ಜಮದಗ್ನಿಋಷಿಗಳಿಗೆ ಹಸುವನ್ನು ಕಾಪಾಡುವಷ್ಟು ಶಕ್ತಿ ಇರಲಿಲ್ಲವೇ?
ಶ್ರೀ ಜಮದಗ್ನಿಋಷಿಗಳಿಗೆ ಸತ್ತ ತಮ್ಮ ಹೆಂಡತಿಯನ್ನು ಬದುಕಿಸುವಷ್ಟು ಸಾಮರ್ಥ್ಯವಿದ್ದಾಗ ಕಾರ್ತವೀರ್ಯಾರ್ಜುನ ಹಸುವನ್ನು ಸೆಳೆದೊಯ್ಯಬೇಕಾದರೆ ನಿಗ್ರಹಿಸುವ ಶಕ್ತಿ ಇರಲಿಲ್ಲವೇ? ವಿಜಯ್ ಕುಮಾರ್, ಬೆಂಗಳೂರು. ಇರಲಿಲ್ಲ. ನಮ್ಮ ಪ್ರತಿಯೊಂದು ಶಕ್ತಿ ಸಾಮರ್ಥ್ಯಗಳಿಗೂ ಒಂದು ಸೀಮೆ ಇರುತ್ತದೆ. ನಮ್ಮ ಹೆಂಡತಿ ಮಕ್ಕಳನ್ನು ಚನ್ನಾಗಿ ಸಾಕುವ ಶಕ್ತಿ ನಮಗಿದ್ದ ಮಾತ್ರಕ್ಕೆ, ಒಂದು ಊರನ್ನೇ ಸಾಕುವಷ್ಟು ಶಕ್ತಿ ನಮ್ಮಲ್ಲಿರಬೇಕೆಂಬ ನಿಯಮವಿಲ್ಲ. ಹಾಗೆ, ಜಮದಗ್ನಿ ಋಷಿಗಳಿಗೆ ಸತ್ತವರನ್ನು ಬದುಕಿಸುವ ಸಾಮರ್ಥ್ಯವಿದ್ದರೂ, ಕಾರ್ತವೀರ್ಯಾರ್ಜುನನ್ನು ತಡೆಯುವ ಶಕ್ತಿ ಇರಲಿಲ್ಲ. ಕಾರಣ ದತ್ತಾತ್ರೇಯ ರೂಪದ ಭಗವಂತನಿಂದ ವರವನ್ನು ಪಡೆದ ಶ್ರೇಷ್ಠ ಯೋಗಶಕ್ತಿಯ ರಾಜ ಆ ಕೃತವೀರ್ಯನ ಮಗ. ಮತ್ತೂ, ಯೋಗ್ಯತೆಯಲ್ಲಿ ಸಹಿತ ಕಾರ್ತವೀರ್ಯಾರ್ಜುನ ಜಮದಗ್ನಿಗಳಿಗಿಂತ ತುಂಬ ಹಿರಿಯ. ದೇವರ ವರದ ಬಲದಿಂದ ಬ್ರಹ್ಮದೇವರ ವರವಿದ್ದ ರಾವಣನನ್ನೇ ಸೋಲಿಸಿದ್ದ ಪರಾಕ್ರಮಿ ಅವನು. ಹೀಗಾಗಿ ಅವನನ್ನು ನಿಗ್ರಹಿಸುವ ಶಕ್ತಿ ಜಮದಗ್ನಿಗಳಿಗಿರಲಿಲ್ಲ. ಸರಿ. ಆದರೆ, ಕಾರ್ತವೀರ್ಯನ ಮಕ್ಕಳು ಬಂದು ತಮ್ಮನ್ನು ಕೊಲ್ಲುವಾಗ ತಮ್ಮನ್ನಾದರೂ ರಕ್ಷಣೆ ಮಾಡಿಕೊಳ್ಳಬಹುದಿತ್ತಲ್ಲವೇ ? ಹೌದು. ಖಂಡಿತ ಸಾಧ್ಯವಿತ್ತು. ಆ ಸಾಮರ್ಥ್ಯ ಜಮದಗ್ನಿಗಳಿಗಿತ್ತು. ಆದರೆ, ಆ ರಾಜಪುತ್ರರು ಆಶ್ರಮಕ್ಕೆ ಬಂದಾಗ ಇಡಿಯ ಜಗತ್ತಿನ ಪರಿವೆಯನ್ನು ಮರೆತು ಜಮದಗ್ನಿಋಷಿಗಳು ಧ್ಯಾನಾಸಕ್ತರಾಗಿರುತ್ತಾರೆ. ಅಸಂಪ್ರಜ್ಞಾತ ಸಮಾಧಿಯಲ್ಲಿದ್ದಾಗ ತಲೆಯನ್ನು ಕಡಿದರೂ ಅವರಿಗೆ ತಿಳಿಯುವದಿಲ್ಲ. ಕಾರಣ ದೇಹದ ಮೇಲಿನ ಪೂರ್ಣ ಅಭಿಮಾನವನ್ನು ಬಿಟ್ಟು ಪರಮಾತ್ಮನ ಪಾದಕಮಲಗಳ ದರ್ಶನ ಮಾಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಜಮದಗ್ನಿಗಳನ್ನು ಈ ದುಷ್ಟ ರಾಜಪುತ್ರರು ಕೊಂದದ್ದರಿಂದ, ಜಮದಗ್ನಿಗಳಿಗೆ ಅವರು ಬಂದದ್ದು, ಕೊಂದದ್ದು ಯಾವುದೂ ತಿಳಿಯಲಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ