ಏಕಾದಶೀ ಪೂಜೆಯ ವಿಶೇಷತೆಗಳೇನು?
ನಮಸ್ಕಾರ. ದಿನನಿತ್ಯದ ಪೂಜೆಗೆ ಮತ್ತು ಏಕಾದಶೀಯ ಪೂಜೆಗೆ ಏನೇನು ವ್ಯತ್ಯಾಸಗಳಿವೆ ಎಂದು ತಿಳಿಸಿ. ದೇವಪೂಜೆಯ ಸರಣಿಯಲ್ಲಿ ನೀವಿದನ್ನ ಹೇಳಿಯೇ ಹೇಳುತ್ತೀರಿ ಅಂತ ಭರವಸೆ ಇದ್ದೇ ಇದೆ. ಆದರೂ ತಾತ್ಕಾಲಿಕವಾಗಿ ಈಗೂಮ್ಮೆ ಸಂಕ್ಷಿಪ್ತವಾಗಿ ಹೇಳಿಕೊಟ್ಟರೆ ಉಪಕಾರವಾಗುವುದು. — ಜಯತೀರ್ಥ, ಹುಬ್ಬಳ್ಳಿ. ಏಕಾದಶೀಯಂದು ದೇವರಿಗೆ ಗಂಧೋದಕದ ಅಭಿಷೇಕ ಪಂಚಾಮೃತ ಅಭಿಷೇಕ ಅನ್ನ ಮುಂತಾದ ಯಾವುದೇ ಬೇಯಿಸಿದ ಪದಾರ್ಥಗಳ ನೈವೇದ್ಯ ಮಾಡಬಾರದು. ಅಭಿಷೇಕದ ಕಲಶಕ್ಕೆ ತುಳಸಿ ಮಾತ್ರ ಹಾಕಬೇಕು. ಹೂಗಳನ್ನೂ ಹಾಕಬಾರದು. ಲಕ್ಷ್ಮ್ಯಾದಿ ದೇವತೆಗಳಿಗೆ ಗಂಧ ಸಮರ್ಪಣೆ ಇಲ್ಲ ಯಾವ ರೀತಿಯ ನೈವೇದ್ಯವೂ ಇರುವದಿಲ್ಲ. ಹೂಗಳಿಂದ ಅರ್ಚನೆ, ಅಲಂಕಾರ ಇಲ್ಲ. (ದೇವರಿಗೆ ಮಾತ್ರ ಹೂಗಳಿಂದ ಅರ್ಚನೆ ಮಾಡಬಹುದು. ಲಕ್ಷ್ಮೀಸಮೇತವಾದ ಪ್ರತಿಮೆಗೂ ಮಾಡಬಹುದು. ಪ್ರತ್ಯೇಕವಾಗಿ ಶಂಖ ಮತ್ತು ಲಕ್ಷ್ಮೀಪ್ರತಿಮೆಗಳಿಗೆ ವಾಯುದೇವರು ಮುಂತಾದವರಿಗೆ ಸಮರ್ಪಿಸುವಂತಿಲ್ಲ) ಗುರುಗಳಿಗೂ ಪಂಚಾಮೃತ, ಅಲಂಕಾರ, ಅರ್ಚನೆ, ಪಾದಪೂಜೆಗಳು ಇರುವದಿಲ್ಲ. ಏಕಾದಶಿಯಂದು ಸರ್ವಥಾ ಗುರುಗಳಿಗೆ ಪಾದಪೂಜೆ ಮಾಡಬಾರದು. ಕಲಶ ಪೂಜೆ, ಶಂಖಪೂಜೆಗಳಲ್ಲಿ ಕಲಶ ಶಂಖಗಳಿಗೆ ಗಂಧ, ಅರ್ಚನೆ, ನೈವೇದ್ಯಗಳು ಇಲ್ಲ. ನಮಗೆ ನಿರ್ಮಾಲ್ಯ ತೀರ್ಥವೂ ಒಂದೇ ಬಾರಿ. ತೀರ್ಥವೂ ಒಂದೇ ಬಾರಿ. ತುಳಸಿಯನ್ನು ತಿನ್ನಬಾರದು, ಕಿವಿಯಲ್ಲಿ ಮಾತ್ರ ಇಟ್ಟುಕೊಳ್ಳಬೇಕು. ವಾಯುದೇವರ ತೀರ್ಥವನ್ನು ಸ್ವೀಕರಿಸಬಾರದು. ಶಂಖೋದಕದ ಪ್ರೋಕ್ಷಣೆ ಉಂಟು. ಅಂಗಾರ ಮಾತ್ರ, ಅಕ್ಷತೆ ಇಲ್ಲ. ಏಕಾದಶಿಯಂದು ಸ್ನಾನ ಮಾಡುವಾಗ ತೀರ್ಥಾಭಿಮಾನಿ ದೇವತೆಗಳಿಗೆ ಅರ್ಘ್ಯವನ್ನು ನೀಡಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ