ಅಕ್ಷಯತೃತೀಯಾದಂದು ಶುಭಕರ್ಮ ಮಾಡಬಹುದೇ?
ಆಚಾರ್ಯರೇ ನಮಸ್ಕಾರ. ನನ್ನ ಪ್ರಶ್ನೆ: ಅಕ್ಷಯ ತದಿಗೆಯಂದು ಮಗುವಿಗೆ ಚೌಲ ಮಾಡಿಸ ಬಹುದೇ? — ಜಯರಾಮಾಚಾರ್ಯ ಅಕ್ಷಯತೃತೀಯಾ ಶುಭಕರ್ಮಗಳಿಗೆ ಅತ್ಯುತ್ತಮ ಕಾಲವೆಂದು ಭಾವಿಸಿ ಆ ದಿವಸ ಮದುವೆ ಮುಂಜಿಗಳನ್ನು ಜನರು ಮಾಡುತ್ತಾರೆ. ಆದರೆ ಆ ದಿವಸ ಪರ್ವಕಾಲವಾದ್ದರಿಂದ ಮತ್ತು ವಿಶೇಷವಾಗಿ ಶ್ರಾದ್ಧಕ್ಕಾಗಿ ವಿಹಿತವಾದ ಕಾಲ. ಹೀಗಾಗಿ ಶುಭಕರ್ಮಗಳನ್ನು ಮಾಡಲು ಬರುವದಿಲ್ಲ. ಕಾರಣ, ಆ ದಿವಸ ತಂದೆ ಇಲ್ಲದವರು ತಿಲತರ್ಪಣವನ್ನು ನೀಡಲೇ ಬೇಕು. ಶುಭಕರ್ಮಗಳನ್ನು ಮಾಡಿದ ದಿವಸ ತಿಲತರ್ಪಣವನ್ನು ನೀಡುವ ಪದ್ಧತಿಯಿಲ್ಲ. ಇನ್ನು ಚೌಲ ಎಂದರೆ ಕ್ಷೌರದಿಂದ ಕೂಡಿದ ಕರ್ಮ. ಶ್ರಾದ್ಧಕ್ಕೆ ಯೋಗ್ಯವಾದ ಯಾವ ದಿವಸವೂ ಕ್ಷೌರವನ್ನು ಮಾಡಿಸಿಕೊಳ್ಳಬಾರದು. ಹೀಗಾಗಿ ಚೌಲವನ್ನಾಗಲೀ ಅಥವಾ ಯಾವುದೇ ಶುಭಕರ್ಮವನ್ನಾಗಲೀ ಮಾಡಲು ಬರುವದಿಲ್ಲ. ಈ ದಿವಸ ಮಾಡುವ ಶ್ರಾದ್ಧ, ದಾನ, ಜಪ, ತಪಸ್ಸು ಅಕ್ಷಯವಾಗುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆಯೇ ಹೊರತು ಈ ದಿವಸ ಮಂಗಳಕಾರ್ಯಗಳನ್ನು ಮಾಡಬಹುದು ಎಂದು ವಿಧಿಸುವದಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ