Prashnottara - VNP052

ಬ್ರಹ್ಮಾಂಡ, ಸಾವರಣ ಬ್ರಹ್ಮಾಂಡ ಎಂದರೇನು?


					 	

ಐವತ್ತು ಕೋಟಿ ವಿಸ್ತೀರ್ಣವಾದ ಬ್ರಹ್ಮಾಂಡಕ್ಕೂ, ಸಾವರಣ ಬ್ರಹ್ಮಾಂಡಕ್ಕೂ ಏನು ವ್ಯತ್ಯಾಸ? — ಡಾ। ಶ್ರೀರಂಗ್ ಪಿ ಕುಲಕರ್ಣಿ ಈ ಪ್ರಶ್ನೆಗೆ ಶ್ರೀಮದಾಚಾರ್ಯರು ಶ್ರೀಮನ್ ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಉತ್ತರ ನೀಡಿದ್ದಾರೆ. ಪಂಚಾಶತ್ಕೋಟಿವಿಸ್ತಾರಃ… ಅಬಗ್ನೀರನಭೋಹಂಕೃನ್ಮಮಹತ್ತತ್ವಗುಣತ್ರಯೈಃ । ಕ್ರಮಾದ್ ದಶೋತ್ತರೈರೇತದಾವೃತಂ ಪರತಸ್ತತಃ ।। ಎಂದು. ಬ್ರಹ್ಮಾಂಡ ಎಂದರೆ ಒಂದು ಮೊಟ್ಟೆಯ ಆಕಾರದಲ್ಲಿ ಇರುವ ಪದಾರ್ಥ. ಇದರ ವಿಸ್ತೀರ್ಣ ಐವತ್ತು ಕೋಟಿ ಯೋಜನಗಳು. ಈ ಬ್ರಹ್ಮಾಂಡದ ಒಳಗೆ ಹದಿನಾಲ್ಕು ಲೋಕಗಳಿವೆ. ಸಾವರಣಬ್ರಹ್ಮಾಂಡ ಎಂದರೆ ಆವರಣಗಳಿಂದ ಯುಕ್ತವಾದ ಬ್ರಹ್ಮಾಂಡ. ಬ್ರಹ್ಮಾಂಡದ ಎರಡು ಪಟ್ಟು ಅಂದರೆ ನೂರು ಕೋಟಿ ಯೋಜನ ವಿಸ್ತೀರ್ಣವಾದ ಪೃಥಿವೀ ತತ್ವ ಮೊದಲನೆಯ ಆವರಣ. (ಪೃಥಿವೀ ಎಂದರೆ ಇಲ್ಲಿ ನಾವು ನೋಡುವ ಭೂಮಿ. ನಮ್ಮ ಭೂಮಿಗೆ ಮೂಲಭೂತವಾದ ತತ್ವ) ಅದರ ಮೇಲೆ ಸಾವಿರ ಕೋಟಿ ಯೋಜನ ವಿಸ್ತೀರ್ಣವಾದ ಜಲತತ್ವದ ಆವರಣ. ಅದರ ಮೇಲೆ ಹತ್ತು ಸಾವಿರ ಕೋಟಿ ಯೋಜನ ವಿಸ್ತೀರ್ಣವಾದ ಅಗ್ನಿತತ್ವದ ಆವರಣ. ಆದರ ಮೇಲೆ ಲಕ್ಷ ಕೋಟಿ ಯೋಜನ ವಿಸ್ತೀರ್ಣವಾದ ವಾಯುತತ್ವದ ಆವರಣ. ಅದರ ಮೇಲೆ ಹತ್ತು ಲಕ್ಷ ಕೋಟಿ ಯೋಜನ ವಿಸ್ತೀರ್ಣವಾದ ಆಕಾಶತತ್ವದ ಆವರಣ. ಅದರ ಮೇಲೆ ಕೋಟಿ ಕೋಟಿ ಯೋಜನ ವಿಸ್ತೀರ್ಣವಾದ ಅಹಂಕಾರತತ್ವದ ಆವರಣ. ಅದರ ಮೇಲೆ ಹತ್ತು ಕೋಟಿ ಕೋಟಿ ಯೋಜನ ವಿಸ್ತೀರ್ಣವಾದ ಮಹತ್ ತತ್ವದ ಆವರಣ. ಅದರ ಮೇಲೆ ನೂರು ಕೋಟಿ ಕೋಟಿ ಯೋಜನ ವಿಸ್ತೀರ್ಣವಾದ ಗುಣತ್ರಯಗಳ (ಸತ್ವ-ರಜೋ-ತಮೋಗುಣಗಳ) ಆವರಣ. ಹೀಗೆ ಪಂಚಭೂತಗಳು, ಅಹಂಕಾರತತ್ವ, ಮಹತ್ ತತ್ವ ಮತ್ತು ಗುಣತ್ರಯಗಳು ಒಟ್ಟು ಹತ್ತು ಆವರಣಗಳು ಬ್ರಹ್ಮಾಂಡಕ್ಕಿವೆ. ಇಲ್ಲಿ, ಪೃಥಿವೀ ಎಂಬ ಆವರಣ, ಬ್ರಹ್ಮಾಂಡಕ್ಕಿಂತ ಎರಡು ಪಟ್ಟು ಮಾತ್ರ ಅಧಿಕವಿರುವದಿರಂದ, ಜಲತತ್ವದಿಂದ ಆರಂಭಿಸಿ ಗುಣತ್ರಯಗಳವರೆಗಿನ ಎಲ್ಲವೂ ಹತ್ತತ್ತು ಪಟ್ಟು ಅಧಿಕವಿರುವದರಿಂದ ಪೃಥಿವೀತತ್ವವನ್ನು ಬಿಟ್ಟು ಒಂಭತ್ತು ಆವರಣಗಳು (ಪಂಚಭೂತ+ಅಹಂಕಾರ+ಮಹತ್+ ಮೂರು ಗುಣಗಳು) ಎಂದು ಶಾಸ್ತ್ರದಲ್ಲಿ ವ್ಯವಹಾರವಿದೆ. ಶ್ರೀ ಮಧ್ವವಿಜಯದಲ್ಲಿ ಸನವಾವರಣಾಂಡ ದರ್ಶಿನಃ ಎಂದು ಪ್ರಯೋಗವಿದೆ. ಐವತ್ತು ಕೊಟಿ ಯೋಜನ ವಿಸ್ತೀರ್ಣ ಬ್ರಹ್ಮಾಂಡ ಎಂದರೆ ಕೇವಲ ಬ್ರಹ್ಮಾಂಡದ ಅಳತೆ. ಸಾವರಣ ಬ್ರಹ್ಮಾಂಡ ಎಂದರೆ ಈ ಆವರಣಗಳಿಂದ ಯುಕ್ತವಾದ ಬ್ರಹ್ಮಾಂಡ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
3149 Views

Comments

(You can only view comments here. If you want to write a comment please download the app.)
 • Santosh S Gotur,Bengaluru

  1:04 PM , 26/01/2019

  ಗುರುಗಳಿಗೆ ಶಿ.ಸಾ.ನಮಸ್ಕಾರಗಳು,
  ನಾವಿರುವ ಬ್ರಹ್ಮಾಂಡ ದ ದ್ರೋಹ, ಬೆರೆ ಬ್ರಹ್ಮಾಂಡವು ಅವ್ಯಾಕ್ರುತ ಆಕಾಶದಲ್ಲಿ ಇವೆಯೇ?
  ತಿಳಿಸಿ ಬೇಕಾಗಿ ಪ್ರಾರ್ಥನೆ.
  
  ಸಂತೋಷ ಗೋಟೂರ

  Vishnudasa Nagendracharya

  ಒಂದು ಸೃಷ್ಟಿಯಲ್ಲಿ ಒಂದೇ ಬ್ರಹ್ಮಾಂಡ. ಎರಡು ಬ್ರಹ್ಮಾಂಡಗಳು ಇರುವದಿಲ್ಲ. 
  
  ಅನಾದಿ ಕಾಲದಿಂದ ಇಲ್ಲಿಯವರೆಗೆ ಅನಂತ ಬ್ರಹ್ಮಾಂಡಗಳು ಆಗಿಹೋಗಿವೆ. 
  
  ದೇವರ ಅಚಿಂತ್ಯಾದ್ಭುತ ಶಕ್ತಿಯಿಂದ ಒಂದೇ ಬ್ರಹ್ಮಾಂಡ ಭಗವಂತನ ಅನಂತ ರೋಮಕೂಪಗಳಲ್ಲಿವೆ. ಇದರ ಕುರಿತು ಮುಂದೆ ಭಾಗವತದಲ್ಲಿ ಬರುತ್ತದೆ. 
 • Shruti,

  9:29 PM , 17/05/2017

  Up to 2-3.5 km = 1 kosha & 4 kosha = 1 yojana
 • Rakshith S,

  8:47 PM , 17/05/2017

  ಒಂದು ಯೋಜನ ಎಂದರೆ ಇವತ್ತಿನ ಲೆಕ್ಕದಲ್ಲಿ ಉದಾಹರಣೆಗೆ(ಕಿಲೋಮೀಟರ್)ಮುಂತಾದ ಮಾಪನದ ಪ್ರಕಾರ ಹೇಗೆ ಅರ್ಥ ಮಾಡಿಕೊಳ್ಳಬಹುದೆಂದು ದಯವಿಟ್ಟು ತಿಳಿಸಿಕೊಡಿ.

  Vishnudasa Nagendracharya

  ಯೋಜನ ಎನ್ನುವ ಶಬ್ದ ಬಹಳ ನಿಗೂಢವಾದದ್ದು ಮತ್ತು ವ್ಯಾಪಕ ಅರ್ಥ ಉಳ್ಳದ್ದು. ಅದರ ಹೆಸರೇ ಯೋಜನ, ಅಂದರೆ ಯಾವ ಸಂದರ್ಭದಲ್ಲಿ ಅದನ್ನು ಬಳಸುತ್ತೇವೆಯೋ ಆ ಅರ್ಥವನ್ನು ಅದು ನೀಡುತ್ತದೆ. ಅಂದರೆ ಭೂಮಿಯಲ್ಲಿ ನಡೆಯುವ ಲೆಕ್ಕವನ್ನು ಹೇಳಬೇಕಾದರೆ ಯೋಜನದ ಪರಿಮಿತಿ ಬೇರೆ, ಸಮುದ್ರದ ಲೆಕ್ಕದಲ್ಲಿ ಯೋಜನದ ಪರಿಮಿತಿ ಬೇರೆ, ಪರ್ವತಗಳನ್ನು ಲೆಕ್ಕಹಾಕುವಾಗ ಹೇಳುವದು ಬೇರೆ, ಹಾಗೆ ಅಂತರಿಕ್ಷವನ್ನು ಅಳೆಯವಾಗ ಹೇಳುವ ಲೆಕ್ಕ ಬೇರೆ. 
  
  ಈ ರೀತಿಯ ಲೆಕ್ಕ ಇಂದಿಗೂ ನಮ್ಮಲ್ಲಿಯೂ ಬಳಕೆಯಲ್ಲಿದೆ. ನಮ್ಮ ಭಾರತೀಯ ಸೈನ್ಯದಲ್ಲಿ ಹಾಗೂ ಹಿಮಾಲಯದ ಗುಡ್ಡಗಾಡುಗಳಲ್ಲಿ ವಾಸಿಸುವ ಜನ, ಅಲ್ಲಿ ಪರ್ವತ ಪ್ರದೇಶವನ್ನು ಲೆಕ್ಕ ಹಾಕಬೇಕಾದರೆ, ಕಿಲೋಮೀಟರುಗಳಲ್ಲಿ ಲೆಕ್ಕ ಹಾಕುವದಿಲ್ಲ. ದಿನಗಳಲ್ಲಿ ಲೆಕ್ಕ ಹಾಕುತ್ತಾರೆ. ಇಲ್ಲಿಂದ ಇಲ್ಲಿಗೆ ಎರಡು ದಿವಸ ಎಂದು. ದೂರ ನಾಕೋ ಐದೋ ಕಿಲೋ ಮೀಟರು ಇರಬಹುದು. ಆದರೆ ಹತ್ತಲು ಸುಲಭವಾಗಿದ್ದರೆ ಲೆಕ್ಕ ಬೇರೆ, ಒಂದು ಕಂದಕವನ್ನಿಳಿದು ಮತ್ತೆ ಹತ್ತಬೇಕಾದರೆ ಮತ್ತೊಂದು ಲೆಕ್ಕ. ಹೀಗಾಗಿ ಅಲ್ಲಿ ದಿನಗಳನ್ನು ಬಳಸುತ್ತಾರೆ. ವಿಜ್ಞಾನ Light year ಗಳನ್ನು ಬಳಸಿದಂತೆ. 
  
  ನಮ್ಮಲ್ಲಿ ಎಲ್ಲದಕ್ಕೂ ಶಬ್ದ ಒಂದೇ - ಯೋಜನ ಎಂದು. ಆದರೆ ಅರ್ಥ ಬೇರೆ. 
  
  ಮಹಾಭಾರತದಲ್ಲಿ ಹತ್ತು, ನೂರು ಯೋಜನ ವಿಸ್ತೀರ್ಣವಾದ ಮರಗಳ ಉಲ್ಲೇಖವಿದೆ. ಅಲ್ಲಿ ಹತ್ತು ಯೋಜನ ಎಂದರೆ 40 ಅಥವಾ 75 ಕಿಲೋಮೀಟರುಗಳಲ್ಲ. ಒಂದು ಮರವನ್ನು ಹತ್ತಬೇಕಾದರೆ ಹತ್ತು ಏರುಗಳಲ್ಲಿ ಹತ್ತಬಹುದಾದರೆ ಅದು ಹತ್ತು ಯೋಜನ, ನೂರು ಏರು ಬೇಕಾದರೆ ನೂರು ಯೋಜನ. ಹೀಗೆ ಅರ್ಥ ಮಾಡಿಕೊಳ್ಳಬೇಕು. 
  
  ಈ ಯೋಜನದ ಕುರಿತ ವಿಸ್ತೃತ ಚಿತ್ರಣವನ್ನು ಶ್ರೀಮದ್ ಭಾಗವತದ ಐದನೆಯ ಸ್ಕಂಧದ ಉಪನ್ಯಾಸದ ಸಂದರ್ಭದಲ್ಲಿ ನೀಡುತ್ತೇನೆ. 
 • Dr shreerang p kulkarni,

  8:20 PM , 17/05/2017

  Thank u sir for clarifying my doubt......namaskaragalu......
 • ಭೀಮೇಶ ವೈದ್ಯ,

  7:57 PM , 17/05/2017

  ಹಾಗಾದರೆ ಪರಮಾತ್ಮ ವಾಮನಾವತಾರದಲ್ಲಿ ತನ್ನ ನಖ ಸ್ಪರ್ಷದಿಂದ ಬ್ರಹ್ಮಾಂಡದ ಪದರನ್ನು ಒಡೆದ ಎಂದರೆ ಇದೇ ಮೊಟ್ಟೆಯಾಕಾರದ ಬ್ರಹ್ಮಾಂಡವನ್ನಾ ಆಚಾರ್ಯರೇ.
  
  
  ಹಾಗೂ ಅದರ ಮೇಲಿರುವ ಪೃಥವೀ ತತ್ವವನ್ನು ದಾಟಿ ಮೇಲಿರುವ ಜಲತತ್ವದಿಂದ ನೀರು ಒಳಗಡೆ ಬಂದಿತೇ. 
  
  ತಿಳಿಸಿಕೊಡಿ.

  Vishnudasa Nagendracharya

  ಹೌದು. 
  
  ಭಾಗವತದಲ್ಲಿ ಸ್ಪಷ್ಟವಾಗಿ ಈ ಮಾತು ಬಂದಿದೆ - ಯಾ ಬಾಹ್ಯಜಲಧಾರಾ ಎಂದು. 
 • ಭಾರದ್ವಾಜ್,ಬೆಂಗಳೂರು

  7:38 PM , 17/05/2017

  ಧನ್ಯೋಸ್ಮಿ ಗುರುಗಳೇ.
  
  ಅವ್ಯಾಕೃತ ಆಕಾಶದ ಆಚೆ ಭಗವಂತ ಇರುವನೇ? ಅವ್ಯಾಕೃತ ಆಕಾಶದಲ್ಲಿ ಹಾಗು ಮೂಲ ಪ್ರಕೃತಿಯಲ್ಲಿ ಭಗವಂತ ಅನಾದಿ ಕಾಲದಿಂದ ಇರುವನೇ?

  Vishnudasa Nagendracharya

  “ಅವ್ಯಾಕೃತ ಆಕಾಶದ ಆಚೆ”ಎಂಬ ಪದಾರ್ಥವಿಲ್ಲ. ಕಾರಣ ಅವ್ಯಾಕೃತ ಆಕಾಶವೇ ಅನಂತವಾಗಿದೆ. 
  
  ಆದರೆ ದೇವರು ಮಹತೋ ಮಹೀಯಾನ್ ಪರಮ ಮಹತ್ತಾದ ಅವ್ಯಾಕೃತ ಆಕಾಶಕ್ಕಿಂತಲೂ ಮಹತ್ತಾದ ರೂಪ ಭಗವಂತನಿಗಿದೆ. ಹೇಗೆ, ಸಾಲಿಗ್ರಾಮಕ್ಕಿಂತಲೂ ದೊಡ್ಡದಾದ ರೂಪ ದೇವರಿಗಿದ್ದರೂ ಸಾಲಿಗ್ರಾಮದೊಳಗೆ ದೇವರು ಇದ್ದಾನೆಯೋ ಹಾಗೆ ಅವ್ಯಾಕೃತ ಆಕಾಶವನ್ನು ಮೀರಿದ ರೂಪ ದೇವರಿಗಿದೆ. ಆ ರೂಪವನ್ನು ದೇವರು ಮತ್ತು ಮಹಾಲಕ್ಷ್ಮೀದೇವಿಯರು ಮಾತ್ರ ಕಾಣುತ್ತಾರೆ. 
  
  
  ಆನಾದಿ ಕಾಲದಿಂದ ಅನಂತ ಕಾಲದವರೆಗೆ ಹರಿ-ಲಕ್ಷ್ಮಿಯರು ಅವ್ಯಾಕೃತಾಕಾಶ ಮತ್ತು ಪ್ರಕೃತಿಯ ಅಣುಅಣುವಿನಲ್ಲಿಯೂ ವ್ಯಾಪಿಸಿದ್ದಾರೆ. 
 • Rammurthy Kulkarni,

  12:44 PM, 17/05/2017

  ಆದರೆ, ಈ ಮೊಟ್ಟೆಯಾಕಾರದ ಬ್ರಹ್ಮಾಂಡದ ಆಚೆ ಏನಿದೆ?

  Vishnudasa Nagendracharya

  ಬ್ರಹ್ಮಾಂಡದ ಆಚೆ ಪಂಚಭೂತಗಳ ಆವರಣ, ಆ ಆವರಣಗಳ ಆಚೆ, ಅಹಂಕಾರ ಮಹತ್ ತತ್ವಗಳು. ಅವುಗಳ ಆಚೆ ಸತ್ವ-ರಜೋ-ತಮೋ ಗುಣಗಳು. ಅವುಗಳ ಆಚೆ ಅವ್ಯಾಕೃತ ಆಕಾಶ ಮತ್ತು ಮೂಲಪ್ರಕೃತಿ. 
 • ಭಾರದ್ವಾಜ್,ಬೆಂಗಳೂರು

  12:15 PM, 17/05/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 
  
  ಅವ್ಯಕೃತ ಆಕಾಶ ಬ್ರಹ್ಮಾಂಡದ ಒಳಗೆ ಇದೆಯಾ ಅಥವ ಹೊರಗೆ ಇದೆಯಾ ? ದಯಮಾಡಿ ತಿಳಿಸಿ.

  Vishnudasa Nagendracharya

  ಮೂಲಪ್ರಕೃತಿ ಮತ್ತು ಅವ್ಯಾಕೃತ ಆಕಾಶ ಇಲ್ಲದೇ ಇರುವ ಸ್ಥಳವೇ ಇಲ್ಲ. ನಾವು ನೀವಿರುವ ಸ್ಥಳದಲ್ಲಿಯೂ ಅವ್ಯಾಕೃತ ಆಕಾಶ ಮತ್ತು ಪ್ರಕೃತಿಗಳಿವೆ. 
  
  ಇಷ್ಟೇ, ನಾವಿರುವ ಸ್ಥಳದಲ್ಲಿ ಮಹತ್ ತತ್ವದಿಂದ ಆರಂಭಿಸಿ ಪೃಥಿವಿಯವರೆಗಿನ ಎಲ್ಲ ತತ್ವಗಳೂ ತುಂಬಿವೆ. 
  
  ಕೇವಲ ಅವ್ಯಾಕೃತ ಆಕಾಶ ಮತ್ತು ಮೂಲಪ್ರಕೃತಿಗಳು ಸತ್ವ-ರಜೋ-ತಮೋಗುಣಗ ಆಚೆ, ಅಂದರೆ ನೂರು ಕೋಟಿ ಕೊಟಿ ಯೋಜನಗಳ ಆಚೆಯಲ್ಲಿದೆ. 
  
  ಆ ಅವ್ಯಾಕೃತ ಆಕಾಶದಲ್ಲಿ ಕೇವಲ ಶ್ರೀ ರಮಾ ನಾರಾಯಣರು ಮಾತ್ರ ಇರುತ್ತಾರೆ. 
  
  ಅವ್ಯಾಕೃತಗೃಹಸ್ಥಾಯ 
  ರಮಾಪ್ರಣಯಿನೇ ನಮಃ