ಬಸ್ಸು ಕಾರುಗಳಲ್ಲಿ ಪ್ರವಚನ ಕೇಳಬಹುದೇ?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ಬಸ್ಸಿನಲ್ಲಿ, ಕಾರಿನಲ್ಲಿ ಪ್ರವಚನಗಳು ಕೇಳ ಬಹುದೆ ? ದಯವಿಟ್ಟು ತಿಳಿಸಿ — ಭಾರದ್ವಾಜ್ ಕರಣಮ್. ಕೆಲವನ್ನು ಕೇಳಬಹುದು, ಕೆಲವನ್ನು ಕೇಳಬಾರದು. ತಿಳಿದುಕೊಳ್ಳಬೇಕಾದ ಕೆಲವಷ್ಟು ವಿಷಯಗಳಿವೆ. ತುಂಬ ಜನ ಪ್ರವಚನ ಕೇಳುವದನ್ನು “ಶ್ರವಣ” ಎಂದು ಕರೆಯುತ್ತಾರೆ. ಶ್ರವಣ ಎನ್ನುವದು ಒಂದು ಪಾರಿಭಾಷಿಕ ಶಬ್ದ. ಅದಕ್ಕೆ ಕೇವಲ ಕೇಳುವದು ಎಂದು ಅರ್ಥವಿಲ್ಲ. ಯಾವ ಶಾಸ್ತ್ರವನ್ನು ಓದುತ್ತಿದ್ದೇವೆಯೋ ಅದನ್ನು ಓದುವ ಅರ್ಹತೆಯನ್ನು ಗಳಿಸಿಕೊಂಡ ವ್ಯಕ್ತಿ ಗುರುಗಳ ಬಳಿಯಲ್ಲಿ ಮಾಡುವ ಅಧ್ಯಯನಕ್ಕೆ ಶ್ರವಣ ಎಂದು ಹೆಸರು. ಪ್ರವಚನಗಳನ್ನು ಕೇಳುವದು ಆ ರೀತಿಯ “ಶ್ರವಣ” ವಾಗುವದಿಲ್ಲ. ಇವತ್ತಿನ ದಿವಸದಲ್ಲಿ ಪ್ರವಚನ ಎಂದರೆ ಶಾಸ್ತ್ರಗಳಲ್ಲಿನ ತತ್ವಗಳ ಸರಳವಾದ ನಿರೂಪಣೆ. ಅಂದರೆ ದಾಸಸಾಹಿತ್ಯದ ಹಾಡಿನಂತೆ. ಹೇಗೆ ಶ್ರೀಮನ್ ಮಧ್ವಶಾಸ್ತ್ರದ ಪ್ರಮೇಯಗಳನ್ನು ಸಮಸ್ತ ದಾಸಾರ್ಯರು ಅತ್ಯಂತ ಸುಲಲಿತವಾಗಿ ಕನ್ನಡದ ಪದ್ಯಗಳಲ್ಲಿ ನಿರೂಪಣೆ ಮಾಡಿದ್ದಾರೆಯೋ ಹಾಗೆ ಪಂಡಿತರು ಶಾಸ್ತ್ರತತ್ವಗಳನ್ನು ಸರಳವಾಗಿ ವಾಕ್ಯಗಳಲ್ಲಿ ನಿರೂಪಣೆ ಮಾಡುತ್ತಾರೆ. ನಿಜ, ಮಹಾಪ್ರವಚನಕಾರನ ಅದ್ಭುತ ಪ್ರವಚನವೂ ಶ್ರೀಶನನ್ನು ಸಾಕ್ಷಾತ್ಕರಿಸಿಕೊಂಡ ಶ್ರೀ ದಾಸಾರ್ಯರ ವಾಣಿಗಳಿಗೆ ಎಂದೂ ಸಮವಾಗುವದಿಲ್ಲ, ಆದರೂ ಅದರಂತೆ ಇರುವದು ಇದು ಎಂದು ಒಂದೇ ಗುಂಪಿನಲ್ಲಿ ಸೇರುವ ಪದಾರ್ಥ ಎಂದು ತೋರಿಸಲಿಕ್ಕೆ ಮಾತ್ರ ಈ ದೃಷ್ಟಾಂತ. ಶ್ರೀಮದಾಚಾರ್ಯರು ರಚನೆ ಮಾಡಿದ ಸ್ತೋತ್ರಗಳ ಸಹಸ್ರಾಂಶಕ್ಕೂ ಬೇರೆಯ ಮಹಾನುಭಾವರು ರಚನೆ ಮಾಡುವ ಸ್ತೋತ್ರ ಸಾಟಿಯಾಗುವದಿಲ್ಲ. ಆದರೂ ಎರಡಕ್ಕೂ ಸ್ತೋತ್ರ ಎಂದೇ ಹೆಸರು. ಹಾಗೆ, ದಾಸಸಾಹಿತ್ಯ ಹೇಗೆ ಪ್ರಾಕೃತ ಭಾಷೆಯಲ್ಲಿ ತತ್ವಗಳನ್ನು ನಿರೂಪಿಸಿತೋ ಹಾಗೆ ಇಂದಿನ ಪ್ರವಚನಗಳು ತತ್ವವನ್ನು ನಿರೂಪಿಸುತ್ತೆವೆ, ಎಂದರ್ಥ. ಈ ನೆಲೆಗೆಟ್ಟಿನಲ್ಲಿ ನೀವು ಪ್ರವಚನವನ್ನು ಕಾರು ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಕೇಳಬಹುದು. ಆದರೆ ಈ ಪ್ರವಚನಗಳಲ್ಲಿಯೇ ಎರಡು ವಿಧವಿದೆ. ಒಂದು ತಮ್ಮ ಶಿಷ್ಯರಿಗೆ ಪಾಠವನ್ನು ಹೇಳುವಾಗ ರೆಕಾರ್ಡ್ ಮಾಡಿರುತ್ತಾರೆ. ಬ್ರಹಸೂತ್ರಭಾಷ್ಯ, ತಂತ್ರಸಾರಸಂಗ್ರಹ ಮುಂತಾದವುಗಳ ಪಾಠಗಳೂ ರೆಕಾರ್ಡ್ ಆಗಿರುತ್ತವೆ. ಇಂತಹವನ್ನು ಸರ್ವಥಾ ಕಾರು ಬಸ್ಸುಗಳಲ್ಲಿ ಅರ್ಥಾತ್ ಮೈಲಿಗೆಯ ಸಂಪರ್ಕ ಇದ್ದಾಗ ಕೇಳತಕ್ಕದ್ದಲ್ಲ. ಹಾಗೆಯೇ ಗಾಯತ್ರೀ, ಅಂಭೃಣೀಸೂಕ್ತ, ಪುರುಷಸೂಕ್ತ ಮುಂತಾದ ವೇದಮಂತ್ರಗಳ ಅರ್ಥಾನುಸಂಧಾನದ ಉಪನ್ಯಾಸಗಳು, ಯಾವುದೇ ಪಾಠ, ಬ್ರಹ್ಮಸೂತ್ರಾದಿಗಳ ಪಾರಾಯಣ ಇವುಗಳನ್ನು ಮೈಲಿಗೆಯಲ್ಲಿ ಕೇಳತಕ್ಕದ್ದಲ್ಲ. ಮಹಾನುಭಾವರ ಚರಿತ್ರೆಗಳು, ಮಹಾಭಾರತ ರಾಮಾಯಣಗಳ ಮೇಲಿನ ಉಪನ್ಯಾಸಗಳು, ದಾಸಸಾಹಿತ್ಯದ ಅರ್ಥಾನುಸಂಧಾನ ಇವುಗಳನ್ನು ಕೇಳಲಿಕ್ಕೆ ಅಡ್ಡಿಯಿಲ್ಲ. ವಸ್ತುಸ್ಥಿತಿಯಲ್ಲಿ ಎಲ್ಲವನ್ನೂ ಶುದ್ಧವಾದ ಕ್ರಮದಲ್ಲಿ ಕೇಳುವದೇ ಶ್ರೇಷ್ಠ ಮಾರ್ಗ. ಆದರೆ, ಇವತ್ತಿನ ಧಾವಂತದ ಜೀವನದಲ್ಲಿ ಪಟ್ಟಣದವರಿಗೆ ಹೆಚ್ಚಿನ ಸಮಯ ದೊರೆಯುವದೇ ಪ್ರಯಾಣ ಮಾಡುವಾಗ. ಹೀಗಾಗಿ ಅದನ್ನು ವ್ಯರ್ಥ ಮಾಡಿಕೊಳ್ಳದೇ ದೇವರ ಮಾಹಾತ್ಮ್ಯವನ್ನು ಕೇಳುವಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಏನಾದರೂ ಹಳ್ಳಿಯ ವಾಸ, ಹಳ್ಳಿಯ ಜೀವನ ಸಾಧನೆಗೆ ಹತ್ತಿರವಾದದ್ದು. ಬಾವಿಯ ನೀರಿನಿಂದ ಆರಂಭಿಸಿ ತಿನ್ನುವ ಅನ್ನದವರೆಗೆ ಶುದ್ಧಿ ದೊರೆಯುತ್ತದೆ. ನೆಮ್ಮದಿಯ ಜೀವನ ಇರುತ್ತದೆ. ಹೀಗಾಗಿ ಜೀವನಕ್ಕೆ ಬೇಕಾದ್ದಷ್ಟನ್ನು ಬೇಗನೇ ಗಳಿಸಿ ಮರಳಿ ಮಣ್ಣಿಗೆ ತಿರುಗುವದೊಳಿತು. ಆಲೋಚಿಸಿ. — ವಿಷ್ಣುದಾಸ ನಾಗೇಂದ್ರಾಚಾರ್ಯ