ಆತ್ಮನಿಗೆ ಸಾವಿಲ್ಲವಾದರೆ ಆತ್ಮಹತ್ಯೆ ಹೇಗೆ?
ಆತ್ಮನಿಗೆ ಸಾವಿಲ್ಲ ಎನ್ನುತ್ತಾರೆ. ಹಾಗಾದರೆ ಆತ್ಮಹತ್ಯೆ ಅತ್ಮಶ್ರಾದ್ಧ ಎನ್ನುವ ಶಬ್ದಗಳು ಏನನ್ನು ಹೇಳುತ್ತವೆ? ಆತ್ಮಕ್ಕೆ ಸಾವೇ ಇಲ್ಲದ ಬಳಿಕ ಹತ್ಯೆ ಹೇಗೆ? ಶ್ರಾದ್ಧ ಹೇಗೆ? — ಅಖಿಲಾ ದೇಶಪಾಂಡೆ. ಆತ್ಮ ಎನ್ನುವ ಶಬ್ದಕ್ಕೆ ಜೀವ ಎಂದು ಹೇಗೆ ಅರ್ಥವಿದೆಯೋ ಹಾಗೆಯೇ ‘ತಾನು’ ಎಂದು ಅರ್ಥವೂ ಇದೆ. ಆತ್ಮೀಯ ಎಂದರೆ ತನ್ನವನು ಎಂದರ್ಥವಿದೆ ನೋಡಿ. ಹಾಗೆ, ಆತ್ಮಹತ್ಯೆ ಎಂದರೆ ತನ್ನನ್ನು ತಾನು ಕೊಂದುಕೊಳ್ಳುವದು ಎಂದರ್ಥ. ಜೀವವನ್ನು ಕೊಲ್ಲುವದು ಎಂದರ್ಥವಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರೂ ಸಹಿತ ತಮ್ಮ ದೇಹವನ್ನು ಕೊಂದುಕೊಳ್ಳುತ್ತಾರೆಯೇ ಹೊರತು, ಆತ್ಮವನ್ನು ಕೊಲ್ಲುವದಿಲ್ಲ, ಕೊಲ್ಲಲು ಸಾಧ್ಯವಿಲ್ಲ. ಆತ್ಮವೂ ಸತ್ತುಹೋದರೆ, ಆತ್ಮಹತ್ಯೆ ಮಾಡಿಕೊಂಡ ಜೀವ ಆತ್ಮಹತ್ಯೆಯ ಪಾಪದಿಂದ ಪಿಶಾಚಾದಿ ಜನ್ಮಗಳನ್ನು ಪಡೆಯುವದು ಹೇಗೆ. ಆತ್ಮಹತ್ಯೆ ಮಾಡಿಕೊಂಡ ಜೀವವೇ ಪಿಶಾಚಿಯಾಗುತ್ತದೆ. ಅಂದರೆ ಪಿಶಾಚಜನ್ಮದಲ್ಲಿಯೂ ಅದೇ ಜೀವವಿದೆ. ಹೀಗಾಗಿ ಆತ್ಮಹತ್ಯೆ ಎಂದರೆ ತನ್ನನ್ನು ತಾನು ಕೊಂದು ಕೊಳ್ಳುವದು ಎಂದರ್ಥ. ಆತ್ಮಶ್ರಾದ್ಧ ಎಂದರೂ ಹಾಗೆಯೇ. ತನ್ನ ಶ್ರಾದ್ಧ ತಾನೇ ಮಾಡಿಕೊಳ್ಳುವದು ಎಂದರ್ಥ. ವಿರಕ್ತನಾದ ವ್ಯಕ್ತಿ ಸಂನ್ಯಾಸವನ್ನು ಸ್ವೀಕರಿಸಲು ನಿರ್ಧಾರ ಮಾಡಿದಾಗ ಮಾಡಿಕೊಳ್ಳಬೇಕಾದ ಕ್ರಿಯೆ ಅದು. ಸಂನ್ಯಾಸಿಯಾದ ಬಳಿಕ ಸತ್ತರೆ ದೇಹಕ್ಕೆ ಅಗ್ನಿಸ್ಪರ್ಶವಿಲ್ಲ. ಮತ್ತು ಶ್ರಾದ್ಧವಿಲ್ಲ. ಹೀಗಾಗಿ ಸಂನ್ಯಾಸಸ್ವೀಕಾರಕ್ಕಿಂತ ಮುಂಚೆಯೇ ಆತ್ಮಶ್ರಾದ್ಧವನ್ನು ಮಾಡಿಕೊಳ್ಳಬೇಕು. ಬೇರೆಲ್ಲ ಸಂದರ್ಭಗಳಲ್ಲಿ ವ್ಯಕ್ತಿ ಸತ್ತ ಬಳಿಕ ಅವರ ಮಕ್ಕಳು ಶ್ರಾದ್ಧ ಮಾಡುತ್ತಾರೆ. ಇಲ್ಲಿ ತನಗೆ ತಾನೇ ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಆತ್ಮಶ್ರಾದ್ಧ ಎನ್ನುತ್ತಾರೆ. ಹೀಗೆ, ಆತ್ಮ ಎನ್ನುವ ಶಬ್ದ ಇಲ್ಲಿ ‘ತಾನು’ ಎಂಬ ಅರ್ಥದಲ್ಲ ಪ್ರಯೋಗವಾಗಿದೆ. ಆತ್ಮ ಎನ್ನುವ ಶಬ್ದಕ್ಕೆ ಎಲ್ಲಕಡೆಗೆ ವ್ಯಾಪ್ತ, ಎಲ್ಲದರ ಒಡೆಯ ಎಂದೆಲ್ಲ ಅರ್ಥಗಳೂ ಇವೆ. — ವಿಷ್ಣುದಾಸ ನಾಗೇಂದ್ರಾಚಾರ್ಯ