Prashnottara - VNP024

ದೈವ ಬಲ ಇಲ್ಲದವರನ್ನು ದೇವರು ರಕ್ಷಿಸುತ್ತಾನೆಯೇ?


					 	

ಆಚಾರ್ಯರಿಗೆ ಪ್ರಣಾಮಗಳು. ನನ್ನ ಪ್ರಶ್ನೆ ಇಂತಿದೆ — ಒಂದು ಸನ್ನಿವೇಶ. ಒಬ್ಬ ಮನುಷ್ಯನ ತಾರಾಬಲದಲ್ಲಿ ದೈವಬಲ ಕಡಿಮೆ/ಇಲ್ಲವೇ ಇಲ್ಲ ಅಂತಿದೆ. ಹಾಗಿರುವಾಗ ಕೃಷ್ಣ ಭಗವದ್ಗೀತೆಯಲ್ಲಿ ಹೇಳುವದು — “ನನ್ನನ್ನು ಸ್ಮರಿಸುವವರನ್ನು ನಾನು ಕಾಪಾಡುತ್ತೇನೆ” ಅಂತ. ಈ ಎರಡೂ ವಾಕ್ಯಗಳು ಒಂದಕ್ಕೊಂದು ವಿರುದ್ಧ ಅರ್ಥ ಕೊಡುತ್ತಿವೆ. ದಯವಿಟ್ಟು ಸಂದೇಹ ಪರಿಹರಿಸಿ. — ಚೇತನ್ ರಾಜ್ ರಾವ್. ಪ್ರಶ್ನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು. ತಾರಾಬಲ ಎಂದರೆ ನಕ್ಷತ್ರ ಬಲ. ನಮ್ಮ ಜನ್ಮ ನಕ್ಷತ್ರದಿಂದ ಆರಂಭಿಸಿ, 2,4,6,8,9ನೆಯ ನಕ್ಷತ್ರಗಳು ನಮಗೆ ತಾರಾಬಲವನ್ನು ನೀಡುತ್ತವೆ. 1,3,5,7,ನೆಯ ನಕ್ಷತ್ರಗಳು ನೀಡುವದಿಲ್ಲ. ಹೀಗಾಗಿ ಅದು ಇಲ್ಲಿ ಪ್ರಸ್ತುತವಲ್ಲ. ಜಾತಕದಲ್ಲಿ ದೈವಬಲ ಎಂದು ಇರುತ್ತದೆ. ಗುರು ಬುಧ ಮುಂತಾದ ಗ್ರಹಗಳು ಉತ್ತಮ ಸ್ಥಾನದಲ್ಲಿದ್ದಾಗ, 9 ಮತ್ತು 12ನೆಯ ಮನೆಗಳು ಪ್ರಬಲವಾಗಿದ್ದಾಗ ಆ ವ್ಯಕ್ತಿಗೆ ದೈವಬಲ ಇರುತ್ತದೆ ಎಂದು ಜ್ಯೋತಿಃಶಾಸ್ತ್ರಜ್ಞರು ಹೇಳುತ್ತಾರೆ. ಆ ರೀತಿಯ ಅಥವಾ ಯಾವುದೇ ರೀತಿಯ ದೈವಬಲ ಇಲ್ಲದಾಗ ದೈವ ನಮಗೆ ಸಹಾಯ ಮಾಡುತ್ತದೆಯೇ ಎಂದು ನಿಮ್ಮ ಪ್ರಶ್ನೆಯ ಅಭಿಪ್ರಾಯ ಎಂದು ತಿಳಿದು ಉತ್ತರಿಸಲು ಪ್ರಯತ್ನಿಸುತ್ತೇನೆ. ನೋಡಿ, ಜಾತಕ ಸೂಚನೆ ಮಾಡುವದು ನಾವು ಹಿಂದೆ ಮಾಡಿದ ಕರ್ಮಗಳನ್ನು ಮತ್ತು ನಾವು ಈ ಜನ್ಮದಲ್ಲಿ ಬದುಕುವ ಬಗೆಯನ್ನು. ಆದರೆ, ದೇವರು ಎನ್ನುವದು ಜಾತಕವನ್ನೂ ಮೀರಿದ ಸರ್ವಶಕ್ತ ತತ್ವ. ಭಗವಂತನಿಗೆ ನಾವು ಶರಣು ಹೊಂದಿದಾಗ ಯಾವ ಆಪತ್ತನ್ನು ಪರಿಹರಿಸಲು ದೇವತೆಗಳಿಗೂ ಸಾಧ್ಯವಿಲ್ಲವೋ ಆ ಆಪತ್ತನ್ನು ಪರಿಹರಿಸುತ್ತಾನೆ. ದೇವರನ್ನು ಪ್ರಾರ್ಥಿಸಿದಾಗ ಯಾವ ಸಂಪತ್ತನ್ನು ನೀಡಲು ದೇವತೆಗಳಿಗೂ ಸಾಧ್ಯವಿಲ್ಲವೋ ಅದನ್ನು ನಮಗೆ ಅನುಗ್ರಹಿಸುತ್ತಾನೆ. ದೇವರನ್ನು ಮೊರೆ ಹೊಕ್ಕಾಗ ನಮ್ಮ ಜಾತಕವನ್ನೂ ಮೀರಿ ಭಗವಂತ ನಮ್ಮನ್ನು ರಕ್ಷಿಸುತ್ತಾನೆ. ಉದಾಹರಣೆಗೆ ಮಾರ್ಕಂಡೇಯ ಋಷಿಗಳು, ಸತ್ಯವಾನ ಮುಂತಾದವರು. ಅವರದು ಅಲ್ಪಾಯುಷ್ಯದ ಜಾತಕ. ಆದಕೆ ಮಾರ್ಕಂಡೇಯ ಋಷಿಗಳು, ಸತ್ಯವಾನನ ಪತ್ನಿಯರು ಭಗವಂತನನ್ನು ಕ್ರಮವಾಗಿ ರುದ್ರದೇವರಲ್ಲಿ ಮತ್ತು ಯಮಧರ್ಮನಲ್ಲಿ ಆರಾಧಿಸಿದ್ದಕ್ಕಾಗಿ ಅವರು ದೀರ್ಘಾಯುಷ್ಯವನ್ನು ಪಡೆದುಕೊಂಡರು. ಅಂದರೆ ಜಾತಕದ ಪ್ರಕಾರ ಇದ್ದ ಅಲ್ಪಾಯುಷ್ಯವನ್ನೂ ಮೀರಿ ಪರಮಾತ್ಮ ದೀರ್ಘಾಯುಷ್ಯವನ್ನು ಕರುಣಿಸಿದ. ಹಾಗಾದರೆ ಜಾತಕ ಸುಳ್ಳಾಯಿತೇ ಎಂಬ ಪ್ರಶ್ನೆ ಬರಬಹುದು. ಇಲ್ಲ. ಜಾತಕದ ಎಲ್ಲ ಸುಯೋಗ ದುರ್ಯೋಗಗಳಿಗೂ ಒಂದು ನಿಯಮವಿದೆ. ನಾವು ಹಿರಿಯರ ದ್ರೋಹ ಮಾಡಿದಾಗ, ಪಾಪ ಮಾಡಿದಾಗ, ದೇವರ ನಿಂದೆ ಮಾಡಿದಾಗ ಪಡೆಯಬೇಕಾದ ಸುಯೋಗವನ್ನೂ ಪಡೆಯುವದಿಲ್ಲ. ಗುರು-ದೇವತೆಗಳಲ್ಲಿ ಶ್ರೀಹರಿಯನ್ನು ಆರಾಧಿಸಿದಾಗ ಇರುವ ದುರ್ಯೋಗಗಳೂ ಫಲಪ್ರದವಾಗುವದಿಲ್ಲ ಎಂದು. ಹೀಗಾಗಿ ಜಾತಕವೂ ಸುಳ್ಳಲ್ಲ. ಜಾತಕದಲ್ಲಿ ಯೋಗವಿಲ್ಲದಿದ್ದರೂ ಇಂದ್ರದೇವರನ್ನು ಆರಾಧಿಸಿ ಸೌಂದರ್ಯವನ್ನು ಪಡೆದ ಅಪಾಲಾ ಎಂಬ ಕನ್ಯೆಯ ವೃತ್ತಾಂತ, ದಾರಿದ್ರ್ಯದ ಯೋಗವಿದ್ದರೂ ಶ್ರೀನಿವಾಸನನ್ನು ಆರಾಧಿಸಿ ಸೌಭಾಗ್ಯವನ್ನು ಪಡೆದ ದೇವಶರ್ಮಬ್ರಾಹ್ಮಣನ ವೃತ್ತಾಂತ ಮುಂತಾದವನ್ನು ನಾವು ವೇದ-ಪುರಾಣಗಳಲ್ಲಿ ಕೇಳುತ್ತೇವೆ. ಹೀಗಾಗಿ ದೇವರನ್ನು ಭಕ್ತಿಯಿಂದ ಆರಾಧಿಸಿದಾಗ ನಮ್ಮ ಜಾತಕದಲ್ಲಿರುವ ದುರ್ಯೋಗಗಳನ್ನು ಪರಹರಿಸಿ, ನಮ್ಮ ಹಿಂದಿನ ಪಾಪಕರ್ಮಗಳನ್ನು ವಿನಾಶ ಮಾಡಿ, ಪರಮಾತ್ಮ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ. ನಮ್ಮ ಎಲ್ಲ ದುಃಖಕ್ಕೆ ಕಾರಣ ನಾವು ಮಾಡಿದ ಪಾಪಕರ್ಮಗಳು. ಅವುಗಳು ವಿನಾಶವಾದರೆ ದುಃಖವೇ ಬರುವದಿಲ್ಲ. ನಮ್ಮ ಎಲ್ಲ ಸುಖಕ್ಕೆ ನಾವು ಮಾಡುವ ಭಗವದಾರಧನೆಯೆಂಬ ಸತ್ಕರ್ಮ. ಅದನ್ನು ನಿರಂತರ ಮಾಡುತ್ತಿದ್ದಾಗ ನಾವು ಈ ಭವವನ್ನೇ ಕಳೆದುಕೊಂಡು ಶಾಶ್ವತ ಸುಖವನ್ನು ಅನುಭವಿಸುತ್ತೇವೆ. ದೈವಬಲ ಎಂದರೆ ಮತ್ತೇನಲ್ಲ. ದೇವರ ಅನುಗ್ರಹ. ದೇವರಿಗೆ ಶರಣು ಹೋಗುವದು, ಅವನನ್ನು ಪ್ರಾರ್ಥಿಸುವದು, ಅವನಿಗೆ ನಮಸ್ಕಾರಗಳನ್ನು ಸಲ್ಲಿಸುವದು, ಪರೋಪಕಾರ, ಶಾಸ್ತ್ರದ ಆದೇಶದಂತೆ ಜೀವನ ಸಾಗಿಸುವದು ಮುಂತಾದ ಸತ್ಕರ್ಮಗಳಿಂದ ನಾವು ದೈವಬಲವನ್ನು ಪಡೆಯಲು ಸಾಧ್ಯ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
3873 Views

Comments

(You can only view comments here. If you want to write a comment please download the app.)
 • Sangeetha prasanna,

  9:47 PM , 27/04/2017

  ಗುರುಗಳಿಗೆ ನಮನಗಳು .ಕಳೆದುಹೋದ ವಸ್ತುಗಳ ಪ್ರಾಪ್ತಿಗಾಗಿ ಮಾಡುವ ಕಾರ್ತವೀರ್ಯಾರ್ಜೂನ ಸ್ಟೋತ್ರ ದ ಹಿನ್ನೆಲೆಯನ್ನು ದಯವಿಟ್ಟು ತಿಳಿಸಿ ಕೊಡಿ .ವಸ್ತುಗಳು ಹೇಗೆ ಪ್ರಾಪ್ತಿಯಾಗುತ್ತವೆ .

  Vishnudasa Nagendracharya

  ಬರೆಯುತ್ತೇನೆ. 
 • Chethanaraj Rao M,

  2:28 PM , 27/04/2017

  Dhanyavadagalu.
 • Pramod Karanam,

  7:37 PM , 26/04/2017

  Tumba sundara uttara..acharyara bhava tilidamele bhagavantana smarane yavanige madalu agolvo avanige yenthaha daiva balaviddaroo avanu durdaivee, hagu daiva balavilladiddagoo hari smarane madidava sudaivee yendu anvaya vagutte..
 • Shridhar K Patil,

  4:13 PM , 26/04/2017

  Very nice explanation, 👌sakala grahabala neene sarijaaksha...