24/05/2020
ಶ್ರೀಮದ್ ರಾಮಾಯಣಮ್ — 61 ರಾಮ ಲಕ್ಷ್ಮಣ ಸಂವಾದ ನಮಗಾದ ಅವಮಾನವನ್ನು ಸಹಿಸಬೇಕು, ದೊಡ್ಡವರಿಗಾದ ಅವಮಾನವನ್ನು ಸಹಿಸಬಾರದು ಎನ್ನುವದು ಶ್ರೀರಾಮಚಂದ್ರನೇ ಕಲಿಸುತ್ತಿರುವ ಪಾಠ, ಶಾಸ್ತ್ರಗಳ ನಿರ್ಣಯ. ಆ ಮಾತಿನಂತೆ ಲಕ್ಷ್ಮಣರು ಅಧರ್ಮದಲ್ಲಿ ನಡೆಯುತ್ತಿರುವ ದಶರಥರನ್ನು ಕೊಂದೇ ಬಿಡುತ್ತೇನೆ ಎನ್ನುತ್ತಾರೆ. ಲಕ್ಷ್ಮಣರ ಈ ಸಿಟ್ಟಿನ ಮಾತಿಗೆ ನಮ್ಮ ಸ್ವಾಮಿ ಕೊಡುವ ಅದ್ಭುತ ಉತ್ತರಗಳ ಸಂಗ್ರಹ ಇಲ್ಲಿದೆ. ದೈವ-ಪೌರುಷಗಳ ಕುರಿತ ನಿರ್ಣಾಯಕ ಚರ್ಚೆಯೊಂದಿಗೆ. ಸುಮಂತ್ರ ರಾಮನನ್ನು ದಶರಥರ ಮನೆಗೆ ಕರೆದುಕೊಂಡು ಹೋಗುವ ಸಮಯದಿಂದಲೇ ಲಕ್ಷ್ಮಣರು ಶ್ರೀರಾಮದೇವರ ಜೊತೆಯಲ್ಲಿದ್ದಾರೆ. ಕೈಕಯಿಯ ಮಾತುಗಳೂ ಕೇಳಿಸಿವೆ. ಅಣ್ಣನ ದಿಟ್ಟತನದ ನಿರ್ಧಾರ, ಸಂಪತ್ತಿಗಂಟಿಕೊಳ್ಳದ ಶ್ರೇಷ್ಠ ಗುಣವನ್ನು ಕಾಣುತ್ತಲೇ ಅವರಿಗೆ ತಂದೆ ದಶರಥ ಮಾಡುತ್ತಿರುವದು ತಪ್ಪು ಎಂದೆನಿಸಿರುತ್ತದೆ. ಆದರೆ, ರಾಮನೊಡನೆ ಮಾತನಾಡಲು ಸಮಯ ದೊರೆತಿರುವದಿಲ್ಲ ಮತ್ತು ರಾಮನ ನಿರ್ಣಯದ ವಿರುದ್ಧವಾಗಿ ಮಾತನಾಡುವ ಧೈರ್ಯವೂ ಇರುವದಿಲ್ಲ. ಆದರೆ, ಯಾವಾಗ ತಾಯಿ ಕೌಸಲ್ಯೆ ರಾಮನಿಂದಲೇ ಸುದ್ದಿಯನ್ನು ಕೇಳಿ ದುಃಖ ಪಟ್ಟಾ ಸಮಯ ಮತ್ತು ಪ್ರಸಂಗ ಎರಡೂ ಅನುಕೂಲವಾಗಿದೆ ಎಂದು ತಿಳಿದು ಕೌಸಲ್ಯೆಯಲ್ಲಿ ಮಾತನಾಡುವಂತೆ ರಾಮನಿಗೆ ಹೇಳಬೇಕಾದ ವಿಷಯವನ್ನು ರಾಮನ ಸನ್ನಿಧಿಯಲ್ಲಿ ತಿಳಿಸುತ್ತಾನೆ. ನಮ್ಮ ಸ್ವಾಮಿ ಅದ್ಭುತವಾಗಿ ಉತ್ತರಿಸುತ್ತಾನೆ. ಎಲ್ಲವೂ ದೈವಾಧೀನ, ಭಗವಂತನ ಇಚ್ಚೆಯನ್ನು ಮೀರಿ ನಡೆಯಲು ಸಾಧ್ಯವಿಲ್ಲ ಎಂದು ಶ್ರೀರಾಮ ಹೇಳಿದರೆ ಪುರುಷಪ್ರಯತ್ನವೇ ಪ್ರಧಾನ ಎಂದು ಲಕ್ಷ್ಮಣರು ಪ್ರತಿಪಾದಿಸುತ್ತಾರೆ. ಶ್ರೀರಾಮದೇವರು ಪರಮಾದ್ಭುತವಾಗಿ ಉತ್ತರಿಸುತ್ತಾರೆ. ದೈವ-ಪೌರುಷಗಳ ಕುರಿತ ಅದ್ಭುತ ಮತ್ತು ನಿರ್ಣಾಯಕ ಚರ್ಚೆಯನ್ನಿಲ್ಲಿ ಕೇಳುತ್ತೇವೆ. ದಶರಥ ಮಹಾರಾಜರ ನಿರ್ಣಯದ ಕುರಿತು ಮತ್ತಷ್ಟು ಸ್ಪಷ್ಟತೆ ನಮಗಿಲ್ಲಿ ದೊರೆಯುತ್ತದೆ. ತಾಯಿ ಕೌಸಲ್ಯಾದೇವಿ ಮೂರ್ಛಿತರಾಗಿದ್ದಾಗ, ಅಭಿಷೇಕಕ್ಕೆ ಸಿದ್ಧಪಡಿಸಿದ್ದ ವಸ್ತುಗಳನ್ನೆಲ್ಲ ನೋಡಿ ತಾಯಿಗೆ ಮತ್ತಷ್ಟು ದುಃಖವಾಗಬಾರದು ಎಂದು ಅದನ್ನು ತೆಗೆಸುವ ಶ್ರೀರಾಮನ ನಡತೆ, ತಾಯಿಗೆ ಹೆಚ್ಚು ದುಃಖವಾಗಬಾರದೆಂದ ಅವನ ಮಾತೃಪ್ರೇಮ ನಮ್ಮ ಕಣ್ಣಾಲಿಗಳನ್ನು ತುಂಬಿಸಿಬಿಡುತ್ತದೆ. ಕೈಕಯಿ, ದಶರಥರಲ್ಲಿ ದೋಷಬುದ್ಧಿಯನ್ನು ತಾಳಬೇಡ ಎಂದು ಹೇಳುತ್ತ, ಯಾವ ತತ್ವ ವೇದ-ಉಪನಿಷತ್-ಗೀತೆಗಳಲ್ಲಿ ಅನುಸ್ಯೂತವಾಗಿ ಪ್ರತಿಪಾದಿತವಾಗಿದೆಯೋ ಅದನ್ನು ಸ್ವಾಮಿ ಸ್ವಯಂ ಅನುಷ್ಠಾನ ಮಾಡಿ ತೋರಿಸುತ್ತಾನೆ.
Play Time: 48:44
Size: 1.37 MB