ಪರಶುರಾಮದೇವರು ತಂದೆಯನ್ನೇಕೆ ಬದುಕಿಸಲಿಲ್ಲ?
“ಪರಶುರಾಮದೇವರಿಗೆ ತಾಯಿಯನ್ನು ಬದುಕಿಸುವ ಸಾಮರ್ಥ್ಯವಿತ್ತು. ಅಂದಮೇಲೆ ತಂದೆಯನ್ನೂ ಬದುಕಿಸುವ ಶಕ್ತಿಯೂ ಇತ್ತು. ಯಾಕಾಗಿ ಬದುಕಿಸಲಿಲ್ಲ” — ಜಗನ್ನಾಥ್, ಬೆಂಗಳೂರು. ರೇಣುಕಾದೇವಿಯನ್ನು ಜಮದಗ್ನಿಗಳು ಕೊಲ್ಲಲು ಆದೇಶಿಸಿದ್ದು ಅವರು ಮಾಡಿದ ಅಪರಾಧಕ್ಕೆ ಶಿಕ್ಷೆಯನ್ನು ನೀಡಲು. ಶಿಕ್ಷೆ ಮುಗಿದ ಬಳಿಕ ಮತ್ತೆ ಬದುಕಿಸಿದರು. ಅಂದರೆ ರೇಣುಕಾದೇವಿಯ ಆಯುಷ್ಯ ಮುಗಿದಿರಲಿಲ್ಲ. ಶಿಕ್ಷೆಗೆ ಅಪರಾಧವಾಗಿ ಮರಣ ಬಂದೊದಗಿತು. ಶಿಕ್ಷೆಯಿಂದ ಪಾಪ ಭಸ್ಮವಾದ ಬಳಿಕ ಮತ್ತೆ ಜಮದಗ್ನಿಗಳು ಬದುಕಿಸಿದರು. ಆದರೆ, ಜಮದಗ್ನಿಗಳ ವಿಷಯದಲ್ಲಿ ಹೀಗಿಲ್ಲ. ಅವರ ಆಯುಷ್ಯವೇ ಮುಗಿದಿತ್ತು. ಅವರ ಮರಣ ಈ ರೀತಿಯಾಗಿಯೇ ಆಗಬೇಕೆಂದಿತ್ತು. ಹೀಗಾಗಿ ಸತ್ತ ಜಮದಗ್ನಿಗಳನ್ನು ಮತ್ತೆ ಪರಶುರಾಮದೇವರು ಬದುಕಿಸುವದಿಲ್ಲ. ಹಾಗೆ ಬದುಕಿಸುವದಾದರೆ ಸತ್ತ ಆಯುಷ್ಯ ಮುಗಿದು ಸತ್ತ ಎಲ್ಲರನ್ನೂ ಭಗವಂತ ಬದುಕಿಸಬೇಕಾಗುತ್ತದೆ. ಹೀಗಾಗಿ ಜಮದಗ್ನಿಗಳನ್ನು ಬದುಕಿಸುವ ಸರ್ವಸಾಮರ್ಥ್ಯವಿದ್ದರೂ ಪರಮಾತ್ಮ ಮತ್ತೆ ಬದುಕಿಸುವದಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ