ತಂಬಾಕು ಸೇವಿಸಬಹುದೇ?
ಶ್ರೀ ಗಣೇಶಾಯ ನಮಃ. ಆಚಾರ್ಯರೆ ಬ್ರಾಹ್ಮಣರಿಗೆ ತಂಬಾಕು ಸೇವಿಸಲು ಶಾಸ್ರ್ತದಲ್ಲಿ ಅನುಮತಿ ಇದೆಯೇ? — ಮಂಜುನಾಥ ಯಾದವಾಡೆ ಸರ್ವಥಾ ಇಲ್ಲ. ತಂಬಾಕು ನಿಷಿದ್ಧ ಪದಾರ್ಥ. ಹೆಂಡ ಕುಡಿಯುವದು ಎಷ್ಟು ನಿಷಿದ್ಧವೋ, ಅಷ್ಟೇ ನಿಷಿದ್ಧ ತಂಬಾಕು ಸೇವಿಸುವದು. ತಂಬಾಕು ದೂರ ಉಳಿಯಿತು, ಎಲೆ ಸುಣ್ಣ ಗಳಿಲ್ಲದೇ ಕೇವಲ ಅಡಿಕೆಯನ್ನೂ ಸಹ ತಿನ್ನಬಾರದು. (ಕೇವಲ ಪ್ಯಾಕೇಟಿನ ಅಡಿಕೆಯಲ್ಲ. ಸಮಾರಂಭಗಳಲ್ಲಿ ತಾಂಬೂಲ ಕೊಡಬೇಕಾದರೆ, ರುಚಿಯಾಗಿರುತ್ತದೆ ಎನ್ನುವ ಕಾರಣಕ್ಕೆ ಕೇವಲ ಅಡಿಕೆಯನ್ನು ತಿನ್ನುತ್ತಾರಲ್ಲ, ಅದೂ ಸಹ ತಪ್ಪು) ಎಲೆ ಸುಣ್ಣಗಳಿಲ್ಲದೆ ಬರಿಯ ಅಡಿಕೆಯನ್ನು ತಿಂದರೆ ಅಂತ್ಯಕಾಲಕ್ಕೆ ಹರಿಯ ಸ್ಮರಣೆ ಉಂಟಾಗುವದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಅನಿಧಾಯ ಮುಖೇ ಪರ್ಣಂ ಪೂಗಂ ಖಾದಯತೇ ಪರಮ್ ಮತಿಭ್ರಂಶಾತ್ತು ದರಿದ್ರಃ ಸ್ಯಾತ್ ಅಂತೇ ನ ಸ್ಮರತೇ ಹರಿಮ್ ಮುಖೇ ಪರ್ಣಂ ಅನಿಧಾಯ ಎಲೆಯನ್ನು ನೀಡದೇ) ಪರಂ ಬೇರೆಯವರಿಗೆ ಪೂಗಂ ಖಾದಯತೇ ಅಡಿಕಿ ತಿನ್ನಿಸಿದರೆ ಮತಿಭ್ರಂಶವುಂಟಾಗಿ ದರಿದ್ರನಾಗುತ್ತಾನೆ ಮತ್ತು ಅಂತ್ಯಕಾಲದಲ್ಲಿ ವಿಷ್ಣುಸ್ಮರಣೆ ಒದಗುವದಿಲ್ಲ. ಹೀಗಾಗಿ ತಿನ್ನಲು ಕೇವಲ ಅಡಿಕೆಯನ್ನು ನೀಡಬಾರದು. ತಾಂಬೂಲವನ್ನೇ ನೀಡಬೇಕು. ಮತ್ತು, ತಾನೂ ಸಹ ಎಂದಿಗೂ ಕೇವಲ ಅಡಿಕೆಯನ್ನು ತಿನ್ನಬಾರದು. ಭಗವಂತನಿಗೆ ಸಮರ್ಪಿಸಿ ನಾವು ಸ್ವೀಕರಸಿಬಹುದಾದ ಅಡಿಕೆಗೇ ಇಷ್ಟು ನಿಯಮವಿದೆ. ತಂಬಾಕಂತೂ ಸರ್ವಥಾ ನಿಷಿದ್ಧ. — ವಿಷ್ಣುದಾಸ ನಾಗೇಂದ್ರಾಚಾರ್ಯ