ಕೇವಲ ತಾಯಿಯ ತೀರ್ಥಶ್ರಾದ್ಧ ಮಾಡಬಹುದೇ?
ತಂದೆ ಬದುಕಿದ್ದು ತಾಯಿ ಮೃತರಾಗಿದ್ದಲ್ಲಿ ಕಾಶಿ ಮೊದಲಾದ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಬಹುದೇ? — ವಿನಾಯಕ್ ಕುಲಕರ್ಣಿ ತಂದೆ ಇರುವವರು ತೀರ್ಥವಿಧಿ ಮಾಡಬಾರದು. ಆದರೆ ತಾಯಿಯ ಶ್ರಾದ್ಧವನ್ನು ಮಾಡಬಹುದು. ಇಲ್ಲಿ ತಿಳಿಯಬೇಕಾದ ಎರಡು ವಿಷಯಗಳಿವೆ. ತೀರ್ಥವಿಧಿ, ತೀರ್ಥಶ್ರಾದ್ದ ಎಂದರೆ ಸರ್ವಪಿತೃಗಳ ಶ್ರಾದ್ಧ. ನಾವು ಮಹಾಲಯದಲ್ಲಿ ಮಾಡುತ್ತೇವಲ್ಲ, ಹಾಗೆ. ತಂದೆ ಇಲ್ಲದವರು ಮಾತ್ರ ಇದನ್ನು ಮಾಡಲು ಸಾಧ್ಯ. ತಂದೆ ಬದುಕಿದ್ದು ತಾಯಿ ಬದುಕಿಲ್ಲವಾದರೆ ಇದನ್ನು ಮಾಡಲು ಆಗುವದಿಲ್ಲ. ತೀರ್ಥವಿಧಿಯಲ್ಲಿ, ಮಹಾಲಯದಲ್ಲಿ ಸರ್ವಪಿತೃಗಳಿಗೂ ಪಿಂಡ ಉಂಟು.ಇದನ್ನು ಮಾಡುವ ಅಧಿಕಾರ ತಂದೆ ಬದುಕಿರುವಾಗ ಮಗನಿಗೆ ಸರ್ವಥಾ ಬರುವದಿಲ್ಲ. ತಾಯಿ ಮಾತ್ರ ತೀರಿಕೊಂಡಿದ್ದರೆ ತೀರ್ಥಕ್ಷೇತ್ರಗಳಿಗೆ ಹೋದಾಗ ತಾಯಿಯ ಶ್ರಾದ್ಧವನ್ನು ಮಾತ್ರ ಮಾಡಬಹುದು. ಆದರೆ ಅದನ್ನು ತೀರ್ಥಶ್ರಾದ್ಧ, ತೀರ್ಥವಿಧಿ ಎಂದು ಕರೆಯಲಾಗುವದಿಲ್ಲ. ಶ್ರೇಷ್ಠರಾದ ಬ್ರಾಹ್ಮಣರು ದೊರೆತಾಗ, ಶ್ರೇಷ್ಠವಾದ ಪರ್ವಕಾಲ ಬಂದಾಗ, ಶ್ರೇಷ್ಠ ಕ್ಷೇತ್ರ ದೊರೆತಾಗ ಮಾಡುವ ಶ್ರಾದ್ಧದಂತೆ ಅದು. ಮಹಾಲಯದಲ್ಲಿ ಮಾಡುವ ಅವಿಧವಾನವಮೀ ಶ್ರಾದ್ಧದಂತೆ ಮೂರು ಪಿಂಡಗಳನ್ನು ಮಾತ್ರ ಇಟ್ಟು (ಮಾತೃ,ಪಿತಾಮಹಿ, ಪ್ರಪಿತಾಮಹೀ) ಶ್ರಾದ್ಧವನ್ನು ಮಾಡಬಹುದು. ಅವಿಧವಾನವಮಿಗೆ ಅನ್ವಯಿಸುವ ಎಲ್ಲ ವಿಧಿಗಳೂ ಇಲ್ಲಿ ಅನ್ವಯಿಸುತ್ತವೆ. ಮಾತೃಗಯಾದಲ್ಲಿ ಶ್ರಾದ್ಧವನ್ನು ಮಾಡುವಾಗ ಮಾತ್ರ ಹದಿನಾರು ಪ್ರತ್ಯೇಕ ಪಿಂಡಗಳನ್ನಿಟ್ಟು ಶ್ರಾದ್ಧ ಮಾಡಬೇಕು. ತಂದೆ ಬದುಕಿದ್ದಾಗ ತಾಯಿಯ ಶ್ರಾದ್ಧವನ್ನು ತೀರ್ಥಕ್ಷೇತ್ರಗಳಲ್ಲಿ ಮಾಡಬಾರದು ಎನ್ನುವ ವಚನ ನನ್ನ ಕಣ್ಣಿಗೆ ಕಂಡಿಲ್ಲ. ಆ ರೀತಿಯಾದ ನಿಷೇಧವಿದ್ದಲ್ಲಿ ಮಾಡತಕ್ಕದ್ದಲ್ಲ. ಮಾತೃಗಯಾದ ಶ್ರಾದ್ಧವಂತೂ ಸುಪ್ರಸಿದ್ಧ. ಹೀಗಾಗಿ ನಿಷೇಧವಿಲ್ಲ ಎಂದೇ ತೋರುತ್ತದೆ. ತಾಯಿಯ ಮಹಾ ಉಪಕಾರವನ್ನು ಸ್ಮರಿಸಲೋಸುಗ ಎಲ್ಲ ಕ್ಷೇತ್ರಗಳಲ್ಲಿಯೂ ಮಾಡಬಹುದು. ಇನ್ನು ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೇ ತೀರ್ಥಯಾತ್ರೆ ಮಾಡುತ್ತಿರುವಾಗ ಮಗ ತಾಯಿಯ ಶ್ರಾದ್ಧವನ್ನು ಪ್ರತ್ಯೇಕವಾಗಿ ಮಾಡುವಂತಿಲ್ಲ. ತಂದೆ ಮಾಡುವ ತೀರ್ಥಶ್ರಾದ್ಧದಲ್ಲಿಯೇ ಅವರ ಪತ್ನಿಗೂ ಪಿಂಡಪ್ರದಾನ ಆಗಿಯೇ ಆಗುತ್ತದೆ. ತಂದೆಯ ಕಾರ್ಯಕ್ಕೆ ಸಹಾಯ ಮಾಡಬೇಕು. ಯಾರೇ ಸತ್ತಾಗಲೂ ಒಂದು ವರ್ಷ ಆಗುವವರೆಗೆ ಅವರ ತೀರ್ಥಶ್ರಾದ್ಧ, ಮಹಾಲಯಶ್ರಾದ್ಧ, ದರ್ಶಶ್ರಾದ್ಧಗಳನ್ನು ಮಾಡುವಂತಿಲ್ಲ. ಒಂದು ವರ್ಷದ ನಂತರವೇ ಮಾಡಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ