ವಾಯುಸ್ತುತಿಯನ್ನು ಸಂಜೆ ಪಠಿಸಬಾರದೇ?
ಕೆಲವರು ವಾಯುಸ್ತುತಿಯನ್ನು ಸಾಯಂಕಾಲ ಪಠಿಸಬಾರದು ಎಂದು ಹೇಳುತ್ತಾರೆ .ಇನ್ನು ಕೆಲವರು ಪಠಿಸಬಹುದು ಎಂದು ಹೇಳುತ್ತಾರೆ . ಇದರಲ್ಲಿ ಯಾವುದು ಸರಿ? — ಶ್ರೀಹರಿ ಪೆಜತ್ತಾಯ ಶ್ರೀಮದ್ ವಾಯುಸ್ತುತಿ ಕೇವಲ ಸ್ತೋತ್ರವಲ್ಲ, ವೇದತುಲ್ಯವಾದ ಮಂತ್ರವದು. ಹೀಗಾಗಿ ಅದನ್ನು ಸ್ತ್ರೀಯರು ಪಠಿಸುವಂತಿಲ್ಲ ಮತ್ತು ಊಟ ಮಾಡಿದ ಮೇಲೆ ಅದನ್ನು ಪುರುಷರೂ ಪಠಿಸುವ ಪದ್ಧತಿ ಮಾಧ್ವರಲ್ಲಿಲ್ಲ. ಹೀಗಾಗಿ ಏನನ್ನಾದರೂ ತಿನ್ನುವ ಕುಡಿಯುವ ಮೊದಲೇ ವಾಯುಸ್ತತಿಯನ್ನು ಪಠಿಸಬೇಕು. ಮತ್ತು ಶುದ್ಧ ಮಡಿಯಲ್ಲಿಯೇ ಪಠಿಸಬೇಕು. ಏಕಾದಶಿಯಂದು, ಮತ್ತು ವಿಷ್ಣುಪಂಚಕಾದಿ ಉಪವಾಸ ಮಾಡಿದ ದಿವಸ, ಅಥವಾ ಕಾರಣಾಂತರದಿಂದ ಸಂಜೆಯವರೆಗೆ ಊಟ ಮಾಡದೇ ಉಪವಾಸವಿದ್ದಾಗಲೂ ವಾಯುಸ್ತುತಿಯನ್ನು ಪಠಿಸಬಹುದು. ಕಲಿಯಬೇಕಾದರೆ ಊಟವಾದ ಮೇಲೂ ಮಧ್ಯಾಹ್ನ ಸಂಜೆಯ ಹೊತ್ತು ಕಲಿಯಬಹುದು. ಆದರೆ ಪಾರಾಯಣ ಮಾಡುವಾಗ ಆಹಾರವನ್ನು ಸ್ವೀಕರಿಸಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ