ಮಕ್ಕಳಾಗದ ಹೆಣ್ಣು ಮಡಿಗೆ ಬರುವದಿಲ್ಲವೇ?
ಗುರುಗಳಿಗೆ ನಮಸ್ಕಾರ. ಮಕ್ಕಳು ಆಗದೆ ಇದ್ದವರು ಮಡಿಯಿಂದ ಅಡಿಗೆ ಮಾಡಬಹುದಾ? — ಹೆಸರು ಬೇಡ. ಅವಶ್ಯವಾಗಿ ಮಾಡಬಹುದು. ನೋಡಿ, ನಮ್ಮ ಮಾಧ್ವರಲ್ಲಿ ಕೆಲವರಲ್ಲಿ ಈ ವಿಚಿತ್ರ ಆಚರಣೆಯಿದೆ. ಮದುವೆಯಾದ ಬಳಿಕ ಹೆಣ್ಣಿಗೆ ಮಕ್ಕಳಾಗುವವರೆಗೆ ಅವರನ್ನು ಮಡಿಯ ಅಡಿಗೆಗೆ ಕರೆದುಕೊಳ್ಳುವದಿಲ್ಲ. ಅವರು ಮಡಿಯ ಕೆಲಸಕ್ಕೇ ಬರುವದಿಲ್ಲ ಎಂದು. ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಯಿದು. ಮದುವೆಯಾದ ದಿವಸದಿಂದ ಗಂಡಸಿಗೆ ಹೋಮದ ಅಧಿಕಾರ ಬರುತ್ತದೆ. ಪೂರ್ಣಾಹುತಿಯನ್ನು ಹಾಕುವವಳು ಪತ್ನಿಯೇ. ಅಗ್ನಿಹೋತ್ರಾದಿ ಎಲ್ಲದರಲ್ಲಿಯೂ ಅಧಿಕಾರ ಪತ್ನಿಗೆ ಇರುತ್ತದೆ. ಇವೆಲ್ಲವೂ ಪರಿಶುದ್ಧ ಮಡಿಯಲ್ಲಿಯೇ ಆಗಬೇಕಾದ ಕಾರ್ಯಗಳೇ.. ಮಕ್ಕಳಾಗುವವರೆಗೆ ಮಡಿಗೆ ಬರುವದಿಲ್ಲ ಎಂತಾದರೆ ಈ ಯಾವ ಕಾರ್ಯಗಳನ್ನೂ ಗಂಡಸು ಮಾಡುವಂತಿಲ್ಲ. ಕಾರಣ, ಹೆಂಡತಿಯಿಲ್ಲದೇ ಹೋಮಾದಿಗಳನ್ನು ಮಾಡುವಂತೆಯೇ ಇಲ್ಲ. ಹೀಗಾಗಿ ಮಡಿಯ ಕಾರ್ಯದಲ್ಲಿ ಅಧಿಕಾರ ಮದುವೆಯಾದ ದಿವಸದಿಂದಲೇ ಹೆಣ್ಣಿಗೆ ಬರುತ್ತದೆ. ಮತ್ತು, ಶ್ರೀಮದಾಚಾರ್ಯರೂ ಸಹ ವಿವಾಹವೇ ಸ್ತ್ರೀಯರಿಗೆ ಉಪನಯನದಂತಹ ಸಂಸ್ಕಾರ ಎಂದು ತಿಳಿಸಿದ್ದಾರೆ. “स्त्रीणां प्रदानकर्मैव यथोपनयनं तथा” ನಮ್ಮಲ್ಲಿ ಉಪನಯನವಾಗದ ಗಂಡುಮಕ್ಕಳು ಮಡಿಗೆ ಬರುವದಿಲ್ಲ. ಉಪನಯನವಾದ ನಂತರವೇ ಅವರು ಮಡಿಗೆ ಬರುವುದು. ಹೆಣ್ಣಿಗೂ ಸಹ ವಿವಾಹವೇ ಉಪನಯನವಾದ್ದರಿಂದ, ವಿವಾಹವಾದ ದಿವಸದ ನಂತರ ಅವರು ಮಡಿಗೆ ಬರುತ್ತಾರೆ. ಮಡಿಗೆ ಬರುವದಿಲ್ಲ ಎಂತಾದಲ್ಲಿ ಮಕ್ಕಳಾಗುವವರೆಗೆ ಅಗ್ನಿಹೋತ್ರ, ಶ್ರಾದ್ಧ ಯಾವುದನ್ನು ಮಾಡಬಾರದು. ಕಾರಣ, ಶ್ರಾದ್ಧಾದಿಗಳಲ್ಲಿ ಹೆಂಡತಿ ಮಾಡಿದ ಅಡಿಗೆಯಿಂದಲೇ ಕಾರ್ಯವಾಗುವದು. ಹೀಗಾಗಿ ಮಡಿಯ ಕೆಲಸಕ್ಕೂ ಮಕ್ಕಳಾಗುವದಕ್ಕೂ ಸಂಬಂಧವಿಲ್ಲ. ಮದುವೆಯಾದ ತಕ್ಷಣ ಹೆಣ್ಣು ಮಡಿಯ ಕಾರ್ಯಗಳನ್ನು ಮಾಡಬಹುದು. ಮನೆಯಲ್ಲಿ ಸೊಸೆಯರು ಆರಾಮಾಗಿ ಇರಲಿ ಆನಂತರ ಮಡಿಯ ಕೆಲಸ ಮಾಡಲಿ ಎಂದು ಅವರಿಗೆ ಕೆಲಸಗಳನ್ನು ನಿಧಾನವಾಗಿ ಕಲಿಸುವದು ಬೇರೆ. ತಪ್ಪಿಲ್ಲ. ಆದರೆ ಮಕ್ಕಳಾಗುವವರೆಗೆ ಹೆಣ್ಣು ಮಡಿಗೇ ಬರುವದಿಲ್ಲ ಎನ್ನುವ ಮಾತು ಶಾಸ್ತ್ರಕ್ಕೆ ವಿರುದ್ಧವಾದದ್ದು. — ವಿಷ್ಣುದಾಸ ನಾಗೇಂದ್ರಾಚಾರ್ಯ