ದಾರಿ ಕಾಣದೇ ಇದ್ದಾಗ ಏನು ಪರಿಹಾರ?
ಗುರುಗಳೆ. ನಮಸ್ಕಾರ. ಜೀವನದಲಿ ಹಲವು ಬಾರಿ ಕೆಲವು ಜನರಿಂದ ಕಿರುಕುಳಕ್ಕೆ ಒಳಗಾದ ಮನಸ್ಸು ತಪ್ಪುದಾರಿಯನ್ನು ಯೋಚಿಸುತ್ತದೆ. ಹಾಗೆ ಯೋಚಿಸದಿರಲು ಏನು ಮಾಡಬೇಕು? ಹಾಗೂ ಹಿಂಸೆಗೆ ಒಳಗಾದಾಗ ಏನು ಮಡಬೇಕು? ದಾರಿ ಕಾಣದೆ ಇದ್ದಾಗ ಏನು ಪರಿಹಾರ? — ರಾಘವೇಂದ್ರ ತುಂಬ ಮಾರ್ಮಿಕವಾದ ಪ್ರಶ್ನೆಗಳು. ಕರ್ಮಸಿದ್ಧಾಂತ ಅರ್ಥವಾಗಿರುವ ಮನುಷ್ಯ ತಪ್ಪು ದಾರಿ ತುಳಿಯುವದು ಕಡಿಮೆ. ನೋಡಿ, ಮಾನಸಿಕವಾಗಿಯಾಗಲೀ ಅಥವಾ ದೈಹಿಕವಾಗಿಯಾಗಲೀ ನಮಗೆ ಒಬ್ಬರು ತೊಂದರೆ ಕೊಡುತ್ತಿದ್ದಾರೆ ಎಂದರೆ ನಾವು ಹಿಂದೆ ಆ ಕರ್ಮವನ್ನು ಮಾಡಿದ್ದೆವು ಈಗ ಆ ಕರ್ಮದ ಫಲವನ್ನು ಉಣ್ಣುತ್ತಿದ್ದೇವೆ ಎಂದರ್ಥ. ಏಕೆಂದರೆ, ಯಾವ ಸುಖ ದುಃಖಗಳೂ ಕಾರಣವಿಲ್ಲದೆ ಉಂಟಾಗುವದಿಲ್ಲ. ಈಗ ಒಬ್ಬರು ಹಿಂಸೆ ನೀಡುತ್ತಿದ್ದಾರೆ ಎಂದರೆ ಆ ಹಿಂಸೆಗೆ ಕಾರಣವಾದ ಪಾಪವನ್ನು ನಾವು ಮಾಡಿದ್ದೇವೆ ಎಂದರ್ಥ. ಈಗ ಕಿರುಕುಳಕ್ಕೆ ಒಳಗಾಗಿ ಮತ್ತೆ ತಪ್ಪು ದಾರಿ ಹಿಡಿದು ದ್ವೇಷ ಸಾಧಿಸಲು ಹೊರಟರೆ, ಅಥವಾ ಹಿಂಸೆ ನೀಡಿದವರಿಗೆ ಪ್ರತಿಹಿಂಸೆ ಮಾಡಲು ಹೊರಟರೆ ಆ ಪಾಪ ನಮ್ಮನ್ನು ಮತ್ತೆ ಕಾಡಿಯೇ ಕಾಡುತ್ತದೆ. ಹೀಗಾಗಿ ಮತ್ತೆ ಪಾಪ ಮಾಡಬಾರದು. ಕ್ಷತ್ರಿಯರನ್ನು ಬಿಟ್ಟು ಉಳಿದ ಮೂರೂ ವರ್ಣದವರು ಹೊರಗಿನ ಶತ್ರುಗಳ ಮೇಲೆ ಕ್ಷಮೆಯನ್ನು ಮಾಡಬೇಕು ಎಂದು ಆಚಾರ್ಯರು ತಿಳಿಸುತ್ತಾರೆ — ಕ್ಷಮಾ ಬಾಹ್ಯೇಷು ಶತ್ರುಷು ಎಂದು. ಕ್ಷತ್ರಿಯರೂ ಸಹ ವೈಯಕ್ತಿಕ ಕಾರಣಗಳಿಗಾಗಿ ಪ್ರತಿಹಿಂಸೆ ಮಾಡಬಾರದು. ನ್ಯಾಯ-ಧರ್ಮಗಳ ಆಧಾರದ ಮೇಲೆಯೇ ಪ್ರತಿಹಿಂಸೆಯನ್ನು ಮಾಡಬೇಕು. ಆದ್ದರಿಂದ ಮತ್ತೊಬ್ಬರ ಕಿರುಕುಳವನ್ನು ನಾವೆಷ್ಟು ಸಹನೆ ಮಾಡುತ್ತೇವೆಯೋ ಅಷ್ಟು ಸಾಧನೆಯ ಮಟ್ಟದಲ್ಲಿ ಮೇಲೆರುತ್ತ ಹೋಗುತ್ತೇವೆ. ನಾವು ಕಷ್ಟದಲ್ಲಿದ್ದೇ ಸಾಧನೆ ಮಾಡುವದು ಭಗವಂತನಿಗೆ ಅಪೇಕ್ಷಿತ. ಮೋಕ್ಷದಲ್ಲಿ ಅನಂತ ಸುಖವಿದೆ, ಶತ್ರುಗಳಿಲ್ಲ, ಆಗ ಸಾಧನೆ ಮಾಡು ಎನ್ನುವದಿಲ್ಲ ನಮ್ಮ ಸ್ವಾಮಿ. ನಮಗೆ ಪ್ರತಿಕೂಲ ವಾತಾವರಣ ಇದ್ದಾಗಲೇ ನಾವು ಸಾಧನೆ ಮಾಡಬೇಕು. ಬಾಹ್ಯಶತ್ರುಗಳು ಹಿಂಸೆ, ಅವಮಾನ ಮಾಡಿದಾಗಲೂ ನಾವು ಅದಕ್ಕೆ ಸ್ಪಂದಿಸದೇ ಇದ್ದಾಗ, ಇಟ್ಟಾಂಗೆ ಇರುವೆನೋ ಹರಿಯೇ ಎಂದು ನಿರ್ಣಯಿಸಿ, ನಮ್ಮ ಪಾಪದ ಫಲವನ್ನು ಹಿಂಸೆ ಅವಮಾನಗಳ ರೂಪದಲ್ಲಿ ಉಣ್ಣುತ್ತಿದ್ದೇವೆ ಎಂಬ ಎಚ್ಚರಕ್ಕೆ ಬಂದಾಗ ನಾವು ಸಾಧನೆಯಲ್ಲಿ ತುಂಬ ದೊಡ್ಡ ಎತ್ತರವನ್ನು ಮುಟ್ಟಿದ್ದೇವೆ ಎಂದರ್ಥ. ಆದರೆ ಕೆಲವು ಬಾರಿ ಹೊರಗಿನವರು ತುಂಬ ತೊಂದರೆ ಕೊಡುತ್ತಾರೆ. ದಾರಿ ಕಾಣದೇ ನಿಲ್ಲುತ್ತೇವೆ. ಆಗ ಏನು ಮಾಡಬೇಕು ಎಂದು ಕೇಳಿದ್ದೀರಿ. ಒಂದೇ ಉತ್ತರ, ಭಗವಂತನಿಗೆ ಶರಣು ಹೋಗುವದು. ಸ್ವಾಮಿ, ನನ್ನ ಮನಸ್ಸು ತಪ್ಪು ಹೆಜ್ಜೆ ಇಡಲು ಪ್ರೇರಿಸುತ್ತಿದೆ. ಪ್ರತೀಕಾರದ ಮನಸ್ಸಾಗುತ್ತಿದೆ. ಕಾಪಾಡು. ಈ ಹಿಂಸೆ, ಅವಮಾನಗಳನ್ನು ಸಹಿಸುವ ಸಾಮರ್ಥ್ಯ ನೀಡು ಎಂದು ಅನನ್ಯವಾಗಿ ಪ್ರಾರ್ಥಿಸಬೇಕು. ದ್ವಾದಶಸ್ತೋತ್ರಗಳ ಪಠಣ ಮತ್ತು ಹರಿಕಥಾಮೃತಸಾರದ ಪಠಣ ಇಂತಹ ಸಂದರ್ಭದಲ್ಲಿ ಬಹಳ ಉಪಕಾರಿಯಾಗುತ್ತದೆ. ಉದ್ವಿಗ್ನಗೊಂಡ ಮನಸ್ಸನ್ನು ಶಾಂತ ಗೊಳಿಸುವ ಶಕ್ತಿ ಈ ಕೃತಿಗಳಿಗಿದೆ. ಹೀಗಾಗಿ ಅದನ್ನು ಪಠಿಸಿದಲ್ಲಿ ಮನಸ್ಸು ಸರಿಯಾದ ದಾರಿಯಲ್ಲಿ ಯೋಚಿಸುತ್ತದೆ. ಮತ್ತು, ಹರಿ-ಗುರುಗಳ ಸೇವೆ. ಹಿಂಸೆಯಾದಾಗಷ್ಟೇ ಅಲ್ಲ, ಯಾವುದೇ ವಿಷಯದಲ್ಲಾದರೂ ದಾರಿ ಕಾಣದೇ ನಿಂತಿದ್ದಾಗ ತಿರುಪತಿ, ಉಡುಪಿಗಳಿಗೆ ಹೊರಟು ಬಿಡಬೇಕು. ಮಂತ್ರಾಲಯ-ಸ್ವಾದಿಗಳಿಗೆ ಸೇವೆಗಾಗಿ ತೆರಳಿಬಿಡಬೇಕು. ತಿರುಪತಿಯ ಬೆಟ್ಟವನ್ನು ಹತ್ತುವದರಿಂದ, ಉಡುಪಿಯಲ್ಲಿ ಭಕ್ತಿಯಿಂದ ಊಟ ಮಾಡುವದಿರಿಂದ, ಶ್ರೀಮದ್ ವಾದಿರಾಜಗುರುಸಾರ್ವಭೌಮರಿಗೆ ಮಂತ್ರಾಲಯಪ್ರಭುಗಳಿಗೆ ಮನದಣಿಯೆ ಮೈದಣಿಯೆ ನಮಸ್ಕಾರಗಳನ್ನು ಸಲ್ಲಿಸುವದರಿಂದ ಬೆಟ್ಟದಂತಹ ಸಮಸ್ಯೆಗಳೂ ಕರಗುತ್ತವೆ. ದಾರಿ ಕಾಣುತ್ತದೆ. ಹರಿ-ಗುರುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಾರೆ. ಅಂಧೋಹಂ ಕರುಣಾಸಿಂಧೋ ವೀಕ್ಷೇ ನ ಕ್ಷೇಮಪದ್ಧತಿಮ್ । ಇಂದಿರೇಶ ಕರಂ ಗೃಹ್ಣನ್ ವರ್ತಯಾನಿಂದ್ಯವರ್ತ್ಮನಿ ।। ಎಂಬ ಶ್ರೀಮದ್ವಾದಿರಾಜಗುರುಸಾರ್ವಭೌಮರು ಅನುಗ್ರಹಿಸಿದ ದಿವ್ಯಮಂತ್ರವನ್ನು [ಇದರ ಅರ್ಥವನ್ನು ವಿವರಿಸಿದ್ದೇನೆ] ಪಠಿಸುವದರಿಂದ ಸ್ವಾಮಿ ನಮಗೆ ದಾರಿ ತೋರುತ್ತಾನೆ, ಕೈಹಿಡಿದು ಸರಿದಾರಿಯಲ್ಲಿ ನಡೆಸುತ್ತಾನೆ. ಎಷ್ಟಾದರೂ ಆ ನಮ್ಮ ಒಡೆಯ ನಮ್ಮ ಜೀವದ ಗೆಳೆಯನಲ್ಲವೇ? ಕಾಪಾಡಿಯೇ ಕಾಪಾಡುತ್ತಾನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ