ಸಂಕಷ್ಟೀವ್ರತ
ಆಚಾರ್ಯರೇ ನಮಸ್ಕಾರಗಳು. ಮಾಧ್ವರು ಸಂಕಷ್ಟ ಗಣಪತಿ ಪೂಜೆ ಮಾಡಬಹುದೇ? ಮಾಡಬಾರದೆ? — ಪ್ರವೀಣ್ ಕೃಷ್ಣ ಮಾಡಬಾರದು. ವ್ರತಗಳಲ್ಲಿ ಅನೇಕವಿಧ. 1. ಮಾಡಲೇಬೇಕಾದ ವ್ರತಗಳು. ಮಾಡದಿದ್ದರೆ ದೋಷ ನೀಡುವಂತಹವು. ಏಕಾದಶೀ ಚಾತುರ್ಮಾಸ್ಯ ಮುಂತಾದವು. ಇವನ್ನು ಶಾಸ್ತ್ರೀಯವಾಗಿ ನಿತ್ಯವ್ರತ ಎನ್ನುತ್ತಾರೆ. 2. ಆರೋಗ್ಯ, ಸಂಪತ್ತು, ಅಧಿಕಾರ ಮುಂತಾದವುಗಳನ್ನು ಪಡೆಯಲಿಕ್ಕಾಗಿ ಮಾಡುವ ವ್ರತಗಳು. ಅರೋಗ್ಯಸಪ್ತಮೀ, ಸತ್ಯನಾರಾಣಯವ್ರತ ಮುಂತಾದವು. ಇವನ್ನು ಕಾಮ್ಯವ್ರತ ಎನ್ನುತ್ತಾರೆ. 3. ಮೂರನೆಯದು ನಿಷಿದ್ಧವ್ರತಗಳು. ಇವುಗಳಲ್ಲಿ ಎರಡು ವಿಧ — ತಮ್ಮತಮ್ಮ ಸಿದ್ಧಾಂತದ ರೀತಿಯ ಆಚರಣೆಯನ್ನು ಪ್ರಚುರ ಪಡಿಸಲು ಇರುವ ವ್ರತಗಳು. ಶಿವರಾತ್ರಿ ಉಪವಾಸವ್ರತ, ಕಾಪಾಲಿವ್ರತ, ಮಂಡಲಪ್ರವೇಶ ಮುಂತಾದವು. ಶಿವಸರ್ವೋತ್ತಮತ್ವಾದಿಗಳನ್ನು ಒಪ್ಪುವವರು ಮಾತ್ರ ಈ ವ್ರತ ಮಾಡುತ್ತಾರೆ. ಶಿವನ ಸರ್ವೋತ್ತಮತ್ವವನ್ನು ಒಪ್ಪದವರು ಮಾಡುವದಿಲ್ಲ. ದಾನವರು, ದೈತ್ಯರು ಮುಂತಾದವರು ಮಾಡಿದ ವ್ರತಗಳು. ಇವನ್ನು ಸಾಧಕರು ಸರ್ವಥಾ ಮಾಡಬಾರದು. ನಿತ್ಯವ್ರತಗಳನ್ನು ಮಾಡಲೇಬೇಕು. ಮಾಡದಿದ್ದಲ್ಲಿ ದೋಷವಿದೆ. ಕಾಮ್ಯವ್ರತವನ್ನು ಮಾಡಬಹುದು. ಆದೆರ ಆ ವ್ರತಗಳಿಂದ ನಾವು ಸಂಸಾರದಲ್ಲಿ ಕಟ್ಟು ಬೀಳುತ್ತೇವೆ. ಈ ಕಾಮ್ಯವ್ರತಗಳನ್ನು ನಿಷ್ಕಾಮವಾಗಿ ಮಾಡಲು ಸಾಧ್ಯವಿಲ್ಲ. ನಿಷಿದ್ಧವ್ರತಗಳನ್ನು ಮಾಡಲೇಬಾರದು. ಈ ವ್ರತಗಳನ್ನು ಮಾಡುವದರಿಂದ ಅನರ್ಥವನ್ನು ಪಡೆಯುತ್ತೇವೆ. ನೋಡಿ, ಕೈಲಾಸಪರ್ವತದ ಬಳಿಯಲ್ಲಿ ರಾಕ್ಷಸಸರೋವರವಿದೆ. ರಾಕ್ಷಸ್ ತಾಲಾಬ್ ಎನ್ನುತ್ತಾರೆ. ರಾವಣ ರುದ್ರದೇವರ ಪ್ರೀತಿಯನ್ನು ಸಂಪಾದಿಸಲು ಅಲ್ಲಿಯೇ ವಾಸವಿದ್ದು, ಆ ಕೆರೆಯಲ್ಲಿಯೇ ಸ್ನಾನವನ್ನು ಮಾಡುತ್ತ ತಪಸ್ಸು ಮಾಡಿದ. ಇವತ್ತಿಗೂ ಸಹ ಕೈಲಾಸಪರ್ವತದ ಯಾತ್ರಿಗಳು ಅಲ್ಲಿ ಸ್ನಾನಾದಿಗಳನ್ನು ಮಾಡುವದಿಲ್ಲ. ರಾವಣ ರುದ್ರದೇವರನ್ನು ಕುರಿತು ತಪಸ್ಸು ಮಾಡಿದ್ದೂ ಸತ್ಯ, ವರಗಳನ್ನು ಪಡೆದದ್ದೂ ಸತ್ಯ. ಆದರೆ, ರಾವಣ ಪಡೆದ ಸಿದ್ಧಿ ನಮಗೆ ಬೇಡ. ರಾವಣ ಅನುಸರಿಸಿದ ಕ್ರಮ ನಮಗೆ ಬೇಡ. ಕಾರಣ, ಯಾವ ಕ್ರಮ ಮತ್ತು ಸಿದ್ಧಿಗಳು ಪರಮಾತ್ಮನಿಗೆ ಪ್ರಿಯವೋ ಮತ್ತು ಲೋಕಕ್ಕೆ ತೊಂದರೆಯುಂಟಾಗುವದಿಲ್ಲವೋ ಆ ರೀತಿಯ ಕ್ರಮ ಸಿದ್ಧಿಗಳನ್ನು ಮಾತ್ರ ಸಾಧಕರು ಪಡೆಯಬೇಕು. ಹಾಗೆ, ಸಂಕಟಹರಚತುರ್ಥೀ ಅಥವಾ ಸಂಕಷ್ಟೀ ಚತುರ್ಥಿಯಿಂದ ಫಲ ದೊರೆಯುತ್ತದೆ. ಆದರೆ ದೊರೆಯುವ ಫಲದಿಂದ ಅನರ್ಥವೇ ಉಂಟಾಗುತ್ತದೆ. ಶ್ರೀ ಜಗನ್ನಾಥದಾಸಾರ್ಯರು ತಿಳಿಸುತ್ತಾರೆ — ಶಂಕರಾತ್ಮಜ ದೈತ್ಯರಿಗತಿಭ- ಯಂಕರ ಗತಿಗಳೀಯಲೋಸುಗ ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು | ಮಂಕುಗಳ ಮೋಹಿಸುವೆ ಚಕ್ರದ- ರಾಂಕಿತನೆ ದಿನದಿನದಿ ತ್ವತ್ಪದ- ಪಂಕಜಗಳಿಗೆ ಬಿನ್ನಯಿಸುವೆನು ಪಾಲಿಪುದು ಎಮ್ಮ || ಎಂದು. ಸಂಕಟವನ್ನು ಪರಿಹಾರ ಮಾಡುವ ಚತುರ್ಥಿಯಲ್ಲ, ಕಡೆಯಲ್ಲಿ ಸಂಕಟವನ್ನೇ ನೀಡುವ ಚತುರ್ಥಿಯಿದು ಎಂದು. ಆದ್ದರಿಂದ ವೈಷ್ಣವರಲ್ಲಿ ಸಂಕಷ್ಟಿಯನ್ನು ಮಾಡುವ ಪದ್ಧತಿಯಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ