ಸ್ತೋತ್ರಗಳನ್ನು ಮನಸ್ಸಿನಲ್ಲಿ ಸದಾ ಹೇಳಬಹದೇ?
ಆಚಾರ್ಯರಿಗೆ ನಮಸ್ಕಾರ. ಶ್ರೀ ವೆಂಕಟೇಶ್ವರ ಸ್ತೋತ್ರ. ಶ್ರೀ ರಾಘವೇಂದ್ರ ಸ್ವಾಮಿ ಸೋತ್ರ ಮನಸ್ಸಿನಲ್ಲಿ ಯಾವಾಗ ಬೇಕಾದರೂ ಹೇಳಬಹುದ? ದಯವಿಟ್ಟು ತಿಳಿಸಿ. — ಉದ್ಯಾವರ ನಾಗರಾಜ್ ಹೇಳಬಾರದು. ಸ್ತೋತ್ರಗಳನ್ನು ಶುದ್ದವಾದ ಕ್ರಮದಲ್ಲಿಯೇ ಪಠಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ತಿಳಿಯಬಹುದಾದ ಅನೇಕ ವಿಷಯಗಳಿವೆ, ವಿವರಿಸುತ್ತೇನೆ. ಕೇವಲ ಶಬ್ದಗಳನ್ನು ಜೋಡಿಸಿದರೆ ಅದು ಸ್ತೋತ್ರವಾಗುವದಿಲ್ಲ, ರಚನೆ ಮಾಡುವ ಮಹಾನುಭಾವರು ಅ ಶಬ್ದಗಳಲ್ಲಿ ತತ್ವಾಭಿಮಾನಿದೇವತೆಗಳ ಮತ್ತು ಶ್ರೀಹರಿಯ ಸನ್ನಿಧಾನವನ್ನು ತುಂಬಿದಾಗ ಮಾತ್ರ ಅದು ಸ್ತೋತ್ರ ಎಂದು ಕರೆಸಿಕೊಳ್ಳುತ್ತದೆ. ಸನ್ನಿಧಾನ ಎಷ್ಟು ಅಧಿಕವೋ ಅಷ್ಟು ಸ್ತೋತ್ರದ ಮಾಹಾತ್ಮ್ಯ ಅತ್ಯಧಿಕವಾಗುತ್ತದೆ. ಸಂಗೀತಕ್ಕೆ ಸಾಹಿತ್ಯಕ್ಕೆ ಅನುಗುಣವಾಗಿ ಒಂದು ಹಾಡನ್ನು ರಚನೆ ಮಾಡಬಹುದು, ಆದರೆ ಅದು ದಾಸಸಾಹಿತ್ಯದ ಹಾಡಾಗುವದಿಲ್ಲ. ಅದರಲ್ಲಿ ದೈವೀ ಶಕ್ತಿಯ ಸನ್ನಿಧಾನ ಬರುವದಿಲ್ಲ. ನೀವು ನೋಡಿ, ತುಂಬ ದುಃಖದಲ್ಲಿದ್ದಾಗ ಶ್ರೀ ಹರಿಕಥಾಮೃತಸಾರವನ್ನು ಪಠಿಸಿದಲ್ಲಿ ಮನಸ್ಸಿನ ದುಃಖ ನಿವಾರಣೆಯಾಗುತ್ತದೆ. ಮಧ್ವವಿಜಯದ ಪಠಣ ಮಾಡಿದಾಗ ದುಃಖ ದುಮ್ಮಾನಗಳು ದೂರವಾಗಿ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ. ರಾಯರ ಸ್ತೋತ್ರ, ವಾಯುಸ್ತುತಿಗಳನ್ನು ಪಠಿಸಿದಾಗ ಆಪತ್ತುಗಳಿಂದ ಪಾರಾಗುತ್ತೇವೆ. ಯಾರೋ ಬರೆದ ಕವನಗಳಿಗೆ, ಕೃತಿಗಳಿಗೆ ಈ ಶಕ್ತಿ ಬರಲು ಸಾಧ್ಯವಿಲ್ಲ. ಆ ಶಕ್ತಿ ಬರುವದು ಬರೆಯುವವರಿಗೆ ಇರುವ ಭಕ್ತಿಯ ಸಾಮರ್ಥ್ಯದಿಂದ. ನಾವು ಮಧ್ವಶಾಸ್ತ್ರದ ಹತ್ತಾರು ಪ್ರಮೇಯಗಳನ್ನು ನಿರೂಪಿಸಿ ಒಂದು ಅದ್ಭುತ ಕೃತಿಯನ್ನು ಬರೆದರೂ, ಶ್ರೀ ಪುರಂದರದಾಸಾರ್ಯರ, ಶ್ರೀ ಕನಕದಾಸಾರ್ಯರ, ಶ್ರೀ ವಿಜಯದಾಸಾರ್ಯಾದಿ ಮಹಾನುಭಾವರ ಕೃತಿಗಳಿಗೆ ಸಮಾನವಾಗುವದೇ ಇಲ್ಲ. ಕಾರಣ, ಅವರು ಸಾಕ್ಷಾದ್ ದೇವತೆಗಳ ಅವತಾರ, ಅವರಲ್ಲಿರುವ ಭಕ್ತಿ ಜ್ಞಾನಾದಿ ಗುಣಗಳಿಗೂ ನಮ್ಮಲ್ಲಿರುವ ಗುಣಗಳಿಗೂ ಮೇರು ಸಾಸಿವೆಗಳಿಗಿರುವಷ್ಟು ಅಂತರವಿದೆ. ಇನ್ನೂ ವಿಶದವಾಗಿ ಹೇಳಬೇಕೆಂದರೆ, ಯಾವುದೋ ಒಬ್ಬ ಅದ್ಭುತ ಕುಶಲಕರ್ಮಿಯಾದ ಶಿಲ್ಪಿ ಉಡುಪಿ, ತಿರುಪತಿಗಳಲ್ಲಿರುವ ಪ್ರತಿಮೆಗಿಂತ ಅತ್ಯಂತ ಸುಂದರವಾದ ಮನಮೋಹಕವಾದ ಪ್ರತಿಮೆಯನ್ನು ನಿರ್ಮಿಸಬಹುದು, ಅಥವಾ ಬಂಗಾರ ರತ್ನಗಳಂತಹ ಅನರ್ಘ ಪದಾರ್ಥಗಳಿಂದ ನಿರ್ಮಿಸಬಹುದು. ಆದರೂ ಆ ಕ್ಷೇತ್ರಗಳಲ್ಲಿರುವ ಆ ಪ್ರತಿಮೆಗಳಿಗೂ ಈ ವ್ಯಕ್ತಿ ನಿರ್ಮಿಸಿದ ಪ್ರತಿಮೆಗೂ ಸಾಮ್ಯ ಬರಲು ಹೇಗೆ ಸಾಧ್ಯವೇ ಇಲ್ಲವೋ ಹಾಗೆ ಮಹಾನುಭಾವರು ರಚಿಸಿದ ಸ್ತೋತ್ರ, ಪದ್ಯಗಳಿಗೂ ನಾವು ರಚಿಸಿದ ಕೃತಿಗಳಿಗೂ ಸಾಮ್ಯ ಬರಲು ಸಾಧ್ಯವೇ ಇಲ್ಲ. ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರ ಸ್ತೋತ್ರವನ್ನೇ ತೆಗೆದುಕೊಳ್ಳಿ. ಶ್ರೀ ಅಪ್ಪಣಾಚಾರ್ಯರು ಆ ಸ್ತೋತ್ರವನ್ನು ರಚಿಸಿ ಗುರುಗಳ ಮುಂದೆ ಅರ್ಪಿಸಿದಾಗ ವೃಂದಾವನದಲ್ಲಿನ ಶ್ರೀ ಹಯಗ್ರೀವದೇವರೇ ನುಡಿದರು — “ಸಾಕ್ಷೀ ಹಯಾಸ್ಯೋತ್ರ ಹಿ” ಎಂದು. ಈ ಮಹಿಮೆ ನಮ್ಮ ಮಾತುಗಳಿಗೆ ಬರಲು ಸಾಧ್ಯವೇ? ಹಾಗೆ, ಶ್ರೀಮದ್ ವಾದಿರಾಜಗುರುಸಾರ್ವಭೌಮರು, ನಮ್ಮ ಮೇಲೆ ಪರಮಾನುಗ್ರಹ ಮಾಡಿ ವೇದಾರ್ಥಗಳನ್ನೊಳಗೊಂಡ ಶ್ರೀಶಗುಣದರ್ಪಣ ಮುಂತಾದ ಸ್ತೋತ್ರಗಳನ್ನು ರಚಿಸಿದ್ದಾರೆ. ಅವುಗಳ ಪಠಣದಿಂದ ಮಹತ್ತರ ಫಲವನ್ನು ಇವತ್ತಿಗೂ ಪಡೆಯುತ್ತಿದ್ದೇವೆ. ಈಗ ಪ್ರಶ್ನೆಯನ್ನು ಕೈಗೆತ್ತಿಕೊಳ್ಳೋಣ. ಇಂತಹ ಮಹಾಮಹಿಮೋಪೇತವಾದ ಸ್ತೋತ್ರಗಳನ್ನು ನಾವು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಹೇಗೆ ಪಠಿಸುವದು? ರಾಷ್ಟ್ರಗೀತೆಯನ್ನು ಹಾಡಬೇಕಾದರೇ ಇಂತಿಂತಹ ನಿಯಮಗಳಲ್ಲಿ ಹಾಡಬೇಕು, ಹಾಡಬೇಕಾದರೆ ಕುಳಿತುಕೊಂಡಿರಬಾರದು ಎದ್ದು ನಿಲ್ಲಬೇಕು ಇತ್ಯಾದಿ ನಿಯಮಗಳಿರುವಾಗ ನಮ್ಮ ಜೀವವನ್ನೇ ಉದ್ಧಾರ ಮಾಡುವ ಸ್ತೋತ್ರಗಳನ್ನು ನಾವು ಪಠಿಸಬೇಕಾದರೆ ನಿಯಮಗಳನ್ನು ಪಾಲಿಸಲೇಬೇಕಲ್ಲವೆ. ಮತ್ತು ಈ ಸ್ತೋತ್ರಗಳ ಪಠಣವನ್ನು ನಾವು ಪಾರಾಯಣ ಎನ್ನುತ್ತೇವೆ. ಪಠಣ ಎಂದರೆ ಓದುವದು. ಯಾವ ಪಠಣದಿಂದ ಪರನಾದ ಶ್ರೀಹರಿ ದೊರೆಯುತ್ತಾನೆಯೋ ಅದು ಪಾರಾಯಣ. ಇಂತಹ ಪಾರಾಯಣವನ್ನು ನಾವು ಶುದ್ಧರಾಗಿರುವಾಗಲೇ ಮಾಡತಕ್ಕದ್ದು. ವಾಹನಗಳಲ್ಲಿ ಪ್ರಯಾಣ ಮಾಡುವಾಗ, ಜನಜಂಗುಳಿಯಲ್ಲಿರುವಾಗ ದೇಹ ಮೈಲಿಗೆಯಾಗಿರುತ್ತದೆ, ಮೂತ್ರ ವಿಸರ್ಜನೆ ಮಾಡಿ ಶುದ್ದರಾಗದ ಜನರಿಂದ ಹಿಡಿದು ಸೂತಕದ ಮೈಲಿಗೆ ಇರುವ ಜನರ ವರೆಗಿನ ಎಲ್ಲರ ಮೈಲಿಗೆಯ ಸಂಪರ್ಕ ಇರುತ್ತದೆ. ಅಷ್ಟೇಕೆ ನಾವೇ ಚಪ್ಪಲಿ, ಶೂಗಳನ್ನು ಧರಿಸಿರುತ್ತೇವೆ. ಇಂತಹ ಮೈಲಿಗೆಯಿದ್ದಾಗ ನಾವು ಇಷ್ಟು ಮಹಾಮಹಿಮೋಪೇತವಾದ ಸ್ತೋತ್ರಗಳನ್ನು ಸರ್ವಥಾ ಪಠಿಸಬಾರದು. ನಮ್ಮ ಕಾರಿನಲ್ಲಿ ನಾವೊಂದು ಉಡುಪಿಯ ಕೃಷ್ಣನ ಪ್ರತಿಮೆ ಇಟ್ಟಿರುತ್ತೇವೆ. ದೇವರ ನೆನಪು ಬರಲಿ ಎಂದು. ಆ ಪ್ರತಿಮೆಯನ್ನು ಪ್ರತೀನಿತ್ಯ ನೋಡುತ್ತೇವೆ, ಮುಟ್ಟುತ್ತೇವೆ. ಅದೇ ಶ್ರೀಮದುಡುಪಿಯ ಕೃಷ್ಣನನ್ನು ನೋಡಲು ಹೋಗುವಾಗ ಶುದ್ಧವಾದ ವೈದಿಕ ವೇಷದಲ್ಲಿ ಹೋಗುತ್ತೇವೆ. ಸೂತಕ ಮುಂತಾದ ಮೈಲಿಗೆಯಿದ್ದಾಗ ಆ ಪವಿತ್ರ ದೇಗುಲಗಳ ಬಳಿಯೂ ನಾವು ಸುಳಿಯುವದಿಲ್ಲ. ಹಾಗೆ ನಾವು ಮೈಲಿಗೆಯ ಪ್ರದೇಶದಲ್ಲಿದ್ದಾಗ, ಮೈಲಿಗೆಯ ಬಟ್ಟೆಯನ್ನು ಧರಿಸಿರುವಾಗ, ಮೈಲಿಗೆಯಿರುವಾಗ ಪಠಿಸತಕ್ಕದ್ದಲ್ಲ. ಹಾಗೆ ಸ್ತೋತ್ರಗಳ ಪಾರಾಯಣವನ್ನು ಮಾಡಬೇಕಾದರೆ ಶುದ್ದವಾದ ವೈದಿಕ ವೇಷದಲ್ಲಿದ್ದು, ದೇವರ ಮನೆಯ ಮುಂದೆ ಕುಳಿತು ಭಕ್ತಿ ಶ್ರದ್ಧೆಗಳಿಂದ ಪಾರಾಯಣ ಮಾಡಬೇಕು. ಅದು ನಾವು ಆ ಸ್ತೋ ತ್ರಕ್ಕೆ ಸಲ್ಲಿಸುವ ಗೌರವ. ಆಗಲೇ ನಾವು ಅದರ ಫಲವನ್ನು ಪಡೆಯಲು ಸಾಧ್ಯ. ಹಾಗಾದರೆ, ನಾವು ಪ್ರಯಾಣದಲ್ಲಿರುವಾಗ, ಪ್ಯಾಂಟು ಶರ್ಟು ಮುಂತಾದವುಗಳನ್ನು ಧರಿಸಿರುವಾಗ ದೇವರ ಸ್ಮರಣೆಯನ್ನು ಮಾಡಲೇಬಾರದೆ? ಅವಶ್ಯವಾಗಿ ಮಾಡಲೇಬೇಕು. ಅದಕ್ಕಾಗಿಯೇ ದೇವರ ಹೆಸರುಗಳಿರುವದು, ಅದಕ್ಕಾಗಿಯೇ ದಾಸಸಾಹಿತ್ಯದ ರಚನೆಯಾಗಿರುವದು. ಸೆಲೆಬೀದಿಯೊಳು ನಿಂತು ನುಡಿಯುವ ಮಂತ್ರ, ರಾಮಮಂತ್ರ ಎಂದು ಶ್ರೀ ಪುರಂದರದಾಸಾರ್ಯರು ಹೇಳುತ್ತಾರೆ. ದಾಸಸಾಹಿತ್ಯದ ಹಾಡುಗಳನ್ನು ಸದಾ ಪಠಿಸಬಹುದು ಎಂದು ಹಿಂದಿನವರೇ ತಿಳಿಸಿದ್ದಾರೆ. ಅದಕ್ಕಿಂತ ಮುಖ್ಯವಾದದ್ದು ನಾಮಸ್ಮರಣೆ. ಈ ಸ್ತೋತ್ರ, ಪೂಜೆ, ಅಧ್ಯಯನ ಮುಂತಾದ ಎಲ್ಲ ಸಾಧನೆಗಳಿಂದಲೂ ನಾವು ಗಳಿಸಬೇಕಾದ ಸಿದ್ಧಿ, ದೇವರ ನಾಮಸ್ಮರಣೆ. ಆ ಸ್ಮರಣೆಯನ್ನು ಸರ್ವದಾ ಮಾಡಬೇಕು. ರಾಘವೇಂದ್ರ, ಗಂಗಾಧರ, ಮಧ್ವನಾಥ, ರಾಮಚಂದ್ರ ಎಂದು ಗುರು ದೇವತಾ ಹರಿಯರನ್ನು ಸದಾ ಅವರ ಹೆಸರಿನಿಂದ ಸ್ಮರಿಸಬೇಕು. ನಾಮಸ್ಮರಣೆ ಮಾಡಬೇಕು ಹಾಗೆ ಶ್ರೀ ರಾಘವೇಂದ್ರಾಯ ನಮಃ, ಶ್ರೀ ಶಿವಾಯ ನಮಃ, ಶ್ರೀ ಮಧ್ವಗುರವೇ ನಮಃ, ಶ್ರೀ ಹರಯೇ ನಮಃ ಎಂದೂ ಪಠಿಸಬಹುದು. ಆದರೆ ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಎಂದಾಗಲೀ, ಓಂ ನಮಃ ಶಿವಾಯ ಎಂದಾಗಲೀ ಮಂತ್ರಗಳನ್ನು ಪಠಿಸತಕ್ಕದ್ದಲ್ಲ. ದೇವರ, ದೇವತೆಗಳ, ಗುರುಗಳ ಹೆಸರನ್ನು ಯಾವಾಗ ಬೇಕಾದರೂ ಹೇಳಬಹುದು. ಹೇಳಬಹುದಲ್ಲ, ಹೇಳಲೇಬೇಕು. ಹೆಸರಿನ ಜೊತೆಗೆ ನಮಃ ಎಂಬುದನ್ನು ಸೇರಿಸಿಯೂ ಸ್ಮರಿಸಬಹುದು. ಆದರೆ ಅದನ್ನು ಮಂತ್ರವನ್ನಾಗಿ (ಓಂಕಾರ ಮುಂತಾದ ಬೀಜಾಕ್ಷರಗಳನ್ನು ಸೇರಿಸಿದಾಗ ಮಂತ್ರ) ಸರ್ವಥಾ ಕಂಡಕಂಡಲ್ಲಿ ಕಂಡಕಂಡಂತೆ ಹೇಳುವದಲ್ಲ. ಸ್ತೋತ್ರಗಳನ್ನೂ ಹೇಳತಕ್ಕದ್ದಲ್ಲ. ಸಾಧಕರಿಗೆ ಒಂದು ಕಿವಿಮಾತು. ನಾವು ಉಸಿರಾಡುತ್ತೇವೆಲ್ಲ, ಆ ಉಸಿರು ಬಿಡುವಾಗಲೊಮ್ಮೆ, ತೆಗೆದುಕೊಳ್ಳುವಾಗಲೊಮ್ಮೆ ದೇವರ, ದೇವತೆಗಳ, ಗುರುಗಳ ಹೆಸರು ನಮ್ಮ ಮನಸ್ಸಿನಲ್ಲಿ ಬರಬೇಕು. ಅದು ಮಹತ್ತರ ಸಿದ್ಧಿ. ನಮ್ಮ ಗುರುಗಳ ಹೆಸರಿನಿಂದ ಆರಂಭಿಸಿ (ಗುರುಗಳ ನಾಮವನ್ನು ಭಕ್ತಿಯಿಂದ ಪಠಿಸಬಹುದು, ಅವರನ್ನು ಉಲ್ಲೇಖ ಮಾಡಬೇಕಾದರೆ ಹೆಸರಿಡಿದು ಉಲ್ಲೇಖ ಮಾಡಬಾರದು) ಕಾವೇರಿ, ಗಂಗಾ, ಗಣಪತಿ, ಪರಶಿವ, ಮುಖ್ಯಪ್ರಾಣಾದಿ ದೇವತೆಗಳ ಹೆಸರು, ಮತ್ತು ಸರ್ವರಂತರ್ಯಾಮಿಯಾದ ಶ್ರೀಹರಿಯ ಹೆಸರುಗಳನ್ನು ಉಸಿರು ಬಿಡುವಾಗೊಮ್ಮೆ, ತೆಗೆದುಕೊಳ್ಳುವಾಗೊಮ್ಮೆ ಪಠಿಸಬೇಕು. ಅದು ನಮ್ಮ ಜೀವಕ್ಕೆ ಅಭ್ಯಾಸವಾಗಿಬಿಡಬೇಕು. ರಾತ್ರಿ ಮಲಗುವ ಮುನ್ನ, ಬಸ್ಸು ಕಾರುಗಳಲ್ಲಿ ಪ್ರಯಾಣ ಮಾಡಬೇಕಾದರೆ, ಅಥವಾ ಏನೇ ದೊಡ್ಡ ಕೆಲಸ ಮಾಡಬೇಕಾದರೆ ಮಧ್ಯದಲ್ಲಿ ಹತ್ತಾರು ಕ್ಷಣಗಳು ಕಣ್ಣು ಮುಚ್ಚಿ ಉಸಿರಾಟದ ಪ್ರಕ್ರಿಯೆಯ ಜೊತೆಗೆ ಈ ನಾಮಸ್ಮರಣೆಯನ್ನು ಮಾಡಿನೋಡಿ. ಜೀವ ಅನಂದದ ಸಾಗರದಲ್ಲಿ ಮುಳುಗಿಬಿಡುತ್ತದೆ. ಉದ್ವೇಗ ಕಡಿಮೆಯಾಗುತ್ತದೆ. ಮನಸ್ಸು ಸರಿಯಾದ ದಾರಿಯಲ್ಲಿ ಆಲೋಚಿಸುತ್ತದೆ. ಆ ನಾಮಸ್ಮರಣೆಯ ಸಿದ್ಧಿಯನ್ನು ಗಳಿಸಲು ಬೆಳಿಗ್ಗೆ ಸಂಜೆ ಮನೆಯಲ್ಲಿ ಶುಚಿಯಾಗಿ ಸ್ತೋತ್ರಗಳನ್ನು ಪಠಿಸಬೇಕು. ನಿಯಮ ಎನ್ನುವದು ಯಾವುದೇ ವ್ಯಕ್ತಿಗೆ, ಸಂಸ್ಥೆಗೆ, ದೇಶಕ್ಕೆ, ಪದಾರ್ಥಕ್ಕೆ ಸಲ್ಲಿಸುವ ಗೌರವವೇ ಹೊರತು ಕಟ್ಟುಪಾಡಲ್ಲ. ಶುಚಿಯಾಗಿ ಪಠಿಸಬೇಕು ಎನ್ನುವದು ಸ್ತೋತ್ರಕ್ಕೆ ಸಲ್ಲಿಸುವ ಗೌರವ. ಸಲ್ಲಿಸಬೇಕಾದ ಗೌರವವನ್ನು ಭಕ್ತಿಯಿಂದ ಸಲ್ಲಿಸಿದಾಗ ಆ ಸ್ತೋತ್ರವನ್ನು ರಚಿಸಿದವರು ಮತ್ತು ಆ ಸ್ತೋತ್ರದಿಂದ ಪ್ರತಿಪಾದ್ಯರಾದವರು ಇಬ್ಬರೂ ಸಹ ಪ್ರೀತರಾಗುತ್ತಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ