26/11/2017
ನಾವು ದೇವರಿಗೆ ನೈವೇದ್ಯ ಮಾಡುತ್ತೇವೆ. ಅದನ್ನು ದೇವರು ಸ್ವೀಕರಿಸುತ್ತಾನೆಯೋ ಇಲ್ಲವೋ? ಸ್ವೀಕರಿಸುವದಿಲ್ಲ ಎಂದಾದಲ್ಲಿ, ನಾವೇಕೆ ನೈವೇದ್ಯ ಮಾಡಬೇಕು ಮತ್ತು ನೈವೇದ್ಯ ಮಾಡಿದ್ದು ಪ್ರಸಾದ ಎಂದು ಹೇಗಾಗಲು ಸಾಧ್ಯ? ಸ್ವೀಕರಿಸುತ್ತಾನೆ ಎಂದರೆ, ಈ ಪ್ರಾಕೃತ ಪದಾರ್ಥಗಳನ್ನು ದೇವರು ಉಣ್ಣುತ್ತಾನೆ ಎಂದಾಯಿತು. ಅಂದ ಮೇಲೆ ಅದರಿಂದ ಸುಖ ದುಃಖಗಳಿವೆ ಎಂದಾಯಿತು. ದುಃಖವಿಲ್ಲ ಕೇವಲ ಸುಖವಿದೆ ಎಂದರೂ, ದೇವರಿಗೆ ಇದರಿಂದ ಸುಖ ‘ಉಂಟಾಯಿತು’ ಹೊಸದಾಗಿ ಉತ್ಪನ್ನವಾಯಿತು ಎಂದಾಯಿತು. ಅಂದರೆ ದೇವರಿಗೂ ನಮ್ಮಂತೆ ಹೊಸದಾಗಿ ಸುಖ ನಿರ್ಮಾಣವಾಗುತ್ತದೆ ಎಂದಾಯಿತು. ದೇವರಲ್ಲಿ ಹೊಸದಾಗಿ ಸುಖ ಬಂದರೆ ಅವನು ವಸ್ತು, ವಾಸ್ತವ ಹೇಗಾದ? ಅವನು ಅನಾದಿಕಾಲದಿಂದಲೂ ಒಂದೇ ರೀತಿಯಲ್ಲಿ ಇರುವವನಲ್ಲವೇ ? ದೇವರು ಎಲ್ಲವನ್ನೂ ಅನುಭವಿಸುತ್ತಾನೆಯೇ ಎನ್ನುವದು ಮತ್ತೊಂದು ಪ್ರಶ್ನೆ. ಇಲ್ಲ ಎಂದಾದರೆ ದೇವರಿಗೆ ದುಃಖ, ನೋವು, ದುಷ್ಟಪದಾರ್ಥಗಳ ಜ್ಞಾನವಿಲ್ಲ ಎಂದಾಯಿತು. ಮತ್ತು “ಭುಂಕ್ತೇ ವಿಶ್ವಭುಕ್” ಎಂಬ ಮಾತು ಸುಳ್ಳಾಗುತ್ತದೆ. ಎಲ್ಲವನ್ನೂ ಅನುಭವಿಸುತ್ತಾನೆ ಎಂದಾದರೆ, ದೇವರಿಗೂ ದುಃಖ, ದುರ್ಗಂಧ, ದುಷ್ಟಪದಾರ್ಥಗಳಿಂದ ತೊಂದರೆಯಾಗಬೇಕಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಂದಿನ ಶ್ರೀಮದ್ ಭಾಗವತದ ಉಪನ್ಯಾಸದಲ್ಲಿದೆ. ಅದರ ಜೊತೆಯಲ್ಲಿ ಸಂಸಾರದಲ್ಲಿರುವ ನಾವು ತಿನ್ನದೇ, ಕುಡಿಯದೇ, ಪದಾರ್ಥಗಳನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಈ ಪದಾರ್ಥಗಳ ಅನುಭವವೇ ನಮ್ಮನ್ನು ಮತ್ತೆ ಸಂಸಾರದಲ್ಲಿ ಬೀಳುವಂತೆ ಮಾಡುವದು. ಹಾಗಾದರೆ ಇದರಿಂದ ಉದ್ಧಾರವಾಗುವ ಬಗೆಯೆಂತು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಉಪದೇಶಿಸಿದ ಪರಮಮಂಗಲವಾದ ರಹಸ್ಯ ತತ್ವದ ವಿವರಣೆಯೂ ಇಂದಿನ ಭಾಗವತದ ಉಪನ್ಯಾಸದಲ್ಲಿದೆ. ಶ್ರೀ ಕವೀಂದ್ರತೀರ್ಥಶ್ರೀಪಾದಂಗಳವರ ಪರಂಪರೆಯ ಭೂಷಾಮಣಿಗಳಾದ ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರು ತಮ್ಮ ಭಾವರತ್ನಕೋಶ ಎಂಬ ಗ್ರಂಥದಲ್ಲಿ ಅತ್ಯಂತ ವಿಸ್ತೃತವಾಗಿ ಈ ತತ್ವವನ್ನು ಚರ್ಚಿಸಿ ಭಗವತ್ಪಾದರ ಅಭಿಪ್ರಾಯವನ್ನು ನಮಗೆ ನಿರ್ಣಯಿಸಿ ತಿಳಿಸಿದ್ದಾರೆ. ಅದರಲ್ಲಿನ ಒಂದು ಭಾಗದ ಅನುವಾದ ಇಂದಿನ ಉಪನ್ಯಾಸ. ನೈವೇದ್ಯ ಮಾಡಬೇಕಾದರೆ ನಮಗಿರಲೇಬೇಕಾದ ಅನುಸಂಧಾನಗಳ ವಿವರಣೆ ಇಲ್ಲಿದೆ. ಇಂದಿನ ಉಪನ್ಯಾಸದಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — असौ गुणमयैर्भावैर्भूतसूक्ष्मेन्द्रियादिभिः स्वनिर्मितेषु निर्विष्टो भुङ्क्ते भूतेषु तद्गुणान् ॥ ३४॥ ಅಸೌ ಗುಣಮಯೈರ್ಭಾವೈಃ ಭೂತಸೂಕ್ಷ್ಮೇಂದ್ರಿಯಾದಿಭಿಃ। ಸ್ವನಿರ್ಮಿತೇಷು ನಿರ್ವಿಷ್ಟೋ ಭುಂಕ್ತೇ ಭೂತೇಷು ತದ್ಗುಣಾನ್ ।। ಶ್ರೀಮದ್ ಭಾಗವತತಾತ್ಪರ್ಯ — तद्गुणानेव भुङ्क्ते न दोषान्। “सर्वत्र सारभुग् देवो नासारं स कदाचन” इति वामनपुराणे। “अनश्नन्” इत्यशुभापेक्षया परवशत्वापेक्षया क्लृप्त्यपेक्षया च। “अक्लृप्त्या च स्वतन्त्रत्वादशुभस्य च वर्जनात्। अभोक्ता शुभभोक्तृत्वाद् भोक्तेत्येव च तं विदुः। अन्यूनानधिकत्वाच्च पूर्णस्वानन्दभोजनात्। विरागाच्च परस्यास्य भोक्तृत्वप्रतिषेधनम्” इति स्कान्दे ॥34॥ ತದ್ಗುಣಾನೇವ ಭುಂಕ್ತೇ, ನ ದೋಷಾನ್ । “ಸರ್ವತ್ರ ಸಾರಭುಗ್ ದೇವೋ ನಾಸಾರಂ ಸ ಕದಾಚನ” ಇತಿ ವಾಮನಪುರಾಣೆ। ಅನಶ್ನನ್ನಿತಿ ಇತ್ಯಶುಭಾಪೇಕ್ಷಯಾ, ಪರವಶತ್ವಾಪೇಕ್ಷಯಾ, ಪರವಶತ್ವಾಪೇಕ್ಷಯಾ, ಕ್ಲಪ್ತ್ಯಪೇಕ್ಷಯಾ ಚ। “ಅಕ್ಲೃಪ್ತ್ಯಾ ಚ ಸ್ವತಂತ್ರತ್ವಾತ್ ಅಶುಭಸ್ಯ ಚ ವರ್ಜನಾತ್ ಅಭೋಕ್ತಾ ಶುಭಭೋಕ್ತೃತ್ವಾತ್ ಭೋಕ್ತೇತ್ಯೇವ ತಂ ವಿದುಃ ಅನ್ಯೂನಾಧಿಕತ್ವಾಚ್ಚ ಪೂರ್ಣಸ್ವಾನಂದಭೋಜನಾತ್ ವಿರಾಗಾಚ್ಚ ಪರಸ್ಯಾಸ್ಯ ಭೋಕ್ತೃತ್ವಪ್ರತಿಷೇಧನಮ್” ಇತಿ ಸ್ಕಾಂದೇ ।
Play Time: 60:00
Size: 7.60 MB