ಹಚ್ಚೆ, Tattoo ಹಾಕಿಸಿಕೊಳ್ಳಬಹುದೇ
ನಮಸ್ಕಾರ ಆಚಾರ್ಯರೇ. ಇತ್ತೀಚೆಗೆ ಹಚ್ಚೆ ಹಾಕಿಕೋಳ್ಳುವುದು ಒಂದು ಚಟವಾಗಿದ್ದು ಅದು ಶಾಸ್ತ್ರ ಸಮ್ಮತವೇ ? ಸುಧಾ ಓದುವ ವಿದ್ಯಾರ್ಥಿಗಳು ಕೂಡ ಇದರಿಂದ ಹೋರತಾಗಿಲ್ಲವಲ್ಲ? — ಜಯರಾಮಾಚಾರ್ಯರ ಬೆಣಕಲ್ ಆಚಾರ್ಯರೆ ಭಕ್ತಿ ಪೂರ್ವಕ ನಮಸ್ಕಾರಗಳುಆಚಾರ್ಯರೆ ಹಚ್ಚೆ ಹಾಕಿಸಿಕೊಳ್ಳುವ ಪದ್ದತಿ ಹಿಂದು ಧರ್ಮದಿಂದ ಬಂದದ್ದಾ? ಇದಕ್ಕೆ ಶಾಸ್ತ್ರ ಸಮ್ಮತವಿದೆಯ ಕೆಲವರು ಇದೆ ಎಂದು ಮೌಢ್ಯದಿಂದ ವಾದಿಸುತ್ತಾರೆ. ಸರಿಯಾದ ಮಾಹಿತಿ ನೀಡಿ🙏 — ಮಂಜುನಾಥ್ ಹಚ್ಚೆ ಹಾಕಿಸಿಕೊಳ್ಳುವದು ಸರ್ವಥಾ ವೈದಿಕವಾದ ಸಂಸ್ಕಾರವಲ್ಲ. ಶಾಸ್ತ್ರಗಳಲ್ಲಿ ಇದರ ಕುರಿತು ವಿಧಿ ಇಲ್ಲ. ಸಾಮಾನ್ಯವಾಗಿ ಬುಡಕಟ್ಟು ಜನಾಂಗಗಳಲ್ಲಿ ಈ ರೀತಿಯ ಪದ್ಧತಿಗಳಿವೆ. ಮತ್ತು ಅದಕ್ಕೆ ಏನೇನೋ ಅರ್ಥಗಳನ್ನೂ ಹೇಳುತ್ತಾರೆ. ಮತ್ತು, ಹಚ್ಚೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ದೇಹಕ್ಕೆ ಅಪಾರ ಯಾತನೆಯಾಗುತ್ತದೆ ಎಂದು ಕೇಳಿದ್ದೇನೆ. ಮರ್ಮಸ್ಥಾನಗಳಲ್ಲಿ ಹಾಕುವಾಗ ಮತ್ತು ದೊಡ್ಡ ದೊಡ್ಡ Tattoo ಹಾಕುವ ಸಂದರ್ಭದಲ್ಲಂತೂ ಅನಸ್ತೇಷಿಯಾ ಕೊಟ್ಟು ಹಾಕುತ್ತಾರೆ ಎಂದು ಕೇಳಿದ್ದೇನೆ. ಈ ರೀತಿಯಾಗಿ ದೇಹಕ್ಕೆ ಹಿಂಸೆ ನೀಡಬಾರದು. ಶಾಸ್ತ್ರದಲ್ಲಿ ವಿಹಿತವಾಗಿರುವ ಏಕಾದಶೀ ಉಪವಾಸ, ತಪ್ತಮುದ್ರಾಧಾರಣೆ ಮೊದಲಾದ ದೇಹದಂಡನೆ (ಹಿಂಸೆ) ಗ್ರಾಹ್ಯವೇ ಹೊರತು, ಈ ರೀತಿಯಾಗಿ ಮನೋರಂಜನೆಗಾಗಿ, ವ್ಯರ್ಥವಾಗಿ ದೇಹಕ್ಕೆ ಹಿಂಸೆ ನೀಡಬಾರದು. ಯಾವ ಹಿಂಸೆ ಮೋಕ್ಷಸಾಧನವೋ ಅದನ್ನು ಮಾತ್ರ ಮಾಡತಕ್ಕದ್ದು. ಸುಮಾರು ವರ್ಷದ ಹಿಂದೆ ಒಬ್ಬ ಹುಡುಗಿ ನನ್ನನ್ನು ಕೇಳಿದ್ದಳು. ನಾನು ಎಡತೋಳು, ಬಲತೋಳುಗಳಲ್ಲಿ ಶಂಖ ಚಕ್ರಗಳ ಹಚ್ಚೆ ಹಾಕಿಸಿಕೊಳ್ಳುತ್ತೇನೆ, ತಪ್ಪೇನು ಎಂದು. ಗೋಪೀಚಂದನದಿಂದ, ತಪ್ತಮುದ್ರೆಯಿಂದ ಶಂಖಚಕ್ರಾದಿಗಳ ಧಾರಣೆ ಶಾಸ್ತ್ರವಿಹಿತ. ಅಲ್ಲಿ ಪ್ರತಿಯೊಂದಕ್ಕೂ ಮಂತ್ರವಿದೆ, ಕ್ರಿಯೆಯಿದೆ. ಶ್ರೀಕೃಷ್ಣನ ಕಾಲಕ್ಕೆ ಪೌಂಢ್ರಕ ವಾಸುದೇವ ಎಂಬುವವನಿದ್ದ. ಅವನು ತಾನೇ ಶ್ರೀಹರಿ ಎಂಬ ಭ್ರಮೆಯೊಳಗೆ ತನ್ನೆದೆಯನ್ನು ತಾನೇ ಸುಟ್ಟುಕೊಂಡಿದ್ದ. ಶ್ರೀವತ್ಸಾರ್ಥೆ ದಗ್ಧವಕ್ಷಸ್ಥಲಂ ಚ. ಶಂಖಚಕ್ರಗಳನ್ನು ಕಾಯಿಸಿ ತಪ್ತಮುದ್ರೆಯನ್ನು ಧರಿಸುವದನ್ನು ಪ್ರಶಂಸಿಸುವ ಶಾಸ್ತ್ರವೇ ಶ್ರೀವತ್ಸದ ಚಿಹ್ನೆಯನ್ನು ಮೂಡಿಸಿಕೊಂಡಿದ್ದ (ಅವತ್ತಿನ ಟ್ಯಾಟೂ ಅದು) ಪೌಂಡ್ರಕನನ್ನು ನಿಂದಿಸುತ್ತದೆ, ಅಪಹಾಸ ಮಾಡುತ್ತದೆ. ಶಾಸ್ತ್ರದ ಆಧಾರವನ್ನು ತಿಳಿದು ನಮಗೆ ಯೋಗ್ಯವಾದ ಕರ್ಮವನ್ನು ನಾವು ಮಾಡಬೇಕು. ನಾವು ಮಾಡಿದ್ದಕ್ಕೆ ಶಾಸ್ತ್ರದ ಆಧಾರವನ್ನು ಹುಡುಕಬಾರದಲ್ಲವೇ? ಇನ್ನು ಸುಧಾಪಂಡಿತರು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಎರಡು ಉತ್ತರಗಳಿವೆ. ಸುಧಾಪಂಡಿತ ಎಂದು ಕರೆಯಬೇಕಾದರೆ ಆತ ಎಲ್ಲ ಪ್ರಶ್ನೆಗಳಿಗೂ ಉತ್ತರ ತಿಳಿದು, ಮತ್ತೊಬ್ಬರಿಗೆ ತಿಳಿಸುವಷ್ಟು ಪ್ರಬುದ್ಧನಾಗಿರಬೇಕು. ಜೈನರು ತಮ್ಮ ಕೂದಲನ್ನು ತಾವು ಕಿತ್ತುಕೊಂಡು ಹಿಂಸೆ ನೀಡಿಕೊಳ್ಳುತ್ತಾರೆ. ಇದನ್ನು ಟೀಕಾಕೃತ್ಪಾದರು ತಿರಸ್ಕರಿಸಿದ್ದಾರೆ. ಅಂದರೆ ಶಾಸ್ತ್ರದ ಆದೇಶವಿಲ್ಲದೆ ಮಾಡುವ ಹಿಂಸೆ ಅನರ್ಥಕಾರಿಯಾದದ್ದು ಎಂಬ ಟೀಕಾಕೃತ್ಪಾದರ ನಿರ್ಣಯವನ್ನು ತಿಳಿಯದ ವ್ಯಕ್ತಿ ಸುಧಾಪಂಡಿತ ಹೇಗಾಗಲು ಸಾಧ್ಯ? ಎರಡನೆಯ ಉತ್ತರ — ಸುಧಾಪಂಡಿತರಾಗಲಿ, ಸಂನ್ಯಾಸಿಗಳಾಗಲೀ, ದೇವತೆಗಳಾಗಲೀ, ಭಗವಂತನಿಗೆ ವಿರುದ್ಧವಾಗಿ ನಡೆದರೆ ಅದು ಧರ್ಮವಾಗಲು ಸಾಧ್ಯವಿಲ್ಲ. ಪರಮಾತ್ಮನಿಗೆ ಪ್ರಿಯವಾದದ್ದು ಧರ್ಮ. ಪರಮಾತ್ಮನಿಗೆ ಅಪ್ರಿಯವಾದದ್ದು ಅಧರ್ಮ. ಹೀಗಾಗಿ ಪಂಡಿತರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅಧರ್ಮ ಧರ್ಮವಾಗುವದಿಲ್ಲ. ಕಿಂತು, ಧರ್ಮವನ್ನು ತಿಳಿದು ಆಚರಿಸುವ ವ್ಯಕ್ತಿ ಪಂಡಿತನಾಗುತ್ತಾನೆ. ಧರ್ಮವನ್ನು ತಿಳಿದೂ ಆಚರಿಸದ ವ್ಯಕ್ತಿ ಪಂಡಿತನೂ ಅಲ್ಲ, ಸಮಾಜಕ್ಕವನು ಆದರ್ಶವೂ ಆಗಬೇಕಾಗಿಲ್ಲ. ಈ ಹಚ್ಚೆ ಒಂದೇ ಅಲ್ಲ, ಕಲಿ ನೂರಾರು ರೀತಿಯಲ್ಲಿ ಸಾಧಕರ ಸಮಾಜದಲ್ಲಿ ಹೊಕ್ಕು ತಾಂಡವವಾಡುತ್ತಿದ್ದಾನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ