ಚಾತುರ್ಮಾಸ್ಯ ವ್ರತಾಚರಣೆ ಕಡ್ಡಾಯವೇ?
ಚಾತುರ್ಮಾಸ್ಯ ವ್ರತಾಚರಣೆ ಕಡ್ಡಾಯವೇ? — ಶೋಭಾ ಸುಧೀಂದ್ರ, ಬೆಂಗಳೂರು. ಯಾವ ಕರ್ಮ ಕಡ್ಡಾಯ, ಯಾವ ಕರ್ಮಕಡ್ಡಾಯವಲ್ಲ ಎನ್ನುವದನ್ನು ನಿರ್ಣಯಿಸಲು ಧರ್ಮಶಾಸ್ತ್ರದಲ್ಲಿ ಒಂದು ಮಾನದಂಡವಿದೆ. ಯಾವ ಕರ್ಮಗಳನ್ನು ಕೇವಲ ಒಂದು ಅಪೇಕ್ಷೆಯನ್ನು ಪರಿಪೂರ್ಣ ಮಾಡಿಕೊಳ್ಳಲು ಶಾಸ್ತ್ರ ವಿಧಿಸುತ್ತದೆಯೋ ಆ ಕರ್ಮವನ್ನು ಆ ಅಪೇಕ್ಷೆ ಇದ್ದಾಗ ಮಾಡಬಹುದು, ಇಲ್ಲದಿದ್ದಲ್ಲಿ ಬಿಡಬಹುದು. ಬಿಡುವದರಿಂದ ದೋಷವಿಲ್ಲ. ಉದಾಹರಣೆಗೆ ರಥಸಪ್ತಮಿಯಂದು ಉಪವಾಸ. ಆರೋಗ್ಯದ ಅಪೇಕ್ಷೆ ಇರುವವರು ಆ ದಿವಸ ಉಪವಾಸವನ್ನು ಮಾಡಬೇಕು ಎಂದು ಶಾಸ್ತ್ರ ವಿಧಿಸುತ್ತದೆ. ನಮಗೆ ಆ ಸಕಾಮಕರ್ಮವನ್ನು ಮಾಡುವ ಅಪೇಕ್ಷೆ ಇಲ್ಲದೇ ಇದ್ದಲ್ಲಿ, ಆ ದಿವಸ ಉಪವಾಸ ಮಾಡದಿದ್ದರೆ ದೋಷವಿಲ್ಲ. ಯಾವ ಕರ್ಮವನ್ನು ಮಾಡದೇ ಇದ್ದಲ್ಲಿ ಶಾಸ್ತ್ರ ದೋಷವನ್ನು ಹೇಳುತ್ತದೆಯೋ ಆ ಕರ್ಮ ನಿತ್ಯಕರ್ಮ. ಅದನ್ನು ಕಡ್ಡಾಯವಾಗಿ ಮಾಡಲೇಬೇಕು. ಉದಾಹರಣೆಗೆ ಸಂಧ್ಯಾವಂದನೆ. ಸಂಧ್ಯಾವಂದನೆ ಮಾಡದೇ ಇದ್ದಲ್ಲಿ ಬ್ರಾಹ್ಮಣ್ಯವೇ ಹೋಗುತ್ತದೆ. ಹೀಗಾಗಿ ಸಂಧ್ಯಾವಂದನೆ ನಿತ್ಯ ಕರ್ಮ. ಮಾಡಲೇಬೇಕು. ತಪ್ಪಿಸುವಂತಿಲ್ಲ. ಹಾಗೆ, ಚಾತುರ್ಮಾಸ್ಯವನ್ನು ಮಾಡದೇ ಇದ್ದಲ್ಲಿ ಮಹಾ ಪ್ರತ್ಯವಾಯವನ್ನು ಹೇಳಿದ್ದಾರೆ, ಯಾವಯಾವ ಮಾಸಗಳಲ್ಲಿ ಯಾವಯಾವ ಪದಾರ್ಥಗಳು ನಿಷಿದ್ಧವೋ ಅವನ್ನು ತಿಂದರೆ ಏನು ದೋಷ ಎನ್ನುವದನ್ನೂ ಹೇಳಿದ್ದಾರೆ. ಶ್ರೀಮದ್ ವಾದಿರಾಜಗುರುಸಾರ್ವಭೌಮರೂ ಸಹ ತಮ್ಮ ಕೃತಿಗಳಲ್ಲಿ ಅದನ್ನು ತಿಳಿಸಿದ್ದಾರೆ. ಹೀಗಾಗಿ, ಚಾತುರ್ಮಾಸ್ಯ ಅವಶ್ಯ ಕರ್ತವ್ಯವಾದ ಕರ್ಮವಾಯಿತು. ನಾವು ಸಂಸಾರವನ್ನು ಗೆಲ್ಲಲು ನಮಗೆ ಬೇಕಾದ ಮಹಾ ಅಸ್ತ್ರ, ಅಭಿಮಾನ ತ್ಯಾಗ, ಅರ್ಥಾತ್ ವೈರಾಗ್ಯ. ಆ ವೈರಾಗ್ಯವನ್ನು ಕರುಣಿಸುವ ಮಹಾವ್ರತ ಚಾತುರ್ಮಾಸ್ಯ ವ್ರತ. ಹೀಗಾಗಿ ತಪ್ಪಿಸಲೇ ಬಾರದು. ಏಕಾದಶೀ ವ್ರತ ಜ್ಞಾನವನ್ನು ಕರುಣಿಸಿದರೆ, ಕೃಷ್ಣಾಷ್ಟಮೀ ಭಕ್ತಿಯನ್ನು ಅನುಗ್ರಹಿಸುತ್ತದೆ. ಚಾತುರ್ಮಾಸ್ಯ ವೈರಾಗ್ಯವನ್ನು. ಹೀಗಾಗಿ ಈ ಮೂರು ಮಹಾವ್ರತಗಳನ್ನು ಸಾಧಕರು ಎಂದಿಗೂ ಬಿಡಬಾರದು. ಮೂರು ಮಹಾವ್ರತಗಳು [VNA093] ಎಂಬ ಲೇಖನದಲ್ಲಿ ಈ ಕುರಿತು ಮತ್ತಷ್ಟು ವಿಷಯಗಳನ್ನು ತಿಳಿಸಿದ್ದೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ