ್ನುವ ಪರಮಮಂಗಳ ತತ್ವದ ನಿರೂಪಣೆ. ತಮ್ಮ ಪ್ರತಿಭಾಬಲದಿಂದಲೇ ಸರ್ವವನ್ನೂ ತಿಳಿದ, ಅಧ್ಯಯನದ ಆವಶ್ಯಕತೆಯೇ ಇಲ್ಲದ ಋಜುದೇವತೆಗಳೂ ಪರಮಾತ್ಮನ ಬಳಿಯಲ್ಲಿ ಅಧ್ಯಯನ ಮಾಡುವದು ಅವನ ಅನುಗ್ರಹವನ್ನು ಪಡೆಯಲು. ಅಂದರೆ ಅನುಗ್ರಹವಿಲ್ಲದೇ ಇರುವ ಜ್ಞಾನವೂ ಫಲಪ್ರದವಲ್ಲ, ಜ್ಞಾನ, ಭಕ್ತಿ, ವೈರಾಗ್ಯ, ಮಹಾನುಭಾವರ ಸೇವೆ, ತೀರ್ಥಯಾತ್ರೆ ಮುಂತಾದ ಸಕಲ ಸಾಧನಗಳಿಗಿಂತಲೂ ದೇವರ ಅನುಗ್ರಹವೇ ಮಿಗಿಲಾದ ಸಾಧನ. ಅದಿದ್ದರೆ ಉಳಿದವು ಫಲಪ್ರದ ಎನ್ನುವದನ್ನು ಭಾಗವತ ನಮಗಿಲ್ಲಿ ಮನಗಾಣಿಸುತ್ತದೆ. ಭಾಗವತಾದಿ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕಾದ್ದು ಜ್ಞಾನಾದಿಗಳನ್ನು ಪಡೆಯಲಿಕ್ಕಲ್ಲ, ದೇವರ ಪ್ರಸಾದವನ್ನು ಪಡೆಯಲಿಕ್ಕೆ, ಅವನ ಅನುಗ್ರಹ ಮೊದಲು, ಜ್ಞಾನ ಭಕ್ತಿ ವೈರಾಗ್ಯಗಳ ಪ್ರಾಪ್ತಿ ನಂತರದ್ದು ಎನ್ನುವ ಅತ್ಯಪೂರ್ವತತ್ವದ ನಿರೂಪಣೆ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — जन्माद्यस्य यतोन्वयादितरतश्चार्थेष्वभिज्ञः स्वराट् “तेने ब्रह्म हृदा य आदिकवये मुह्यन्ति यं सूरयः ”। तेजोवारिमृदां यथा विनिमयो यत्र त्रिसर्गो मृषा धाम्ना स्वेन सदा निरस्तकुहकं सत्यं परं धीमहि ।।1।। ಭಾಗವತತಾತ್ಪರ್ಯ — न च प्रसादं विना ज्ञातुं शक्यः — मुह्यन्ति यं सूरयः । तत्प्रसादमृते तस्य नान्यो वेत्तास्ति कश्चन ।।
Play Time: 46:11
Size: 7.93 MB