ಯಾವ ಬೆರಳುಗಳಿಂದ ಊರ್ಧ್ವಪುಂಡ್ರ ಧರಿಸಬೇಕು?
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಯಾವುದೇ ತಿಲಕವನ್ನು ತೋರುಬೆರಳಿನಿಂದ ಹಚ್ಚಬಾರದು ಎನ್ನುತ್ತಾರೆ ಕೆಲವರು ಉಂಗುರದ ಬೆರಳಿನಿಂದ ಹಚ್ಚಬೇಕು ಎನ್ನುತ್ತಾರೆ. ಇದು ಸತ್ಯವೇ ತಿಳಿಸಿಕೊಡಿ — ಮಂಜುನಾಥ್ ಹಾಗೇನಿಲ್ಲ. ಶ್ರೀ ಮಂತ್ರಾಲಯಪ್ರಭುಗಳ ಶಿಷ್ಯರಾದ ಶ್ರೀಕೃಷ್ಣಾಚಾರ್ಯರು ತಮ್ಮ ಸ್ಮೃತಿಮುಕ್ತಾವಲಿಯ ಆಹ್ನೀಕಪ್ರಕರಣದಲ್ಲಿ ಯಾವ ಬೆರಳಿನಿಂದ ಹಚ್ಚಿಕೊಂಡಲ್ಲಿ ಯಾವ ಫಲ ಎನ್ನುವದನ್ನು ಸ್ಪಷ್ಟವಾಗಿ ಪುರಾಣವಚನಗಳ ಆಧಾರದಿಂದ ತಿಳಿಸಿದ್ದಾರೆ. ಬ್ರಹ್ಮಾಂಡಪುರಾಣ — ಅಂಗುಷ್ಠಃ ಪುಷ್ಟಿದಃ ಪ್ರೋಕ್ತೋ ಮಧ್ಯಮಾಯುಷ್ಕರೀ ತಥಾ । ಅನಾಮಿಕಾsನ್ನದಾ ನಿತ್ಯಾ ಮುಕ್ತಿದಾ ತರ್ಜನೀ ಸ್ಮೃತಾ ।। ಭಾರದ್ವಾಜಸಂಹಿತೆ — ಊರ್ಧ್ವಪುಂಡ್ರವಿಧೌ ಮೋಕ್ಷಂ ಅಂಗುಷ್ಠಂ ತರ್ಜನೀ ಶ್ರಿಯಮ್। ಮಧ್ಯಮಾ ಪಶುಪುತ್ರಾದಿ ಮೋಕ್ಷೈಶ್ವರ್ಯಮನಾಮಿಕಾ। ವಶ್ಯಂ ಕನಿಷ್ಠಂ ವಾ ಕುರ್ಯಾತ್ ನಚಾನ್ಯೇನ ವಿಧೀಯತೇ। ಹೆಬ್ಬೆರಳಿನಿಂದ ಹಚ್ಚಿಕೊಂಡಲ್ಲಿ ದೇಹ ಪುಷ್ಟವಾಗುತ್ತದೆ. ಮೋಕ್ಷ ದೊರೆಯುತ್ತದೆ. ತೋರುಬೆರಳಿನಿಂದ ಹಚ್ಚಿಕೊಂಡರೆ ಸಂಪತ್ತು ಮತ್ತು ಮೋಕ್ಷಗಳು ದೊರೆಯುತ್ತವೆ. ಮಧ್ಯದ ಬೆರಳಿನಿಂದ ಪಶು-ಪುತ್ರರ ಮತ್ತು ಆಯುಷ್ಯದ ಅಭಿವೃದ್ಧಿಯಾಗುತ್ತದೆ. ಉಂಗುರದ ಬೆರಳಿನಿಂದ ಅಧಿಕಾರ (ಐಶ್ವರ್ಯ ಎಂದರೆ ಸ್ವಾಮಿಭಾವ, ಅಧಿಕಾರ) ಮತ್ತು ಮೋಕ್ಷ. ಕಿರುಬೆರಳಿನಿಂದ ಹಚ್ಚಿಕೊಂಡರೆ ಜನರು ವಶರಾಗುತ್ತಾರೆ. ಊರ್ಧ್ವಪುಂಡ್ರವನ್ನು ಮಧ್ಯದ ಬೆರಳಿನಿಂದ ಹಚ್ಚಿಕೊಳ್ಳಬಾರದು ಎನ್ನುವದಕ್ಕೆ ಪರಮೇಷ್ಠಿಸಂಹಿತೆಯ ವಚನವನ್ನು ಉದಾಹರಿಸಿ ಶ್ರೀ ಕೃಷ್ಣಾಚಾರ್ಯರು ಅದು ಫಲವಿಶೇಷದ ನಿಷೇಧ ಎಂದು ತಿಳಿಸಿದ್ದಾರೆ. ಮಧ್ಯದ ಬೆರಳು ಮತ್ತು ಕಿರುಬೆರಳಿನಿಂದ ಹಚ್ಚಿಕೊಂಡಾಗ ಐಹಿಕ ಫಲದೊರೆಯುತ್ತದೆ ಎಂದು ಉಲ್ಲೇಖವಿದೆಯಷ್ಟೇ ಹೊರತು, ಮೊಕ್ಷ ದೊರೆಯುತ್ತದೆ ಎಂದು ಉಲ್ಲೇಖವಿಲ್ಲ. ಹೀಗಾಗಿ ಅದು ಪೂರ್ಣವಾಗಿ ಸಕಾಮವಾಗುತ್ತದೆ. ಹೆಬ್ಬೆರಳು, ತೋರುಬೆರಳು ಮತ್ತು ಉಂಗುರದ ಬೆರಳುಗಳು ಐಹಿಕ ಫಲವನ್ನು ನೀಡಿದರೂ ಅದರಿಂದ ಮೋಕ್ಷವೆಂಬ ಫಲವೇ ಪ್ರಧಾನ. ೃ ಪೂರ್ಣವಾಗಿ ಕಾಮ್ಯವಾದ ಕರ್ಮವನ್ನು ಸಾಧಕರು ಮಾಡಬಾರದು. ಅದಕ್ಕಾಗಿ ನಿಷ್ಕಾಮಕರ್ಮ ಮಾಡುವ ಸಾಧಕರು ಮಧ್ಯದ ಬೆರಳು ಮತ್ತು ಕಿರುಬೆರಳಿನಿಂದ ಹಚ್ಚದೇ ಬೇರೆಯ ಬೆರಳುಗಳಿಂದ ಊರ್ಧ್ವಪುಂಡ್ರಧಾರಣೆ ಮತ್ತು ತಿಲಕಗಳನ್ನು ಧಾರಣೆ ಮಾಡಬಹುದು. ಒಟ್ಟಾರೆ ಬಲಗೈ ಬೆರಳುಗಳಿಂದಲೇ ತಿಲಕ ಎನ್ನುವದು ನಿರ್ವಿವಾದ — ದಕ್ಷಿಣಸ್ಯೈವ ಹಸ್ತಸ್ಯ ತ್ರಂಗುಲ್ಯಃ ಸಮುದೀರಿತಾಃ ಎಂದು ಪರಮೇಷ್ಠಿಸಂಹಿತೆಯ ವಚನ. — ವಿಷ್ಣುದಾಸ ನಾಗೇಂದ್ರಾಚಾರ್ಯ