ಶ್ರೀಮದ್ ಭಾಗವತಮ್ — 140 — ಶುಕಾಚಾರ್ಯರ ಆಗಮನ
ಗಂಗೆಯ ತೀರದಲ್ಲಿ, ಸಮಸ್ತ ಋಷಿಗಳ ಸಭೆಯಲ್ಲಿ ಪ್ರಾಯೋಪವೇಶಕ್ಕಾಗಿ ಕುಳಿತ ಪರೀಕ್ಷಿದ್ರಾಜರು ಪ್ರಶ್ನೆಯೊಂದನ್ನು ಆ ಎಲ್ಲ ಋಷಿಗಳಿಗೆ ಕೇಳುತ್ತಾರೆ. ಆ ಪ್ರಶ್ನೆ ಮುಗಿಯುವ ಕ್ಷಣಕ್ಕೆ, ಉತ್ತರ ನೀಡಲು ಸಾಕ್ಷಾತ್ ಶುಕಾಚಾರ್ಯರೇ ಆಗಮಿಸುತ್ತಾರೆ. ಆ ಮಹಾನುಭಾವರ ದಿವ್ಯವಾದ ರೂಪದ ವರ್ಣನೆ ಮತ್ತು ಪರೀಕ್ಷಿದ್ರಾಜರು ಅವರಿಗೆ ಮಾಡುವ ಪ್ರಶ್ನೆಯ ಉಲ್ಲೇಖದೊಂದಿಗೆ ಲಿ ಶ್ರೀಮದ್ ಭಾಗವತದ ಪ್ರಥಮಸ್ಕಂಧದ ಪ್ರವಚನ ಸಮಾಪ್ತವಾಗುತ್ತದೆ.
ಶ್ರೀಮದ್ ಭಾಗವತಮ್ — 139 — ಪರೀಕ್ಷಿದ್ರಾಜರ ಪ್ರಾಯೋಪವೇಶ
ಮಾಡಿದ ತಪ್ಪಿಗೆ ಪರಿತಪಿಸಲು ಆರಂಭಿಸಿದ ಪರೀಕ್ಷಿದ್ರಾಜರು ಶಾಪದ ಸುದ್ದಿ ಕೇಳಿದೊಡನೆಯೇ ತಮ್ಮ ಪಾಪಕ್ಕೆ ತಕ್ಕ ಶಾಸ್ತಿಯಾಯಿತು ಎಂದು ಸಂತುಷ್ಟರಾಗಿ, ಸಕಲ ಭಾರವನ್ನೂ ಮಗನಿಗೆ ವಹಿಸಿ ಗಂಗಾತೀರದಲ್ಲಿ ಅನಶನವ್ರತವನ್ನು ಕೈಗೊಳ್ಳುತ್ತಾರೆ. ಅಲ್ಲಿಗೆ ವೇದವ್ಯಾಸದೇವರು, ಪರಶುರಾಮದೇವರು, ನಾರದರು, ವಸಿಷ್ಠರು ಮುಂತಾದ ಸಮಸ್ತ ಋಷಿಗಳು ತಮ್ಮ ಶಿಷ್ಯರ ಸಮೇತವಾಗಿ ಅಲ್ಲಿಗೆ ಆಗಮಿಸುತ್ತಾರೆ. ಆ ದಿವ್ಯವಾದ ಘಟನೆಯ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 138 — ಶಮೀಕರ ಎತ್ತರ
ಪರೀಕ್ಷಿದ್ರಾಜರಿಗೆ ಶಾಪ ಕೊಟ್ಟು ಬಂದ ಮಗನನ್ನು ಶಮೀಕರು ಅಭಿನಂದಿಸುವದಿಲ್ಲ, ಸಮಗ್ರ ಭೂಮಿಯ ಜನರ ಧರ್ಮಾಚರಣೆಗೆ ಆಧಾರನಾದ ರಾಜನ ಸಾವಿನಿಂದ ಎಂತಹ ಪಾಪವನ್ನು ಪಡೆದಿದ್ದೇವೆ ಎಂದು ಮಗನಿಗೆ ಮನಗಾಣಿಸಿ ಮಾಡಿದ ತಪ್ಪಿಗೆ ದೇವರ ಕ್ಷಮೆಯನ್ನು ಕೇಳುತ್ತಾರೆ. ಒಟ್ಟಾರೆ ಈ ಪ್ರಸಂಗದಲ್ಲಿ ಶೃಂಗಿ, ಶಮೀಕರು, ಪರೀಕ್ಷಿದ್ರಾಜರು ನಮಗೆ ಕಲಿಸುವ ಬದುಕಿನ ದಿವ್ಯ ಪಾಠಗಳ ವಿವರಣೆ ಇಲ್ಲಿದೆ. ನೀವೂ ಕೇಳಿ. ಮಕ್ಕಳಿಗೂ ತಪ್ಪದೇ ಕೇಳಿಸಿ.
ಶ್ರೀಮದ್ ಭಾಗವತಮ್ — 137 — ಶೃಂಗಿಯ ಶಾಪ
ಬೇಟೆಯನ್ನಾಡಿ ಹಸಿವು ಬಾಯಾರಿಕೆ ಶ್ರಮದಿಂದ ಬಳಲುತ್ತಿದ್ದ ಪರೀಕ್ಷಿದ್ರಾಜರು ನೀರನ್ನು ಅರಸುತ್ತ ಶಮೀಕರ ಆಶ್ರಮಕ್ಕೆ ಬಂದು ನೀರನ್ನು ಕೇಳುತ್ತಾರೆ. ಆದರೆ ಸಮಸ್ತ ಜಗತ್ತಿನ ಪರಿವೆಯನ್ನು ಮರೆತು ಶಮೀಕರು ಅಂತರ್ಯಾಮಿಯನ್ನು ಕಾಣುತ್ತ ಕುಳಿತಿರುತ್ತಾರೆ. ಪ್ರಾರಬ್ಧಕರ್ಮದ ವಶದಿಂದ ಇದನ್ನು ಅರಿಯದ ಮಹಾರಾಜರು, ಸಿಟ್ಟಿನಿಂದ ಅವರ ಕೊರಳಿಗೆ ಸತ್ತ ಹಾವೊಂದನ್ನು ಹಾಕಿ ಹೊರಟುಬಿಡುತ್ತಾರೆ. ಸುದ್ದಿಯನ್ನು ಕೇಳಿದ ಶೃಂಗಿ — ಶಮೀಕರ ಮಗ — ಇನ್ನೇಳು ದಿವಸಗಳಲ್ಲಿ ರಾಜನನ್ನು ತಕ್ಷಕ ಕೊಲ್ಲಲಿ ಎಂದು ಭಯಂಕರ ಶಾಪನ್ನು ನೀಡಿಬಿಡುತ್ತಾನೆ.
ಶ್ರೀಮದ್ ಭಾಗವತಮ್ — 136 — ಸತ್ಸಂಗತಿಯ ಮಾಹಾತ್ಮ್ಯ
ಮೋಕ್ಷವೂ ಸಜ್ಜನರ ಸಂಪರ್ಕಕ್ಕೆ ಸಮಾನವಾದುದದಲ್ಲ ಎನ್ನುತ್ತದೆ ಭಾಗವತ. ಈ ಮಾತನ್ನು ಒಪ್ಪುವದು ಹೇಗೆ. ಸಜ್ಜನರ ಸಂಪರ್ಕವೇ ಮೋಕ್ಷಕ್ಕಿಂತ ದೊಡ್ಡದಾಗುವದಾದರೆ, ಮೋಕ್ಷವನ್ನು ಬಯಸಬೇಕೇಕೆ, ಇಲ್ಲಿಯೇ ಸತ್ಸಂಪರ್ಕದಲ್ಲಿದ್ದರಾಯಿತಲ್ಲ ಎಂಬ ಪ್ರಶ್ನೆಗೆ ಅತೀ ಸೂಕ್ಷ್ಮ ಪ್ರಮೇಯಗಳನ್ನೊಳಗೊಂಡ ಉತ್ತರವನ್ನು ಶ್ರೀಮದಾಚಾರ್ಯರು ನೀಡುತ್ತಾರೆ. ಈ ಸಾಧನೆಯ ಸಂದರ್ಭದಲ್ಲಿ ನಮಗಿರಬೇಕಾದ ಎಚ್ಚರವೇನು ಎನ್ನುವದನ್ನು ಮನಗಾಣಿಸುವ ಭಾಗ.
ಶ್ರೀಮದ್ ಭಾಗವತಮ್ — 135 — ಸೂತರ ಅದ್ಭುತ ವಚನಗಳು
ಸೂತಾಚಾರ್ಯರು ಹೇಳುತ್ತಿರುವ ಕಥೆಗಳನ್ನು ಕೇಳುತ್ತಿರುವ ಶೌನಕರು ಸಂತುಷ್ಟರಾಗಿ ಸೂತಾಚಾರ್ಯರನ್ನು ಅಭಿನಂದಿಸುತ್ತಾರೆ, ದೀರ್ಘಾಯುಷ್ಯದ ಆಶೀರ್ವಾದವನ್ನು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸೂತರು ಆಡುವ ಮಾತು ಅವರೆಡೆಗೆ ನಮಗಿರುವ ಗೌರವವನ್ನು ನೂರ್ಮಡಿ ಮಾಡಿಬಿಡುತ್ತದೆ. ಇದರ ಜೊತೆಯಲ್ಲಿಯೇ “ನಾರಾಯಣನೇ ಏಕೆ ಸರ್ವೋತ್ತಮ” ಎಂಬ ಪ್ರಶ್ನೆಗೆ ಅದ್ಭುತವಾದ ಉತ್ತರಗಳನ್ನು ನೀಡುತ್ತಾರೆ. ತಪ್ಪದೇ ಆಲಿಸಿ.
ಶ್ರೀಮದ್ ಭಾಗವತಮ್ — 134 — ಶ್ರೀಹರಿಯ ಸೇವೆಯ ಮಾಹಾತ್ಮ್ಯ
ದೇವರ ಸೇವೆಯನ್ನು ಮಾಡುವದರಿಂದ ಉಂಟಾಗುವ ಅನಂತ ಪ್ರಯೋಜನಗಳಲ್ಲಿ ಒಂದು ನಿರ್ಭೀತಿ. ಹರಿಭಕ್ತನಾದ ಮನುಷ್ಯ ನಿರ್ಭೀತನಾಗಿ ಬದುಕುತ್ತಾನೆ. ಎಲ್ಲರನ್ನೂ ಕಾಡಿಸುವ ಸಾವೂ ಸಹ ಅವರನ್ನು ಕಾಡಿಸುವದಿಲ್ಲ. ಸಾವುಂಟಾಗುತ್ತದೆ ಎಂದು ತಿಳಿದರೂ ಪರೀಕ್ಷಿದ್ರಾಜರು ವಿಚಲಿತರಾಗದೆ ಅವರು ತೆಗೆದುಕೊಂಡ ನಿರ್ಧಾರ ಅದೆಷ್ಟು ಅದ್ಭುತ ಎನ್ನುವದನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 133 — ಪರೀಕ್ಷಿದ್ರಾಜರು ಮಾಡಿದ್ದೇನು
ಗೋವಿನ ರೂಪದಲ್ಲಿ ದುಃಖವನ್ನನುಭವಿಸುತ್ತಿದ್ದ ಭೂತಾಯಿಯನ್ನು ಪರೀಕ್ಷಿದ್ರಾಜರು ಸಂತೈಸಿದರು ಎಂದು ಭಾಗವತ ತಿಳಿಸುತ್ತದೆ. ಶ್ರೀಕೃಷ್ಣ ಈಗ ಭೂಮಿಯಲ್ಲಿಲ್ಲ ಎಂದು ದುಃಖಿಸುತ್ತಿದ್ದ ಭೂದೇವಿಯನ್ನು ಹೇಗೆ ತಾನೆ ಸಂತೈಸಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀ ಸೂತಾಚಾರ್ಯರು ದಿವ್ಯವಾದ ಉತ್ತರವನ್ನು ನೀಡಿದ್ದಾರೆ. ತಪ್ಪದೇ ಕೇಳಿ. ಪರೀಕ್ಷಿದ್ರಾಜರ ಬಗೆಗಿನ ನಮ್ಮ ಭಕ್ತಿಯನ್ನು ನೂರ್ಮಡಿಗೊಳಿಸುವ ದಿವ್ಯ ಪ್ರಮೇಯದ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 132 — ಕಲಿನಿಗ್ರಹ
ಹಸು-ಎತ್ತುಗಳನ್ನು ಹಿಂಸಿಸುತ್ತಿದ್ದ ದುಷ್ಟ ಕಲಿಯನ್ನು ಕೊಲ್ಲಲು ಪರೀಕ್ಷಿದ್ರಾಜರು ಕತ್ತಿಯೆತ್ತಿದೊಡನೆ, ನೀಚ ಕಲಿ ಪರೀಕ್ಷಿದ್ರಾಜರ ಕಾಲಿಗೆರಗುತ್ತಾನೆ. ಕಲಿಯುಗದ ಪ್ರವರ್ತನೆಗೆ ಕಾರಣವನ್ನರಿತಿದ್ದ ಪರೀಕ್ಷಿದ್ರಾಜರು, ಅವನನ್ನು ಕೊಲ್ಲದೆ ಅವನಿಗೆ ಇರಲು ಐದು ಸ್ಥಾನಗಳನ್ನು ನೀಡುತ್ತಾರೆ. ಶ್ರೀಮದಾಚಾರ್ಯರು ತಿಳಿಸಿರುವ ಅತ್ಯಪೂರ್ವ ಪ್ರಮೇಯಗಳೊಂದಿಗೆ ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 131 — ಮತ್ತೊಬ್ಬರ ಪಾಪದ ಕುರಿತು
ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂದು ಭಾಗವತ ಹೇಳುತ್ತದೆ ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್ ಎಂದು. ಹಾಗಾದರೆ ಮಹಾಭಾರತ ರಾಮಾಯಣ ತಾತ್ಪರ್ಯನಿರ್ಣಯ ಮಧ್ವವಿಜಯ ಮುಂತಾದ ಗ್ರಂಥಗಳಲ್ಲಿ ದುಷ್ಟರು ಮತ್ತು ಸಜ್ಜನರು ಇಬ್ಬರೂ ಮಾಡಿದ ಪಾಪಗಳನ್ನು ದಾಖಲಿಸಲಾಗಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಸಜ್ಜನರು ಮತ್ತು ದುರ್ಜನರು ಇಬ್ಬರೂ ಮಾಡಿದ ಪಾಪಗಳ ಕುರಿತು ಮಾತನಾಡುವ ಮುನ್ನ ನಮಗಿರಬೇಕಾದ ಎಚ್ಚರಗಳ ಕುರಿತು ಶ್ರೀಮದಾಚಾರ್ಯರು ನಿರ್ಣಯಿಸಿ ತಿಳಿಸಿದ ಸೂಕ್ಷ್ಮ ಪ್ರಮೇಯಗಳ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 130 — ಧರ್ಮ-ಪರೀಕ್ಷಿತ್ ಸಂವಾದ
ಜೀವನ ದುಃಖಕ್ಕೆ ಕಾರಣ ಯಾರು ಎಂಬ ಮಹತ್ತ್ವದ ಪ್ರಮೇಯದ ಚರ್ಚೆಯನ್ನೊಳಗೊಂಡ ಈ ಧರ್ಮಪುರುಷ ಮತ್ತು ಪರೀಕ್ಷಿತರ ಸಂವಾದದಲ್ಲಿ ಯಾರೊಡನೆ ಯಾವ ರೀತಿ ಮಾಡಬೇಕು ಎನ್ನುವ ಪಾಠವನ್ನು ಭಾಗವತ ಕಲಿಸುತ್ತದೆ.
ಶ್ರೀಮದ್ ಭಾಗವತಮ್ — 129 — ದೇವರ ಗುಣಗಳು — 09
ನಾವು ಬಿಡಬೇಕಾದ ಅಭಿಮಾನ ಯಾವುದು, ಇರಬೇಕಾದ ಅಭಿಮಾನ ಯಾವುದು ಎನ್ನುವದರ ವಿವರಣೆ, ದೇವರಲ್ಲಿನ ಅನಂಹಕಾರ ಎಂಬ ಗುಣದ ಚಿಂತನೆ ಉಪಾಸನೆಗಳಿಂದ ಜೀವ ಪಡೆಯುವ ಶ್ರೇಷ್ಠ ಪ್ರಯೋಜನದ ವಿವರಣೆ ಮುಂತಾದ ವಿಷಯಗಳು ಇಲ್ಲಿವೆ.
ಶ್ರೀಮದ್ ಭಾಗವತಮ್ — 128 — ದೇವರ ಗುಣಗಳು — 08
ಆಸ್ತಿಕ ಎನ್ನುವ ಶಬ್ದಕ್ಕೆ ವೇದಗಳಲ್ಲಿರುವ ತತ್ವ ಸತ್ಯವಾದದ್ದು, ಅಸ್ತಿ ಎಂದು ತಿಳಿಯುವವನು ಎಂದರ್ಥ. ದೇವರಲ್ಲಿ ಆಸ್ತಿಕತೆ ಇದೆ ಎಂದು ಭಾಗವತ ಹೇಳುತ್ತದೆ. ಯಾವ ದೃಷ್ಟಿಯಿಂದ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿರುವ ಉತ್ತರವನ್ನು ಅತ್ಯಂತ ಸೂಕ್ಷ್ಮಪ್ರಮೇಯಗಳೊಂದಿಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಮಗೆ ಅರ್ಥ ಮಾಡಿಸುತ್ತಾರೆ. ಆ ವಿಷಯದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 127 — ದೇವರ ಗುಣಗಳು — 07
ಬಲ ಎಂದರೇನು, ಬಲದ ಸೂಕ್ಷ್ಮ ವೈವಿಧ್ಯಗಳಾವುವು, ಅವುಗಳ ಉಪಾಸನೆಯಿಂದ ಉಂಟಾಗುವ ಮಹತ್ತರ ಫಲಗಳೇನು ಎಂಬಿತ್ಯಾದಿ ವಿಷಯಗಳನ್ನು ದೃಷ್ಟಾಂತದ ಸಮೇತವಾಗಿ ಇಲ್ಲಿ ವಿವರಿಸಲಾಗಿದೆ.
ಶ್ರೀಮದ್ ಭಾಗವತಮ್ — 126 — ದೇವರ ಗುಣಗಳು — 06
ದೇವರ ಪರಮಾದ್ಭುತವಾದ ಕಾಂತಿ, ಅದರ ಚಿಂತನದಿಂದ ನಾವು ಪಡೆಯುವ ಅಲೌಕಿಕವಾದ ಮತ್ತು ಬೆಲೆಕಟ್ಟಲಾಗದ ಪ್ರಯೋಜನ, ಯಾರಾದರೂ ತಪ್ಪು ಮಾಡಿದ ತಕ್ಷಣ ದೇವರು ಶಿಕ್ಷೆ ಕೊಡಬೇಕು ಎಂಬ ಮಂದಬುದ್ಧಿಯ ವಿಚಾರಕ್ಕೆ ಭಾಗವತ ನೀಡುವ ಉತ್ತರ, ಪ್ರಾಗಲ್ಭ್ಯ ಎಂದರೇನು, ಅದರ ಉಪಾಸನೆಯಿಂದ ಭಕ್ತರಲ್ಲುಂಟಾಗುವ ದಿವ್ಯ ಪರಿಣಾಮದ ಕುರಿತ ವಿವರಣೆ, ಅನಂತ ಸಾಮರ್ಥ್ಯದ ಶ್ರೀಹರಿಯಲ್ಲಿರುವ ವಿನಯ ಎಂಬ ಗುಣದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 125 — ದೇವರ ಗುಣಗಳು — 05
ದೇವರಲ್ಲಿ ಸ್ಮೃತಿ ಎಂಬ ಗುಣವಿದೆ ಎಂದು ಭಾಗವತ ಹೇಳುತ್ತದೆ. ಸ್ಮೃತಿ ಎಂದರೆ ನೆನಪು. ನೆನಪು ಎಂಬ ಗುಣವಿರಬೇಕಾದರೆ ಮರೆವು ಎಂಬ ದೋಷವೂ ಇರಬೇಕು. ಅಂದಮೇಲೆ ದೇವರಲ್ಲಿ ನೆನಪು ಎಂಬ ಗುಣ ಹೇಗಿರಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಟೀಕಾಕೃತ್ಪಾದರು ಈಶಾವಾಸ್ಯದ ಭಾಷ್ಯ ಟೀಕಾ ಗ್ರಂಥಗಳಲ್ಲಿ ನೀಡಿರುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 124 — ದೇವರ ಗುಣಗಳು — 04
ದೇವರಲ್ಲಿ ವೈರಾಗ್ಯ ಎಂಬ ಗುಣವಿದೆ ಎನ್ನುವದು ವೇದಗಳ ಸಿದ್ಧಾಂತ. ಸಂಸಾರವನ್ನು ಬಿಡಲು ಜೀವರಿಗೆ ವೈರಾಗ್ಯ ಆವಶ್ಯಕ, ದೇವರಲ್ಲೇಕೆ ವೈರಾಗ್ಯ ಎಂಬ ಗುಣವನ್ನು ಒಪ್ಪಬೇಕು ಎನ್ನುವದಕ್ಕೆ ಶ್ರೀಮಟ್ಟೀಕಾಕೃತ್ಪಾದರು ಮತ್ತು ಶ್ರೀಮದ್ ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿರುವ ಉತ್ತರಗಳ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 123 — ದೇವರ ಗುಣಗಳು — 03
ದೇವರು ಭಕ್ತಾಪರಾಧಸಹಿಷ್ಣು ಎನ್ನುವದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ದೇವರು ತನ್ನ ಭಕ್ತರ ಅಪರಾಧಗಳನ್ನು ಮನ್ನಿಸಿಲ್ಲ. ಭಕ್ತರ ಅಪರಾಧಗಳಿಗೂ ದೇವರು ಶಿಕ್ಷೆ ನೀಡಿದ್ದಿದೆ. ಹಾಗಾದರೆ ದೇವರು ಯಾವಾಗ ಭಕ್ತರ ಅಪರಾಧಗಳನ್ನು ಮನ್ನಿಸುತ್ತಾನೆ, ಅವನು ಮನ್ನಿಸಲು ಮಾಡಬೇಕಾದ ಪ್ರಾರ್ಥನೆ ಮತ್ತು ಅನುಸಂಧಾನಗಳೇನು ಎನ್ನುವದನ್ನು ಚಂದ್ರಿಕಾಚಾರ್ಯರು ಮುಂತಾದ ಮಹಾನುಭಾವರು ತಿಳಿಸಿರುವ ಪ್ರಮೇಯಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 122 — ದೇವರ ಗುಣಗಳು - 02
ದೇವರಲ್ಲಿ ಯಾವ ಕಾರಣಕ್ಕೆ ದುಃಖವಿಲ್ಲ, ಜೀವರಿಗೆ ಯಾಕಾಗಿ ದುಃಖ ಉಂಟಾಗುತ್ತದೆ, ಆ ದುಃಖವನ್ನು ಕಳೆದುಕೊಳ್ಳಲು ಮಾಡಬೇಕಾದ ಉಪಾಸನೆ ಏನು ಎಂಬ ಪ್ರಶ್ನೆಗೆ ಉತ್ತರ ನೀಡುವ ಮಹತ್ತ್ವದ ಪ್ರಮೇಯದ ವಿವರಣೆ, ದೇವರ ಮನಸ್ಸು, ಮಾತು, ಕೃತಿಗಳು ಎಂದಿಗೂ ಏಕಪ್ರಕಾರವಾದದ್ದು, ದೇವರ ರೂಪಗಳಲ್ಲಿ ಸರ್ವಥಾ ಭೇದವಿಲ್ಲ, ದೇವರ ಯಾವ ಗುಣವನ್ನು ಉಪಾಸಿಸುವದರಿಂದ ನಮಗೆ ಇಂದ್ರಿಯನಿಗ್ರಹ ದೊರೆಯುತ್ತದೆ ಮುಂತಾದ ವಿಷಯಗಳ ನಿರೂಪಣೆ ಇಂದಿನ ಉಪನ್ಯಾಸದಲ್ಲಿ.
ಶ್ರೀಮದ್ ಭಾಗವತಮ್ — 121 — ದೇವರ ಗುಣಗಳು-01
ಭಗವಂತನಲ್ಲಿರುವ ಯಾವ ಗುಣಗಳ ಜ್ಞಾನ ಸ್ಮರಣೆ ಉಪಾಸನೆಗಳಿಂದ ಜೀವ ಆ ಗುಣಗಳ ಪ್ರತಿಫಲನವನ್ನು ತನ್ನಲ್ಲಿ ಪಡೆಯುತ್ತಾನೆಯೋ ಅಂತಹ ಶ್ರೇಷ್ಠ ಗುಣಗಳ ಚಿಂತನೆಯೊಂದಿಗೆ ಭೂದೇವಿ ಧರ್ಮಪುರುಷನ ಪ್ರಶ್ನೆಗೆ ಉತ್ತರಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಬಿಂಬಗುಣ-ಪ್ರತಿಬಿಂಬಗುಣಗಳ ಕುರಿತು ಅದ್ಭುತವಾಗಿ ತಿಳಿಸಿ ಹೇಳುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ದಾನದ ಕುರಿತ ಮಹತ್ತ್ವದ ಪ್ರಮೇಯಗಳ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 120 — ಧರ್ಮಪುರುಷನ ಪ್ರಶ್ನೆಗಳು
ಕಲಿಯನ್ನು ನಿಗ್ರಹ ಮಾಡಲು ಹೊರಟ ಪರೀಕ್ಷಿದ್ರಾಜರು ಹೋದೆಡೆಯಲ್ಲ ತಮ್ಮ ತಾತಂದಿರ ಗುಣಗಳನ್ನು, ಶ್ರೀಕೃಷ್ಣನ ಮಾಹಾತ್ಮ್ಯವನ್ನು, ಅವರ ಸಖ್ಯವನ್ನು ಕೇಳಿ ಆನಂದಿಸುತ್ತಾರೆ. ಹೀಗೆ ಸಂಚಾರ ಮಾಡುವ ಸಂದರ್ಭದಲ್ಲಿ, ಕಾಲದ ಪರಿಣಾಮದಿಂದ ಮೂರು ಕಾಲು ಕುಂಟಾಗಿ ಒಂದು ಕಾಲಿನ ಮೇಲೆ ಎಲ್ಲ ದೇಹದ ಭಾರ ಹಾಕಿ ಎತ್ತಿನ ರೂಪದಲ್ಲಿರುವ ಧರ್ಮಪುರುಷನನ್ನು, ಗೋವಿನ ರೂಪದಲ್ಲಿ ದುಃಖಿತರಾಗಿ ನಿಂತಿರುವ ಭೂದೇವಿಯನ್ನು ಕಾಣುತ್ತಾರೆ. ಮಹಾಲಕ್ಷ್ಮಿಯ ಸ್ವರೂಪರಾದ ಭೂದೇವಿ ಬೇರೆ, ಭೂಮಿಗೆ ಅಭಿಮಾನಿಯಾದ ಭೂದೇವಿ ಬೇರೆ ಎಂಬ ತತ್ವವನ್ನು ನಿರೂಪಿಸಿ, ಆ ಭೂದೇವಿಗೆ ಧರ್ಮಪುರುಷ ಮಾಡುವ ಪ್ರಶ್ನೆಗಳನ್ನು ಇಲ್ಲಿ ವಿವರಿಸಲಾಗಿದೆ.
ಶ್ರೀಮದ್ ಭಾಗವತಮ್ — 119 — ಹ್ಯಾಂಗೆ ಮಾಡಲಯ್ಯ ಕೃಷ್ಣ ಪೋಗುತಿದೆ ಆಯುಷ್ಯ
“ಪರೀಕ್ಷಿದ್ರಾಜರು ಕಲಿಯನ್ನು ನಿಗ್ರಹಿಸಿದ ಘಟನೆಯನ್ನು ವಿವರಿಸಿ” ಎಂದು ಪ್ರಾರ್ಥಿಸುವ ಶೌನಕರು, ಈ ಘಟನೆಯಲ್ಲಿ ಶ್ರೀಹರಿಯ ಭಾಗವತೋತ್ತಮರ ಮಾಹಾತ್ಮ್ಯವಿದ್ದರೆ ಮಾತ್ರ ತಿಳಿಸಿ ಎಂದು ಸೂತಾಚಾರ್ಯರನ್ನು ಕೇಳಿಕೊಳ್ಳುತ್ತಾರೆ. ಈ ಮುಖಾಂತರ ದೇವರ, ಭಾಗವತೋತ್ತಮರ ಪ್ರಸಂಗವಿಲ್ಲದೇ ಅಸಜ್ಜನರ ವಿಷಯವನ್ನು ಸರ್ವಥಾ ಕೇಳತಕ್ಕದ್ದಲ್ಲ ಎಂಬ ಪಾಠವನ್ನು ನಮಗೆ ಕಲಿಸುತ್ತಾರೆ.
ಶ್ರೀಮದ್ ಭಾಗವತಮ್ — 118 — ಪಾಂಡವರ ಮಹಾಪ್ರಸ್ಥಾನ
ಶ್ರೀಕೃಷ್ಣ ತೊರೆದ ಭೂಮಿ ನಮ್ಮಿಂದ ರಕ್ಷಣೀಯವೂ ಅಲ್ಲ, ಅನುಭವಿಸಲಕ್ಕೂ ಅರ್ಹವಲ್ಲ ಎಂದು ನಿರ್ಣಯಿಸಿದ ಪಾಂಡವರು, ತಮ್ಮ ಮೊಮ್ಮಗ ಪರೀಕ್ಷಿದ್ರಾಜರನ್ನು ಸಿಂಹಾಸನದ ಮೇಲೆ ಕೂಡಿಸಿ ಪಟ್ಟಾಭಿಷೇಕ ಮಾಡಿ, ಹಿರಿಯರಿಗೆ ಶ್ರಾದ್ಧಾದಿಗಳನ್ನು ಮಾಡಿ, ರಾಜಚಿಹ್ನೆಗಳನ್ನು ತ್ಯಾಗ ಮಾಡಿ ಲಯಚಿಂತನೆಯನ್ನು ಮಾಡಿ, ಅದ್ಭುತ ಯೋಗ ಸಾಮರ್ಥ್ಯದಿಂದ ಸಮಗ್ರ ಏಳು ಸಮುದ್ರಗಳಿಗೆ ಪ್ರದಕ್ಷಿಣೆಯನ್ನು ಮಾಡಿ ದೇಹತ್ಯಾಗ ಮಾಡಿದ ಘಟನೆಗಳ ವಿವರಣೆ ಇಲ್ಲಿದೆ. ನಾಯಿಯ ಘಟನೆ ಸೂಚಿಸುವ ಆಧ್ಯಾತ್ಮಿಕ ಅರ್ಥದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 117 — ಜ್ಞಾನಿಗಳಿಗೂ ಏಕೆ ಮೋಹವುಂಟಾಗುತ್ತದೆ
ಧೃತರಾಷ್ಟ್ರ, ಧರ್ಮರಾಜ, ಅರ್ಜುನ ಮುಂತಾದವರು ದೇವರ ಸಾಕ್ಷಾತ್ಕಾರವನ್ನು ಪಡೆದ ಮಹಾ ದೇವತೆಗಳು. ಇವರಿಗೂ ಸಹ ಯಾವ ಕಾರಣಕ್ಕೆ ಮೋಹ, ಶೋಕಗಳುಂಟಾಗುತ್ತದೆ, ಉಂಟಾದಾಗ ಅವರು ಕಳೆದುಕೊಳ್ಳುವ ಬಗೆ ಹೇಗೆ ಎನ್ನುವ ಪ್ರಶ್ನೆಗಳಿಗೆ ಆಚಾರ್ಯರು ಭಾಗವತತಾತ್ಪರ್ಯದಲ್ಲಿ ನೀಡಿರುವ ಉತ್ತರಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 116 — ದೇವರ ವಿರಹವೆಂಬ ಅಗ್ನಿ
ಶ್ರೀಕೃಷ್ಣ ಪರಂಧಾಮಪ್ರವೇಶ ಮಾಡಿದ ಬಳಿಕ ಅರ್ಜುನ ಅನುಭವಿಸಿದ ದುಃಖವನ್ನು ಮನಕಲಕುವಂತೆ ವೇದವ್ಯಾಸದೇವರು ಚಿತ್ರಿಸಿದ್ದಾರೆ. ಈ ಘಟನೆಯ ಆಧ್ಯಾತ್ಮಿಕ ಅರ್ಥದ ವಿಶ್ಲೇಷಣೆಯೊಂದಿಗೆ ಇಲ್ಲಿ ಅದರ ವಿವರಣೆಯಿದೆ.
ಶ್ರೀಮದ್ ಭಾಗವತಮ್ — 115 — ಅಪಶಕುನಗಳು
ಶ್ರೀಕೃಷ್ಣ ಪರಂಧಾಮನವನ್ನು ಪ್ರವೇಶ ಮಾಡುವ ಮುನ್ನ ದಾರುಕನನ್ನು ಹಸ್ತಿನಾವತಿಗೆ ಕಳುಹಿಸುತ್ತಾನೆ, ಅರ್ಜುನ ಬರಬೇಕೆಂದು ತಿಳಿಸಿರುತ್ತಾನೆ. ವೇಗದಿಂದ ಅರ್ಜುನ ಅಲ್ಲಿಗೆ ಹೊರಟ ತಕ್ಷಣ ಧರ್ಮರಾಜನಿಗೆ ಹತ್ತಾರು ರೀತಿಯ ಅಪಶಕುನಗಳು ಕಾಣಲು ಆರಂಭಿಸುತ್ತವೆ. ಅವುಗಳ ಕುರಿತ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 114 — ಧೃತರಾಷ್ಟ್ರನ ನಿರ್ಯಾಣ
ಧೃತರಾಷ್ಟ್ರ ತನ್ನ ಯೋಗಾಗ್ನಿಯಿಂದ ದೇಹತ್ಯಾಗ ಮಾಡಿದ ಸುದ್ದಿಯನ್ನು ಧರ್ಮರಾಜ ಸಂಜಯನಿಂದ ಕೇಳುತ್ತಾನೆ. ಆಗ ಆಗಮಿಸುವ ನಾರದರು, ಸಾವಿನ ಕುರಿತು ಮನುಷ್ಯರಿಗಿರಬೇಕಾದ ಎಚ್ಚರಗಳನ್ನು ತಿಳಿಸಿ ಹೇಳಿ ಧೃತರಾಷ್ಟ್ರ ದೇಹತ್ಯಾಗ ಮಾಡಿದ ರೀತಿ ಮತ್ತು ಅವನ ಪರಲೋಕದ ವಾಸದ ಕುರಿತು ಅದ್ಭುತವಾಗಿ ತಿಳಿಸಿ ಹೇಳುತ್ತಾರೆ. ಆ ಮಾತುಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 113 — ಪುರಾಣಗಳಲ್ಲೇಕೆ ವಿರುದ್ಧ ವಚನಗಳು
ಧೃತರಾಷ್ಟ್ರ ಧರ್ಮರಾಜನ ಅನುಮತಿಯನ್ನು ಪಡೆದು ವನಕ್ಕೆ ತೆರಳಿದ ಎಂದು ಮಹಾಭಾರತ ತಿಳಿಸಿದರೆ, ಪಾಂಡವರಿಗೆ ತಿಳಿಯದಂತೆ ಧೃತರಾಷ್ಟ್ರ ವನಕ್ಕೆ ತೆರಳಿದ ಎಂದು ಭಾಗವತ ಹೇಳುತ್ತದೆ. ಎರಡೂ ಸತ್ಯವಾಗಿರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ಹೀಗೆ ಪರಸ್ಪರವಿರುದ್ಧವಾಗಿ ಏಕೆ ಕಥೆಗಳನ್ನು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿದ ಉತ್ತರದ ನಿರೂಪಣೆಯೊಂದಿಗೆ ಎರಡೂ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಋಷಿಗಳು ಕಾಮುಕರು, ಕುಂತಿ ಮುಂತಾದವರು ವ್ಯಭಿಚಾರಿಣಿಯರು ಎಂಬ ಇಂದಿನ ಜನರ ಆಕ್ಷೇಪಗಳಿಗೆ ಇಲ್ಲಿ ಉತ್ತರಗಳಿವೆ, ತಪ್ಪದೇ ಕೇಳಿ. ನಿಮ್ಮ ಮಕ್ಕಳಿಗೂ ಕೇಳಿಸಿ.
ಶ್ರೀಮದ್ ಭಾಗವತಮ್ — 112 — ವನಕ್ಕೆ ತೆರಳಿದ ಧೃತರಾಷ್ಟ್ರ
ನಮ್ಮವರೊಬ್ಬರು ಸಾಧನೆಯನ್ನು ಮಾಡುತ್ತಿರುವಾಗ ನಾವವರನ್ನು ತಡೆಯಬಾರದು, ಅಷ್ಟೇ ಅಲ್ಲ, ಎಷ್ಟು ರೀತಿಯಲ್ಲಿ ಸಾಧ್ಯವೋ ಅಷ್ಟು ರೀತಿಯಲ್ಲಿ ಅವರ ಸಾಧನೆಗೆ ಹೆಗಲಾಗಿ ನಿಲ್ಲಬೇಕು ಎನ್ನುವದನ್ನು ವಿದುರ, ಧರ್ಮರಾಜ, ಕುಂತಿಯರ ಚರ್ಯೆಯಿಂದ ಭಾಗವತ ತಿಳಿಸುತ್ತದೆ. ತಾನು ಮಾಡಿದ ಸಕಲ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಕಟ್ಟ ಕಡೆಯ ವಯಸ್ಸಿನಲ್ಲಿ ಧೃತರಾಷ್ಟ್ರ ತಪಸ್ಸಿಗೆ ತೆರಳಿದ ವಿವರ ಇಂದಿನ ಉಪನ್ಯಾಸದಲ್ಲಿ.
ಶ್ರೀಮದ್ ಭಾಗವತಮ್ — 111 — ಧೃತರಾಷ್ಟ್ರನ ವೈರಾಗ್ಯ
ವನಪ್ರಸ್ಥನಾಗಿ ತಪಸ್ಸನ್ನು ಮಾಡಿ, ಮಾಡಿದ ಪಾಪಗಳನ್ನು ಕಳೆದುಕೊಳ್ಳಬೇಕಾಗಿದ್ದ ಧೃತರಾಷ್ಟ್ರ ವಿಷಯಾಸಕ್ತನಾಗಿಯೇ ಉಳಿದಿರುತ್ತಾನೆ. ಅವನಲ್ಲಿ ಭೀಮಸೇನದೇವರು ವೈರಾಗ್ಯ ಮೂಡಿಸಿದ ಪ್ರಸಂಗವನ್ನು, ಆ ವೈರಾಗ್ಯವನ್ನು ವಿದುರರು ಧೃಢತರವನ್ನಾಗಿ ಮಾಡಿದ ಸಂದರ್ಭವನ್ನಿಲ್ಲಿ ಕೇಳುತ್ತೇವೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಹೇಳಿಕೊಟ್ಟು ಒಂದು ದಿವ್ಯ ಪ್ರಾರ್ಥನೆಯ ಅರ್ಥಾನುಸಂಧಾನದೊಂದಿಗೆ.
ಶ್ರೀಮದ್ ಭಾಗವತಮ್ — 110 — ವಿದುರರ ತೀರ್ಥಯಾತ್ರೆ
ವಿದುರರು ತೀರ್ಥಯಾತ್ರೆ ಮಾಡಿಕೊಂಡು ಬಂದು ಧರ್ಮರಾಜನ ಬಳಿಯಲ್ಲಿ ಮಾತನಾಡುವಾಗ, ಧರ್ಮರಾಜನಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಯದುಕುಲವಿನಾಶದ ಬಗ್ಗೆ ಹೇಳಲಿಲ್ಲ ಎಂಬ ಮಾತನ್ನು ಭಾಗವತದಲ್ಲಿ ಕೇಳುತ್ತೇವೆ. ಆದರೆ, ಯದುಕುಲವಿನಾಶವಾಗುವದಿಕ್ಕಂತಲೂ 21 ವರ್ಷಗಳ ಮುಂಚೆಯೇ ವಿದುರರ ದೇಹತ್ಯಾಗವಾಗಿರುತ್ತದೆ. ಅಂದ ಮೇಲೆ ಈ ಭಾಗವತದ ಮಾತನ್ನು ಹೇಗೆ ಒಪ್ಪುವದು ಎಂಬ ಪ್ರಶ್ನೆಗೆ ಆಚಾರ್ಯರು ಪದ್ಮಪುರಾಣದ ವಚನದಿಂದ ನಮಗೆ ಉತ್ತರವನ್ನು ನೀಡುತ್ತಾರೆ. ಆಚಾರ್ಯರ ವಚನದಲ್ಲಿಯೂ ಸಹ ಬನ್ನಂಜೆ ಒಂದು ಕಡೆಗೆ ಗೊಂದಲವನ್ನುಂಟು ಮಾಡಿದ್ದಾರೆ. ಈ ವಿಷಯಗಳ ಚರ್ಚೆ ಇಂದಿನ ಉಪನ್ಯಾಸದಲ್ಲಿ.
ಶ್ರೀಮದ್ ಭಾಗವತಮ್ — 109 — ವಿದುರ ಧರ್ಮರಾಜ ಸಂವಾದ
ಕುರುಕ್ಷೇತ್ರ ಯುದ್ಧ ಮುಗಿದು ದೇಹತ್ಯಾಗ ಮಾಡುವವರೆಗಿನ ಹದಿನೈದು ವರ್ಷಗಳ ಅವಧಿಯಲ್ಲಿ ವಿದುರರು ಬಹುತೇಕ ತೀರ್ಥಯಾತ್ರೆಯಲ್ಲಿಯೇ ಕಾಲವನ್ನು ಕಳೆಯುತ್ತಿರುತ್ತಾರೆ. ಆಗಾಗ ಹಸ್ತಿನಾವತಿಗೂ ಬರುತ್ತಿರುತ್ತಾರೆ. ಆ ರೀತಿಯಾಗಿ ಒಂದು ಸಂದರ್ಭದಲ್ಲಿ ಬಂದಾಗ ನಡೆದ ವಿದುರರಿಗೂ ಧರ್ಮರಾಜರಿಗೂ ನಡೆದ ಸಂವಾದವನ್ನು ಭಾಗವತ ದಾಖಲಿಸುತ್ತದೆ. ಅದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 108 — ಪರೀಕ್ಷಿತರ ಜನ್ಮ
108Kಶ್ರೀಮದ್ ಭಾಗವತ ನಮಗೆಲ್ಲ ದೊರೆಯಲು ಕಾರಣಕರ್ತರಾದ, ಮಹಾ ಭಾಗವತೋತ್ತಮರಾದ ಶ್ರೀ ಪರೀಕ್ಷಿದ್ರಾಜರ ಜನ್ಮವಾದ ಪರಮಪಾವನ ಕಥೆಯ — ಶ್ರೀಕೃಷ್ಣನ ಕಾರುಣ್ಯದ — ಚಿತ್ರಣ ಇಲ್ಲಿದೆ. ಪರೀಕ್ಷಿದ್ರಾಜರ ಜಾತಕವನ್ನು ಕಂಡು ಅಂದಿನ ಬ್ರಾಹ್ಮಣೋತ್ತಮರು ತಿಳಿಸಿದ ಅವರ ಮಾಹಾತ್ಮ್ಯದ ಚಿತ್ರಣದೊಂದಿಗೆ. ಆಚಾರ್ಯರ ಅಪೂರ್ವ ನಿರ್ಣಯಗಳ ಸಮೇತವಾಗಿ.
ಶ್ರೀಮದ್ ಭಾಗವತಮ್ — 107 — ಶ್ರೀಕೃಷ್ಣ ಸ್ತ್ರೀಲೋಲುಪನಲ್ಲ
ದ್ವಾರಕೆಗೆ ಬಂದ ಶ್ರೀಕೃಷ್ಣ, ತನ್ನ ಮಡದಿಯರನ್ನು ಕಂಡು ಅವರನ್ನು ಅನುಗ್ರಹಿಸಿದ ಪರಿಯನ್ನು ವರ್ಣನೆ ಮಾಡತ್ತ, ಶ್ರೀಮದ್ಭಾಗವತ, ಶ್ರೀಕೃಷ್ಣ ಸ್ತ್ರೀಲೋಲುಪನೇ ಎಂಬ ಪ್ರಶ್ನೆಯನ್ನು ಕೈಗೆತ್ತೆಕೊಂಡು ಅದ್ಬುತವಾದ ಉತ್ತರಗಳನ್ನು ನೀಡುತ್ತದೆ. ಆ ಮಾತುಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 106 — ದ್ವಾರಕೆಗೆ ಬಂದ ಶ್ರೀಕೃಷ್ಣ
ಶ್ರೀಕೃಷ್ಣಪರಮಾತ್ಮ ದ್ವಾರಕೆಗೆ ಬಂದಾಗ ಅಲ್ಲಿನ ಜನ ತಮ್ಮ ಒಡೆಯನನ್ನು ಸ್ವಾಗತಿಸಿದ ರೀತಿ, ಸ್ತೋತ್ರ ಮಾಡಿದ ಬಗೆ, ದೇವರ ಬಗೆಗೆ ಅವರಿಗಿದ್ದ ಪ್ರೀತಿ, ದೇವರಿಗೆ ಅವರ ಬಗ್ಗೆ ಇದ್ದ ಪ್ರೇಮ ಎಲ್ಲವನ್ನೂ ಸಹ ಸೂತಾಚಾರ್ಯರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 105 — ಸ್ತ್ರೀಗೀತ
ಶ್ರೀಕೃಷ್ಣ ಹಸ್ತಿನಾವತಿಯಿಂದ ಹೊರಟು ನಿಂತಾಗ, ತಮ್ಮತಮ್ಮ ಮನೆಗಳ ಪ್ರಾಸಾದಗಳ ಮೇಲೆ ನಿಂತ ಸ್ತ್ರೀಯರು ಮಾಡಿದ ಶ್ರೀಕೃಷ್ಣಸ್ತೋತ್ರದ ಅರ್ಥಾನುಸಂಧಾನ ಇಲ್ಲಿದೆ. ದೇವರನ್ನು ಯಾವ ರೀತಿ ಸ್ಮರಣೆ ಮಾಡಬೇಕು ಎಂದು ಕಲಿಸುವ ಪರಮಪವಿತ್ರ ಸ್ತೋತ್ರವಿದು.
ಶ್ರೀಮದ್ ಭಾಗವತಮ್ — 104 — ಶ್ರೀಕೃಷ್ಣನ ವಿರಹ
ಯುಧಿಷ್ಠಿರನನ್ನು ರಾಜ್ಯದಲ್ಲಿ ಕೂಡಿಸಿದ ಶ್ರೀಕೃಷ್ಣ, ಪಾಂಡವರ ಸುಭದ್ರೆ ಮುಂತಾದವರ ಪ್ರಾರ್ಥನೆಯಂತೆ ಅನೇಕ ತಿಂಗಳುಗಳ ಕಾಲ ಹಸ್ತಿನಾವತಿಯಲ್ಲಿಯೇ ಉಳಿಯುತ್ತಾನೆ. ಆ ನಂತರ, ಎಲ್ಲರನ್ನೂ ಒಪ್ಪಿಸಿ ಶ್ರೀಕೃಷ್ಣ ದ್ವಾರಕೆಗೆ ಹೊರಟು ನಿಂತಾಗ ಆ ಎಲ್ಲ ಸಜ್ಜನೋತ್ತಮರು ಒಲ್ಲದ ಮನಸ್ಸಿನಿಂದ ಶ್ರೀಕೃಷ್ಣನನ್ನು ಬೀಳ್ಕೊಡುವ ಪ್ರಸಂಗದ ವಿವರಣೆ ಇಲ್ಲಿದೆ. ಅನಂತ ರೂಪದ ಶ್ರೀಹರಿಯಲ್ಲಿ ಸವಿಶೇಷಾಭೇದವಿದೆ ಎಂಬ ಪ್ರಮೇಯದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 103 — ಧರ್ಮರಾಜರ ಧರ್ಮರಾಜ್ಯ
“ದುರ್ಯೋಧನನೂ ಉತ್ತಮ ಪ್ರಜಾಪಾಲಕನಾಗಿದ್ದ” ಎಂಬ ಬನ್ನಂಜೆ ಮುಂತಾದ ಆಧುನಿಕರ ಮಾತಿಗೆ ಭಾಗವತ ನೀಡುವ ಉತ್ತರದ ವಿವರಣೆ, ಧರ್ಮರಾಜನ ಅದ್ಭುತ ಧರ್ಮನಿಷ್ಠೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅಪೂರ್ವ ವಿಷಯಗಳೊಂದಿಗೆ ಧರ್ಮರಾಜರ ಪರಮಾದ್ಭುತವಾದ ಧರ್ಮರಾಜ್ಯದ ವರ್ಣನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 102 — ಭೀಷ್ಮಸ್ತೋತ್ರ 02
ಕುರುಕ್ಷೇತ್ರದ ಯುದ್ಧದಲ್ಲಿ ನಾನು ಆಯುಧವನ್ನು ಹಿಡಿಯುವದಿಲ್ಲ ಎಂದು ಶ್ರೀಕೃಷ್ಣ ತಿಳಿಸಿರುತ್ತಾನೆ. ಆದರೆ, ಕೃಷ್ಣನ ಕೈಯಲ್ಲಿ ಆಯುಧವನ್ನು ನಾನು ಹಿಡಿಸಿಯೇ ಹಿಡಿಸುತ್ತೇನೆ ಎಂದು ಭೀಷ್ಮಾಚಾರ್ಯರು ಪ್ರತಿಜ್ಞೆ ಮಾಡಿರುತ್ತಾರೆ. ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರ್ಣ ಮಾಡಲೋಸುಗ ಶ್ರೀಕೃಷ್ಣ, ಮೃದುವಾಗಿ ಯುದ್ಧ ಮಾಡುತ್ತಿದ್ದ ಅರ್ಜುನನನ್ನು ಎಚ್ಚರಿಸಲು, ಒಮ್ಮೆ ಚಕ್ರವನ್ನು ಹಿಡಿದು ಭೀಷ್ಮರನ್ನು ಕೊಲ್ಲ ಹೋಗುತ್ತಾನೆ. ಆ ಪ್ರಸಂಗವನ್ನು ನೆನೆಯುತ್ತ ಭೀಷ್ಮಾಚಾರ್ಯರು ದೇವರ ಕಾರುಣ್ಯ ಮಾಹಾತ್ಮ್ಯಗಳನ್ನ ಚಿಂತಿಸುತ್ತಾರೆ. ಮಹಾಭಾರತದ ವಚನಗಳ ಉಲ್ಲೇಖದೊಂದಿಗೆ ಆ ಪ್ರಸಂಗವನ್ನು ನಿರೂಪಿಸಿ, ದೇವರನ್ನು ಕಾಣುತ್ತಲೇ ಭೀಷ್ಮರು ದೇಹತ್ಯಾಗ ಮಾಡುವ ಸಂದರ್ಭದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 101 — ಭೀಷ್ಮಸ್ತೋತ್ರ 01
ತಮ್ಮೆದುರಿಗೆ ಬಂದು ನಿಂತಿರುವ ಶ್ರೀಕೃಷ್ಣನೇ ಸರ್ವರಂತರ್ಯಾಮಿಯಾದ ಸರ್ವನಿಯಾಮಕನಾದ ಸರ್ವಸ್ರಷ್ಟಾರನಾದ ಪರಮಾತ್ಮ ಎಂದು ಧರ್ಮರಾಜರಿಗೆ ತಿಳಿಸಿ ಹೇಳಿ, ಎಲ್ಲ ಧರ್ಮಗಳ ಉಪದೇಶವನ್ನು ಮಾಡಿ ಕಡೆಯ ಕಾಲ ಬಂದಾಗ ಶ್ರೀಕೃಷ್ಣನ ಸ್ತೋತ್ರವನ್ನು ಮಾಡುತ್ತಾರೆ. ಅನುರಾಗ ತುಂಬಿದ ನೋಟದಿಂದ ಶ್ರೀಕೃಷ್ಣ ಅವರನ್ನು ಕಂಡಾಗ ಅವರ ದೇಹದ ಎಲ್ಲ ನೋವೂ ಸಹ ಮರೆಯಾಗುತ್ತದೆ. ಆಗ ಭೀಷ್ಮಾಚಾರ್ಯರು ಮಾಡಿದ ಅಪೂರ್ವಸ್ತೋತ್ರದ — ಯಾವ ಸ್ತೋತ್ರದ ಪಠಣ-ಚಿಂತನಗಳಿಂದ ಅಂತ್ಯಕಾಲದಲ್ಲಿ ನಮಗೆ ದೇವರ ಸ್ಮರಣೆ ಒದಗಿ ಬರುತ್ತದೆಯೋ ಅಂತಹ ಸ್ತೋತ್ರದ — ಅರ್ಥಾನುಸಂಧಾನದ ಮೊದಲ ಭಾಗ ಇಲ್ಲಿದೆ.
ಶ್ರೀಮದ್ ಭಾಗವತಮ್ — 100 — ಭೀಷ್ಮರ ಉಪದೇಶ
ಯುದ್ದವನ್ನು ಮಾಡಿ ಪ್ರಜಾದ್ರೋಹವನ್ನು ಮಾಡಿದ್ದೇನೆ ಎಂದು ಸಂಶಯಕ್ಕೀಡಾದ ಧರ್ಮರಾಜರು, ಶ್ರೀಕೃಷ್ಣನ ಮಾತಿನಂತೆ, ತಾನು ಮಾಡಿದ್ದು ತಪ್ಪೋ ಸರಿಯೋ ಎಂದು ತಿಳಿಯಲು, ಯುದ್ಧಭೂಮಿಯಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಬಳಿಗೆ ಬರುತ್ತಾರೆ. ಭೀಷ್ಮಾಚಾರ್ಯರ ಮುಖದಿಂದ ಹೊರಹೊಮ್ಮಿ ಬರಲಿರುವ ಧರ್ಮಸುಧೆಯನ್ನು ಪಾನ ಮಾಡಲು ಸಕಲ ಋಷಿಗಳೂ ಆಗಮಿಸುತ್ತಾರೆ. ಧರ್ಮರಾಜ ಮಾತನ್ನಾರಂಭಿಸುವ ಮೊದಲೇ ಅವನ ಮನಸ್ಸಿನಲ್ಲಿದ್ದ ಪ್ರಶ್ನೆಗೆ ಉತ್ತರವನ್ನಿತ್ತುಬಿಡುತ್ತಾರೆ ಭೀಷ್ಮಾಚಾರ್ಯರು. ಅವರ ಮಾತಿನ ಅನುವಾದ ಇಲ್ಲಿದೆ.
ಶ್ರೀಮದ್ ಭಾಗವತಮ್_99_ಧರ್ಮರಾಜರ ಸಂಶಯ
ಭೀಷ್ಮ-ದುರ್ಯೋಧನ ಮೊದಲಾದವರನ್ನು ಕೊಲ್ಲುವದು ತಪ್ಪಲ್ಲವೇ ಎಂದು ಯುದ್ಧಕ್ಕಿಂತ ಮೊದಲು ಅರ್ಜುನ ಸಂಶಯಕ್ಕೀಡಾದರೆ, ಯುದ್ಧ ಮುಗಿದ ನಂತರ ಕೊಂದದ್ದು ತಪ್ಪಲ್ಲವೇ ಎಂದು ಧರ್ಮರಾಜರು ಸಂಶಯಕ್ಕೀಡಾಗುತ್ತಾರೆ. ವಿದೇಶಪ್ರವಾಸ, ಯಜ್ಞದಲ್ಲಿ ಪಶುಬಲಿ, ನಿಷಿದ್ಧವಾದುದದನ್ನು ತಿನ್ನುವದು ಮುಂತಾದ ದೃಷ್ಟಾಂತಗಳ ಮುಖಾಂತರ, ದಿನನಿತ್ಯದ ಜೀವನದಲ್ಲಿ ನಾವೆಷ್ಟು ಸಂಶಯಕ್ಕೀಡಾಗುತ್ತಿರುತ್ತೇವೆ ಎನ್ನುವದನ್ನು ನಿರೂಪಿಸು ನಮಗಿಷ್ಟವಾದುದು ಧರ್ಮ, ನಮಗಿಷ್ಟವಿಲ್ಲದ್ದು ಅಧರ್ಮ ಎಂಬ ವಿಚಿತ್ರ ಮನೋಭಾವ ತಪ್ಪು, ಶಾಸ್ತ್ರ ಹೇಳುವದು ಧರ್ಮ, ಶಾಸ್ತ್ರ ನಿಷೇಧಿಸುವದು ಅಧರ್ಮ ಎನ್ನುವದೇ ಸರಿಯಾದದದ್ದು ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
ಶ್ರೀಮದ್ ಭಾಗವತಮ್—98— ಕುಂತೀಸ್ತೋತ್ರ 03
“ಪಾಂಡವರಲ್ಲಿ, ಯಾದವರಲ್ಲಿ ನನಗಿರುವ ಸ್ನೇಹಪಾಶವನ್ನು ನಾಶಮಾಡಿಬಿಡು” ಎಂಬ ಕುಂತೀದೇವಿಯರ ಮತ್ತೊಂದು ಉದಾತ್ತ ಚಿಂತನೆಯ ಪ್ರಾರ್ಥನೆಯ ವಿವರಣೆ ಇಲ್ಲಿದೆ. ಗೋಪಿಕಾದಿಗಳ ಮೇಲೆ ದೇವರು ಮಾಡಿದ ಮಹಾನುಗ್ರಹದ ಚಿಂತನೆಯೊಂದಿಗೆ ಕುಂತೀದೇವಿ ಮಾಡಿದ ದೇವರ ಮಾಹಾತ್ಮ್ಯವನ್ನು ಚಿಂತನೆಯ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 97 — ಕುಂತೀಸ್ತೋತ್ರ 02
“ಆಗಾಗ ನಮಗೆ ಕಷ್ಟಗಳನ್ನು ನೀಡುತ್ತಿರು” ಎಂದು ಕುಂತೀದೇವಿ ಮಾಡಿದ ಅತ್ಯಪೂರ್ವವಾದ ಪ್ರಾರ್ಥನೆಯ ನಿರೂಪಣೆ ಇಲ್ಲಿದೆ. ಕುಂತಿಯ ಈ ಮಾತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಮೇಲೆ ಮಾಡಿದ ಮಹತ್ತರ ಪರಿಣಾಮದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 96 — ಕುಂತೀಸ್ತೋತ್ರ_01
ಉತ್ತರೆಯ ಗರ್ಭವನ್ನು ರಕ್ಷಿಸಿ ದ್ವಾರಕೆಗೆ ಹೊರಟು ನಿಂತ ಶ್ರೀಕೃಷ್ಣನನ್ನು ಕುಂತಿದೇವಿಯರು ಅದ್ಭುತವಾದ ಕ್ರಮದಲ್ಲಿ ಸ್ತೋತ್ರವನ್ನು ಮಾಡುತ್ತಾರೆ. ಆ ಸ್ತೋತ್ರದ ಅರ್ಥಾನುಸಂಧಾನದ ಮೊದಲ ಭಾಗವಿದು.
ಶ್ರೀಮದ್ ಭಾಗವತಮ್ — 95 — ಉತ್ತರಾ-ಗರ್ಭ-ರಕ್ಷಣೆ
ಪಾಂಡವರನ್ನು ರಾಜ್ಯದಲ್ಲಿ ಕೂಡಿಸಿದ ಶ್ರೀಕೃಷ್ಣ ಸಾತ್ಯಕಿ ಉದ್ಧವರೊಡಗೂಡಿ ರಥದಲ್ಲಿ ಕುಳಿತು ಇನ್ನೇನು ಹೊರಡಬೇಕನ್ನಷ್ಟರಲ್ಲಿ “ಕೃಷ್ಣಾ ಕಾಪಾಡು” ಎಂದು ಹೆಣ್ಣಿನ ಧ್ವನಿಯೊಂದು ಕೇಳುತ್ತದೆ. ಗರ್ಭಿಣಿಯಾದ ಉತ್ತರೆ ರಕ್ಷಣೆಗಾಗಿ ತನ್ನ ಬಳಿಗೆ ಧಾವಿಸಿ ಬರುತ್ತಿರುವದನ್ನು ಕಂಡ ಭಗವಂತ ರಥದಿಂದ ಥಟ್ಟನೆ ಹಾರಿ ಅವರ ಬಳಿಗೆ ಬಂದು, ಭಯದಿಂದ ಥರಥರನೆ ನಡುಗುತ್ತಿದ್ದ ಉತ್ತರಾದೇವಿಯನ್ನು ಸಾಂತ್ವನಗೊಳಿಸುತ್ತಾನೆ. ಅಶ್ವತ್ಥಾಮರ ಅಸ್ತ್ರದ ಭಯದಿಂದ ಗರ್ಭವನ್ನು ರಕ್ಷಿಸುತ್ತಾನೆ.
ಶ್ರೀಮದ್ ಭಾಗವತಮ್ — 94 — ಅಶ್ವತ್ಥಾಮಾಚಾರ್ಯರ ಕನಸು
ಅಶ್ವತ್ಥಾಮಾಚಾರ್ಯರು ದುರ್ಯೋಧನನಿಗಾಗಿ ಪಾಂಡವರ ಮಕ್ಕಳನ್ನು ಕೊಂದು, ಭೀಮನಿಂದ ಪರಾಜಿತರಾಗಿ, ಬ್ರಹ್ಮಶಿರೋಸ್ತ್ರವನ್ನು ಉಪಶಮನ ಮಾಡಲಾಗದೇ, ಶ್ರೀಕೃಷ್ಣನ ಮೇಲೂ ಸಿಟ್ಟಾಗಿ, ಉತ್ತರೆಯ ಗರ್ಭವನ್ನು ಕೊಂದೇ ಕೊಲ್ಲುತ್ತೇನೆ ಎಂದಾಗ ಶ್ರೀಕೃಷ್ಣ ವೇದವ್ಯಾಸರು ಅಶ್ವತ್ಥಾಮರನ್ನು ನಿಗ್ರಹಿಸಿದ ಪರಿಯ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 93 — ಭಾಗವತದ ರಚನೆ
ನಾರದರು ನಿರ್ಗಮಿಸಿದ ನಂತರ ಯಾವ ಕ್ರಮದಲ್ಲಿ ಶ್ರೀಮದ್ ಭಾಗವತದ ರಚನೆಯನ್ನು ಮಾಡಿದರು ಎನ್ನುವದನ್ನು ತಿಳಿಸುವ ಸೂತಾಚಾರ್ಯರು ಭಾಗವತದ ಕುರಿತ ಕೆಲವು ಅತ್ಯಪೂರ್ವ ವಿಷಯಗಳನ್ನು ನಿರೂಪಿಸುತ್ತ “ಎಲ್ಲವನ್ನೂ ತೊರೆದ ಶುಕಾಚಾರ್ಯರು ಭಾಗವತವನ್ನೇಕೆ ಅಧ್ಯಯನ ಮಾಡಿದರು” ಎಂಬ ಶೌನಕರ ಪ್ರಶ್ನೆಗೆ ಸೂತಾಚಾರ್ಯರು ನೀಡಿರುವ ಅದ್ಭುತವಾದ ಉತ್ತರದ ವಿವರಣೆ ಇಲ್ಲಿದೆ. ಶ್ರೀಮದ್ ಭಾಗವತವೆಂಬ ಕಲ್ಪವೃಕ್ಷದ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 92 — ನಾರದರು ಪಡೆದ ಪೂರ್ಣಾನುಗ್ರಹ
ನಾರದರು ತಮ್ಮ ಅದ್ಭುತವಾದ ಸಾಧನೆಯಿಂದ ಪಡೆದ ಶ್ರೀಹರಿಯ ಪೂರ್ಣಾನುಗ್ರಹ, ನಾರದರಾಗಿ ಅವರು ಮಾಡುವ ಮಹತ್ತರ ಸಾಧನೆಯ ಕುರಿತ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 91 — ನಾರದರಿಗೆ ದೇವರ ದರ್ಶನ
“ಕೋಶ ಓದಬೇಕು, ದೇಶ ಸುತ್ತಬೇಕು” ಎಂಬ ನಾಣ್ಣುಡಿಯ ವಿವರಣೆಯೊಂದಿಗೆ, ಮನುಷ್ಯ ತನ್ನ ಅಹಂಕಾರವನ್ನು ಕತ್ತರಿಸಿಕೊಳ್ಳಲು ಪಶು, ಪಕ್ಷಿ, ಪ್ರಾಣಿ, ಪ್ರಕೃತಿಗಳನ್ನು ಗಮನಿಸಬೇಕು ಎನ್ನುವದನ್ನು ನಾರದರ ಸಂಚಾರದ ಮುಖಾಂತರ ಅರ್ಥ ಮಾಡಿಕೊಳ್ಳುತ್ತ ನಾರದರಿಗಾದ ದೇವರ ಸಾಕ್ಷಾತ್ಕಾರದ ಪರಮಾದ್ಭುತ ಚಿತ್ರಣವನ್ನು ಅವರ ಮುಖದಿಂದಲೇ ಕೇಳುತ್ತೇವೆ. ಮೈ ಮನಗಳನ್ನು ಪುಲಕಗೊಳಿಸುವ ಭಾಗ.
ಶ್ರೀಮದ್ ಭಾಗವತಮ್ — 90 — ಕುಟುಂಬವೋ ಸಾಧನೆಯೋ?
ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಒಂದಲ್ಲ ಒಂದು ಬಾರಿ ಎದುರಾಗುವ ಪ್ರಶ್ನೆ — ಕುಟುಂಬವನ್ನು ಪೋಷಿಸುವದೋ, ಸಾಧನೆಯನ್ನು ಮಾಡುವದೋ? ಭಗವಂತನಿಂದಲೇ ಸಾಕ್ಷಾತ್ತಾಗಿ ಉಪದೇಶ ಪಡೆದ ಮಹಾನುಭಾವರು ನಾರದರಿಗೆ ತತ್ವೋಪದೇಶ ಮಾಡಿದ್ದಾರೆ. ಅಂದರೆ ಪರೋಕ್ಷಜ್ಞಾನ ಸಿದ್ಧಿಸಿದೆ. ಐದು ವರ್ಷದ ಆ ಸಣ್ಣ ಕೂಸಿಗೆ ಜಗತ್ತೆಲ್ಲ ಸುತ್ತಾಡುತ್ತ ಹರಿಯ ಆರಾಧನೆ ಮಾಡಬೇಕೆಂಬ ಅದಮ್ಯ ಬಯಕೆಯಿದೆ. ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂಡದೆ ಸಂನ್ಯಾಸಿಗಳಂತೆ ಬದುಕಬೇಕೆಂಬ ಆಸೆ ಆ ಹುಡುಗನಿಗೆ. ಆದರೆ, ವೃದ್ಧಳಾದ ತಾಯಿ. ತನ್ನೊಂದಿಗೆ ಬರಲಿಕ್ಕೆ ಸಾಧ್ಯವಿಲ್ಲ. ತನಗಿಲ್ಲೇ ಇರಲು ಅಪೇಕ್ಷೆ ಇಲ್ಲ. ತಮ್ಮ ಅದಮ್ಯ ಬಯಕೆಯನ್ನೂ ದಮಿಸಿ ನಾರದರು ತಾಯಿ ಬದುಕಿರುವವರೆಗೆ ತಾಯಿಯ ಸೇವೆಯನ್ನೇ ಮಾಡಿಕೊಂಡಿರುತ್ತಾರೆ.
ಶ್ರೀಮದ್ ಭಾಗವತಮ್ — 89 — ನಾರದರ ಕರ್ಮಸಿದ್ಧಾಂತ
ಅತ್ಯಂತ ಗಹನವಾದ ಶಾಸ್ತ್ರೀಯ ತತ್ವವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಹೇಳಬಲ್ಲ ಶ್ರೇಷ್ಠ ದೇವತೆಗಳು ನಮ್ಮ ನಾರದರು. ಮೋಕ್ಷಸಾಧನವಾದ ಕರ್ಮ ಎಂದರೆ ಅದೇನೋ ವಿಶಿಷ್ಟವಾದ ಕರ್ಮ ಎಂದು ತಿಳಿದಿರುವ ಸಾಮಾನ್ಯ ಜನರಿಗೆ, ಶಾಸ್ತ್ರಪ್ರಪಂಚದ ಅತಿ ಗಹನ ಕರ್ಮತತ್ವವನ್ನು ಅತ್ಯಂತ ಸರಳವಾಗಿ, ಅದ್ಭುತವಾದ ದೃಷ್ಟಾಂತದೊಂದಿಗೆ ನಾರದರು ಮನವರಿಗೆ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ. ಅಪರೋಕ್ಷಜ್ಞಾನಸಾಧನವಾದ ಕರ್ಮಕ್ಕೆ ಫಲ ದೊರೆಯುವದು ಪವಿತ್ರವಾದ ಭರತಭೂಮಂಡಲದಲ್ಲಿ ಮಾತ್ರ ಎಂಬ ಪ್ರಮೇಯದ ವಿವರಣೆಯೂ ಸಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 88 — ನಾರದರು ಮಾಡಿದ ಸೇವೆ
ಮಹಾನುಭಾವರ ಸೇವೆ ಎನ್ನುವದು ಒಂದು ಅದ್ಭುತವಾದ ಸುಖವನ್ನು ನೀಡುವ ಮಹಾಸತ್ಕರ್ಮ. ಅನುಭವಿಸುವ ಕಾಲದಲ್ಲಿ ಸುಖವನ್ನು ನೀಡುವದಷ್ಟೇ ಅಲ್ಲ, ಅದರಿಂದ ಉಂಟಾಗುವ ಫಲ ಮೇರೆ ಇಲ್ಲದ್ದು. ನಾರದರು ಶೂದ್ರಬಾಲಕನಾಗಿದ್ದಾಗ ತಮ್ಮ ಧಣಿಯ ಮನೆಗೆ ಬಂದ ಯತಿವರೇಣ್ಯರ ಸೇವೆಯನ್ನು ಮಾಡಿದ ಬಗೆಯನ್ನು ಅದ್ಭತವಾದ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 87 — ನಾರದರ ಪೂರ್ವಜನ್ಮ
ನಾರದರು ತಮ್ಮ ಪೂರ್ವಜನ್ಮದಲ್ಲಿ ಬ್ರಾಹ್ಮಣರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ದಾಸಿಯೊಬ್ಬಳ ಮಗನಾಗಿ ಹುಟ್ಟಿ ಬಂದಿರುತ್ತಾರೆ. ಆ ಬ್ರಾಹ್ಮಣರ ಮನೆಗೆ ಚಾತುರ್ಮಾಸ್ಯಕ್ಕಾಗಿ ಬಂದ ಯತಿವರೇಣ್ಯರ ಸೇವೆಯಿಂದ ಜ್ಞಾನ ಭಕ್ತಿ ವೈರಾಗ್ಯಗಳನ್ನು ಪಡೆದು ಮುಂದಿನ ಜನ್ಮದಲ್ಲಿ ನಾರದರಾಗಿ ಹುಟ್ಟಿ ಬರುತ್ತಾರೆ. ಅಂತಹ ಪವಿತ್ರತಮಳಾದ ತಾಯಿಯ ಹೊಟ್ಟೆಯಲ್ಲಿ ಹುಟ್ಟಲು ಮಾಡಬೇಕಾದ ಪ್ರಾರ್ಥನೆ, ದೊಡ್ಡವರ ಸೇವೆ, ಅವರ ಉಂಡು ಉಳಿದದ್ದನ್ನು ಉಣ್ಣುವದರಿಂದ ಉಂಟಾಗುವ ಫಲ, ಹಸ್ತೋದಕ ಪಾದೋದಕಗಳ ಪ್ರಭಾವ, ಸ್ವೀಕಾರ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಮುಂತಾದ ವಿಷಯಗಳು ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 06 — ನಾರದರ ಆರು ಕಾರಣಗಳು
ಈ ದಿವಸದ ವಿಜ್ಞಾನಿಗಳು ಇಷ್ಟು ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ, ನಮ್ಮ ಪ್ರಾಚೀನ ಋಷಿಮುನಿಗಳೇಕೆ ಇವನ್ನು ಕಂಡು ಹಿಡಿಯಲಿಲ್ಲ ಎಂಬ ಪ್ರಶ್ನೆಗೆ ಶ್ರೀ ನಾರದರು ನೀಡಿರುವ ಸ್ವಾರಸ್ಯಕರವಾದ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 85 — ನಾರದರ ಪ್ರಾರ್ಥನೆ
ಶ್ರೀಮದ್ ಭಾಗವತ ರಚನೆಗೆ ಪ್ರೇರಣೆ ನೀಡಿದ ಯಶಸ್ಸನ್ನು ನಾರದರಿಗೆ ಅನುಗ್ರಹಿಸಬೇಕು ಎಂಬ ಕಾರಣದಿಂದ ಸರಸ್ವತೀತೀರದ ತಮ್ಮ ಆಶ್ರಮದಲ್ಲಿ ಶ್ರೀ ವೇದವ್ಯಾಸದೇವರು, ಖಿನ್ನರಂತೆ ನಟನೆ ಮಾಡುತ್ತ ಕುಳಿತಿರುತ್ತಾರೆ. ಅಲ್ಲಿಗೆ ನಾರದರು ಬಂದು ಯಾಕೆ ಹೀಗಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಕಾರಣವೇನಿರಬಹುದು ಎಂದು ನೀವೇ ಹೇಳಿ ಎಂದು ವೇದವ್ಯಾಸದೇವರು ವಿಡಂಬನೆ ಮಾಡುತ್ತಾರೆ. ಆಗ ನಾರದರು ಅತ್ಯಂತ ರೋಚಕವಾದ ಕ್ರಮದಲ್ಲಿ ಭಾಗವತವನ್ನು ರಚಿಸುವಂತೆ ಪ್ರಾರ್ಥಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 84 — ಭಾಗವತದ ಮೇಲೆ ವೇದವ್ಯಾಸದೇವರ ಪ್ರೀತಿ
ಶ್ರೀಮದ್ ಭಾಗವತದ ರಚನೆ ಹೇಗಾಯಿತು ಎಂಬ ಶೌನಕರ ಪ್ರಶ್ನೆಗೆ ಉತ್ತರ ನೀಡುತ್ತ ಸೂತಾಚಾರ್ಯರು ವೇದವ್ಯಾಸದೇವರ ಅಪಾರ ಕಾರುಣ್ಯದ ಪರಿಚಯವನ್ನು ನಮಗೆ ಮಾಡಿಸುತ್ತಾರೆ. ಸಜ್ಜನರ ಉದ್ಧಾರಕ್ಕಾಗಿಯೇ ಅವತಾರ ಮಾಡಿದ ವೇದವ್ಯಾಸದೇವರು ವೇದಗಳ ವಿಭಾಗ, ಭಾರತ ಪುರಾಣಗಳ ರಚನೆಯನ್ನು ಮಾಡಿದರೂ ಸಜ್ಜನರ ಉದ್ಧಾರಕ್ಕಾಗಿ ಮತ್ತಷ್ಟು ಮಾಡಬೇಕೆಂಬ ಕೃಪೆಯನ್ನು ಭಾಗವತವನ್ನು ರಚಿಸುತ್ತಾರೆ. ಈ ಎಲ್ಲ ಗ್ರಂಥಗಳಿಗಿಂತಲೂ ವಿಭಿನ್ನವಾಗಿ ಭಾಗವತದ ಮೇಲಿರುವ ಅವರ ಪ್ರೇಮವನ್ನು ಇಲ್ಲಿ ಸೂತಾಚಾರ್ಯರು ತಿಳಿಸಿ ಹೇಳುತ್ತಾರೆ. ಸ್ತ್ರೀಯರು ಮಹಾಭಾರತ ಮತ್ತು ಭಾಗವತವನ್ನು ಗ್ರಂಥಪುರಸ್ಸರವಾಗಿಯೇ ಅಧ್ಯಯನ ಮಾಡಬೇಕು ಎಂಬ ಚರ್ಚೆಯಲ್ಲಿ ನಿರ್ಣಾಯಕವಾದ ವಚನವಿರುವದು ಇದೇ ಪ್ರಸಂಗದಲ್ಲಿ. ಆ ಮಾತಿನ ವಿವರಣೆಯೊಂದಿಗೆ ಭಾಗವತದ ಶ್ರೇಷ್ಠತೆಯ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 83 — ಪ್ರಥಮಸ್ಕಂಧ ಭಾಗವತದ ಭಾಗವೇ?
ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಉಪದೇಶಿಸಿದ ಗ್ರಂಥ ಭಾಗವತ. ಶುಕಾಚಾರ್ಯರ ಉಪದೇಶ ಆರಂಭವಾಗುವದೇ ಎರಡನೆಯ ಸ್ಕಂಧದಿಂದ. ಅಂದಮೇಲೆ ಮೊದಲನೆಯ ಸ್ಕಂಧದಲ್ಲಿ ಬಂದಿರುವ ವಿಷಯಗಳನ್ನು ಶುಕಾಚಾರ್ಯರು ಪರೀಕ್ಷಿದ್ರಾಜರಿಗೆ ಹೇಳಲೇ ಇಲ್ಲ. ಹೀಗಾಗಿ ಈ ಪ್ರಥಮಸ್ಕಂಧ ಭಾಗವತ ಅಲ್ಲವೇ ಅಲ್ಲ. ಅಕಸ್ಮಾತ್ ಭಾಗವತವೇ ಆಗಿದ್ದರೆ, ಶುಕಾಚಾರ್ಯರು ಯಾಕೆ ಇದನ್ನು ಪರೀಕ್ಷಿದ್ರಾಜರಿಗೆ ಹೇಳಲೇ ಇಲ್ಲ, ಅಪೂರ್ಣವಾಗಿ ಭಾಗವತವನ್ನು ಹೇಳಿದಂತಾಯಿತಲ್ಲವೇ ಎಂಬ ಪ್ರಶ್ನೆಗಳಿಗೆ ಸ್ವಯಂ ವೇದವ್ಯಾಸದೇವರೇ ಸೂಚಿಸಿರುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 82 — ಸಜ್ಜನರನ್ನು ಪೋಷಿಸುವ ಮಹಾರಾಜ ಶ್ರೀಮದ್ ಭಾಗವತ
ಧರ್ಮ ಉಳಿಯಬೇಕಾದರೆ ಎರಡು ಶಕ್ತಿಗಳು ಆವಶ್ಯಕ. ಮೊದಲನೆಯದು ಜ್ಞಾನಶಕ್ತಿ. ಕಾರಣ ಯಾವುದು ಧರ್ಮ ಯಾವುದು ಅಧರ್ಮ ಎಂದು ನಿರ್ಣಯಿಸುವ ಸಾಮರ್ಥ್ಯ ಬರುವದೇ ಜ್ಞಾನದಿಂದ. ಎರಡನೆಯದು ದೇಹಶಕ್ತಿ. ದೇಹ-ಇಂದ್ರಿಯ-ಮನಸ್ಸುಗಳಲ್ಲಿ ಶಕ್ತಿ ಇಲ್ಲದಿದ್ದರೆ ಧರ್ಮದ ಆಚರಣೆಯನ್ನು ಮಾಡಲು ಸಾಧ್ಯವಿಲ್ಲ. ಇದು ವೈಯಕ್ತಿಕ ಮಟ್ಟದಲ್ಲಾಯಿತು. ಇನ್ನು ಸಮಗ್ರ ರಾಷ್ಟ್ರದ ದೃಷ್ಟಿಯಿಂದ ಕಂಡಾಗ, ಈಗ ಅನುಸರಿಸಬೇಕಾದ ಧರ್ಮ ಯಾವುದು ಎಂದು ನಿರ್ಣಯಿಸಬೇಕಾದವರು ಸರ್ವಜ್ಞರಾದ ಗುರುಗಳು. ದುಷ್ಟರ ಆಕ್ರಮಣದಿಂದ ಆ ಧಾರ್ಮಿಕರನ್ನು ರಕ್ಷಣೆ ಮಾಡಲು, ಅವರನ್ನು ಪೋಷಿಸಲು, ಮಹಾಪರಾಕ್ರಮಿಯಾದ ಕರುಣಾಳುವಾದ ರಾಜನಿರಬೇಕು. ಸರ್ವಜ್ಞಗುರುಗಳ ಮತ್ತು ಈ ಮಹಾರಾಜರ ಕಾರ್ಯವನ್ನು ಕಲಿಯುಗದಲ್ಲಿ ನಿಭಾಯಿಸಲು ರಚಿತವಾದ ಗ್ರಂಥವೇ ಶ್ರೀಮದ್ ಭಾಗವತ. ಇದನ್ನು ಆಶ್ರಯಿಸಿರುವದರಿಂದ ನಮಗೆ ನಮ್ಮನಮ್ಮ ಧರ್ಮದ ಜ್ಞಾನ ನಮಗೆ ದೊರೆಯುತ್ತದೆ. ತಿಳಿದ ಧರ್ಮದ ಆಚರಣೆಯನ್ನು ಮಾಡಲು ದೇಹ-ಮನಸ್ಸು-ಇಂದ್ರಿಯಗಳಿಗೆ ಶಕ್ತಿಯನ್ನು ನೀಡುವ, ಆವಶ್ಯಕವಾದ ಸಂಪತ್ತನ್ನು ಕರುಣಿಸುವ ರಾಜ ಶ್ರೀಮದ್ ಭಾಗವತ ಎಂಬ ದಿವ್ಯತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 81 — ದೇವರ ಅವತಾರಗಳ ಮುಖ್ಯ ಉದ್ದೇಶ
ಜೀವ ಎಂದರೇನು? ಜೀವನಿಗೆ ಮತ್ತೆಮತ್ತೆ ಹುಟ್ಟು ಸಾವುಗಳು ಬರಲು ಕಾರಣವೇನು? ದೇವರು ಯಾಕಾಗಿ ಅವತಾರಗಳನ್ನು ಸ್ವೀಕರಿಸುತ್ತಾನೆ? ಯಾವುದೇ ಕಾರಣಕ್ಕೆ ಸ್ವೀಕರಿಸಿದರೂ ಅನಂತ ರೂಪಗಳನ್ನು ಸ್ವೀಕಾರ ಮಾಡಲು ಕಾರಣವೇನು? ಅಪರೋಕ್ಷ ಜ್ಞಾನವೆಂದರೇನು? ದೇವರನ್ನು ತಿಳಿಯಲು ಇರಬೇಕಾದ ಅರ್ಹತೆಗಳೇನು ಸರ್ವಕರ್ತನಾದ ಭಗವಂತನನ್ನು ಭಾಗವತ ಅಕರ್ತಾ ಎಂದೇಕೆ ಕರೆಯುತ್ತಾರೆ? ಎಂಬ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತ ಸ್ವಾರಸ್ಯಕರ ವಿಷಯಗಳ ನಿರೂಪಣೆಯೊಂದಿಗೆ.
ಶ್ರೀಮದ್ ಭಾಗವತಮ್ — 80 — ದೇವರ ಮೂರು ಶರೀರಗಳು
ದೇವರಿಗೆ ಸ್ವರೂಪಭೂತವಾದ ಶರೀರವಿರುವಂತೆ, ಸಮಗ್ರ ಜೀವರಾಶಿಗಳನ್ನು, ಮತ್ತು ಸಮಗ್ರ ಅಚೇತನವಸ್ತುಗಳನ್ನೂ ಸಹ ದೇವರ ಶರೀರ ಎಂದು ಶಾಸ್ತ್ರಗಳು ತಿಳಿಸುತ್ತಾವೆ. ಅದಕ್ಕೆ ಕಾರಣ ಮತ್ತು ಅದರ ಕುರಿತ ಪ್ರಶ್ನೆಗಳಿಗೆ ಉತ್ತರ ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 79 — ಎಲ್ಲ ರೂಪಗಳೂ ಪರಿಪೂರ್ಣ
ಶ್ರೀಕೃಷ್ಣರೂಪವೊಂದೇ ಪರಿಪೂರ್ಣ, ಉಳಿದ ರೂಪಗಳು ಅಪರಿಪೂರ್ಣ, ಅವತಾರಿಗಳು ಎಂಬ ಒಂದು ದುರ್ವಾದ. ಮೊದಲಿನಿಂದಲೂ ಇದೆ. ಭಾಗವತದ “ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್” ಎಂಬ ಮಾತು ತಪ್ಪಾಗಿ ಅರ್ಥೈಸಿಕೊಂಡು ಈ ವಾದವನ್ನು ಕೆಲವರು ಸಮರ್ಥಿಸುತ್ತಾರೆ. ಭಾಗವತದ ವಾಕ್ಯದ ಸರಿಯಾದ ಅರ್ಥಚಿಂತನೆಯೊಂದಿಗೆ ಭಗವಂತನ ರೂಪಗಳಲ್ಲಿ ಭೇದ ಮಾಡುವದು ಅಂಧಂತಮಸ್ಸನ್ನು ನೀಡುವ ದುಷ್ಟ ಚಿಂತನೆ ಎನ್ನುವದನ್ನು ವೇದ-ಸೂತ್ರಗಳ ವಚನದಿಂದ ಇಲ್ಲಿ ಸಮರ್ಥಿಸಲಾಗಿದೆ. “ನೇಹ ನಾನಾಸ್ತಿ ಕಿಂಚನ” ಎಂಬ ವೇದಮಂತ್ರದ ಅರ್ಥವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 78 — ಅವತಾರದ ಕ್ರಮ
ಭಾಗವತದಲ್ಲಿ 22 ಅವತಾರಗಳನ್ನು ಹೇಳುವಾಗ, ಮೊದಲು ಅವತಾರ ಮಾಡಿದ ನರಸಿಂಹರೂಪವನ್ನು ನಂತರ ಉಲ್ಲೇಖ ಮಾಡಿ, ನಂತರ ಅವತಾರ ಮಾಡಿದ ಕೂರ್ಮ, ಧನ್ವಂತರಿ, ಮೋಹನಿರೂಪಗಳನ್ನು ಮೊದಲು ಉಲ್ಲೇಖ ಮಾಡಲಾಗಿದೆ. ವರಾಹ ರೂಪದ ನಂತರ ಮತ್ಸ್ಯರೂಪವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ದಶಾವತರಗಳ ಉಲ್ಲೇಖದಲ್ಲಿಯೂ ಕೂರ್ಮ ಮೊದಲು ನರಸಿಂಹ ನಂತರ. ಈ ರೀತಿಯಾಗಿ ಕ್ರಮವನ್ನು ವ್ಯತ್ಯಾಸ ಮಾಡಿ ಉಲ್ಲೇಖಿಸುವ ಹಿಂದಿನ ಕಾರಣವನ್ನು ಆಚಾರ್ಯರು ತಂತ್ರಸಾರಸಂಗ್ರಹದಲ್ಲಿ ತಿಳಸಿದ್ದಾರೆ. ಶ್ರೀ ಶೇಷಚಂದ್ರಿಕಾಚಾರ್ಯರ ವಚನಗಳ ವಿವರಣೆಯೊಂದಿಗೆ ಆ ಪ್ರಮೇಯವನ್ನು ಇಲ್ಲಿ ನಿರೂಪಿಸಲಾಗಿದೆ. ಡಾರ್ವಿನ್ನಿನ ವಿಕಾಸವಾದವನ್ನು ಶಾಸ್ತ್ರವೂ ಒಪ್ಪಿದೆ ಎನ್ನುವ ಭರದಲ್ಲಿ ದಶಾವತಾರಗಳನ್ನು ವಿಕಾಸವಾದದೊಂದಿಗೆ ಸಮೀಕರಿಸುವ ಆಧುನಿಕರ ವಾದದ ವಿಮರ್ಶೆಯೊಂದಿಗೆ.
ಶ್ರೀಮದ್ ಭಾಗವತಮ್ — 77 — ದೇವರ ಇಪ್ಪತ್ತೆರಡು ಅವತಾರಗಳು.
ಮಹಾಭಾರತ-ಭಾಗವತ ರಚನೆಯಾಗುವದಿಕ್ಕಿಂತ ಮುಂಚೆ ಸ್ತ್ರೀಯರು ಯಾವ ಗ್ರಂಥವನ್ನು ಅಧ್ಯಯನವನ್ನು ಮಾಡುತ್ತಿದ್ದರು? ಎಂಬ ಪ್ರಶ್ನೆಗೆ ಉತ್ತರ ನೀಡುವದರೊಂದಿಗೆ ಸಚ್ಛಾಸ್ತ್ರಗಳ ಮೇಲೆ ಸೃಷ್ಟಿಯ ಆದಿಕಾಲದಿಂದಲೇ ಆಗುತ್ತಿರುವ ಆಕ್ರಮಣಗಳ ಕುರಿತ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 76 — ಪುರುಷರೂಪ
ಶ್ರೀ ಅನಂತತೀರ್ಥಶ್ರೀಪಾಂದಂಗಳವರು (ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರಿಗಿಂತ ಪ್ರಾಚೀನರು) ತಿಳಿಸಿರುವ ಅಪೂರ್ವ ಪ್ರಮೇಯಗಳೊಂದಿಗೆ ಪರಮಾತ್ಮನ ಮೂರು ಪುರುಷ ರೂಪಗಳ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 75 — ದೇವರ ದೇಹ ಪ್ರಾಕೃತವಲ್ಲ
ದೇವರ ಶರೀರರವನ್ನು “ಮಹದಾದಿಭಿಃ ಸಂಭೂತಂ” ಎಂದು ಭಾಗವತ ಹೇಳುತ್ತದೆ. ಸಂಭೂತ ಎಂದರೆ ಉತ್ಪನ್ನವಾದದ್ದು. ದೇವರ ಶರೀರ ಅಪ್ರಾಕೃತ ಎಂದಾದಲ್ಲಿ, ಇಲ್ಲಿ ಸಂಭೂತ ಎಂಬ ಶಬ್ದವನ್ನು ಯಾವ ಕಾರಣಕ್ಕೆ ಬಳಸಲಾಗಿದೆ ಎಂಬ ಪ್ರಶ್ನೆಗೆ ಆಚಾರ್ಯರು ಉತ್ತರವನ್ನು ನೀಡುತ್ತ, ದೇವರ ರೂಪಗಳ ಕುರಿತು ತಿಳಿಯಬೇಕಾದ ಅಪೂರ್ವ ಮತ್ತು ರಹಸ್ಯದ ತತ್ವಗಳನ್ನು ಶಾಸ್ತ್ರಗಳ ವಚನಗಳ ಮುಖಾಂತರ ನಮಗೆ ಅರ್ಥ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 74 — ದೇವರ ಅವತಾರಗಳ ವೈಶಿಷ್ಟ್ಯ
“ಜಗೃಹೇ ಪೌರುಷಮ್” ಎಂಬ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೇ. ದೇವರು ರೂಪವನ್ನು ಸ್ವೀಕಾರ ಮಾಡುತ್ತಾನೆ ಎಂದಿದೆ. ಅಂದ ಮೇಲೆ ದೇವರಿಗೂ ದೇವರ ಅವತಾರಕ್ಕೂ ಭೇದವಿದೆ ಎಂದಾಯಿತು. ಕಾರಣ ಸ್ವೀಕಾರ ಮಾಡುವವನು, ಸ್ವೀಕರಿಸಲ್ಪಡುವ ವಸ್ತುವಿನಲ್ಲಿ ಭೇದವಿರಬೇಕಲ್ಲವೇ. ಹಾಗೆಯೇ “ಮಹದಾದಿಭಿಃ ಸಂಭೂತಮ್” ಎಂದಿದೆ. ಸಂಭೂತ ಎಂದರೆ ಹುಟ್ಟಿದ್ದು. ದೇವರ ರೂಪ ಮಹತ್ತತ್ವ ಮುಂತಾದ ತತ್ವಗಳಿಂದ ಹುಟ್ಟಿದ್ದು ಎಂದು ಭಾಗವತದಲ್ಲಿಯೇ ಇದೆಯಲ್ಲ ಎಂದು. ದೇವರ ರೂಪಗಳಲ್ಲಿ ಭೇದವಿದೆ ಎಂದು ತಿಳಿದರೆ, ದೇವರಿಗೆ ಪ್ರಾಕೃತರೂಪವಿದೆ ಎಂದು ತಿಳಿದರೆ ತಮಸ್ಸಾಗುತ್ತದೆ ಎಂದು ಕಾಠಕೋಪನಿಷತ್ತು ಹೇಳುತ್ತದೆ. ಹೀಗೆ ಭಾಗವತ ಅರ್ಥವಾಗದೇ ನಿಂತಾಗ, ತಪ್ಪು ದಾರಿಯಲ್ಲಿ ನಡೆಯುವ ಪ್ರಸಂಗ ಬಂದಾಗ ಗೆಳೆಯನಂತೆ ಜೊತೆಯಲ್ಲಿ ಬಂದು ಸರಿದಾರಿಯಲ್ಲಿ ನಡೆಸುವ ನಮ್ಮ ಗೆಳೆಯ ಭಾಗವತತಾತ್ಪರ್ಯದ ರೂಪದಲ್ಲಿರುವ ಶ್ರೀಮದಾಚಾರ್ಯರು.
ಶ್ರೀಮದ್ ಭಾಗವತಮ್ — 73 — ಜೀವಬ್ರಹ್ಮಭೇದವೇ ಬ್ರಹ್ಮಸೂತ್ರಗಳ ಸಿದ್ಧಾಂತ
ಮಹಾಭಾರತ ಪುರಾಣಗಳ ವಚನಗಳಿಂದಲೇ ಭೇದವೇ ಅವುಗಳ ಸಿದ್ಧಾಂತ ಎನ್ನುವದನ್ನು ಸಮರ್ಥಿಸಿ ಸಮಸ್ತ ಶಾಸ್ತ್ರಾರ್ಥನಿರ್ಣಾಯಕವಾದ ಬ್ರಹ್ಮಸೂತ್ರಗಳಲ್ಲಿಯೂ ಶ್ರೀ ವೇದವ್ಯಾಸದೇವರು ಜೀವಬ್ರಹ್ಮಭೇದವನ್ನೇ ಸಮರ್ಥಿಸಿದ್ದಾರೆ ಎಂದು ಆಚಾರ್ಯರು ತೋರಿಸಿಕೊಡುತ್ತಾರೆ. ಜೀವಬ್ರಹ್ಮಭೇದವೇ ಶಾಸ್ತ್ರಗಳ ಸಿದ್ಧಾಂತವಾಗಿದ್ದರೆ, ಅಲ್ಲಲ್ಲಿ, ಅಭೇದ ತೋರುವಂತಹ ವಾಕ್ಯಗಳು ಯಾಕಾಗಿ ಇವೆ ಎಂಬ ಪ್ರಶ್ನೆಗೆ ಶಾಸ್ತ್ರವೇ ನೀಡಿರುವ ಉತ್ತರದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 72 — ಜೀವಬ್ರಹ್ಮಭೇದವೇ ವೇದಗಳ ಸಿದ್ಧಾಂತ
ವೇದಗಳಲ್ಲಿ ತತ್ವಮಸಿ, ಅಹಂ ಬ್ರಹ್ಮಾಸ್ಮಿ ಇತ್ಯಾದಿಯಾಗಿ ಅಭೇದವನ್ನು ಹೇಳಿದ್ದಾರಲ್ಲ ಎಂದು ಪ್ರಶ್ನೆ ಮಾಡಿದರೆ, ಆ ವಾಕ್ಯಗಳು ಅಭೇದವನ್ನು ತಿಳಿಸುವದಿಲ್ಲ ಎನ್ನುವದನ್ನು ತೋರಿಸಲೋಸುಗ, ವೇದಗಳು ಅತ್ಯಂತ ಸ್ಪಷ್ಟವಾಗಿ ಭೇದವನ್ನೇ ಪ್ರತಿಪಾದಿಸುತ್ತವೆ ಎಂದು ಆಚಾರ್ಯರು ವೇದವಾಕ್ಯಗಳಿಂದಲೇ ಪ್ರತಿಪಾದಿಸುತ್ತಾರೆ. ಆ ವಾಕ್ಯಗಳ ಅರ್ಥಾನುಸಂಧಾನ ಇಲ್ಲಿದೆ. ಒಂಭತ್ತು ವೇದಮಂತ್ರಗಳ ಅರ್ಥವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 71 — ಜೀವಬ್ರಹ್ಮಭೇದವೇ ಭಾಗವತದ ಸಿದ್ಧಾಂತ
“ದೃಷ್ಟ ಏವಾsತ್ಮನೀಶ್ವರೇ” ಎಂಬ ಮಾತಿಗೆ ಜೀವನನ್ನೇ ಪರಬ್ರಹ್ಮ ಎಂದು ತಿಳಿದಾಗ ಮತ್ತು ಜೀವನಲ್ಲಿ ಪರಬ್ರಹ್ಮನನ್ನು ತಿಳಿದಾಗ ಎಂಬ ಎರಡೂ ಅರ್ಥವನ್ನು ಹೇಳಲು ಸಾಧ್ಯ. ಹಾಗಾದರೆ ಇಲ್ಲಿ ಜೀವಬ್ರಹ್ಮೈಕ್ಯದ ಅರ್ಥವನ್ನು ಸ್ವೀಕರಿಸಬೇಕೋ, ಜೀವಬ್ರಹ್ಮಭೇದದ ಅರ್ಥವನ್ನು ಸ್ವೀಕರಿಸಬೇಕೋ ಎನ್ನುವ ಪ್ರಶ್ನೆಯನ್ನು ಕೈಗೆತ್ತಿಕೊಂಡು ಚರ್ಚೆಯನ್ನು ಆರಂಭಿಸುವ ಶ್ರೀ ಭಗವತ್ಪಾದರು ಭೇದದ ಅರ್ಥವನ್ನೇ ಸ್ವೀಕರಸಿಬೇಕು ಎನ್ನುವದನ್ನು ಸರಳವಾದ ಕ್ರಮದಲ್ಲಿ ಆರ್ಥ ಮಾಡಿಸುತ್ತಾರೆ.
ಶ್ರೀಮದ್ ಭಾಗವತಮ್ — 70 — ನಮ್ಮ ನೈವೇದ್ಯ ದೇವರು ಸ್ವೀಕರಿಸುತ್ತಾನೆಯೇ?
ನಾವು ದೇವರಿಗೆ ನೈವೇದ್ಯ ಮಾಡುತ್ತೇವೆ. ಅದನ್ನು ದೇವರು ಸ್ವೀಕರಿಸುತ್ತಾನೆಯೋ ಇಲ್ಲವೋ? ಸ್ವೀಕರಿಸುವದಿಲ್ಲ ಎಂದಾದಲ್ಲಿ, ನಾವೇಕೆ ನೈವೇದ್ಯ ಮಾಡಬೇಕು ಮತ್ತು ನೈವೇದ್ಯ ಮಾಡಿದ್ದು ಪ್ರಸಾದ ಎಂದು ಹೇಗಾಗಲು ಸಾಧ್ಯ? ಸ್ವೀಕರಿಸುತ್ತಾನೆ ಎಂದರೆ, ಈ ಪ್ರಾಕೃತ ಪದಾರ್ಥಗಳನ್ನು ದೇವರು ಉಣ್ಣುತ್ತಾನೆ ಎಂದಾಯಿತು. ಅಂದ ಮೇಲೆ ಅದರಿಂದ ಸುಖ ದುಃಖಗಳಿವೆ ಎಂದಾಯಿತು. ದುಃಖವಿಲ್ಲ ಕೇವಲ ಸುಖವಿದೆ ಎಂದರೂ, ದೇವರಿಗೆ ಇದರಿಂದ ಸುಖ ‘ಉಂಟಾಯಿತು’ ಹೊಸದಾಗಿ ಉತ್ಪನ್ನವಾಯಿತು ಎಂದಾಯಿತು. ಅಂದರೆ ದೇವರಿಗೂ ನಮ್ಮಂತೆ ಹೊಸದಾಗಿ ಸುಖ ನಿರ್ಮಾಣವಾಗುತ್ತದೆ ಎಂದಾಯಿತು. ದೇವರಲ್ಲಿ ಹೊಸದಾಗಿ ಸುಖ ಬಂದರೆ ಅವನು ವಸ್ತು, ವಾಸ್ತವ ಹೇಗಾದ? ಅವನು ಅನಾದಿಕಾಲದಿಂದಲೂ ಒಂದೇ ರೀತಿಯಲ್ಲಿ ಇರುವವನಲ್ಲವೇ ?
ಶ್ರೀಮದ್ ಭಾಗವತಮ್ — 69 — ದೇವರ ಯಶಸ್ಸು
ಕಲಿಯುಗದ ಸಮಸ್ತ ದುಷ್ಟ ಪ್ರಭಾವವನ್ನೂ ನಾಶ ಮಾಡುವ ದೇವರ ಯಶಸ್ಸನ್ನು ಹೇಳಿ ಎನ್ನುವ ಶೌನಕರ ನಾಲ್ಕನೆಯ ಪ್ರಶ್ನೆಗೆ ಸೂತಾಚಾರ್ಯರು ನೀಡಿದ ಉತ್ತರವೇ ಪರಮಾದ್ಭುತ. ಕೇಳಿಯೇ ಆನಂದಿಸಬೇಕಾದ ಭಾಗವಿದು.
ಶ್ರೀಮದ್ ಭಾಗವತಮ್ — 68 — ಸತ್ವಗುಣವೇ ಏಕೆ ಉತ್ತಮ
ಸತ್ವಗುಣ, ರಜೋಗುಣ, ತಮೋಗುಣ ಮೂರೂಗುಣಗಳು ದೇವರಿಂದಲೇ ಸೃಷ್ಟಿಯಾದದ್ದು. ಅದರಲ್ಲಿ ಸತ್ವಗುಣ ಮಾತ್ರ ಏಕೆ ಶ್ರೇಷ್ಠ ಎನ್ನುವ ಪ್ರಶ್ನೆಗೆ ಭಾಗವತ ದಿವ್ಯವಾದ ಉತ್ತರವನ್ನು — ಸತ್ವಗುಣದಿಂದಲೇ ದೇವರ ಸಾಕ್ಷಾತ್ಕಾರ ಎಂಬ ಉತ್ತರವನ್ನು — ನೀಡುತ್ತದೆ. ಆ ನಂತರ ಜಗತ್ತಿನ ಎಲ್ಲವೂ ಸಾತ್ವಿಕ, ರಾಜಸ, ತಾಮಸ ಎಂಬ ವಿಭಾಗದಲ್ಲಿ ಸೇರಿದೆ ಎಂದು ಪ್ರತಿಪಾದಿಸುತ್ತ, ದೇವರ ಪೂಜೆಯಲ್ಲಿಯೂ ಈ ವಿಭಾಗವಿದೆ ಎಂದು ಭಾಗವತ ಪ್ರತಿಪಾದಿಸುತ್ತದೆ. ಯಾವ ರೀತಿ ನಮ್ಮಿಂದ ಭಗವದಾರಾಧನೆ ನಡೆಯಬೇಕು ಎನ್ನುವದದನ್ನು ಅರ್ಥ ಮಾಡಿಸುವ ಭಾಗ.
ಶ್ರೀಮದ್ ಭಾಗವತಮ್ — 67 — ಭಕ್ತಿ ಅಭಿವ್ಯಕ್ತವಾಗಲು ಏನು ಮಾಡಬೇಕು
ಇಂತಹ ಬಟ್ಟೆಯನ್ನೇ ಏಕೆ ಹಾಕಬೇಕು, ಇಂತಹುದನ್ನು ಏಕೆ ತಿನ್ನಬಾರದು ಎಂದು ಇವತ್ತಿನ ಜನ ಕೇಳುವ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರೇ ಸಾಕ್ಷಾತ್ತಾಗಿ ನೀಡಿದ ಉತ್ತರ ಇಲ್ಲಿದೆ. ಶ್ರೇಯಸ್ಸನ್ನು ನಿಶ್ಚಿತವಾಗಿ ನೀಡುವ ಸಾಧನ ಭಕ್ತಿ. ಭಕ್ತಿ ಎಂದಿಗೂ ದುಷ್ಫಲ ನೀಡುವದಿಲ್ಲ, ವಿಫಲವಾಗುವದಿಲ್ಲ ಎನ್ನುವದನ್ನು ಹಿಂದೆ ನಿರೂಪಿಸಿದ ಸೂತಾಚಾರ್ಯರು, ಆ ಭಕ್ತಿ ನಮ್ಮಲ್ಲಿ ಹೇಗೆ ಬೆಳೆಯಲು ಸಾಧ್ಯ ಎನ್ನುವ ಮಹತ್ತ್ವದ ಪ್ರಶ್ನೆಗೆ ಉತ್ತರ ನೀಡುತ್ತಾರೆ.
ಶ್ರೀಮದ್ ಭಾಗವತಮ್ — 66 — ಅಪರೋಕ್ಷ ಜ್ಞಾನ
ಭಕ್ತಿಯ ಫಲ ದೇವರ ಅಪರೋಕ್ಷ ಜ್ಞಾನ. ಆ ಸಾಕ್ಷಾತ್ಕಾರ ಯಾವ ರೀತಿಯಾಗಿ ಆಗುತ್ತದೆ, ಮತ್ತು ಅಪರೋಕ್ಷಜ್ಞಾನವಾದಾಗ ಏನೆಲ್ಲ ಪರಿಣಾಮಗಳುಂಟಾಗುತ್ತದೆ ಎನ್ನುವದನ್ನು ವಿವರಿಸುವ ಭಾಗ.
ಶ್ರೀಮದ್ ಭಾಗವತಮ್ — 65 — ಸಾತ್ವಿಕ ರಾಜಸ ತಾಮಸ ಕಾಮಕ್ರೋಧಾದಿಗಳು
ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯ ಎಂಬ ಆರು ಗುಣಗಳೂ ಹೌದು, ದೋಷಗಳೂ ಹೌದು. ಅವು ಕೇವಲ ಅರಿಷಡ್ವರ್ಗವಲ್ಲ, ಮಿತ್ರಷಡ್ವರ್ಗವೂ ಹೌದು. ಹರಿಗುರುಸೇವೆಯಿಂದ ದೊರೆತ ದೇವರ ಭಕ್ತಿ ನಮ್ಮಲ್ಲಿರುವ ರಾಜಸ-ತಾಮಸ ಷಡ್ವರ್ಗಗಳನ್ನು ನಾಶ ಮಾಡುತ್ತದೆ. ಶ್ರೀ ವಾದಿರಾಜಗುರುಸಾರ್ವಭೌಮರು ರುಗ್ಮಿಣೀಶವಿಜಯದಲ್ಲಿ ನಿರ್ಣಯಿಸಿದ ಕ್ರಮದಲ್ಲಿ ಇಲ್ಲಿ ಮೂರೂ ತರಹದ ಗುಣಗಳ ವಿಶ್ಲೇಷಣೆಯಿದೆ.
ಶ್ರೀಮದ್ ಭಾಗವತಮ್ — 64 — ಮಹಾನುಭಾವರ ಸೇವೆಯ ಫಲ
ಭಗವಂತನ ಸಾಕ್ಷಾತ್ಕಾರದಲ್ಲಿ ಮಹಾನುಭಾವರ ಸೇವೆಯ ಪಾತ್ರವೇನು ಎನ್ನುವದನ್ನು ತಿಳಿಸುವ ಶ್ರೀ ವೇದವ್ಯಾಸದೇವರ ಪರಮಮಂಗಲ ವಚನದ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 63 — ಕರ್ಮನಾಶಕ್ಕೆ ಸುಲಭೋಪಾಯ
ತತ್ವ ಎಂದರೇನು ಎಂದು ನಿರೂಪಣೆ ಮಾಡಿದ ಸೂತಾಚಾರ್ಯರು ಆ ತತ್ವದ ಸಾಕ್ಷಾತ್ಕಾರ ಅರ್ಥಾತ್ ಹರಿಯ ದರ್ಶನ ಆಗುವ ಬಗೆಯನ್ನು ನಿರೂಪಿಸಲು ಆರಂಭಿಸುತ್ತಾರೆ. ನಮ್ಮ ಸಾಧನಮಾರ್ಗದಲ್ಲಿ ಅತೀ ದೊಡ್ಡ ತೊಡಕು ನಮ್ಮ ಕರ್ಮಗಳು. ಆ ಕರ್ಮಗಳು ಗಂಟುಗಳ ಗೋಜಲಿನಲ್ಲಿ ಬಿದ್ದ ನಾವು ಅದರಿಂದ ಪಾರಾಗುವ ಅತ್ಯಂತ ಸುಲಭದ ಉಪಾಯವನ್ನು ನಿರೂಪಿಸುತ್ತಾರೆ. ಅ ಪವಿತ್ರ ವಚನಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 62 — ದೇವರೆಂಬ ಅದ್ಭುತ ತತ್ವ
ದೇವರನ್ನು ಜ್ಞಾನ-ಆನಂದಶರೀರ ಎನ್ನುತ್ತೇವೆ. ಹಾಗಂದರೇನು? ಮುಕ್ತರೂ, ಲಕ್ಷ್ಮಿಯೂ ಜ್ಞಾನಾನಂದಶರೀರವನ್ನೇ ಹೊಂದಿದ್ದಾರೆ, ಅವರಿಗೂ ದೇವರಿಗೂ ವ್ಯತ್ಯಾಸವೇನು? ವಸ್ತುವಿದ್ದರೆ ವಸ್ತುವಿನ ಜ್ಞಾನ ಬರಲು ಸಾಧ್ಯ. ಮತ್ತೊಬ್ಬರಿದ್ದರೆ ಅವರಿಂದ ಆನಂದ ಉಂಟಾಗಲು ಸಾಧ್ಯ. ಹೀಗೆ ಜ್ಞಾನ ಅನಂದಗಳು ವಸ್ತುವಿನ ಅಧೀನ, ದೇವರು ಜ್ಞಾನಾನಂದಶರೀರರಾನದರೆ ಅವನು ಪರಾಧೀನನಾಗಲೇಬೇಕಲ್ಲವೇ? ಎಂಬ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರು ನೀಡಿರುವ ಉತ್ತರಗಳನ್ನು ಭಗವತ್ಪಾದರು ಅದ್ಭುತವಾದ ಕ್ರಮದಲ್ಲಿ ವಿವರಿಸಿ ನಮ್ಮ ದೇವರು ಅದೆಷ್ಟು ಅದ್ಭುತ ಎನ್ನುವದನ್ನು ಮನಗಾಣಿಸುತ್ತಾರೆ. ಜೀವಚೈತನ್ಯವನ್ನು ಅನಂದದಲ್ಲಿ ಮುಳುಗಿಸುವ ಈ ಪವಿತ್ರ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 61 — ಧರ್ಮಾರ್ಥಕಾಮಗಳ ಪ್ರಯೋಜನ
ನಿಶ್ಚಿತವಾಗಿ ಶ್ರೇಯಸ್ಸನ್ನು ಕರುಣಿಸುವ ಸಾಧನ, ಭಕ್ತಿ ಎಂದು ಶ್ರೀ ಸೂತಾಚಾರ್ಯರು ಹೇಳಿದರು. ಆದರೆ ವೇದಗಳಲ್ಲಿ “ಯಜ್ಞೇನ ದಾನೇನ ತಪಸಾ ಅನಾಶಕೇನ” ಎಂದು ಯಜ್ಞಾದಿಗಳಿಂದ ಶ್ರೇಯಸ್ಸುಂಟಾಗುತ್ತದೆ ಎಂದು ಹೇಳಿದ್ದಾರೆ, ವಿರೋಧವುಂಟಾಯಿತಲ್ಲ ಎಂಬ ಆಕ್ಷೇಪಕ್ಕೆ ಸೂತಾಚಾರ್ಯರು ಉತ್ತರ ನೀಡುತ್ತ ಧರ್ಮ-ಅರ್ಥ-ಕಾಮಗಳ ನಿಖರ ಪ್ರಯೋಜನವನ್ನು ತಿಳಿಸಿ ಹೇಳುತ್ತಾರೆ. ಕಡೆಯಲ್ಲಿ ದೇವರ ಕುರಿತು ತಿಳಿಯಬೇಕೆಂಬ ಹಂಬಲವಿಲ್ಲದೆ ಮಾಡುವ ಸಕಲ ಕರ್ಮಗಳೂ ವ್ಯರ್ಥ ಎಂಬ ಶಾಸ್ತ್ರದ ನಿರ್ಣಯವನ್ನು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 60 — ಭಕ್ತಿ ಹೇಗಿರಬೇಕು
ಎಲ್ಲ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಶ್ರೀಮದ್ ಭಾಗವತವನ್ನು ಅಧ್ಯಯನ ಮಾಡದೇ ಇದ್ದಲ್ಲಿ ಮನುಷ್ಯ ಏನು ಕಳೆದುಕೊಳ್ಳುತ್ತಾನೆ ಎನ್ನುವದನ್ನು ಸೂತಾಚಾರ್ಯರು ನಮಗಿಲ್ಲಿ ಮನದಟ್ಟು ಮಾಡಿಸುತ್ತ, ಸಮಗ್ರ ಶಾಸ್ತ್ರಪ್ರಪಂಚದ ರಹಸ್ಯತತ್ವವನ್ನು ತಿಳಿಸಲಾರಂಭಿಸುತ್ತಾರೆ.
ಶ್ರೀಮದ್ ಭಾಗವತಮ್ — 59 — ಶುಕಾಚಾರ್ಯರ ಕಾರುಣ್ಯ
ದೇವರನ್ನು ತಿಳಿಯಲು ವೇದಾದಿಗಳು ಅತ್ಯವಶ್ಯಕ, ಅಂದಮೇಲೆ ದೇವರಿಗೆ ತಾನಾಗಿ ನಮಗೆ ತೋರಿಕೊಳ್ಳಲು ಸಾಧ್ಯವಿಲ್ಲದಂತಾಯಿತು, ಆ ದೋಷ ದೇವರಲ್ಲಿದೆಯಲ್ಲವೇ? ಎಂಬ ಪ್ರಶ್ನೆಗೆ ಉತ್ತರವನ್ನು ಆರಂಭಿಸುವ ಸೂತಾಚಾರ್ಯರು, ಭಾಗವತದ ಮಹಾಮಹಾತ್ಮ್ಯವನ್ನು, ಅದನ್ನು ನೀಡಿದ ಶುಕಾಚಾರ್ಯರ ಅಪಾರ ಕಾರುಣ್ಯವನ್ನು ಅದ್ಭುತವಾದ ಕ್ರಮದಲ್ಲಿ ಕೊಂಡಾಡುತ್ತಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 58 — ವೇದವ್ಯಾಸದೇವರ ವಿಡಂಬನೆ
ಶುಕಾಚಾರ್ಯರು ಸಂನ್ಯಾಸ ಸ್ವೀಕರಿಸುವ ಸಂದರ್ಭದಲ್ಲಿ ವೇದವ್ಯಾಸದೇವರು ಧೈರ್ಯ ಕಳೆದುಕೊಂಡ ಒಬ್ಬ ಸಾಮಾನ್ಯ ಮನುಷ್ಯ ತಂದೆಯಂತೆ ವಿಡಂಬನೆ ಮಾಡುತ್ತಾರೆ. ಭಾಗವತದಲ್ಲಿ “ದ್ವೈಪಾಯನೋ ವಿರಹಕಾತರಃ” ಎಂಬ ಶಬ್ದವಿದೆ. ಮಗನ ವಿರಹದಿಂದ ಅಧೀರರಾಗಿ ಎಂದು ಅದರ ಮೇಲ್ನೋಟದ ಅರ್ಥ. ಆದರೆ, ಆಚಾರ್ಯರು “ಅಧೀರರಾದರು” ಎಂದು ಅರ್ಥ ಮಾಡಬಾರದು, “ಅಧೀರರಾದಂತೆ ನಟಿಸಿದರು” ಎಂದು ಅರ್ಥವನ್ನು ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಭಾಗವತದ ಶಬ್ದಗಳಲ್ಲಿ ತೋರದ ಈ ಅರ್ಥವನ್ನು ಹೇಗೆ ಗ್ರಹಿಸಬಹುದು ಎಂಬ ಪ್ರಶ್ನೆಗೆ ಅದ್ಭುತವಾದ ಎರಡು ಉತ್ತರಗಳನ್ನು ನೀಡಿದ್ದಾರೆ. ಆಚಾರ್ಯರ ತತ್ವನಿರ್ಣಯ ಕೌಶಲ ಎಷ್ಟು ಅದ್ಭುತವಾದದ್ದು ಎಂದು ನಮಗೆ ಮನಗಾಣಿಸುವ ಭಾಗ.
ಶ್ರೀಮದ್ ಭಾಗವತಮ್ — 57 — ಶುಕಾಚಾರ್ಯರ ವೈರಾಗ್ಯ
ಶ್ರೀಮದ್ ಭಾಗವತದ ಶ್ರವಣದ ಫಲವಾಗಿ ಶ್ರೇಷ್ಠ ವೈರಾಗ್ಯವನ್ನು ಪಡೆದ ಶುಕಾಚಾರ್ಯರು ಭಗವಂತನ ಪ್ರೀತ್ಯರ್ಥವಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ. ಈ ಸಂದರ್ಭದಲ್ಲಿನ “ಯಂ ಪ್ರವ್ರಜಂತಮನುಪೇತಮ್” ಎನ್ನುವ ಶಬ್ದಗಳಿಗೆ ಶ್ರೀಮದಾಚಾರ್ಯರು ತಿಳಿಸಿರುವ ಅರ್ಥಗಳು ಹೇಗೆ ವೇದ, ಪುರಾಣಗಳಿಗೆ ಸಮ್ಮತವಾಗಿವೆ, ಶ್ರೀ ವೇದವ್ಯಾಸದೇವರಿಗೆ ಸಮ್ಮತವಾಗಿವೆ ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಪ್ರತಿಪಾದಿಸುತ್ತಾರೆ. ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 56 — ಪುರಾಣದಲ್ಲಿ ಬರುವ ಎಲ್ಲವೂ ವೇದವ್ಯಾಸದೇವರ ವಾಕ್ಯಗಳೇ?
ಶೌನಕರ ಷಟ್-ಪ್ರಶ್ನೆಗಳಿಗೆ ಉತ್ತರವಾಗಿ ಭಾಗವತವೆಂಬ ಷಟ್-ಪ್ರಶ್ನೋಪನಿಷತ್ತು ಆರಂಭವಾಗುತ್ತದೆ. ಮೊಟ್ಟ ಮೊದಲ ಸೂತ ಉವಾಚ ಎಂಬ ಶಬ್ದದ ಅಭಿಪ್ರಾಯವನ್ನು ತಿಳಿಸುವಾಗ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಾವು ಪುರಾಣಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊಟ್ಟಮೊದಲಿಗೆ ಮೂಡುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಆ ಮಾತಿನ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 55 — ಶೌನಕರ ದೀಕ್ಷೆ
ದೇವರನ್ನು ತಿಳಿಯಬೇಕು ಎಂಬ ಅಪೇಕ್ಷೆ ಎಲ್ಲರಿಗೂ ಇರುತ್ತದೆ. ಆದರೆ ಇದೇ ಜನ್ಮವನ್ನು ಪೂರ್ಣ ಉಪಯೋಗಿಸಿಕೊಂಡು ಅಂತರ್ಯಾಮಿಯ ಜ್ಞಾನವನ್ನು ಪಡೆಯಲು ಪರಮಾದ್ಭುತವಾದ ದೀಕ್ಷೆ ಬೇಕಾಗುತ್ತದೆ. ಆ ದೀಕ್ಷೆ ಹೇಗಿರಬೇಕು, ಜೀವನದ ಪ್ರತಿಯೊಂದು ವೈರುದ್ಧ್ಯದಲ್ಲಿ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವದಕ್ಕೆ ಒಂದು ಜ್ವಲಂತ ದೃಷ್ಟಾಂತ ಶೌನಕ ಮಹರ್ಷಿಗಳು. ಸಾಧನೆ ಮಾಡಬೇಕೆಂಬ ಜೀವಕ್ಕೆ ಹುಮ್ಮಸ್ಸು ನೀಡುವ ಆ ಮಹಾಮಹಿಮರ ದೀಕ್ಷೆಯ ಕುರಿತ ವಿವರ ಇಲ್ಲಿದೆ.
ಶ್ರೀಮದ್ ಭಾಗವತಮ್ — 54 — ವಿಷ್ಣುಸ್ಮರಣೆಯ ರಹಸ್ಯಗಳು
ನಾವು ಪ್ರತಿನಿತ್ಯವೂ ವಿಷ್ಣುಸ್ಮರಣೆ ಮಾಡುತ್ತಲೇ ಇರುತ್ತೇವೆ. ಆದರೂ ಸಂಸಾರ ಕಳೆಯುತ್ತಿಲ್ಲ. ಹಾಗಾದರೆ ಸಂಸಾರವನ್ನು ಕಳೆಯುವ ವಿಷ್ಣುಸ್ಮರಣೆ ಯಾವ ರೀತಿ ಇರುತ್ತದೆ, ಈಗ ಮಾಡುತ್ತಿರುವ ವಿಷ್ಣುಸ್ಮರಣೆಯಿಂದ ಏನಾಗುತ್ತದೆ ಎಂಬೆಲ್ಲ ವಿಷಯಗಳನ್ನು ನಮ್ಮ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅದ್ಭುತವಾಗಿ ಅರ್ಥ ಮಾಡಿಸುತ್ತಾರೆ.
ಶ್ರೀಮದ್ ಭಾಗವತಮ್ — 53 — ಮೊದಲ ಮೂರು ಪ್ರಶ್ನೆಗಳು
ಕಲಿಯುಗದ ಸಜ್ಜನರ ಮೇಲಿನ ಅಪಾರ ಕೃಪೆಯಿಂದ ಅವರ ಉದ್ಧಾರಕ್ಕಾಗಿ ಶೌನಕಾದಿ ಮಹರ್ಷಿಗಳು ಸೂತಾಚಾರ್ಯರಿಗೆ ಆರು ಪ್ರಶ್ನೆಗಳನ್ನು ಮಾಡುತ್ತಾರೆ. ಅದರಲ್ಲಿ ಮೂರು ಪ್ರಶ್ನೆಗಳ ವಿವರಣೆ ಇಲ್ಲಿದೆ. ಆಯುಷ್ಮನ್ ಎನ್ನುವ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅರ್ಥದಿಂದ ಅವರಿಗಿರುವ ಟೀಕಾಗ್ರಂಥಗಳ ಜ್ಞಾನ ಎಷ್ಟು ಆಳ ಮತ್ತು ವಿಸ್ತಾರವಾದದ್ದು ಎನ್ನುವದು ತಿಳಿಯುತ್ತದೆ. ಆ ಮಹಾನುಭಾವರ ತಿಳಿಸಿದ ಅರ್ಥಗಳ ವಿವರಣೆ ಈ ಭಾಗದಲ್ಲಿದೆ.
ಶ್ರೀಮದ್ ಭಾಗವತಮ್ — 52 — ಸೂತಾಚಾರ್ಯರ ಜ್ಞಾನ
ಪುರಾಣಪ್ರಪಂಚದಲ್ಲಿ ಶ್ರೀ ಸೂತಾಚಾರ್ಯರನ್ನು ಮೇಲಿಂದಮೇಲೆ ಅನಘ ಎಂಬ ಶಬ್ದದಿಂದ ಕರೆಯಲಾಗಿದೆ. ಭಾಗವತದಲ್ಲಿಯೂ ಸಹ ಆ ಪ್ರಯೋಗವಿದೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಆಚಾರ್ಯರು ತಿಳಿಸಿದ ದಿವ್ಯಪ್ರಮೇಯದ ಆಧಾರದ ಮೇಲೆ ಹೇಳಿದ ಅರ್ಥದ ವಿವರಣೆಯೊಂದಿಗೆ ಶ್ರೀ ಸೂತಾಚಾರ್ಯರ ಜ್ಞಾನದ ಕುರಿತ ಶ್ರೇಷ್ಠ ಚಿತ್ರಣ ಇಲ್ಲಿದೆ. ಆಚಾರ್ಯರಿಲ್ಲದಿದ್ದರೆ ಶ್ರೀಮದ್ ಭಾಗವತದ ಅಪಾರ್ಥವನ್ನು ಮಾಡಿಕೊಂಡು ಪ್ರಪಾತಕ್ಕೆ ಬೀಳುತ್ತಿದ್ದೇವು ಎಂಬ ಮಾತನ್ನು ನಮಗೆ ಮನದಟ್ಟು ಮಾಡಿಸುವ ಭಾಗ.
ಶ್ರೀಮದ್ ಭಾಗವತಮ್ — 51 — ಸೂತಾಚಾರ್ಯರ ಮಾಹಾತ್ಮ್ಯ
ಶೂದ್ರರಾದ ಸೂತಾಚಾರ್ಯರ ವೇಷ, ಭೂಷಣಗಳು ಹೇಗಿದ್ದವು, ಬ್ರಾಹ್ಮಣೋತ್ತಮರಾದ ಶೌನಕರು ಅವರಲ್ಲಿ ಯಾವ ರೀತಿ ಆದರ ಮಾಡುತ್ತಿದ್ದರು ಮಂತಾದವನ್ನು ತಿಳಿಸುವದರೊಂದಿಗೆ ಯಾವ ವರ್ಣಕ್ಕೆ ಯಾವ ರೀತಿ ಗೌರವ ನೀಡಬೇಕು ಎನ್ನುವದಕ್ಕೆ ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ನೀಡಿರುವ ನಿರ್ಣಯದೊಂದಿಗೆ. ಬ್ರಾಹ್ಮಣ-ಶೂದ್ರರ ಸಂಬಂಧ ಹೇಗಿದ್ದವು ಎನ್ನುವದನ್ನು ಅರಿಯಬಯಸುವ ಪ್ರತಿಯೊಬ್ಬರೂ ಕೇಳಬೇಕಾದ ಭಾಗ.
ಶ್ರೀಮದ್ ಭಾಗವತಮ್ — 50 — ಶೌನಕರ ಜ್ಞಾನಸತ್ರ
ಇವತ್ತಿಗೆ ನಮಗೆ ಭಾರತ-ಭಾಗವತ-ಪುರಾಣಾದಿಗಳು ದೊರೆತಿರುವದೇ ಶ್ರೀ ಶೌನಕಮಹರ್ಷಿಗಳು ಮಾಡಿದ ಮಹಾಜ್ಞಾನಸತ್ರದಿಂದ. ಕಲಿಯುಗ ಆರಂಭವಾಗುತ್ತಿದ್ದಂತೆಯೇ ಒಂದು ಸಾವಿರ ವರ್ಷಗಳ ದೀರ್ಘಕಾಲದ ಸತ್ರವನ್ನು ಆರಂಭಿಸುವ ಶೌನಕಾದಿ ಹತ್ತು ಸಾವಿರ ಋಷಿಗಳು ಸೂತಾಚಾರ್ಯರಿಂದ ಸಕಲ ಪುರಾಣವಾಙ್ಮಯವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಶ್ರೀಮದಾಚಾರ್ಯರು ಮತ್ತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅತ್ಯಪೂರ್ವವಾದ ವಿಷಯಗಳ ನಿರೂಪಣೆ ಇಲ್ಲಿದೆ. ನಮಗೆ ಅಪಾರ ಜ್ಞಾನಸಂಪತ್ತನ್ನು ನೀಡಿದ ಶೌನಕರಿಗೆ ಯಾವ ರೀತಿ ಗೌರವ ಭಕ್ತಿಗಳನ್ನು ಸಲ್ಲಿಸಬೇಕು ಎನ್ನುವದರ ನಿರೂಪಣೆಯೊಂದಿಗೆ.
ಶ್ರೀಮದ್ ಭಾಗವತಮ್ — 49 — ಧ್ಯಾನ-೨
ಎರಡನೆಯ ಮತ್ತು ಮೂರನೆಯ ಪದ್ಯದ ಅರ್ಥಾನುಸಂಧಾನವನ್ನು ನಮ್ಮ ಅಂತರ್ಯಾಮಿಗೆ ಒಪ್ಪಿಸಿಕೊಳ್ಳುವ ಕ್ರಮದ ವಿವರಣೆ.
ಶ್ರೀಮದ್ ಭಾಗವತಮ್ — 48 — ಪಿಬತ ಭಾಗವತಮ್
ಸ್ವಯಂ ಶ್ರೀ ವೇದವ್ಯಾಸದೇವರು ಶ್ರೀಮದ್ ಭಾಗವತದ ಮಾಹಾತ್ಮ್ಯವನ್ನು ತಿಳಿಸಿ ಹೇಳಿ, ಈ ಭಾಗವತದ ಫಲದ ರಸವನ್ನು ಮೋಕ್ಷವಾಗುವವರಿಗೆ ಆಸ್ವಾದಿಸಿ ಎಂದು ಆದೇಶ ಮಾಡುತ್ತಾರೆ. “ನಾವು ಮಾಡುವ ಭಾಗವತಾಧ್ಯಯನವನ್ನು ನೋಡುತ್ತ ಅನುಗ್ರಹ ಮಾಡುತ್ತಾರೆ” ಮುಂತಾದ ವಿಶೇಷಗಳನ್ನು ಶ್ರೀಮದಾಚಾರ್ಯರು ತಿಳಿಸಿ ಹೇಳುತ್ತಾರೆ. ವೇದವೃಕ್ಷದ ವರ್ಣನೆಯೊಂದಿಗೆ, ಭಗವಂತನ ಆದೇಶ, ಭಗವತ್ಪಾದರು ತಿಳಿಸಿದ ಮಹತ್ತರ ಪ್ರಮೇಯಗಳ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 47 — ದೇವರ ಸಾಕ್ಷಾತ್ಕಾರವೇ ಭಾಗವತದ ಫಲ
ಶ್ರೀಮದ್ ಭಾಗವತವನ್ನು ಕೇಳುವದರಿಂದ ಉಂಟಾಗುವ ಫಲವೇನು ಎನ್ನುವದನ್ನು “ಸದ್ಯೋ ಹೃದ್ಯವರುದ್ಧ್ಯತೇತ್ರ ಕೃತಿಭಿಃ ಶುಶ್ರೂಷುಭಿಸ್ತತ್-ಕ್ಷಣಾತ್” ಎಂದು ಶ್ರೀವೇದವ್ಯಾಸದೇವರು ಆದರದಿಂದ ತಿಳಿಸುತ್ತಾರೆ. ಭಗವಂತನ ಮಾತುಗಳಲ್ಲಿರುವ ದಿವ್ಯಾರ್ಥಗಳನ್ನು ಭಗವತ್ಪಾದರು ದಿವ್ಯವಾದ ಕ್ರಮದಲ್ಲಿ ವಿವರಿಸುತ್ತಾರೆ. ಅವುಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 46 — ಪುರುಷಾರ್ಥವಿಚಾರ
ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಎರಡು ವಿಧ. ಒಂದು ಗ್ರಾಹ್ಯ ಮತ್ತೊಂದು ಅಗ್ರಾಹ್ಯ. ಆ ಎರಡು ರೀತಿಯ ಪುರುಷಾರ್ಥಗಳ ಕುರಿತ ವಿವರಣೆ ಇಲ್ಲಿದೆ. ಗ್ರಾಹ್ಯವಾದ ಧರ್ಮ-ಮೋಕ್ಷಗಳಿಗಾಗಿ ಪ್ರವೃತ್ತವಾದ ಭಾಗವತ ಸಾಧನೋಪಯೋಗಿಯಾದ ಸಂಪತ್ತನ್ನು, ಹಾಗೂ ವಿಹಿತವಾದ ಅಪೇಕ್ಷೆಗಳನ್ನೂ ಪೂರೈಸುತ್ತದೆ ಎಂಬ ತತ್ವದ ನಿರೂಪಣೆಯೊಂದಿಗೆ.
ಶ್ರೀಮದ್ ಭಾಗವತಮ್ — 45 — ವಸ್ತು ಶಬ್ದದ ಅರ್ಥ
ಶ್ರೀಮದ್ ಭಾಗವತದಿಂದ ಪ್ರತಿಪಾದ್ಯವಾದದ್ದು “ವಾಸ್ತವ-ವಸ್ತು” ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ದೇವರನ್ನು ವಸ್ತು ಎನ್ನುವ ಶಬ್ದದಿಂದ ಕರೆಯಲು ಕಾರಣವೇನು, ಆ ಶಬ್ದದ ಅರ್ಥವೇನು ಎಂದು ತಿಳಿಸುತ್ತ ಭಗವತ್ಪಾದರು ಅಪೂರ್ವ ಪ್ರಮೇಯಗಳನ್ನು ನಮಗೆ ತಿಳಿಸುತ್ತಾರೆ. ಆ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ. ಶಿವದಮ್, ತಾಪತ್ರಯೋನ್ಮೂಲನಂ ಎಂಬ ಶಬ್ದಗಳ ವಿವರಣೆಯೊಂದಿಗೆ.
ಶ್ರೀಮದ್ ಭಾಗವತಮ್ — 44 — ವಾಸ್ತವ ಶಬ್ದದ ಅರ್ಥ
ಶ್ರೀ ವೇದವ್ಯಾಸದೇವರು ವಾಸ್ತವ ಎಂಬ ಶಬ್ದದ ಮುಖಾಂತರ ತಿಳಿಸಿರುವ ಭಗವಂತನ “ಅಸ್ತಿತ್ವ” ಎಂಬ ಗುಣದ ಲಕ್ಷಣವನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಪರಮಾದ್ಭುತವಾದ ಕ್ರಮದಲ್ಲಿ ವಿವರಿಸಿದ್ದಾರೆ. ಮನಸ್ಸನ್ನು ಏಕಾಗ್ರಗೊಳಿಸಿ ಶ್ರವಣ ಮಾಡಿ. ಜೀವಚೈತನ್ಯ ಪುಳಕಗೊಳ್ಳುವಂತಹ ಪರಮಾತ್ಮನ ಗುಣದ ಮಾಹಾತ್ಮ್ಯ ಇಲ್ಲಿದೆ.
ಶ್ರೀಮದ್ ಭಾಗವತಮ್ — 43 — ಮಾತ್ಸರ್ಯವೆಂಬ ಮಹಾದೋಷ
ಭಾಗವತ ರಚನೆಯಾಗಿರುವದು ಮಾತ್ಸರ್ಯವಿಲ್ಲದ ಸಜ್ಜನರಿಗಾಗಿ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಸಕಲ ಸಜ್ಜನಿಕೆಯನ್ನು ತಿಂದು ಹಾಕುವ ಕೆಟ್ಟ ಕಿಚ್ಚಾದ ಈ ಮಾತ್ಸರ್ಯದ ಸ್ವರೂಪವನ್ನು ಭಗವತ್ಪಾದರು ತಿಳಿಸುತ್ತಾರೆ. ಈ ಮಾತ್ಸರ್ಯವನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗದ ಚಿಂತನೆಯೊಂದಿಗೆ ಇದರ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 42 — ಸಜ್ಜನರ ಲಕ್ಷಣ
ಶ್ರೀಮದ್ ಭಾಗವತವನ್ನು ನಿರ್ಮತ್ಸರಿಗಳಾದ ಸಜ್ಜನರಿಗಾಗಿ ರಚನೆ ಮಾಡಿದ್ದೇನೆ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಅವರ ದೃಷ್ಟಿಯಲ್ಲಿ ಸಜ್ಜನರು ಎಂದರೆ ಯಾರು ಎಂಬ ಪ್ರಶ್ನೆಗೆ ತೃತೀಯಸ್ಕಂಧದ ಕಪಿಲ-ದೇವಹೂತಿ ಸಂವಾದದಲ್ಲಿ ಅವರೇ ತಿಳಿಸಿದ ಸಜ್ಜನರ ಲಕ್ಷಣವನ್ನು ಆಚಾರ್ಯರು ವಿವರಿಸುತ್ತಾರೆ. ಭಗವಂತನ-ಭಗವತ್ಪಾದರ ಆ ಮಂಗಳವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 41 — ಭಾಗವತ ಧರ್ಮ ಎಂದರೇನು
ಗೃಹಸ್ಥಧರ್ಮ, ಸಂನ್ಯಾಸಿಧರ್ಮ, ಸ್ತ್ರೀಧರ್ಮ, ಪುರುಷಧರ್ಮ ಎಂದೆಲ್ಲ ಇರುವಂತೆ ಭಾಗವತಧರ್ಮ ಎನ್ನುವದು ಪ್ರತ್ಯೇಕವಾದ ಧರ್ಮವಲ್ಲ. ಹಾಗಾದರೆ ಭಾಗವತಧರ್ಮವೆಂದರೇನು ಎಂಬ ಪ್ರಶ್ನೆಗೆ ಶ್ರೀ ವೇದವ್ಯಾಸದೇವರು ಪ್ರೋಜ್ಝಿತಕೈತವಃ ಮತ್ತು ಪರಮಃ ಎಂಬ ಶಬ್ದಗಳಿಂದ ಉತ್ತರ ನೀಡಿದ್ದಾರೆ. ಶ್ರೀಮದಾಚಾರ್ಯರು ಟೀಕಾಕೃತ್ಪಾದರು ತಿಳಿಸಿದ ತತ್ವರತ್ನಗಳ ಸಂಗ್ರಹದೊಂದಿಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಅದ್ಭುತವಾಗಿ ಈ ಶಬ್ದಗಳ ಅರ್ಥಗಳನ್ನು ವಿವರಿಸುತ್ತಾರೆ. ಅವರ ಪವಿತ್ರವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 40 — ಧರ್ಮ ಎಂದರೇನು
“ಧರ್ಮಃ ಪ್ರೋಜ್ಝಿತಕೈತವಃ” ಎಂಬ ವೇದವ್ಯಾಸದೇವರ ಮಾತಿಗೆ ಅರ್ಥವನ್ನು ಹೇಳುತ್ತ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಧರ್ಮವೆಂದರೇನು, ಧರ್ಮದ ಸ್ವರೂಪವೇನು, ಧರ್ಮದಿಂದ ಉಂಟಾಗುವ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ಧರ್ಮ ಎಂಬ ಶಬ್ದದಲ್ಲಿಯೇ ಉತ್ತರ ಅಡಗಿದೆ ಎಂದು ತೋರಿಸಿ ಕೊಡುತ್ತಾರೆ. ಆಚಾರ್ಯರು ತಿಳಿಸಿರುವ ತತ್ವಗಳನ್ನು ಹೃದಯಂಗಮವಾಗಿ ಸಂಗ್ರಹಿಸಿರುವ ಆ ಮಹಾಗುರುಗಳ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಶ್ರೀಮದ್ ಭಾಗವತಮ್ — 39 — ಭಾಗವತದ ಶ್ರೀಮಂತಿಕೆ
ವೇದವ್ಯಾಸದೇವರು ಭಾಗವತವನ್ನು ಉಲ್ಲೇಖಿಸಬೇಕಾದರೆ ಕೇವಲ ಭಾಗವತ ಎನ್ನುವದಲ್ಲ, ಶ್ರೀಮದ್ ಭಾಗವತ ಎನ್ನುತ್ತಾರೆ. ಭಾಗವತದಲ್ಲಿ ಇರುವ ಆ ಶ್ರಿಮಂತಿಕೆ ಎಂತಹುದು ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಬಹಳ ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಆವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ, ವಿಜಯಧ್ವಜತೀರ್ಥಶ್ರೀಪಾದಂಗಳವರ ಮಾಹಾತ್ಮ್ಯದ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 38 — ಧ್ಯಾನ
ಸತ್ಯಂ ಪರಂ ಧೀಮಹಿ ಎಂಬ ಶ್ರೀ ವೇದವ್ಯಾಸದೇವರ ಆದೇಶದ ಅನುಸಾರವಾಗಿ ಮೊದಲ ಪದ್ಯದ ಅರ್ಥಾನುಸಂಧಾನವನ್ನೇನು ಮಾಡಿದ್ದೇವೆ ಅದರ ಧ್ಯಾನದ ಕ್ರಮವನ್ನು ಇಲ್ಲಿ ನೀಡಲಾಗಿದೆ.
ಶ್ರೀಮದ್ ಭಾಗವತಮ್ — 37 — ಸತ್ಯಂ ಪರಂ ಧೀಮಹಿ
ಭಗವಂತ ಜ್ಞಾನ-ಆನಂದಸ್ವರೂಪ, ಅನಂತಗುಣಪರಿಪೂರ್ಣ ಎಂಬ ದಿವ್ಯ ವಿಷಯಗಳ ಕುರಿತು ನಾವಿಲ್ಲಿ ತಿಳಿಯುತ್ತೇವೆ. ಧೀಮಹಿ ಎಂಬ ಪ್ರಯೋಗಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿರುವ ಐದು ಕಾರಣಗಳ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 36 — ದೇವರಲ್ಲಿ ಕುಹಕವಿಲ್ಲ
ಇಂದ್ರಜಾಲವಿದ್ಯೆಯನ್ನು ಬಲ್ಲವರು ನೂರಾರು ಜನರ ಕಣ್ಕಟ್ಟು ಮಾಡಿ, ಇಲ್ಲದ್ದನ್ನು ಇರುವಂತೆ ತೋರಿಸುತ್ತಾರೆ. ಹಾಗೆಯೇ ದೇವರೂ ಸಹ. ಇವೆಲ್ಲವೂ ಅವನ ಮಾಯೆ. ಇಲ್ಲದ್ದನ್ನು ಇದೆ ಎಂದು ತೋರಿಸುತ್ತಾನೆ ಎಂದು ಕೆಲವರು ದೇವರ ಸೃಷ್ಟಿಯನ್ನು ಇಂದ್ರಜಾಲಕ್ಕೆ ಹೋಲಿಸುತ್ತಾರೆ. ಶ್ರೀ ವೇದವ್ಯಾಸದೇವರು ಅದಕ್ಕೆ ನೀಡಿರುವ ದಿವ್ಯವಾದ ಉತ್ತರ, ಶ್ರೀಮದಾಚಾರ್ಯರ ಪರಮಾದ್ಭುತ ಪ್ರತಿಪಾದನೆಗಳ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 35 — ಜೀವರ ದೇಹದ ಸೃಷ್ಟಿ ಕ್ರಮ
ಜೀವರ ದೇಹದ ಸೃಷ್ಟಿಯ ಕ್ರಮದ ಕುರಿತು ಅಪೂರ್ವವಾದ ವಿಷಯಗಳನ್ನು ಶ್ರೀಮದಾಚಾರ್ಯರು ಈ ಸಂದರ್ಭದಲ್ಲಿ ತಿಳಿಸುತ್ತಾರೆ. ಕಾಠಕ, ಬೃಹದಾರಣ್ಯ, ಬ್ರಹ್ಮಸೂತ್ರಗಳ ಭಾಷ್ಯಗಳಲ್ಲಿ ಶ್ರೀಮದಾಚಾರ್ಯರು, ನ್ಯಾಯಸುಧಾದಿಗಳಲ್ಲಿ ಟೀಕಾಕೃತ್ಪಾದರು ತಿಳಿಸಿರುವ ಅಪೂರ್ವವಿಷಯಗಳ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 34 — ದೇವರ ಪ್ರಾದುರ್ಭಾವದ ಕ್ರಮ
ಮೂಲರೂಪದ ಪರಮಾತ್ಮ ಏನು ಅನಂತ ರೂಪಗಳನ್ನು ಸ್ವೀಕರಿಸುತ್ತಾನೆ ಅದನ್ನು ಶುದ್ಧಸೃಷ್ಟಿ ಎನ್ನುತ್ತಾರೆ. ನಾವು ಹಿಂದೆ ತಿಳಿದ ನಾಲ್ಕು ವಿಧವಾದ ಸೃಷ್ಟಿಯೂ ದೇವರಲ್ಲಿಲ್ಲ, ಅವನದು ಕೇವಲ ಪ್ರಾದುರ್ಭಾವ. ಆ ಪ್ರಾದುರ್ಭಾವದ ಬಗೆಯನ್ನು ಆಚಾರ್ಯರು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಅದರ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 33 — ‘ಮೃಷಾ’ ಶಬ್ದದ ಅರ್ಥ
ಮೃಷಾ ಎನ್ನುವಶಬ್ದಕ್ಕೆ ವ್ಯರ್ಥ ಎನ್ನುವ ಅರ್ಥವನ್ನು ಹೇಳಿ ಆಚಾರ್ಯರು ದೇವರಿಗೆ ಸೃಷ್ಟಿಯಿಂದ ಪ್ರಯೋಜನವಿಲ್ಲ ಎನ್ನುವದನ್ನು ಪ್ರತಿಪಾದಿಸುತ್ತಾರೆ. ಮೃಷಾ ಎನ್ನುವದಕ್ಕೆ ಸುಳ್ಳು ಎನ್ನುವ ಅರ್ಥ ಪ್ರಸಿದ್ಧ, ವ್ಯರ್ಥ ಎನ್ನುವದು ಹೇಗೆ ಅರ್ಥವಾಗಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದ್ ಭಾಗವತದಿಂದಲೇ ಆಚಾರ್ಯರು ನಮಗೆ ಉತ್ತರ ನೀಡುತ್ತಾರೆ. ಆ ವಾಕ್ಯದ ವಿವರಣೆ ಹಾಗೂ ಈ ಜಗತ್ತೆಲ್ಲವೂ ಸುಳ್ಳು ಯಾಕಾಗಿರಬಾರದು ಎನ್ನುವ ಪ್ರಶ್ನಗೆ ಮೊದಲಶ್ಲೋಕ ನೀಡುವ ಉತ್ತರಗಳ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 32 — ಜನ್ಮಾದಿಗಳನ್ನು ನೀಡುವದು ದೇವರ ಸ್ವಭಾವ
ದೇವರು ತನಗಾಗಿ ಸೃಷ್ಟಿ ಮಾಡಿದರೆ ಅಪರಿಪೂರ್ಣನಾಗುತ್ತಾನೆ, ಮತ್ತೊಬ್ಬರಿಗಾಗಿ ಸೃಷ್ಟಿ ಮಾಡುತ್ತಾನೆ ಎಂದಾದರೆ, ಮತ್ತೊಬ್ಬರಿಗೆ ಸುಲಭವಾಗಿ ಫಲವನ್ನು ನೀಡಲಿಕ್ಕಾಗದೆ ಇಷ್ಟೆಲ್ಲ ಮಹಾಪ್ರಯತ್ನದ ಸೃಷ್ಟ್ಯಾದಿಗಳನ್ನು ಮಾಡುತ್ತಾನೆ ಎಂದಾಗುತ್ತದೆ. ಎರಡೂ ಪಕ್ಷದಲ್ಲಿಯೂ ಅವನು ಅಪರಿಪೂರ್ಣ, ಅಸ್ವತಂತ್ರ, ಅಸರ್ವಜ್ಞ ಎಂದೇ ಸಿದ್ಧವಾಗುತ್ತದೆ ಎಂಬ ಪ್ರಶ್ನೆಗಳಿಗೆ ಭಾಗವತ ನೀಡಿರುವ ದಿವ್ಯ ಉತ್ತರಗಳ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 31 — ದೇವರ ಅನುಗ್ರಹವಿಲ್ಲದೇ ದೇವರ ಜ್ಞಾನ ಬರುವದಿಲ್ಲ
ದೇವರ ಪ್ರಸಾದವಿಲ್ಲದೇ ದೇವರ ಜ್ಞಾನ ಉಂಟಾಗಲು ಸಾಧ್ಯವಿಲ್ಲ ಎನ್ನುವ ಪರಮಮಂಗಳ ತತ್ವದ ನಿರೂಪಣೆ. ತಮ್ಮ ಪ್ರತಿಭಾಬಲದಿಂದಲೇ ಸರ್ವವನ್ನೂ ತಿಳಿದ, ಅಧ್ಯಯನದ ಆವಶ್ಯಕತೆಯೇ ಇಲ್ಲದ ಋಜುದೇವತೆಗಳೂ ಪರಮಾತ್ಮನ ಬಳಿಯಲ್ಲಿ ಅಧ್ಯಯನ ಮಾಡುವದು ಅವನ ಅನುಗ್ರಹವನ್ನು ಪಡೆಯಲು. ಅಂದರೆ ಅನುಗ್ರಹವಿಲ್ಲದೇ ಇರುವ ಜ್ಞಾನವೂ ಫಲಪ್ರದವಲ್ಲ, ಜ್ಞಾನ, ಭಕ್ತಿ, ವೈರಾಗ್ಯ, ಮಹಾನುಭಾವರ ಸೇವೆ, ತೀರ್ಥಯಾತ್ರೆ ಮುಂತಾದ ಸಕಲ ಸಾಧನಗಳಿಗಿಂತಲೂ ದೇವರ ಅನುಗ್ರಹವೇ ಮಿಗಿಲಾದ ಸಾಧನ. ಅದಿದ್ದರೆ ಉಳಿದವು ಫಲಪ್ರದ ಎನ್ನುವದನ್ನು ಭಾಗವತ ನಮಗಿಲ್ಲಿ ಮನಗಾಣಿಸುತ್ತದೆ.
ಶ್ರೀಮದ್ ಭಾಗವತಮ್ — 30 — ಬ್ರಹ್ಮದೇವರಿಗೂ ಉಪದೇಶಕ
ಬ್ರಹ್ಮದೇವರಿಗೆ ಜ್ಞಾನ ಪಡೆಯುವದಕ್ಕಾಗಿ ಅಧ್ಯಯನದ ಆವಶ್ಯಕತೆಯೂ ಇಲ್ಲ. ಶಾಸ್ತ್ರಗಳು ತಿಳಿಸುವ ಸಕಲ ತತ್ವಗಳನ್ನೂ ಅವರು ಅಧ್ಯಯನ ಮಾಡದೆಯೇ ತಿಳಿದಿದ್ದಾರೆ. ಅಂತಹ ಆದಿಸರ್ವಜ್ಞರಾದ, ಸಕಲಸುರರಿಗೂ ಗುರುಗಳಾದ ಬ್ರಹ್ಮದೇವರಿಗೆ ಅಧ್ಯಯನದ ಆವಶ್ಯಕತೆಯೇ ಇಲ್ಲ ಎಂದು ಶಾಸ್ತ್ರಗಳು ಸಾರುತ್ತವೆ. ಹಾಗಾದರೆ ದೇವರಿಂದ ಉಪದೇಶ ಪಡೆಯುವ ಆವಶ್ಯಕತೆಯೇನು ಎನ್ನುವದರ ನಿರೂಪಣೆ ಇಲ್ಲಿದೆ. ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ತಿಳಿಸಿದ ತತ್ವರತ್ನಗಳ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 29 — ದೇವರ ಸ್ವಾತಂತ್ರ್ಯ
ಒಂದು ಮಡಿಕೆ ನಿರ್ಮಾಣ ಮಾಡಲು ಗಾಳಿ ಮಳೆ ಚಳಿಯಿಂದಾರಂಭಿಸಿ ನೂರು ವಿಘ್ನಗಳಿವೆ. ಒಂದು ಸಣ್ಣ ಮನೆ ಕಟ್ಟಲು ಸಾವಿರ ಸಮಸ್ಯೆಗಳಿವೆ. ಕೇವಲ ಮನುಷ್ಯರಿಗಲ್ಲ, ದೇವತೆಗಳಿಗೂ ಸಹ ವಿಘ್ನಗಳು ಸಮಸ್ಯೆಗಳು ಇದ್ದದ್ದು ಕಂಡಿದೆ. ಎಲ್ಲರೂ ಮತ್ತೊಬ್ಬರ ಅಧೀನರೇ. ಅಂದಮೇಲೆ ಇಂತಹ ದೊಡ್ಡ ಬ್ರಹ್ಮಾಂಡವನ್ನು ನಿರ್ಮಾಣ ಮಾಡಿದ ದೇವರು ಎಲ್ಲರಿಗಿಂತ ಹೆಚ್ಚು ಕಷ್ಟ ಪಟ್ಟಿರಬೇಕಲ್ಲವೇ? ಎನ್ನುವ ಪ್ರಶ್ನೆಗೆ ಶ್ರೀ ವೇದವ್ಯಾಸದೇವರು ನೀಡಿದ, ಶ್ರೀಮದಾಚಾರ್ಯರು ವಿವರಿಸಿದ ಉತ್ತರದ ನಿರೂಪಣೆ ಇಲ್ಲಿದೆ. ದೇವರ ಸ್ವಾತಂತ್ರ್ಯವನ್ನು ಪ್ರತೀನಿತ್ಯ ಚಿಂತನೆ ಮಾಡುವ ಕ್ರಮ, ಅದರಿಂದ ಉಂಟಾಗುವ ಮಹತ್ತರ ಪ್ರಯೋಜನಗಳ ವಿವರಣೆಯೊಂದಿಗೆ.
ಶ್ರೀಮದ್ ಭಾಗವತ — 28 — ಸರ್ವಜ್ಞನಾದ್ದರಿಂದ ದೇವರು ಸರ್ವಕರ್ತಾ
ದೇವರು ಎಲ್ಲದರ ಸೃಷ್ಟ್ಯಾದಿಗಳನ್ನು ಮಾಡುತ್ತಾನೆಯಾದ್ದರಿಂದಲೇ ಅವನು ಸರ್ವಜ್ಞ ಎಂದು ಸಿದ್ಧವಾಗುತ್ತದೆ ಎಂದು ತಿಳಿದೆವು. ಸರ್ವಜ್ಞನಾದ್ದರಿಂದಲೂ ದೇವರನ್ನು ಸರ್ವಕರ್ತಾ ಎಂದು ಒಪ್ಪಬೇಕು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ಒಂದು ಕಾರ್ಯವನ್ನು ಮಾಡುವ ಜ್ಞಾನವಿದ್ದ ಮಾತ್ರಕ್ಕೆ ಜನರು ಆ ಕಾರ್ಯವನ್ನು ಮಾಡುವದಿಲ್ಲವಲ್ಲ, ದೇವರು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ.
ಶ್ರೀಮದ್ ಭಾಗವತಮ್ — 27 — ದೇವರನ್ನು ಸರ್ವಜ್ಞ ಎಂದೇಕೆ ಒಪ್ಪಬೇಕು?
ಬೇರೆಯವರ ಸರ್ವಜ್ಞತ್ವವನ್ನು ಯುಕ್ತಿಯಿಂದ ಪ್ರತಿಪಾದಿಸಲು ಸಾಧ್ಯವಿಲ್ಲ, ಆದರೆ ವೇದಗಳು ತಿಳಿಸುವ ಭಗವಂತನ ಸರ್ವಜ್ಞತ್ವವನ್ನು ಯುಕ್ತಿಯಿಂದಲೂ ನಿರ್ಣಯ ಮಾಡಿಕೊಳ್ಳಲು ಸಾಧ್ಯ ಎಂಬ ವಿಷಯದ ನಿರೂಪಣೆ ಇಲ್ಲಿದೆ. ಜಗತ್ತಿನ ಎಲ್ಲ ಮತದವರು ಹೇಳುವ ಮಾತು — ನಮ್ಮ ಮೂಲಪುರುಷರಾದ ಗುರುಗಳು ಸರ್ವಜ್ಞರು, ಆದ್ದರಿಂದ ನಮ್ಮ ಮತ ಸತ್ಯ ಎಂದು. ಈ ಮಾತಿಗೆ ಭಗವತ್ಪಾದರು ಅನುವ್ಯಾಖ್ಯಾನದಲ್ಲಿ ನೀಡಿರುವ ಉತ್ತರದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 26 — ದೇವರ ಸರ್ವಜ್ಞತ್ವ
ದೇವರು ಜಗತ್ತಿಗೆ ಸೃಷ್ಟ್ಯಾದಿಗಳನ್ನು ನೀಡುತ್ತಾನೆ ಎನ್ನುವದನ್ನು ಶಾಸ್ತ್ರಗಳ ಬೆಂಬಲವಿರುವ ಯುಕ್ತಿಗಳಿಂದ ತಿಳಿಯಬಹುದು ಎಂದು ವೇದವ್ಯಾಸದೇವರು ತಿಳಿಸಿದರು. ಆಗ ಪ್ರಶ್ನೆ ಮೂಡುತ್ತದೆ — ಕುಂಬಾರನಿಗೆ ಮಡಿಕೆ ನಿರ್ಮಾಣ ಮಾಡುವ ಜ್ಞಾನ ಮಾತ್ರ ಇರುತ್ತದೆ. ಆ ಮಡಿಕೆಯನ್ನು ಯಾರು ಕೊಳ್ಳುತ್ತಾರೆ, ಏನು ಮಾಡುತ್ತಾರೆ, ಆ ಮಡಿಕೆ ಮುಂದೇನಾಗುತ್ತದೆ ಇತ್ಯಾದಿ ಜ್ಞಾನಗಳಿರುವದಿಲ್ಲ. ದೇವರು ಕುಂಬಾರನಂತಾದರೆ ಅವನೂ ಸಹ ಕುಂಬಾರನಂತೆ ಅಸರ್ವಜ್ಞನಾಗಬೇಕಾಗುತ್ತದೆ ಎಂದು. ಈ ಪ್ರಶ್ನೆಗೆ ಭಾಗವತ ಮತ್ತು ಭಾಗವತತಾತ್ಪರ್ಯಗಳು ನೀಡುವ ಉತ್ತರದ ಅನುಸಂಧಾನ ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 25 — ಆಚಾರ್ಯರು ತಿಳಿಸಿದ ಶುದ್ಧ ತರ್ಕ
ವೇದಗಳಲ್ಲಿನ ತತ್ವಗಳನ್ನು ಯುಕ್ತಿಯಿಂದ ನಿರ್ಣಯ ಮಾಡಿಕೊಳ್ಳಬೇಕು ಎನ್ನುವದು ಆಚಾರ್ಯರ ಸಿದ್ಧಾಂತ. ವೇದಗಳ ಬೆಂಬಲವುಳ್ಳ ತರ್ಕದಿಂದ ಆಚಾರ್ಯರು ಜಗತ್ತಿನ ನಿರ್ಮಾತೃವಾದ ದೇವರೊಬ್ಬನಿದ್ದಾನೆ ಎಂದು ಪ್ರತಿಪಾದಿಸುತ್ತಾರೆ. ಆ ವಿಷಯದ ನಿರೂಪಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 24 — ಇತರತಃ ಎಂಬ ಶಬ್ದದ ಅರ್ಥ
ಸರಿಯಾಗಿ ನಿರ್ಣಯಿಸಲ್ಪಟ್ಟ ವೇದಾದಿಶಾಸ್ತ್ರಗಳಿಂದ ದೇವರನ್ನು ತಿಳಿಯಬೇಕು, ಆ ವೇದಶಾಸ್ತ್ರದ ಬೆಂಬಲವಿರುವ ಯುಕ್ತಿಯಿಂದಲೂ ದೇವರನ್ನು ತಿಳಿಯಬಹುದು ಎಂದು ಶ್ರೀ ವೇದವ್ಯಾಸದೇವರು ಅನ್ವಯಾತ್ ಇತರತಃ ಎಂಬ ಶಬ್ದಗಳಿಂದ ತಿಳಿಸುತ್ತಿದ್ದಾರೆ. ಇಲ್ಲಿ ಯುಕ್ತಿ ಎಂದು ಹೇಳಲು ಬಳಸಿದ ಶಬ್ದ ಇತರತಃ ಎಂದು. ಇತರ ಎಂದರೆ ಬೇರೆಯದು ಎಂದರ್ಥ. ಇಲ್ಲಿ ಯುಕ್ತಿಯೇ ಎಂದು ಆ ಶಬ್ದಕ್ಕೆ ಹೇಗೆ ಅರ್ಥವಾಗುತ್ತದೆ ಮತ್ತು ತರ್ಕವನ್ನು ಪ್ರಮಾಣ ಎಂದು ಹೇಗೆ ಒಪ್ಪುವದು ಎನ್ನುವ ಪ್ರಶ್ನೆಗಳಿಗೆ ಉತ್ತರವಿದೆ.
ಶ್ರೀಮದ್ ಭಾಗವತಮ್ — 23 — ಅನ್ವಯಾತ್ ಎಂಬ ಶಬ್ದದ ಅರ್ಥ
ಜಗಜ್ಜನ್ಮಾದಿಕಾರಣನಾದ ಶ್ರೀಹರಿಯನ್ನು ಧ್ಯಾನ ಮಾಡೋಣ ಎಂದು ವೇದವ್ಯಾಸದೇವರು ಹೇಳಿದರು. ದೇವರು ಹೀಗಿದ್ದಾನೆ ಎನ್ನುವದಕ್ಕೆ ಏನು ಆಧಾರ ಎಂದರೆ ಅವರು ನೀಡಿದ ಉತ್ತರ — ಅನ್ವಯಾತ್ ಎಂದು. ಬ್ರಹ್ಮಸೂತ್ರಗಳಲ್ಲಿ ಪ್ರಯುಕ್ತವಾದ ಈ ಶಬ್ದದ ಅರ್ಥವನ್ನು ಮುನಿತ್ರಯರು ಅತ್ಯಂತ ವಿಸ್ತೃತವಾಗಿ ತಮ್ಮ ಗ್ರಂಥಗಳಲ್ಲಿ ನಿರ್ಣಯ ಮಾಡಿ ಹೇಳಿದ್ದಾರೆ. ಆ ವಿಷಯದ ಸಂಗ್ರಹ ಇಲ್ಲಿದೆ.
ಶ್ರೀಮದ್ ಭಾಗವತಮ್ — 22 — ಜನ್ಮ ಆದ್ಯಸ್ಯ ಎಂಬ ವಿಭಾಗ ತಪ್ಪು
“ಜನ್ಮಾದ್ಯಸ್ಯ” ಎನ್ನುವದನ್ನು ಕೆಲವು ಮಾಯಾವಾದಿಗಳು “ಜನ್ಮ ಆದ್ಯಸ್ಯ” ಎಂದು ವಿಭಾಗ ಮಾಡುತ್ತಾರೆ. ಟೀಕಾಕೃತ್ಪಾದರು ಅದನ್ನು ಖಂಡಿಸಿ “ಜನ್ಮಾದಿ ಅಸ್ಯ” ಎಂಬ ವಿಭಾಗವೇ ವೇದವ್ಯಾಸದೇವರಿಗೆ ಸಮ್ಮತವಾದದ್ದು ಎಂದು ಪ್ರತಿಪಾದಿಸುತ್ತಾರೆ. ಅದರ ವಿವರಣೆ ಇಲ್ಲಿದೆ. ಟೀಕಾಕೃತ್ಪಾದರ ವ್ಯಾಖ್ಯಾನ ಏಕೆ ತಪ್ಪಾಗಿರಬಾರದು ಎಂಬ ಆಧುನಿಕರ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಅವರ ಮಾತಿನ ಪರಿಶುದ್ಧಿಯ ಸಮರ್ಥನೆಯೊಂದಿಗೆ. ಶಾಸ್ತ್ರಗಳ ಸರಿಯಾದ ಅರ್ಥವನ್ನು ತಿಳಿದರೆ ಸಾಕು, ತಪ್ಪಾದದ್ದನ್ನು ಏಕೆ ಖಂಡಿಸಬೇಕು ಎನ್ನುವದಕ್ಕೆ ಉಪನಿಷತ್ತು ಮತ್ತು ಶ್ರೀಮದಾಚಾರ್ಯರು ನೀಡಿದ “ಭಯಂಕರ” ಉತ್ತರದ ವಿವರಣೆಯೂ ಈ ಉಪನ್ಯಾಸದಲ್ಲಿ ಉಪಲಬ್ಧವಿದೆ. ತಪ್ಪನ್ನು ಖಂಡಿಸಬಾರದು ಎಂದು ತಿಳಿದಿರುವ ಜನ ಕೇಳಲೇಬೇಕಾದ ಪರಮತತ್ವವನ್ನು ಆಚಾರ್ಯರು ಪ್ರತಿಪಾದಿಸಿದ್ದಾರೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 21 — “ವ್ಯಸ್ತ-ಸಮಸ್ತ” ಎಂಬ ಶಬ್ದಗಳ ಅರ್ಥ
ಜನ್ಮಾದ್ಯಸ್ಯ ಎನ್ನುವ ಮಾತಿಗೆ ವ್ಯಾಖ್ಯಾನ ಮಾಡುತ್ತ ಆಚಾರ್ಯರು “ವಿಷ್ಣೋರ್ವ್ಯಸ್ತಾಃ ಸಮಸ್ತಾಃ” ಎನ್ನುವ ಶಬ್ದಗಳನ್ನು ಬಳಸುತ್ತಾರೆ. ಆಚಾರ್ಯರ ಈ ವ್ಯಾಖ್ಯಾನಕ್ಕೆ ಆಧಾರವೇನು, ಈ ಶಬ್ದಗಳ ಅರ್ಥವೇನು, ಇದನ್ನು ಇಲ್ಲಿ ತಿಳಿಸುವ ಆವಶ್ಯಕತೆಯೇನು ಎಂಬ ಪ್ರಶ್ನೆಗಳಿಗೆ ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು, ಶ್ರೀಮಂತ್ರಾಲಯಪ್ರಭುಗಳು, ಶ್ರೀಭಾಷ್ಯದೀಪಿಕಾಚಾರ್ಯರು, ಶ್ರೀ ಯಾದವಾರ್ಯರು ನೀಡಿದ ಉತ್ತರಗಳನ್ನು ನಾವಿಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 20 — ಈಹಾ ಶಬ್ದದ ಅರ್ಥ
ಈಹಾ ಎಂದರೇನು? ಭಾಗವತಕ್ಕೆ ಸಂಬಂಧಪಟ್ಟ ಗ್ರಂಥಗಳಲ್ಲಿ ಮಾತ್ರ ಏಕೆ ಸೃಷ್ಟ್ಯಾದಿಗಳ ಜೊತೆಯಲ್ಲಿ ಅದರ ಉಲ್ಲೇಖವಿದೆ? ಮಂತ್ರಾಲಯಪ್ರಭುಗಳೇ ಮೊದಲಾದ ಮಹಾನುಭಾವರು ಆ ಶಬ್ದಕ್ಕೆ ಏನು ಅರ್ಥವನ್ನು ಹೇಳಿದ್ದಾರೆ? ಪ್ರಾಚೀನಗ್ರಂಥಗಳಲ್ಲಿ ಯಾವ ಅರ್ಥಗಳಲ್ಲಿ ಆ ಶಬ್ದದ ಪ್ರಯೋಗವಾಗಿದೆ? ಆ ಅರ್ಥವನ್ನು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡುವದು ಹೇಗೆ? ಇತ್ಯಾದಿಗಳ ಕುರಿತ ವಿವರಣೆಯೊಂದಿಗೆ ಶ್ರೀಮದ್ ಭಾಗವತ ಅದೆಷ್ಟು ದುರ್ಲಭ ಎನ್ನುವದನ್ನು, ಸಮಗ್ರ ಭಾಗವತಮಾಹಾತ್ಮ್ಯದ ಕಥಾಭಾಗದ ತಾತ್ಪರ್ಯವನ್ನು ಭಗವತ್ಪಾದರು ಸಂಗ್ರಹ ಮಾಡಿರುವ ಅತ್ಯದ್ಭುತ ರೀತಿಯ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 19 — ಜ್ಞಾನಮೋಕ್ಷಪ್ರದ
ಜೀವ ಏಳು ಆವರಣಗಳನ್ನು ಕಳೆದುಕೊಂಡು ಮೋಕ್ಷವನ್ನು ಪಡೆಯುವ ಕ್ರಮದ ವಿವರಣೆ ಇಲ್ಲಿದೆ. ಪರಮಾತ್ಮ ಯಾವ ರೀತಿ ಜ್ಞಾನ ಮತ್ತು ಮೋಕ್ಷಗಳನ್ನು ನೀಡುತ್ತಾನೆ ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ.
ಶ್ರೀಮದ್ ಭಾಗವತಮ್ — 18 — ಅಜ್ಞಾನಬಂಧಪ್ರದ
ಜೀವರಾಶಿಗಳಿಗಿರುವ ಭಾವರೂಪ ಅಜ್ಞಾನ ಮತ್ತು ಏಳು ಆವರಣಗಳನ್ನು ಭಗವಂತ ಯಾವ ರೀತಿ ನೀಡಿ ಬಂಧಕನಾಗುತ್ತಾನೆ ಎನ್ನುವ ತತ್ವದ ವಿವರಣೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 17 — ಸಮಸ್ತರಿಗೂ ಜನ್ಮಾದಿಪ್ರದ
ಭಗವಂತನೇ ಸರ್ವಪ್ರದ ಎನ್ನುವ ತತ್ವವನ್ನು ಭಾಗವತೋತ್ತಮರಾದ ಶ್ರೀ ವಸುದೇವ ದೇವಕಿಯರು ಯಾವ ರೀತಿ ಅನುಷ್ಠಾನ ಮಾಡುತ್ತಿದ್ದರು ಎಂಬ ಮಾತಿನ ನಿರೂಪಣೆಯೊಂದಿಗೆ “ಜನ್ಮಾದ್ಯಸ್ಯ ಯತಃ” ಎಂಬ ವಾಕ್ಯ ಹೇಳುವ ತತ್ವವನ್ನು ಯಾವ ರೀತಿ ಅನುಸಂಧಾನಕ್ಕೆ ತರಬೇಕು ಎನ್ನುವದರ ಕುರಿತ ಚಿಂತನೆ ಇಲ್ಲಿದೆ.
ಶ್ರೀಮದ್ ಭಾಗವತಮ್ — 16 — ಮಹಾಲಕ್ಷ್ಮಿಗೂ ಜನ್ಮಾದಿಪ್ರದ
ಜನ್ಮಮರಣಗಳಿಲ್ಲದ, ಬಂಧ, ಅಜ್ಞಾನಗಳಿಲ್ಲದ ನಿತ್ಯಮುಕ್ತರಾದ ಮಹಾಲಕ್ಷ್ಮಿಗೆ ಯಾವಕ್ರಮದಲ್ಲಿ ಭಗವಂತ ಜನ್ಮ-ಸ್ಥಿತಿ-ಲಯ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳನ್ನು ನೀಡುತ್ತಾನೆ ಎನ್ನುವ ವಿಷಯವನ್ನು ನಾವಿಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 15 — ಜನ್ಮಾದಿ ಎಂಬ ಶಬ್ದದ ಅರ್ಥ
ಜನ್ಮಾದಿ ಎಂದರೆ ಸೃಷ್ಟಿ ಸ್ಥಿತಿ ಲಯಗಳು ಎಂದು ಅನೇಕರ ವಾದ. ಆದರೆ ಶ್ರೀಮದಾಚಾರ್ಯರು ಜನ್ಮಾದಿ ಎಂದರೆ ಕೇವಲ ಮೂರಲ್ಲ, ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಅಜ್ಞಾನ, ಜ್ಞಾನ, ಬಂಧ, ಮೋಕ್ಷ ಎಂಬ ಎಂಟು ಪದಾರ್ಥಗಳು ಎಂದು ಅರ್ಥ ಮಾಡುತ್ತಾರೆ. ಈ ಎಂಟನ್ನು ಒಪ್ಪಬೇಕಾದ ಅನಿವಾರ್ಯತೆಯೇನು ಎನ್ನುವದಕ್ಕೆ ಶ್ರೀಮಚ್ಚಂದ್ರಿಕಾಚಾರ್ಯರು ತಾತ್ಪರ್ಯಚಂದ್ರಿಕಾಗ್ರಂಥದಲ್ಲಿ ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ಆ ಉತ್ತರಗಳ ಸಂಗ್ರಹ ಇಲ್ಲಿದೆ. ಜನ್ಮಾದ್ಯಸ್ಯ ಎಂಬ ಶಬ್ದಗಳ ಅರ್ಥ ಮತ್ತು ನಿತ್ಯಜೀವನದಲ್ಲಿ ಅದರ ಅನುಸಂಧಾನ ಹೇಗಿರಬೇಕು ಎನ್ನುವದನ್ನು ವಿವರಿಸುವ ಉಪನ್ಯಾಸ.
ಶ್ರೀಮದ್ ಭಾಗವತಮ್ — 14 — ದೇವರ ಲಕ್ಷಣಗಳನ್ನು ಏಕೆ ತಿಳಿಸಬೇಕು
ಮೊಲದ ಕೋಡು ಅತ್ಯಂತ ಅಸತ್ಯವಾದ ಪದಾರ್ಥ. ಜಗತ್ತಿನ ಯಾವ ವ್ಯಕ್ತಿಯೂ ಅದನ್ನು ಕಂಡಿಲ್ಲ. ಹಾಗೆ ದೇವರನ್ನೂ ಸಹ ಯಾರೂ ಕಂಡಿಲ್ಲ. ಅಂದಮೇಲೆ ದೇವರಿಗೂ ಮೊಲದ ಕೋಡಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿದ ಅದ್ಭುತವಾದ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಮದ್ ಭಾಗವತಮ್ — 13 — ಮಂಗಳಾಚಾರಣೆಯನ್ನು ಏಕೆ ಮಾಡಬೇಕು?
ಶ್ರೀಮದ್ ಭಾಗವತದ ಮೊದಲ ಶ್ಲೋಕದ ಅನುವಾದ ಇಲ್ಲಿಂದ ಆರಂಭ. ಮಂಗಲಾಚರಣೆ ಎಂದರೇನು, ಏಕೆ ಮಾಡಬೇಕು, ಪ್ರಯೋಜನವಿದ್ದದ್ದಕ್ಕಾಗಿ ನಾವು ಮಾಡುವದು ಸರಿಯಾದರೂ ನಿತ್ಯತೃಪ್ತರಾದ ವೇದವ್ಯಾಸದೇವರಿಗೆ ಮಂಗಳಾಚರಣೆಯಿಂದಲೂ ಏನೂ ಪ್ರಯೋಜನವಿಲ್ಲ, ಅಂದಮೇಲೆ ಅವರೇಕೆ ಮಂಗಳಾಚರಣೆ ಮಾಡುತ್ತಾರೆ, ದೇವರ ಮಂಗಳಾಚರಣೆಗೂ ಶ್ರೀಮದಾಚಾರ್ಯರು ಮಾಡಿರುವ ಮಂಗಳಾಚರಣೆಗೂ ಏನು ವ್ಯತ್ಯಾಸ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. “ಜನ್ಮಾದ್ಯಸ್ಯ ಯತಃ” ಎಂಬ ಭಾಗವತದ ಮೊಟ್ಟಮೊದಲ ಶಬ್ದಪ್ರಯೋಗದಲ್ಲಿಯೇ ವೇದವ್ಯಾಸದೇವರ ಎಂತಹ ಕಾರುಣ್ಯ ಅಡಗಿದಿ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ.
ಶ್ರೀಮದ್ ಭಾಗವತಮ್ — 12 — ಗುರುವಂದನೆ
ಸಮಸ್ತಗುರುಗಳಿಗೆ ವಂದನೆ ಸಲ್ಲಿಸಿ ಶ್ರೀ ಭಾಗವತದ ಕೀರ್ತನ-ಶ್ರವಣಗಳು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವ ಶ್ಲೋಕಗಳ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 11 — ದೇವತಾವಂದನೆ
ಶ್ರೀಹರಿ-ವೇದವ್ಯಾಸದೇವರು-ಮಹಾಲಕ್ಷ್ಮೀದೇವಿ-ಮುಖ್ಯಪ್ರಾಣದೇವರು-ಭಾರತೀದೇವಿ-ತತ್ವಾಭಿಮಾನಿದೇವತೆಗಳು-ಶ್ರೀ ಶುಕಾಚಾರ್ಯರು-ಕಾವೇರಿ ಮೊದಲಾದ ಸಮಸ್ತದೇವತೋತ್ತಮರಿಗೆ ಮಾಡಿ ಶ್ರೀ ಭಾಗವತದ ಕೀರ್ತನ-ಶ್ರವಣಗಳು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವ ಶ್ಲೋಕಗಳ ಅರ್ಥಾನುಸಂಧಾನ.
ಶ್ರೀಮದ್ ಭಾಗವತಮ್ — 10 — ನಾರದರ ಸಪ್ತಾಹದ ವೈಭವ
ಕೃಶರಾಗಿದ್ದ ಭಕ್ತಿ ಜ್ಞಾನ ವೈರಾಗ್ಯಗಳು ಪುಷ್ಟಗೊಳ್ಳಬೇಕೆಂದು, ಸಮಸ್ತ ಕಲಿಯುಗದ ಸಜ್ಜನರ ಮೇಲಿನ ಕಾರುಣ್ಯದಿಂದ ಶ್ರೀ ನಾರದರು ಸನಕಾದಿಯೋಗಿವರ್ಯರಿಂದ ಶ್ರೀಮದ್ ಭಾಗವತಸಪ್ತಾಹವನ್ನು ಮಾಡಿಸುತ್ತಾರೆ. ಪರಮಾದ್ಭುತವಾದ ಕ್ರಮದಲ್ಲಿ ನಡೆಯುವ ಆ ಸಪ್ತಾಹವನ್ನು ಅನುಗ್ರಹಿಸಲು ಭಾಗವತಾಚಾರ್ಯರಾದ ಶುಕಾಚಾರ್ಯರೇ ಆಗಮಿಸುತ್ತಾರೆ. ಪ್ರಹ್ಲಾದರಾಜರು-ಉದ್ಧವ ಮುಂತಾದ ಭಾಗವತೋತ್ತಮರೊಡಗೂಡಿ ಸ್ವಯಂ ಭಗವಂತ ಅಲ್ಲಿ ಪ್ರಾದುರ್ಭೂತನಾಗುತ್ತಾನೆ. ಪ್ರಹ್ಲಾದ-ಉದ್ಧವ-ನಾರದ-ಸನಕಾದಿಗಳೊಡಗೂಡಿ ಅರ್ಜುನ ಸಂಕೀರ್ತನೋತ್ಸವವನ್ನು ಆರಂಭಿಸುತ್ತಾನೆ. ಆ ಸಂಕೀರ್ತನೋತ್ಸವವನ್ನು ಕಾಣಲು ಬ್ರಹ್ಮ ರುದ್ರಾದಿದೇವತೆಗಳು ಸಪತ್ನೀಕರಾಗಿ ಆಗಮಿಸುತ್ತಾರೆ. ಸಪ್ತಾಹ-ಸಂಕೀರ್ತನಗಳಿಂದ ಭಕ್ತಿ-ಜ್ಞಾನ-ವೈರಾಗ್ಯಗಳು ಪರಮತಾರುಣ್ಯವನ್ನು ಪಡೆದುಕೊಳ್ಳುತ್ತವೆ. ಸಂಪ್ರೀತನಾದ ಭಗವಂತ ಅವರಿಗೆ ವರಪ್ರದನಾಗುತ್ತಾನೆ. ಆ ವರವೇನು, ವರವನ್ನು ಪಡೆದವರ ಕಾರುಣ್ಯ ಎಂತಹುದು ಎನ್ನುವದನ್ನು ಕೇಳಿಯೇ ಆನಂದಿಸಬೇಕು, ಅನುಭವಿಸಬೇಕು. ನಮಗಾಗಿ ವರವನ್ನು ಪಡೆದ ಆ ಮಹಾನುಭಾವರಿಗೆ ಸಾಷ್ಟಾಂಗಪ್ರಣತಿಗಳನ್ನರ್ಪಿಸಬೇಕು. ಅದರ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. ಎಲ್ಲ ಸಜ್ಜನರಿಗೂ ಕೇಳಿಸಿ.
ಶ್ರೀಮದ್ ಭಾಗವತಮ್ — 9 — ಸಪ್ತಾಹದ ಪರಿಶುದ್ಧಕ್ರಮ
ಸಪ್ತಾಹ ಎಂದರೆ ಸುಮ್ಮನೆ ಆಚಾರ್ಯರೊಬ್ಬರನ್ನು ಕರೆಸಿ ಏಳು ದಿವಸ ಏಳು ಗಂಟೆಗಳ ಕಾಲ ಉಪನ್ಯಾಸ ಮಾಡಿಸುವದಲ್ಲ. ಅದಕ್ಕೊಂದು ಪರಿಶುದ್ಧವಾದ ವಿಧಿಯಿದೆ. ಮೋಕ್ಷಪ್ರದವಾದ ಮಹಾಸತ್ಕರ್ಮವದು. ವಿವಾಹ ಉಪನಯನಗಳಿಗೆ ಎಷ್ಟು ಆದರ ಶ್ರದ್ಧೆಗಳಿಂದ ಮುಹೂರ್ತ ನೋಡುತ್ತೇವೆಯೋ ಅದಕ್ಕಿಂತಲೂ ಮಿಗಿಲಾದ ಶ್ರದ್ಧೆಯಿಂದ ಮುಹೂರ್ತವನ್ನು ನೋಡಬೇಕು ಎಂದು ಸ್ವಯಂ ಸನಕಾದಿಗಳು ಹೇಳುತ್ತಾರೆ. ಹಾಗೆಯೇ ಯಾವ ಮಾಸಗಳಲ್ಲಿ ಸಪ್ತಾಹವನ್ನು ಮಾಡುವದರಿಂದ ಮೋಕ್ಷ ದೊರೆಯುತ್ತದೆಯೋ ಆ ಮಾಸಗಳನ್ನು ತಿಳಿಸಿ, ಸಪ್ತಾಹಕ್ಕೆ ಯಾರನ್ನು ಕರೆಯಬೇಕು, ಯಾವ ರೀತಿ ಕರೆಯಬೇಕು, ಎಲ್ಲಿ ಸಪ್ತಾಹ ಮಾಡಬೇಕು, ವೇದಿಕೆ ಹೇಗಿರಬೇಕು, ಮಂಟಪ ಹೇಗಿರಬೇಕು, ಭಾಗವತ ಹೇಳುವವರಲ್ಲಿ ಯಾವ ಲಕ್ಷಣಗಳಿರಬೇಕು, ಕೇಳುವವರ ನಿಯಮವೇನು, ಸಪ್ತಾಹವನ್ನು ಯಾರುಯಾರು ಕೇಳುವದರಿಂದ ಯಾವಯಾವ ಫಲವನ್ನು ಪಡೆಯುತ್ತಾರೆ, ಸಪ್ತಾಹದ ಅಂತ್ಯದಲ್ಲಿ ಏನೆಲ್ಲ ಸತ್ಕರ್ಮಗಳನ್ನು ಆಚರಿಸಬೇಕು, ಎನ್ನುವದನ್ನೂ ತಿಳಿಸುತ್ತಾರೆ.
ಶ್ರೀಮದ್ ಭಾಗವತಮ್ — 8 — ಧುಂಧುಕಾರಿಯ ಉದ್ಧಾರ
ಧುಂಧುಕಾರಿ ಐದು ಜನ ವೇಶ್ಯೆಯರನ್ನು ಮನೆಯಲ್ಲಿ ತಂದಿಟ್ಟುಕೊಂಡು ಪರಮಪಾಪಿಷ್ಠನಾಗಿ ಬದುಕುತ್ತಿರುತ್ತಾನೆ. ಅವನು ಮಾಡುತ್ತಿದ್ದ ಕಳ್ಳತನ ಕೊಲೆಗಳು ರಾಜನಿಗೆ ತಿಳಿದರೆ ಇವನ ಜೊತೆಯಲ್ಲಿ ತಮ್ಮನ್ನೂ ರಾಜ ಕೊಲ್ಲುತ್ತಾನೆ ಎಂದು ಆಲೋಚನೆ ಮಾಡಿದ ವೇಶ್ಯೆಯರು ರಾತ್ರಿಯಲ್ಲಿ ಧುಂಧುಕಾರಿಯನ್ನು ಕೊಂದು ಹಾಕುತ್ತಾರೆ. ತನ್ನ ಮಹತ್ತರ ಪಾಪಕರ್ಮಗಳಿಂದ ಪಿಶಾಚಜನ್ಮವನ್ನು ಪಡೆದ ಧುಂಧುಕಾರಿಯನ್ನು ಗೋಕರ್ಣ ಭಾಗವತಸಪ್ತಾಹದಿಂದ ಉದ್ಧಾರ ಮಾಡುವ ದಿವ್ಯ ಘಟನೆ ಮತ್ತು ಗೋಕರ್ಣ ಹಾಗೂ ಎಲ್ಲ ಶ್ರೋತೃಗಳ ಉದ್ಧಾರವಾಗುವ ಘಟನೆಗಳ ಚಿತ್ರಣ ಇಲ್ಲಿದೆ. ಆಚಾರ್ಯರ ವಾಕ್ಯಗಳ ಆಧಾರದ ಮೇಲೆ ಭಾಗವತಶ್ರವಣದಿಂದ ಮುಕ್ತಿಯಾಗುವದು ಎಂದರೇನು ಎನ್ನುವ ತತ್ವದ ವಿವರಣೆಯೂ ಇಲ್ಲಿದೆ.
ಶ್ರೀಮದ್ ಭಾಗವತಮ್ — 7 — ಆತ್ಮದೇವನ ಉದ್ಧಾರ
ಯತಿವರೇಣ್ಯರು ನೀಡಿದ ಫಲವನ್ನು ಹಸು ತಿನ್ನುತ್ತದೆ. ಗೋಕರ್ಣ ಎಂಬ ಸಜ್ಜೀವ ಅವತರಿಸಿ ಬರುತ್ತಾನೆ. ಆತ್ಮದೇವನ ಹೆಂಡತಿ ಧುಂಧುಲೀ ತನ್ನ ತಂಗಿಯ ಮಗುವನ್ನು ಕೊಂಡುಕೊಂಡು ತನ್ನ ಮಗ ಎಂದು ಸುಳ್ಳು ಹೇಳುತ್ತಾಳೆ. ಅವನೇ ಪಾಪಕರ್ಮರತನಾದ ಧುಂಧುಕಾರಿ. ದುಷ್ಟಕಾರ್ಯಗಳನ್ನು ಮಾಡುತ್ತಲೇ ಬೆಳೆದು ಬಲಿಷ್ಠನಾಗುವ ಅವನು ತನ್ನ ತಂದೆಯನ್ನೇ ಹೊಡೆದು ಹಣ ಕಸಿದುಕೊಂಡು ಹೋಗುತ್ತಾನೆ. ಗೋಕರ್ಣನಿಂದ ತತ್ವದ ಉಪದೇಶ ಪಡೆದ ಆತ್ಮದೇವ ಭಾಗವತದ ದಶಮಸ್ಕಂಧದಲ್ಲಿ ಆಸಕ್ತನಾಗಿ ಉದ್ಧೃತಿಯನ್ನು ಕಂಡುಕೊಳ್ಳುವ ಭಾಗದ ವಿವರಣೆ ಈ ಉಪನ್ಯಾಸದಲ್ಲಿದೆ.
ಶ್ರೀಮದ್ ಭಾಗವತಮ್ — 6 — ಆತ್ಮದೇವನ ಕಥೆ
ದೇವ-ಋಷಿ ಮೊದಲಾದ ಸಮಸ್ತ ಸಜ್ಜನ ಸಮೂಹದ ಸಭೆಯ ಮಧ್ಯದಲ್ಲಿ ಭಾಗವತದ ಮಾಹಾತ್ಮ್ಯವನ್ನು ಸನಕಾದಿಗಳು ಹೇಳಲು ಆರಂಭಿಸಿದಾಗ ಭಕ್ತಿ-ಜ್ಞಾನ-ವೈರಾಗ್ಯಗಳು ಅಲ್ಲಿಗೆ ಬರುತ್ತಾರೆ. ಸ್ವಯಂ ಭಗವಂತ ತಾನು ಎಲ್ಲ ಶ್ರೋತೃಗಳ ಮನಸ್ಸಿನಲ್ಲಿ ಕುಳಿತು ಭಾಗವತವನ್ನು ಆಸ್ವಾದಿಸಲು ಬರುತ್ತಾನೆ. ಭಾಗವತದ ಶ್ರವಣದಿಂದ ಎಂತಹ ಪಾಪಗಳು ನಾಶವಾಗುತ್ತವೆ ಎಂದು ಶ್ರೀ ನಾರದರು ಸನಕಾದಿಯೋಗಿವರ್ಯರನ್ನು ಪ್ರಶ್ನೆ ಮಾಡಿದಾಗ ಅವರು ಆತ್ಮದೇವ ಎನ್ನುವ ಬ್ರಾಹ್ಮಣನ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಆ ಕಥೆಯ ನಿರೂಪಣೆ ಈ ಭಾಗದಲ್ಲಿದೆ. ಮನುಷ್ಯನ ಮೋಹ ಅದೆಷ್ಟು ಗಟ್ಟಿಯಾಗಿರುತ್ತದೆ ಮತ್ತು ಆ ಮೋಹದಿಂದ ಎಂತಹ ಅನರ್ಥ ಉಂಟಾಗುತ್ತದೆ ಎಂಬ ತತ್ವವನ್ನು ಪ್ರತಿಪಾದಿಸುವ ಭಾಗ.
ಶ್ರೀಮದ್ ಭಾಗವತಮ್ — 5 — ಸನಕಾದಿಗಳು ತಿಳಿಸಿದ ಭಾಗವತದ ಮಾಹಾತ್ಮ್ಯ
ನಾರದರು ಏರ್ಪಡಿಸಿದ ಸಪ್ತಾಹ ಭಾಗವತಯಜ್ಞದಲ್ಲಿ ಮೊದಲಿಗೆ ಸನಕಾದಿಗಳು ಶ್ರೀಮದ್ ಭಾಗವತದ ಮಹಾಮಾಹಾತ್ಮ್ಯವನ್ನು ತಿಳಿಸಿ ಹೇಳುತ್ತಾರೆ. ಭಾಗವತವನ್ನು ಕೇಳಲು ಏಳು, ಒಂಭತ್ತು ಮಂತಾದ ದಿವಸಗಳ ನಿಯಮವಿಲ್ಲ, ಅದು ಅಶಕ್ತರಿಗೆ ಮಾತ್ರ. ಪ್ರತೀನಿತ್ಯ ಭಾಗವತವನ್ನು ಕೇಳಬೇಕು ಎನ್ನುವ ಮಹತ್ತ್ವದ ವಿಷಯದೊಂದಿಗೆ ಲಕ್ಷ್ಮೀ, ಬ್ರಹ್ಮ, ರುದ್ರಾದಿಗಳು ಮಾಡಿದ ಭಾಗವತ ಶ್ರವಣದ ಕುರಿತು ನಾವಿಲ್ಲಿ ಕೇಳುತ್ತೇವೆ. ಭಾಗವತ ಸ್ವಯಂ ಭಗವಂತನ ಸನ್ನಿಧಾನಪಾತ್ರವಾದ ಗ್ರಂಥ ಎಂಬ ಮಾತಿನ ಚಿಂತನೆಯೊಂದಿಗೆ.
ಶ್ರೀಮದ್ ಭಾಗವತಮ್ — 4 — ಭಾಗವತದ ಮಹಾವೈಶಿಷ್ಟ್ಯ
ಭಕ್ತಿ ಜ್ಞಾನ ವೈರಾಗ್ಯಗಳನ್ನು ಸಂಪೂರ್ಣವಾಗಿ ಪುಷ್ಟಿಗೊಳಿಸಲು ಭಾಗವತಸಪ್ತಾಹವನ್ನು ಮಾಡಬೇಕೆಂದು ಸನಕಾದಿಗಳು ನಾರದರಿಗೆ ತಿಳಿಸಿದಾಗ “ನಾನು ವೇದ, ವೇದಾಂತ, ಗೀತೆಗಳನ್ನು ಹೇಳಿದಾಗಲೂ ಭಕ್ತಿ-ಜ್ಞಾನ-ವೈರಾಗ್ಯಗಳು ಶಕ್ತಿಯನ್ನು ಪಡೆಯಲಿಲ್ಲ, ಅಂದ ಮೇಲೆ ಪ್ರತೀಶ್ಲೋಕ, ಪ್ರತಿಪದದಲ್ಲಿಯೂ ವೇದ-ವೇದಾಂತದ ಅರ್ಥವನ್ನೇ ತುಂಬಿಕೊಂಡಿರುವ ಭಾಗವತಶ್ರವಣದಿಂದ ಹೇಗೆ ಈ ಕಾರ್ಯವಾಗಲು ಸಾಧ್ಯ” ಎಂದು ನಾರದರು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸನಕಾದಿಗಳು ನೀಡುವ ದಿವ್ಯ ಉತ್ತರದ ವಿವರಣೆ — ಕೇಳಿಯೇ ಆಸ್ವಾದಿಸಬೇಕಾದ ಭಾಗವತದ ಮಾಹಾತ್ಮ್ಯದ ಚಿತ್ರಣ —ಇಲ್ಲಿದೆ. ಬ್ರಹ್ಮಸೂತ್ರ, ಗೀತಾ, ಭಾರತ, ವೇದಗಳಿಗಿಂತ ಕೆಳಗಿನ ಸ್ತರದಲ್ಲಿಯೇ ಭಾಗವತ ಇರುವದು, ಸಂಶಯವಿಲ್ಲ. ಆದರೆ, ಇವುಗಳ ಮಧ್ಯದಲ್ಲಿ ಭಾಗವತಕ್ಕಿರುವ ಬೆಲೆಯ ಕುರಿತು ನಾವಿಲ್ಲಿ ಕೇಳುತ್ತೇವೆ.
ಶ್ರೀಮದ್ ಭಾಗವತಮ್ — 3 — ಭಕ್ತಿಯ ಮಾಹಾತ್ಮ್ಯ, ನಾರದರ ಪ್ರತಿಜ್ಞೆ
ಭಕ್ತಿದೇವತೆಯೊಂದಿಗೆ ಮಾತನಾಡುತ್ತಿರುವ ಶ್ರೀನಾರದರು, ಕಲಿಯುಗದ ದೋಷಗಳನ್ನೂ ಹೇಳಿ, ಭಕ್ತಿಯ ಮಾಹಾತ್ಮ್ಯವನ್ನೂ ತಿಳಿಸಿ ಈ ದುಷ್ಟ ಕಲಿಯುಗದಲ್ಲಿಯೂ ಸರ್ವಸಜ್ಜನರ ಮನಸ್ಸಿನಲ್ಲಿ ಭಕ್ತಿಯನ್ನು ಸ್ಥಾಪಿಸುತ್ತೇನೆ ಎಂಬ ದಿವ್ಯವಾದ ಪ್ರತಿಜ್ಞೆಯನ್ನು ಮಾಡುತ್ತಾರೆ. ಭಕ್ತಿಯ ಮಾಹಾತ್ಮ್ಯವರ್ಣನೆಯಿಂದ ಭಕ್ತಿದೇವತೆಗೆ ಪುಷ್ಟಿ ದೊರೆಯುತ್ತದೆ. ಆದರೆ, ಆ ಭಕ್ತಿಯ ಮಕ್ಕಳಾದ ಜ್ಞಾನ, ವೈರಾಗ್ಯಗಳನ್ನು ಎಬ್ಬಿಸಲು ಸಾಧ್ಯವಾಗದೇ ಇದ್ದಾಗ, “ಮಹಾಸತ್ಕರ್ಮದ ಆಚರಣೆಯಿಂದ ಇವರು ಪುಷ್ಟರಾಗುತ್ತಾರೆ, ಜ್ಞಾನಿವರೇಣ್ಯರು ನಿಮಗೆ ಆ ಸತ್ಕರ್ಮವೇನು ಎನ್ನುವದನ್ನು ತಿಳಿಸುತ್ತಾರೆ” ಎಂಬ ಅಶರೀರವಾಣಿಯಾಗುತ್ತದೆ. ಆ ಸಾಧುಗಳು ಯಾರು ಎಂದು ಅರಸಿಕೊಂಡು ಶ್ರೀನಾರದರು ಬದರಿಕಾಶ್ರಮಕ್ಕೆ ಬಂದು ಸನಕಾದಿಯೋಗಿವರ್ಯರನ್ನು ಭೇಟಿಯಾಗುವ ಪ್ರಸಂಗದವರೆಗಿನ ಚಿತ್ರಣ ಇಲ್ಲಿದೆ.
ಶ್ರೀಮದ್ ಭಾಗವತಮ್ — 2 — ಕಲಿಯುಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳ ಪರಿಸ್ಥಿತಿ
ಕಲಿಯುಗ ಆರಂಭವಾಗಿ ಸುಮಾರು ಇನ್ನೂರೈವತ್ತು ವರ್ಷಗಳಾಗಿದ್ದಾಗ ಶ್ರೀ ನಾರದರು ಭೂಲೋಕದಲ್ಲಿ ಕಲಿಯ ಪ್ರಾಬಲ್ಯವನ್ನು ಕಾಣುತ್ತ ವೃಂದಾವನಕ್ಕೆ ಬರುತ್ತಾರೆ. ಅಲ್ಲಿ ಭಕ್ತಿ ಜ್ಞಾನ ವೈರಾಗ್ಯಗಳಿಗೆ ಅಭಿಮಾನಿಗಳಾದ ದೇವತೆಗಳ ದೀನ ಪರಿಸ್ಥಿತಿಯನ್ನು ಕಾಣುತ್ತಾರೆ. ಈ ಅವಸ್ಥೆಗೆ ಕಾರಣ ಕಲಿಯುಗವೇ ಎಂದು ಹೇಳಿದಾಗ, ಭಕ್ತಿದೇವತೆಯು ಕೇಳುವ “ಪರೀಕ್ಷಿದ್ರಾಜ ಮುಂತಾದವರು ಯಾಕಾಗಿ ಕಲಿಯುಗಕ್ಕೆ ಅವಕಾಶ ಮಾಡಿಕೊಟ್ಟರು” ಎಂಬ ಪ್ರಶ್ನೆಗೆ ನಾರದರು ದಿವ್ಯವಾದ ಉತ್ತರಗಳನ್ನು ನೀಡುತ್ತಾರೆ. ಆಚಾರ್ಯರ ನಿರ್ಣಯದೊಂದಿಗೆ ಆ ಉತ್ತರದ ವಿವರಣೆ ಈ ಭಾಗದಲ್ಲಿದೆ.
ಶ್ರೀಮದ್ ಭಾಗವತಮ್ — 1 — ಭಾಗವತದ ಮಾಹಾತ್ಮ್ಯ
ಪರೀಕ್ಷಿದ್ರಾಜರು ಪ್ರಾಯೋಪವೇಶಕ್ಕೆ ಕುಳಿತಿದ್ದಾರೆ. ಅಲ್ಲಿಗೆ ಸಮಸ್ತ ಋಷಿಗಳೂ ಆಗಮಿಸುತ್ತಾರೆ. ಶುಕಾಚಾರ್ಯರೂ ಬರುತ್ತಾರೆ. ಪರೀಕ್ಷಿದ್ರಾಜ ಅವರನ್ನು ಪ್ರಶ್ನೆ ಮಾಡಿದಾಗ ಉತ್ತರವಾಗಿ ಭಾಗವತವನ್ನು ಹೇಳಲು ಶುಕಾಚಾರ್ಯರು ಉಪಕ್ರಮಿಸುತ್ತಾರೆ. ಆಗ ಸಮಸ್ತ ದೇವತೆಗಳೂ ಅಮೃತದ ಕೊಡವನ್ನೇ ತೆಗೆದುಕೊಂಡು ಬಂದು ಪರೀಕ್ಷಿತರಿಗೆ ಈ ಅಮೃತ ಕೊಡಿ, ನಮಗೆ ಕಥಾಮೃತವನ್ನು ನೀಡಿ ಎಂದು ಕೇಳುತ್ತಾರೆ. ಆಗ ಶುಕಾಚಾರ್ಯರು क्व सुधा क्व कथा लोके क्व काचः क्व मणिर्महान् । ಎಲ್ಲಿಯ ಅಮೃತ, ಎಲ್ಲಿಯ ಭಾಗವತ, ಗಾಜಿಗೂ ರತ್ನಕ್ಕೂ ಸಾಮ್ಯವೇ ಎಂದು ಭಾಗವತದ ಮಾಹಾತ್ಮ್ಯವನ್ನು ತಿಳಿಸುವ ಅಪೂರ್ವ ಘಟನೆಯ ವಿವರ ಇಲ್ಲಿದೆ.