ಸಂಧ್ಯಾವಂದನೆಯ ನೀರನ್ನು ಎಲ್ಲಿ ಹಾಕಬೇಕು
ಆಚಾರ್ಯರಿಗೆ ನಮಸ್ಕಾರಗಳು, ಸಂಧ್ಯಾವಂದನೆ ಆದ ನಂತರ, ನೀರನ್ನು ವಿಸರ್ಜನೆ ಮಾ ಡುವ ಬಗೆ ಹೇಗೆ? ಗಿಡಗಳು ಇಲ್ಲದಿದ್ದಲ್ಲಿ ಏನು ಮಾಡಬೇಕು. — ಶ್ರೀನಿವಾಸ್. ಸಂಧ್ಯಾವಂದನೆಯ ನೀರನ್ನು ತುಳಸಿಯ ಗಿಡಕ್ಕೆ ಹಾಕುವ ಪದ್ಧತಿಯಿಲ್ಲ. ಬೇರೆಯ ಗಿಡಗಳಿಗೆ ಹಾಕಬಹುದು. ದೇವರ ಪೂಜೆಯ ನಂತರ ತೀರ್ಥ, ನೀರು ಮುಂತಾದವನ್ನು ತುಳಸಿಯ ಗಿಡಕ್ಕೆ ಹಾಕಬಹುದು, ಗಿಡಗಳಿಗೂ ಹಾಕಬಹುದು. ಗಿಡಗಳು ಇಲ್ಲದ ಪಕ್ಷದಲ್ಲಿ, ಯಾರೂ ತುಳಿಯದ ಸ್ಥಳಕ್ಕೆ ಹಾಕಬೇಕು. ಇದನ್ನು ಮಾತ್ರ ಕಡ್ಡಾಯವಾಗಿ ಪಾಲಿಸತಕ್ಕದ್ದು. ಮನೆಯಲ್ಲಿ ಅಡಿಗೆ ಮನೆಯ ಸಿಂಕು, ಬಚ್ಚಲುಮನೆ ಮುಂತಾದವುಗಳಲ್ಲಿ ಚಲ್ಲುವದಾಗಲೀ, ಅಥವಾ ಯಾವುದೇ ರೀತಿಯಲ್ಲಿ ಆ ಪವಿತ್ರ ನೀರು ಮೋರಿಗೆ ಸೇರುವಂತೆ ಮಾಡಬಾರದು. ಎಚ್ಚರದಲ್ಲಿರಬೇಕು. ಮನೆಯಲ್ಲಿ ಯಾವ ರೀತಿಯ ಗಿಡವೂ ಇಲ್ಲವೇ ಇಲ್ಲವಾದಲ್ಲಿ ಒಂದು Pot ನಲ್ಲಿ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ, ಮನೆಯ ಮೇಲಿಡಿ. ಒಣಗುತ್ತದೆ. ಅಥವಾ ಪ್ರತೀದಿವಸ ಈ ನೀರನ್ನು ಸಂಗ್ರಹ ಮಾಡಿ ಮನೆಯ ಬಳಿ ಇರುವ ಗಿಡಗಳಿಗೆ ಅದನ್ನು ಹಾಕಿ ಬನ್ನಿ. ಜನ ತುಳಿಯುವಂತಹ, ಉಗಿಯುವಂತಹ ಪ್ರದೇಶದಲ್ಲಿ ಹಾಕಬಾರದು ಎನ್ನುವ ಎಚ್ಚರ ಸದಾಕಾಲದಲ್ಲಿರಬೇಕು. ದೇವರಿಗೆ ಸಮರ್ಪಣೆ ಮಾಡಿದ ಒಂದು ಅಂಗಾರವನ್ನು ದಾಟಿ ಹೋದದ್ದಕ್ಕೆ ಮಹಾ ಅನರ್ಥವುಂಟಾದ ಘಟನೆಯನ್ನು ಪುರಾಣಗಳು ದಾಖಲಿಸಿವೆ. ಹೀಗಾಗಿ ಎಚ್ಚರವಿರಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ