Prashnottara - VNP070

ರಾಮಚಂದ್ರ ಎಂಬ ಶಬ್ದದ ಅರ್ಥವೇನು?


					 	

ರಾಮದೇವರಿಗೆ ರಾಮಚಂದ್ರ ಎಂದು ಹೆಸರು ಬರಲು ಕಾರಣವೇನು? ರಾಮದೇವರು ಸೂರ್ಯವಂಶದಲ್ಲಿ ಅವತಾರ ಮಾಡಿದವರು ಅಲ್ಲವೇ? ರಾಮಶಬ್ದದೊಡನೆ ಚಂದ್ರ ಸೇರಿಸಿ ಹೇಳಿದಾಗ ವಿಶೇಷ ಅರ್ಥವಿದೆಯೇ? — ಪ್ರಸಾದ್ ರಾವ್ ಸೂರ್ಯವಂಶದಲ್ಲಿ ಹುಟ್ಟಿಬಂದ ಮಾತ್ರಕ್ಕೆ, ಚಂದ್ರನ ಹೆಸರಿನಿಂದ ಕರೆಯಬಾರದು ಎಂದಿಲ್ಲ. ಸೂರ್ಯವಂಶದಲ್ಲಿಯೇ ಹರಿಶ್ಚಂದ್ರ ಎಂಬ ಚಕ್ರವರ್ತಿಯಿಲ್ಲವೇ. ಚಂದ್ರವಂಶದಲ್ಲಿ ಸ್ವಯಂ ಸೂರ್ಯ ಕರ್ಣನಾಗಿ ಹುಟ್ಟಿ ಬರಲಿಲ್ಲವೇ? (ಕರ್ಣನ ತಾಯಿ ಕುಂತೀದೇವಿ ಚಂದ್ರವಂಶವಾದ ಯದುವಂಶದವಳು. ಕರ್ಣನನ್ನು ಸಾಕಿದ ಅಧಿರಥನೂ ಚಂದ್ರವಂಶಕ್ಕೆ ಸೇರಿದವನೇ. ಚಂದ್ರವಂಶದ ಯಯಾತಿಯ ಮಗ “ಅನು”ವಿನ ವಂಶದಲ್ಲಿ ಜಯದ್ರಥ ಎಂಬ ರಾಜನಾಗುತ್ತಾನೆ. ಇವನು ಕ್ಷತ್ರಿಯಳನ್ನು ಮದುವೆಯಾಗದೇ ಸೂತಜಾತಿಯ ಹೆಣ್ಣನ್ನು ಮದುವೆಯಾಗುತ್ತಾನೆ. ಅಲ್ಲಿಂದ ಮುಂದಿನವರೆಲ್ಲ ಸೂತರಾಗಿಯೇ ಮುಂದುವರೆಯುತ್ತಾರೆ, ಕಾರಣ ತಾಯಿಯ ಜಾತಿಯೇ ಮಕ್ಕಳಿಗೆ ಬರುವದು. ಈ ಜಯದ್ರಥನಿಂದ ಐದನೆಯ ತಲೆ ಅಧಿರಥ. ಅವನ ಸಾಕುಮಗ ಕರ್ಣ. ) ಚಂದ್ರ ಎಂದರೆ ಆಹ್ಲಾದವನ್ನು ಉಂಟುಮಾಡುವವನು ಎಂದರ್ಥ. ರಾಮಚಂದ್ರ ಎಂದರೆ ಚಂದ್ರನಂತೆ ಆಹ್ಲಾದವನ್ನೀಯುವವನು ಎಂದರ್ಥ. ಶ್ರೀ ರಾಮದೇವರನ್ನು ರಾಮಚಂದ್ರ ಎಂಬ ಹೆಸರಿನಿಂದ ರಾಮಾಯಣ, ಮಹಾಭಾರತ, ಭಾಗವತಗಳು ಕರೆದಿಲ್ಲ. ಶ್ರೀಮದಾಚಾರ್ಯರೂ ನೇರವಾಗಿ ಪ್ರಯೋಗ ಮಾಡಿಲ್ಲ. ಆದರೆ, “ರಾಮಾವತಾರೋ ಹರಿರೀಶಚಂದ್ರಮಾಃ” ಎಂದು ಶ್ರೀರಾಮದೇವರನ್ನು ಚಂದ್ರನಿಗೆ ಹೋಲಿಸಿದ್ದಾರೆ. ಚಂದ್ರನ ಬಿಂಬ ಕ್ಷೀಣವಾಗುತ್ತದೆ, ಅವನ ಕಾಂತಿಯೂ ಕ್ಷೀಣವಾಗುತ್ತದೆ, ಆದರೆ ರಾಮದೇವರು ಅಕ್ಷೀಣವಾದ ಸುಖಸ್ವರೂಪರು. ಚಂದ್ರನಲ್ಲಿನ ದೋಷ ರಾಮನಲ್ಲಿಲ್ಲ. ಚಂದ್ರ ತನ್ನ ಕಿರಣಗಳಿಂದ ಭೂಮಿಯನ್ನು ವ್ಯಾಪಿಸುತ್ತಾನೆ. ತನ್ನ ಮಹಾಸಾಮರ್ಥ್ಯದಿಂದ ಧರ್ಮ-ಕರ್ಮಗಳನ್ನೂ ನಿಯಮಿಸಿದ ರಾಮಚಂದ್ರ ಎಲ್ಲೆಡೆಯೂ ವ್ಯಾಪ್ತ. ಬಿಸಿಲಿನಿಂದ ಬೆಂದವರಿಗೆ ಚಂದ್ರ ತಂಪನ್ನೀಯುತ್ತಾನೆ. ತನ್ನ ಭಕ್ತರ ಸಂತಾಪಗಳನ್ನೆಲ್ಲ ರಾಮಚಂದ್ರ ಪರಿಹರಿಸುತ್ತಾನೆ. ಹೀಗಾಗಿ, ಅಕ್ಷೀಣಸುಖಬಿಂಬನಾದ, ತನ್ನ ಐಶ್ವರ್ಯದಿಂದ ಎಲ್ಲೆಡೆ ವ್ಯಾಪಿಸಿರುವ, ಅಸ್ತಮಾನ ಎಂಬುದೇ ಇಲ್ಲದ, ಭಕ್ತರ ತಾಪವನ್ನು ಪರಿಹರಿಸುವ ರಾಮದೇವರೇ ಮುಖ್ಯಾರ್ಥದಲ್ಲಿ ಚಂದ್ರ ಎಂಬ ಶಬ್ದದಿಂದ ವಾಚ್ಯರಾದ್ದರಿಂದ, ರಾಮಚಂದ್ರ ಎಂದು ಕರೆಸಿಕೊಳ್ಳುತ್ತಾರೆ ಎಂದು ಆಚಾರ್ಯರು ತಿಳಿಸುತ್ತಾರೆ. ರಾಮಚಂದ್ರ ಎಂಬ ಶಬ್ದದ ಪ್ರಯೋಗ ಪುರಾಣಗಳಲ್ಲಿ ಹಾಗೂ ಸ್ತೋತ್ರಸಾಹಿತ್ಯದಲ್ಲಿ ವಿಪುಲವಾಗಿ ಕಂಡು ಬರುತ್ತದೆ. ಶ್ರೀಮದ್ವಾದಿರಾಜಗುರುಸಾರ್ವಭೌಮರು “ಪಾತು ಮಾಂ ರಾಮಚಂದ್ರಃ” ಎಂದು ತಮ್ಮ ತೀರ್ಥಪ್ರಬಂಧದಲ್ಲಿ ಪ್ರಯೋಗ ಮಾಡಿದ್ದಾರೆ. ರಾಮಚಂದ್ರ ಎಂಬ ಹೆಸರು ಜನಸಾಮಾನ್ಯರಲ್ಲಿ ವಿಪುಲವಾಗಿ ಮೊದಲಿನಿಂದಲೂ ಬಳಕೆಯಿದೆ. ಇತಿಹಾಸದಲ್ಲಿ ರಾಮಚಂದ್ರ ಎಂಬ ಹೆಸರಿನ ಅನೇಕ ಗ್ರಂಥಕಾರರು ಆಗಿಹೋಗಿದ್ದಾರೆ. ನಾಟ್ಯಶಾಸ್ತ್ರವನ್ನು ಬರೆದ ರಾಮಚಂದ್ರಪಂಡಿತನ ಹೆಸರು ಸುಪ್ರಸಿದ್ದ. ಶ್ರೀಮದಾಚಾರ್ಯರ ಪರಂಪರೆಯಲ್ಲಿ ಶ್ರೀ ರಾಮಚಂದ್ರತೀರ್ಥರು ಎಂಬ ಹೆಸರಿನ ಅನೇಕ ಯತಿವರೇಣ್ಯರು ಆಗಿಹೋಗಿದ್ದಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
4655 Views

Comments

(You can only view comments here. If you want to write a comment please download the app.)
 • Ritthy G.Vasudevachar,Bengaluru

  11:13 AM, 25/04/2020

  ತಾಯಿಯ ಜಾತಿ ಮಕ್ಕಳಿಗೆ ಬರುತ್ತದೆ ಅಂದರೆ ಯಾವ ರೀತಿ? ಬ್ರಾಹ್ಮಣ ಪುರುಷ ಶೂದ್ರ/ಅನ್ಯಜಾತಿಯ ಹುಡುಗಿಯನ್ನು ಮದುವೆಯಾದಾಗ ಹೇಗೆ? ಅಥವಾ ವಿರುದ್ಧವಾಗಿ ಬ್ರಾಹ್ಮಣ ಕನ್ಯೆ ಶೂದ್ರ/ಅಂತ್ಯಜ/ಮ್ಲೇಚ್ಛ/ಯವನ ಪುರುಷರನ್ನು ಮದುವೆಯಾದಾಗ ಮಕ್ಕಳು ಯಾವ ಜಾತಿ? ದಯವಿಟ್ಟು ತಿಳಿಸಿ

  Vishnudasa Nagendracharya

  ತಾಯಿಯ ಜಾತಿ ಮಕ್ಕಳಿಗೆ ಬರುತ್ತದೆ ಎನ್ನುವದು ಕಲಿಯುಗಕ್ಕೆ ಸಂಬಂಧಪಟ್ಟ ವಿಷಯವಲ್ಲ. ಕೃತ, ತ್ರೇತಾ, ದ್ವಾಪರ ಯುಗಗಳಿಗೆ ಸಂಬಂಧಪಟ್ಟ ವಿಷಯ. 
  
  ಧೃತರಾಷ್ಟ್ರ, ಪಾಂಡುಗಳ ತಾಯಿಯರು ಕ್ಷತ್ರಿಯರು. ಅವರಿಗೆ ಕ್ಷತ್ರಿಯ ಜಾತಿ. ವಿದುರರ ತಾಯಿ ಶೂದ್ರರು, ಹೀಗಾಗಿ ವಿದುರು ಶೂದ್ರರು. 
  
  ಹಾಗೆಯೇ ಅರ್ಜುನನಿಂದ ಉಲೂಪೀದೇವಿಯಲ್ಲಿ ಹುಟ್ಟಿದ ಇರಾವಂತ ನಾಗಜಾತಿಯವರು. ಕಾರಣ ತಾಯಿಯಾದ ಉಲೂಪಿ ನಾಗಕನ್ಯೆ. 
  
  ಅದೇ ರೀತಿ ವಿಶ್ರವಸ್ ಋಷಿಗಳು ಬ್ರಾಹ್ಮಣರು. ಕೈಕಸಿ ರಾಕ್ಷಸಿ. ಅವಳ ಮಕ್ಕಳಾದ ರಾವಣ, ಕುಂಭಕರ್ಣ, ಶೂರ್ಪಣಖೆ ಮತ್ತು ವಿಭೀಷಣರು ರಾಕ್ಷಸರಾದರು. 
  
  ಈ ಘಟನೆಗಳಿಗೆ ಅಪವಾದವಿಲ್ಲದೇ ಇಲ್ಲ. 
  
  ಸತ್ಯವತೀ, ಶಕುಂತಲೆಯರು ಅಪ್ಸರೆಯರ ಮಕ್ಕಳು. ಆದರೂ ತಂದೆಯ ಜಾತಿಯನ್ನು ಪಡೆದರು. ಸತ್ಯವತಿಯ ತಂದೆ ಉಪರಿಚರ ವಸು, ಕ್ಷತ್ರಿಯ. ಶಕುಂತಲೆಯ ತಂದೆ ವಿಶ್ವಾಮಿತ್ರರು ಕ್ಷತ್ರಿಯರು. (ವಿಶ್ವಾಮಿತ್ರರು ಬ್ರಾಹ್ಮಣರಾಗುವ ಮುನ್ನ ನಡೆದ ಘಟನೆಯದು.)
  
  ಹಾಗೆಯೇ ಪರಾಶರರು ಬ್ರಾಹ್ಮಣರು. ಸತ್ಯವತೀ ಕ್ಷತ್ರಿಯಕನ್ಯೆ. ಆದರೂ ಭಗವಂತ ಬ್ರಾಹ್ಮಣಕುಲದವನಾದ. 
  
  ಈ ನಿಯಮ ಕಲಿಯುಗಕ್ಕೆ ಸರ್ವಥಾ ಸಂಬಂಧಿಸಿದ್ದಲ್ಲ. ಭಿನ್ನ ಜಾತಿಯವರು ಮದುವೆಯಾದರೆ ಅದು ವರ್ಣಸಾಂಕರ್ಯ. 
  
  ಬ್ರಾಹ್ಮಣ ಶೂದ್ರಸ್ತ್ರೀ ಸಂಪರ್ಕ ಮಾಡಿದರೆ ಆ ಬ್ರಾಹ್ಮಣನೂ ಶೂದ್ರನಾಗುತ್ತನೆ. ಹುಟ್ಟುವ ಮಗ ಶೂದ್ರನಿಗಿಂತ ಅಧಮ. 
  
  ಹಾಗೆಯೇ ಬ್ರಾಹ್ಮಣಸ್ತ್ರೀ ಶೂದ್ರಪುರುಷನ ಸಂಪರ್ಕ ಮಾಡಿದರೆ ಅವಳೂ ಶೂದ್ರಳಾಗುತ್ತಾಳೆ. ಹುಟ್ಟುವ ಮಗು ಚಂಡಾಲ. 
  
  
 • Vishwnath MJoshi,Bengaluru

  11:31 AM, 06/04/2020

  ಗುರುಗಳಿಗೆ ನಮಸ್ಕಾರ, ನನ್ನದು ಒಂದು ಪ್ರಶ್ನೆ ಗುರುಗಳೆ. ನಿಮ್ಮ ಪ್ರಸಾದ ರಾವ ಅವರ ಪ್ರಶ್ನೆ ಗೆ ಕೊಟ್ಟು ಉತ್ತರದ ಮೇಲೆ ಇನ್ನೊಂದು ಪ್ರಶ್ನೆ. ಕುಂತಿ ದೇವಿಯರು ಕಾಶೀ ರಾಜನಿಗೆ ದತ್ತಕ್ಕ ಹೋಗಿದ್ದು , ಸೀತಾದೇವಿಯು ಭುಮಿಯಲ್ಲಿ ಸಿಕ್ಕಿದ್ದು ಮತ್ತು ಕಾರ್ಣ ,ಇ ಮೂವರು ದತ್ತಕ್ಕೆ ಹೋದದ್ದು. ಹುಟ್ಟಿದ್ದು ಕ್ಷತ್ರಿಯ ಜಾತಿಯಲ್ಲಿ,ಸೀತಾದೇವಿಯನ್ನು ಬಿಟ್ಟು. ಇವರ ಜಾತಿ ಹೇಗೆ ನಿರ್ಧರಿಸಲು ಸಾಧ್ಯ. ಏಕೆಂದರೆ ಹುಟ್ಟಿದ್ದು ಬೇರೆ ಜಾತಿಯಲ್ಲಿ. ಈ ದತ್ತಕ್ಕು ಹೋದ ಮಕ್ಕಳು ಜಾತಿ ಹೇಗೆ ನಿರ್ಧಾರವಾಗುತ್ತದೆ. ದಯವಿಟ್ಟು ತಿಳಿಸಿಕೊಡಿ ಎಂದು ಕೊರುತ್ತೇನೆ.
  ದಪ್ಪವಾದ ಗಳು ಗುರುಗಳೆ
 • Mudigal sreenath,Bengulutu

  4:31 AM , 14/04/2019

  Sree Rama Rama yemba sloka Vishnu sahasra naama anthyadalli rudra devaru parvathi ge helidanthe navu parayana maaduthiddeevi Alva.
 • ಪ್ರಕಾಶ್ ಅಮ್ಮಣ್ಣಾಯ,ಉಡುಪಿ

  9:01 PM , 14/12/2017

  ಅಖಂಡ ಹಿಂದೂ ಹೃದಯಗಳ ಆರಾಧ್ಯದೈವ ಪ್ರಭು ಶ್ರೀರಾಮ ನಿರ್ಮಿಸಿದ ಸೇತುವೆ ಈಗ ಅಮೆರಿಕಾ ಸಾಕ್ಷಿ ಒದಗಿಸಿರುವ ಬೆನ್ನಲ್ಲೇ, ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಆದರೆ, ರಾಮನ ಅಸ್ಥಿತ್ವವೇ ಸುಳ್ಳು ಎಂದು ಕಂಡ ಕಂಡಲ್ಲಿ ಹರಟುವ ಎಡಬಿಡಂಗಿ ಸಾಹಿತಿಗಳೇ ರಾಮ ಸೇತುವಿನ ಟೆಕ್ನಾಲಜಿ ಎಂತಹುದ್ದು ಎಂಬುದನ್ನು ಇಲ್ಲಿ ಒಮ್ಮೆ ನೋಡಿ@ http://kalpa.news/this-is-rama-setu-technoloty-prakash-ammannaya-article/
 • Praveen Patil,

  7:57 PM , 15/08/2017

  ಗುರುಗಳಿಗೆ ನಮಸ್ಕಾರ, ಗುರುಗಳೆ ತಾಯಿಯ ಜಾತಿಯೇ ಮಕ್ಕಳಿಗೆ ಬರುವುದು ಎಂದರೇ ಯಾವ ತರ ದಯಮಾಡಿ ತಿಳಿಸಿರಿ. ಹಾಗಾದರೆ ತಂದೆಯಿಂದ ಮಕ್ಕಳಿಗೆ ಬರುವುದು ಏನು. ಮಕ್ಕಳಿಗೆ ಬರುವ ಗುಣಗಳು ತಂದೆಯಿಂದನ ಅಥವಾ ತಾಯಿಯಂದನ. ದಯಮಾಡಿ ತಿಳಿಸಿರಿ.
 • Ashok Prabhanjana,

  6:15 PM , 03/06/2017

  ಗುರುಗಳೇ, ರಾಮ ಶಬ್ದದ ಪ್ರದಾನ ಅರ್ಥವನ್ನು ದಯವಿಟ್ಟು ತಿಳಿಸಿ.
  ರಾಮ ನಾಮವನ್ನು ಅನಾಂತ ವೇದಗಳ ಸಾರವೆಂದು ಏಕೆ ಹೇಳುತ್ತಾರೆ? ರಾಮ ನಾಮದ ವೈಶಿಷ್ಟ್ಯವೇನು? ದಯವಿಟ್ಟು ತಿಳಿಸಿ ಕೊಡಿ
 • Ashok Prabhanjana,

  7:56 AM , 03/06/2017

  ಗುರುಗಳೇ, ರಾಮನಾಮವನ್ನೆ ಏಕೆ ಅನಾಂತ ವೇದಗಳ ಸಾರ ಎನ್ನುತಾರೆ? 
  ವಿಷ್ಣು ಸಹಸ್ರನಾಮಕ್ಕೆ ರಾಮನಾಮ ತತ್ತುಲ್ಯವಾದದ್ದು ಎಂದು ರುದ್ರದೇವರು ಯಾಕೆ ಹೇಳಿದರು? ದಯವಿಟ್ಟು ತಿಳಿಸಿ

  Vishnudasa Nagendracharya

  ರಾಮೇತಿ ರಾಮ ರಾಮೇತಿ ರಮೇ ರಾಮೇ ಮನೋರಮೇ
  ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ 
  
  ಎನ್ನುವದು ಪದ್ಮಪುರಾಣದಲ್ಲಿನ ವಾಸುದೇವಸಹಸ್ರನಾಮದ ಅಂತ್ಯದಲ್ಲಿ ಬಂದದ್ದು. ವಾಸುದೇವಸಹಸ್ರನಾಮದಲ್ಲಿನ ಎಲ್ಲ ಸಾವಿರ ನಾಮಗಳ ಉಚ್ಚಾರಣೆಯ ಫಲವೂ ರಾಮ ಎಂಬ ಅಕ್ಷರದ ಉಚ್ಚಾರಣೆಯಿಂದ ಬರುತ್ತದೆ ಎಂದದರ ಅರ್ಥ. ವಿಷ್ಣುಸಹಸ್ರನಾಮಕ್ಕೆ ತುಲ್ಯ ಎಂಬ ಅರ್ಥ ಅಲ್ಲಿಲ್ಲ.