ಏಕಾದಶಿಯ ದಿವಸ ಪದಾರ್ಥಗಳು ಕಲುಷಿತವಾಗುವದಿಲ್ಲವೇ?
ಆಚಾರ್ಯರೆ ನಮಸ್ಕಾರಗಳು. ನನ್ನದೊಂದು ಪ್ರಶ್ನೆ — ಏಕಾದಶಿಯಂದು ಸಕಲ ಪಾಪಗಳು ಆಹಾರವನ್ನು ಆಶ್ರಯಿಸಿರುತ್ತವೆ. ಆದ್ದರಿಂದ ಅಂದು ಭೋಜನ ಮಾಡಬಾರದು. ಆಚಾರ್ಯರೆ ಈಗ ಎಣ್ಣೆ ಉಪ್ಪು ಉಪ್ಪಿನಕಾಯಿ ಇವುಗಳು ಏಕಾದಶಿಗೆ ತಗುಲುತ್ತವೆ ಅಲ್ಲವೆ ಅದನ್ನು ಮತ್ತೆ ಉಪಯೋಗಿಸಲು ಬರುತ್ತದೆಯೇ ತಿಳಿಸಿಕೊಡಿ — ಮಂಜುನಾಥ್ ಅಂದು ತಿನ್ನುವ ಆಹಾರ ಪಾಪವಾಗಿ ಪರಿವರ್ತಿತವಾಗುತ್ತದೆ. ಜಗತ್ತಿನಲ್ಲಿ ಇರುವ ಎಲ್ಲ ಪದಾರ್ಥಗಳಲ್ಲಿ ಅಂದು ಪಾಪವಿರುತ್ತದೆ ಎಂದಲ್ಲ. ಪದಾರ್ಥವನ್ನು ತಿಂದರೆ ಪಾಪಗಳು ಬರುತ್ತದೆ ಎಂದಲ್ಲ. ಅಂದರೆ ಅಂದು ಕುಡಿಯುವ ನೀರೂ ಸಹ ಪಾಪವನ್ನು ನೀಡುತ್ತದೆ. ಗಂಗೆಯ ನೀರನ್ನೇ ಆ ದಿವಸ ಕುಡಿದರು ಎಂದಿಟ್ಟುಕೊಳ್ಳಿ. ಗಂಗೆಯ ಸಮಗ್ರ ನೀರು ಪಾಪಪ್ರದ ಎಂದಲ್ಲ. ಏಕಾದಶಿಯಂದು ಕುಡಿದ ಗಂಗೆಯ ನೀರು ಪಾಪಪ್ರದ ಎಂದರ್ಥ. ಗೂಬೆ ಎನ್ನುವ ಶಬ್ದ ಅವಾಚ್ಯವಲ್ಲ. ಗೂಬೆ ಎಂದು ಒಬ್ಬರನ್ನು ಬೈದಾಗ ಅದು ಅವಾಚ್ಯ. ಹಾಗೆ ಆಹಾರಪದಾರ್ಥಗಳು ಪಾಪಪ್ರದವಲ್ಲ. ಏಕಾದಶಿಯಂದು ತಿಂದ ಪದಾರ್ಥಗಳು ಪಾಪಪ್ರದವಾಗುತ್ತವೆ ಎಂದರ್ಥ. ಗ್ರಹಣದಲ್ಲಿ ಪದಾರ್ಥಗಳು ಮೈಲಿಗೆಯಾಗುವಂತೆ ಏಕಾದಶಿಯಲ್ಲಿ ಮೈಲಿಗೆಯಾಗುವದಿಲ್ಲ. ತಿನ್ನುವದರಿಂದ ಪಾಪ ನೀಡುತ್ತವೆ. - Vishnudasa Nagendracharya