ಈ ಬಾರಿಯ ಏಕಾದಶಿ ವಿವರ

ಶುಕ್ರವಾರ 
 22-06-2018 
ದಶಮೀ ತಿಥಿ. 
ಆದರೆ ದಶಮೀ ಆಚರಣೆಯಿಲ್ಲ.
ರಾತ್ರಿ ಊಟ  ಮಾಡಬಹುದು. 

 ಜ್ಯೇಷ್ಠ ಶುಕ್ಲ ದಶಮಿ ಮೃತರಾದವರ ಶ್ರಾದ್ಧವನ್ನು ಇಂದು ಮಾಡಬೇಕು. 

ಶನಿವಾರ 
 23-06-2018 
ಏಕಾದಶೀ ತಿಥಿ. 
ಈ ದಿನದ ಎಲ್ಲ ಸಂಕಲ್ಪಗಳಲ್ಲಿಯೂ 
ಏಕಾದಶ್ಯಾಂ ತಿಥೌ ಎಂದು ಹೇಳಬೇಕು. 
ಆದರೆ ಏಕಾದಶಿಗೆ ದಶಮೀ ವೇಧವಿರುವದರಿಂದ ದಶಮೀಆಚರಣೆ.
ರಾತ್ರಿ 11:35 ರ ಒಳಗೆ ಫಲಾಹಾರವನ್ನು ಮುಗಿಸಬೇಕು. 
11:35 ರ ನಂತರ ಹರಿವಾಸರ. 

 ಜ್ಯೇಷ್ಠ ಶುಕ್ಲ ಏಕಾದಶಿ ಮೃತರಾದವರ ಶ್ರಾದ್ಧವನ್ನು ಇಂದು ಮಾಡಬೇಕು. 

ಕೆಲವರು “ವಿದ್ಧೈಕಾದಶಿಯಂದೂ ಶ್ರಾದ್ಧವನ್ನು ಆಚರಿಸಬಾರದು, ಏಕಾದಶಿ ಶ್ರಾದ್ದವನ್ನು ದ್ವಾದಶಿಯಂದೇ ಆಚರಿಸಬೇಕು” ಎಂದು ಮುದ್ರಿಸುತ್ತಾರೆ. ಅದು ಶಾಸ್ತ್ರದ ನಿರ್ಣಯಗಳಿಗೆ ವಿರುದ್ಧವಾದದ್ದು.  ಏಕಾದಶಿ ವಿದ್ಧವಾಗಿದ್ದಾಗ, ಏಕಾದಶೀ ಶ್ರಾದ್ಧವನ್ನು ಅಂದೇ ಮಾಡಬೇಕು ಸ್ಪಷ್ಟವಾಗಿ ಶಾಸ್ತ್ರ ನಿರ್ಣಯಿಸುತ್ತದೆ. 

ಏಕಾದಶ್ಯಾಂ ತು ವಿದ್ಧಾಯಾಂ
ದಶಮೀಕಲಯಾ ಯದಿ ।
ತದಾ ನೈವ ತ್ಯಜೇತ್ ಶ್ರಾದ್ಧಂ
ಅನ್ಯಥಾ ನಿಷ್ಫಲಂ ಭವೇತ್ ।।

ಏಕಾದಶಿ ವಿದ್ದವಾಗಿದ್ದಾಗ ಏಕಾದಶಿಶ್ರಾದ್ಧವನ್ನು ಸರ್ವಥಾ ಬಿಡಬಾರದು. ವಿದ್ಧೈಕಾದಶಿಯಂದು ಏಕಾದಶಿ ಶ್ರಾದ್ಧವನ್ನು ಮಾಡದೆ, ದ್ವಾದಶಿಯಂದು ಮಾಡಿದಲ್ಲಿ ಶ್ರಾದ್ಧ ನಿಷ್ಪಲವಾಗುತ್ತದೆ ಎಂದು ಗರುಡಪುರಾಣ ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತದೆ. 

ವಿಷ್ಣುರಹಸ್ಯದ ವಚನವೂ ಇದನ್ನು ಅನುಮೋದಿಸುತ್ತದೆ — 

ದಶಮೀಲೇಶಸಂಸ್ಪೃಷ್ಟಾ 
ಯದಾ ಚೈಕಾದಶೀ ತಿಥಿಃ ।
ತಸ್ಯಾಂ ಬಲಿಕ್ರಿಯಾಃ ಸರ್ವಾಃ 
ಪಿತುಃ ಶ್ರಾದ್ಧಂ ಸಮಾಚರೇತ್ ।।

ವಿದ್ಧೈಕಾದಶಿಯಂದು ಬಲಿಹರಣ, ಅತಿಥಿಪೂಜೆ ಮುಂತಾದ ಎಲ್ಲ ಕ್ರಿಯೆಗಳನ್ನು ಮಾಡಬೇಕು. ಶ್ರಾದ್ಧವನ್ನೂ ಅವಶ್ಯವಾಗಿ ಆಚರಿಸಬೇಕು. 

ಬ್ರಹ್ಮವೈವರ್ತ ಪುರಾಣವೂ ಈ ಮಾತನ್ನು ಸ್ಪಷ್ಟಪಡಿಸುತ್ತದೆ — 

ಏಕಾದಶ್ಯಾಂ ತು ವಿದ್ಧಾಯಾಂ
ದೇವರ್ಷಿಪಿತೃತರ್ಪಣಮ್ ।
ಶ್ರಾದ್ಧದಾನಾದಿಕಂ ವೈಶ್ವ-
ದೇವಂ ಕರ್ಮ ಸಮಾಚರೇತ್ ।।

ವಿದ್ಧೈಕಾದಶಿಯಂದು, ದೇವ, ಋಷಿ, ಪಿತೃತರ್ಪಣಗಳು, ಶ್ರಾದ್ಧ, ಅನ್ನದಾನಾದಿ ದಾನಗಳು, ವೈಶ್ವದೇವ ಎಲ್ಲವನ್ನೂ ಅವಶ್ಯವಾಗಿ ಆಚರಿಸಬೇಕು. 

ಏಕಾದಶಿ ಶ್ರಾದ್ಧವನ್ನು ದ್ವಾದಶಿಯಂದು ಆಚರಿಸಬೇಕು ಎಂಬ ವಚನ, ಏಕಾದಶಿಯಂದೇ ಉಪವಾಸವಿದ್ದಾಗ ಮಾತ್ರ ಸಂಬಂಧಪಟ್ಟದ್ದು ಶ್ರೀ ಶ್ರೀಮುಷ್ಣಂ ಆಚಾರ್ಯರು ನಿರ್ಣಯಿಸಿದ್ದಾರೆ. 


ಭಾನುವಾರ 
24-06-2018
ದ್ವಾದಶೀ ತಿಥಿ. 
ಈ ದಿನದ ಎಲ್ಲ ಸಂಕಲ್ಪಗಳಲ್ಲಿಯೂ ದ್ವಾದಶ್ಯಾಂ ತಿಥೌ ಎಂದು ಹೇಳಬೇಕು. 
ಪೂರ್ಣ ಉಪವಾಸ. 

ಬೆಳಿಗ್ಗೆ ಎದ್ದು ಪೂಜೆಯ ನಂತರ “ಗುರ್ವಂತರ್ಗತ, ಮಧ್ವಾಂತರ್ಗತ ಶ್ರೀಹರೇ ನಿನ್ನ ಪ್ರೀತ್ಯರ್ಥವಾಗಿ ಉಪವಾಸ ಮಾಡುತ್ತಿದ್ದೇನೆ”  ಎಂದು ಉಪವಾಸದ ಸಂಕಲ್ಪವನ್ನು ಮಾಡಬೇಕು. ಸಂಕಲ್ಪವಿಲ್ಲದ ಉಪವಾಸ ಫಲಪ್ರದವಾಗುವದಿಲ್ಲ. 

ಭೋಜನವಿಲ್ಲದ ಕಾರಣ ಇಂದು ಶ್ರಾದ್ಧದ ಆಚರಣೆ ಇಲ್ಲ. 
 

ಸೋಮವಾರ 
25-06-2018
ತ್ರಯೋದಶೀ ತಿಥಿ. 
ಎಲ್ಲ ಸಂಕಲ್ಪಗಳಲ್ಲಿಯೂ ತ್ರಯೋದಶ್ಯಾಂ ತಿಥೌ ಎಂದು ಹೇಳಬೇಕು. 

ದಶಮೀ ಹರಿವಾಸರವಿದ್ದರೆ ದ್ವಾದಶಿ ಹರಿವಾಸರವಿರುವದಿಲ್ಲ. 
ಸೂರ್ಯೋದಯದ ನಂತರ ನೈವೇದ್ಯ, ಹಸ್ತೋದಕ, ಪಾರಣೆ. 

 ಜ್ಯೇಷ್ಠ ಶುಕ್ಲ ದ್ವಾದಶಿ ಮತ್ತು ತ್ರಯೋದಶಿ ಮೃತರಾದವರ ಶ್ರಾದ್ಧ ಇಂದು ಮಾಡಬೇಕು. 

ಪಾರಣೆ ಮುಗಿದ ಬಳಿಕ “ಗುರ್ವಂತರ್ಗತ, ಮಧ್ವಾಂತರ್ಗತ ಶ್ರೀಹರೇ ನಿನ್ನ ಪ್ರೀತ್ಯರ್ಥವಾಗಿ ಉಪವಾಸ, ಪಾರಣೆಗಳನ್ನು ಮಾಡಿದ್ದೇನೆ, ಪ್ರೀತನಾಗು”  ಎಂದು ಉಪವಾಸದ ಸಮರ್ಪಣೆಯನ್ನು ಮಾಡಬೇಕು. ಸಮರ್ಪಣೆಯಾಗದ ಕರ್ಮಗಳು ಫಲ ನೀಡುವದಿಲ್ಲ. 

ಶ್ರೀಪಾದರಾಜರ ಆರಾಧನೆ

26,27,28 ನೆಯ ತಾರೀಕುಗಳಂದು ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಆರಾಧನಾ ಮಹೋತ್ಸವ. ಶ್ರೀಪಾದರಾಜಪಂಚರತ್ನಮಾಲಿಕಾಸ್ತೋತ್ರದ ಉಪನ್ಯಾಸಗಳು ಇಲ್ಲಿ ಉಪಲಬ್ಧವಿವೆ — 

http://vishwanandini.com/topicsInfo.php?id=71&page=U 


— ವಿಷ್ಣುದಾಸ ನಾಗೇಂದ್ರಾಚಾರ್ಯ