Prashnottara - VNP094

ಬಿಳುಪು ಖಾಯಿಲೆಯವರ ಸಾಧನೆ ಹೇಗೆ?


					 	

ನಮಸ್ಕಾರ ಆಚಾರ್ಯರೇ,ನನ್ನ ಮೈಮೇಲೆ ಬಿಳುಪು ಕಲೆಗಳಾಗಿವೆ, ಈ ಕಾಯಿಲೆ ಯಿಂದ ಬಳಲುವವರು ಈ ಕಾರಣದಿಂದ ದೇವರ ಪೂಜೆ ಹಾಗೂ ಮಾಡಿ ಕಾರ್ಯಕ್ಕೆ ನಿಷಿಧ್ದವೇ ದಯವಿಟ್ಟು ತಿಳಿಸಿ ಆಚಾರ್ಯರೇ.ಪರಿಹಾರ ತಿಳಿಸಿರಿ. ಹರೇ ಶ್ರೀನಿವಾಸ. — ಹೆಸರು ಬೇಡ. ಹೌದು. ಎಲ್ಲ ರೀತಿಯ ಮಡಿಯ ಕಾರ್ಯಕ್ಕೆ ನಿಷಿದ್ಧ. ಮೈಮೇಲೆ ಬಿಳಿಪು ಕಲೆ ಇರುವವರು, ಅಥವಾ ಶಾಸ್ತ್ರದ ದೃಷ್ಟಿಯಲ್ಲಿ ಬ್ರಾಹ್ಮಣ್ಯ ಕಳೆದುಕೊಂಡವರು ತಮ್ಮ ಮಟ್ಟಿಗೆ ತಾವು ಸಂಧ್ಯಾವಂದನೆ, ದೇವರಪೂಜೆಗಳನ್ನು ಮಾಡಿಕೊಳ್ಳಬೇಕು. ಅಂದರೆ, ಅವರು ಪೂಜೆ ಮಾಡಿ ಮತ್ತೊಬ್ಬರು ಆ ತೀರ್ಥವನ್ನು ಸ್ವೀಕರಿಸಬೇಕು ಎಂದು ಆಗ್ರಹ ಹಿಡಿಯಬಾರದು. ಅಥವಾ ಮತ್ತೊಬ್ಬರಿಗೆ ಬಡಿಸಲು, ಒಟ್ಟಾರೆ ಯಾವುದೇ ಶುಚಿಯ ಕಾರ್ಯವನ್ನು ಮಾಡಲು ಮುಂದಾಗಬಾರದು. ಸಂಧ್ಯಾವಂದನೆ, ದೇವರಪೂಜೆ ಮುಂತಾದವನ್ನು ತಮ್ಮ ಮಟ್ಟಿಗೆ ತಾವು ಮಾಡಿಕೊಂಡು ಸಾಧನೆ ಮಾಡಿಕೊಳ್ಳಲೇಬೇಕು. ಮಡಿಯ ದೃಷ್ಟಿಯಲ್ಲದಿದ್ದರೂ, ಸೌಂದರ್ಯ ಮುಂತಾದ ದೃಷ್ಟಿಗಳಿಂದ ಸಮಾಜ ಇಂತಹವರನ್ನು ದೂರ ಮಾಡುವದು ಸತ್ಯ. ಹೀಗಾಗಿ ಈ ರೀತಿಯ ಖಾಯಿಲೆಗಳು ನಮ್ಮಲ್ಲಿ ವೈರಾಗ್ಯವನ್ನು ಮೂಡಿಸುವ ದಿವ್ಯಾಸ್ತ್ರಗಳು. “ಈ ಸಮಾಜದ ಜನ ಇಷ್ಟೇ. ಅವರಪೇಕ್ಷಿಸುವ ಗುಣ ನಮ್ಮಲ್ಲಿಲ್ಲದಿದ್ದರೆ, ಅವರಿಗೆ ಬೇಡವಾದ ದೋಷ ನಮ್ಮಲ್ಲಿದ್ದರೆ ನಮ್ಮನ್ನು ದೂರ ಮಾಡಿಯೇ ಮಾಡುತ್ತಾರೆ. ಹೀಗಾಗಿ ನಾನೇ ಅವರಿಂದ ದೂರವಿರಬೇಕು” ಎಂದು ನಿಶ್ಚಯಿಸಬೇಕು. ಯಾವುದೇ ದೋಷವಿದ್ದರೂ ನಮ್ಮನ್ನು ಸ್ವೀಕರಿಸುವ ನಮ್ಮನ್ನು ದೋಷನಿರ್ಮುಕ್ತರನ್ನಾಗಿ ಮಾಡುವ ಶ್ರೀಹರಿಯ ಪಾದಾಶ್ರಯಣವನ್ನು ಮಾಡಬೇಕು. ಮತ್ತು, ನಮಗೆ ಸಲ್ಲದ ಕಾರ್ಯಗಳನ್ನು ಮಾಡಬಾರದು. ಮಾಡಲು ಹೋದರೆ ಶಾಸ್ತ್ರದ ದೃಷ್ಟಿಯಲ್ಲಿ ತಪ್ಪಾಗುತ್ತದೆ ಮತ್ತು ಸಮಾಜದಲ್ಲಿ ಅವಮಾನ. ಎರಡೂ ಬೇಡ. ಹತ್ತಾರು ಜನರು ಪಾಲ್ಗೊಳ್ಳಬೇಕಾದ ಹೋಮ, ಹವನ ಮುಂತಾದ ಯಾವುದನ್ನೂ ಮಾಡದೆ, ಸಂಧ್ಯಾವಂದನೆ, ದೇವರಪೂಜೆ, ಏಕಾದಶೀ, ಚಾತುರ್ಮಾಸ್ಯ, ಭಗವನ್ನಾಮಸ್ಮರಣೆ ಮುಂತಾದವನ್ನು ಮಾಡಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಯಾವುದಕ್ಕಾದರೂ ನಿಷೇಧ ಇರಬಹುದು, ಇಲ್ಲದಿರಬಹುದು. ಹರಿಯ ನಾಮಸ್ಮರಣೆಗೆ, ದಾಸಸಾಹಿತ್ಯದಿಂದ ಶ್ರೀಹರಿಯನ್ನು ಒಲಿಸಿಕೊಳ್ಳುವ ದಿವ್ಯಕ್ರಮಕ್ಕೆ ಯಾರದೂ ವಿರೋಧವಿಲ್ಲ. ಶಕ್ಯವಿದ್ದಷ್ಟು, ಅನುಮತಿಯಿದ್ದಷ್ಟು ಧರ್ಮಾಚರಣೆ. “ನಮ್ಮ ಪಾಪಕರ್ಮದ ಅನುಸಾರವಾಗಿ ಭಗವಂತ ಈ ಶಿಕ್ಷೆ ನೀಡಿದ್ದಾನೆ. ಪಾಪಪ್ರಕ್ಷಾಲನೆಯಾಗಲಿ, ಭಗವಂತನ ಆಜ್ಞೆಯನ್ನು ಪ್ರೀತಿಯಿಂದ ಅನುಸರಿಸುತ್ತೇನೆ” ಎಂಬ ಅನುಸಂಧಾನ ತಪ್ಪದೇ ಮನಸ್ಸಿನಲ್ಲಿರಬೇಕು. ಇದೊಂದಕ್ಕೇ ಅಲ್ಲ, ಸಕಲ ಕಷ್ಟಗಳಲ್ಲಿಯೂ ಇದೇ ಅನುಸಂಧಾನ. ಇಟ್ಟಾಂಗೆ ಇರುವೆನೋ ಹರಿಯೇ, ಎನ್ನ ದೊರೆಯೇ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
3731 Views

Comments

(You can only view comments here. If you want to write a comment please download the app.)
 • Vikram Shenoy,Doha

  10:38 PM, 20/01/2022

  ಬಹಳ ಒಳ್ಳೆಯ ಚರ್ಚೆ. ತುಂಬ ಧನ್ಯವಾದಗಳು
 • G A,Nadiger

  1:50 PM , 27/07/2017

  Excellent
 • Parimala Rao,

  8:09 PM , 23/07/2017

  Namaskaara Acharyare, why for skin related issues including thonnu, most commonly recommended remedies is, Sri Subramanya Swamy ge Haalu yeraya beku, Sri Kukke Subramanya Darshana Seve, Sarpa samskara madabeku? Why is skin problems pointed to pappa done to snakes than cows. Please kindly let us know. Namaskaara.
 • Pranesh ಪ್ರಾಣೇಶ,Bangalore

  10:58 PM, 22/07/2017

  ಆಚಾರ್ಯ ಆಯುರ್ವೇದದಿಂದ ನಿವಾರನೆ ಅಥವಾ ವೃಂದಾವನ ಸೇವೆ ಇಂದ ಆದಲ್ಲಿ ಅವರನ್ನು ಸಾಮಾನ್ಯರಂತೆ ಪರಿಗಣಿಸಬಹುದ ?
  ರೋಗ ವಿರುವವರು ಮುದ್ರಾಧಾರಣೆ ಹಾಕಿಸಿಕೊಳ್ಳ್ ಬಹುದ?

  Vishnudasa Nagendracharya

  ಅವಶ್ಯವಾಗಿ. 
  
  ರೋಗನಿವೃತ್ತಿಯಾದರೆ ಯಾವ ದೋಷವೂ ಇಲ್ಲ. 
  
  ತಪ್ತಮುದ್ರಾಧಾರಣೆ ಅವರಿಗೂ ವಿಹಿತ. 
 • Rammurthy Kulkarni,

  5:36 PM , 21/07/2017

  ಗುರುಗಳೆ, ದಯವಿಟ್ಟು ಕ್ಷಮಿಸಿ.
  ಇದನ್ನು ನಾನು ಒಪ್ಪುವುದಿಲ್ಲ..ಬಿಳಿ ತೊನ್ನು ರೋಗವು ಅಂಟು ರೋಗ ಅಲ್ಲವೇ ಅಲ್ಲ..ಇದೇ ರೀತಿಯಾಗಿ ಇನ್ನು ಹತ್ತು ಹಲವು ಆಪತ್ತು ರಹಿತ ಕಾಯಿಲೆಗಳು ಇವೆ ಮತ್ತು ಅವುಗಳ ಬಗ್ಗೆ ತಪ್ಪು ಕಲ್ಪನೆಗಳು ಇವೆ. ಇವುಗಳು ಮನುಷ್ಯನಲ್ಲಿ ಖಿನ್ನತೆ ಉಂಟುಮಾಡುತ್ತದೆ..ಸಮಾಜ ಇವರನ್ನು ದೂರ ಮಾಡಿದಷ್ಟೂ ಇವರುಗಳ ಖಿನ್ನತೆ ಜಾಸ್ತಿಯಾಗಿ ಒಂಟಿತನ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ..ಇದರ ಪರಿಹಾರ ಸಮಾಜದಲ್ಲಿ ಇಂತಹ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದೇ ಹೊರತು ಅವರನ್ನು ದೂರವಿಡುವುದಲ್ಲ..ಅವರನ್ನು ಸಮಾಜದಲ್ಲಿ ಒಬ್ಬರನ್ನಾಗಿ ನೋಡಬೇಕು.ಅಂಟು ರೋಗಿಗಳನ್ನು ಖಂಡಿತ ಕಾಯಿಲೆ ಗುಣಾಗುವವರೆಗೆ ದೂರವಿಡಬೇಕು. ಆದರೆ ಅಂಟುರೋಗವಲ್ಲದ ಕಾಯಿಲೆಗಳನ್ನು ಹೊಂದಿದ ರೋಗಿಗಳನ್ನು ಸರ್ವಥಾ ದೂರ ಮಾಡಬಾರದು..ಬದಲಿಗೆ ಅವರಲ್ಲಿ ಆತ್ಮ ವಿಶ್ವಾಸ ತುಂಬಿ ಅವರನ್ನು ಎಲ್ಲರಂತೆ ಬದುಕಲು ಬಿಡಬೇಕು.ಇನ್ನು ಸೌಂದರ್ಯದ ದೃಷ್ಟಿಯಿಂದ ನೋಡಿದರೂ ರೋಗವಿಲ್ಲದೆ, ಸಹಜವಾಗಿ ಕುರೂಪ ದೇಹ ಇರುವವರೂ , ಕಡುಕಪ್ಪು ಬಣ್ಣದವರು, ನೋಡಲು ಅಸಹ್ಯ ಬರುವವರು ಇದ್ದಾರೆ. ಅಲ್ಲವೇ? ಇವರೆಲ್ಲ ರೋಗಿಗಳಲ್ಲ , ಇವರ ಸಹಜ ದೇಹ ಸೌಂದರ್ಯ ವೇ ಹೀಗೆ ಇರುತ್ತದೆ..ಹಾಗೆ ನೋಡಿದರೆ ಇವರನ್ನೂ ದೂರ ಇಡಬೇಕಲ್ಲವೇ? .ಯಾಕೆ ಕೇವಲ ಬಿಳಿ ಚರ್ಮದ ರೋಗಿಗಳು ಮಾತ್ರ ದೂರ ಇರಬೇಕು? ಸಾಕ್ಷಾತ್ ವೇದವ್ಯಾಸರೇ ಕಡುಕಪ್ಪು ವರ್ಣದವರಲ್ಲವೇ? ಅವರ ಸಂಜಾತ ಪಾಂಡುರಾಜನೂ ತೊನ್ನು ರೋಗವಿದ್ದರೂ ರಾಜ್ಯಭಾರ ಮಾಡಲಿಲ್ಲವೇ? ಅಷ್ಟಾವಕ್ರ, ಕುರೂಪಿಯಾದ ಕುಬ್ಜೆ ಭಗವಂತನ ಕೃಪೆಗೆ ಪಾತ್ರಾಗಲಿಲ್ಲವೇ? ವಿಜಯದಾಸರು ಕಜ್ಜಿಯಿಂದ ನರಳುತ್ತಿದ್ದ ಬಾಲಕನನ್ನು ಸಾಕಿ ಸಲುಹಿ ಮೋಹನದಾಸರನ್ನಾಗಿ ಮಾಡಲಿಲ್ಲವೇ? ಆದ್ದರಿಂದ ನನ್ನ ಅನಿಸಿಕೆಯ ಪ್ರಕಾರ ಅವರನ್ನು ದೂರ ಮಾಡುವ ಬದಲು, ಸಮಾಜದಲ್ಲಿ ಅರಿವು ಮೂಡಿಸಿ, ಅವರಿಗೂ ಎಲ್ಲ ಅರ್ಹತೆ ಯನ್ನು ಒದಗಿಸಬೇಕಲ್ಲವೇ?

  Vishnudasa Nagendracharya

  ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. 
  
  ಬಿಳುಪುರೋಗವು ಅಂಟು ರೋಗ ಎಂಬ ಕಾರಣಕ್ಕಾಗಿ ನಿಷೇಧಕ್ಕೆ ಒಳಗಾದದ್ದಲ್ಲ. ಪ್ರಬಲವಾದ ಪ್ರಾಚೀನಪಾಪದ ಫಲ ಎಂಬುದಾಗಿ ನಿಷೇಧಕ್ಕೆ ಒಳಗಾದದ್ದು. 
  
  ನಮ್ಮ ದೇಹದಲ್ಲಿನ ಯಾವುದೇ ನ್ಯೂನತೆಯೂ ಒಂದು ಪಾಪದ ಫಲ. ನಾನು ಕನ್ನಡಕ ಹಾಕುತ್ತೇನೆ, ಕಣ್ಣು ಸರಿಯಾಗಿ ಕಾಣುವದಿಲ್ಲ ಎಂದರೆ ಹಿಂದಿನ ಜನ್ಮದಲ್ಲಿ ಪುಸ್ತಕವೊಂದನ್ನು ಕದ್ದಿದ್ದೇನೆ ಎಂದರ್ಥ. ಅಥವಾ ಮತ್ತೊಬ್ಬರ ಕಣ್ಣಿಗೆ ತೊಂದರೆ ಕೊಟ್ಟಿದ್ದೇನೆ ಎಂದರ್ಥ. ಒಬ್ಬ ವ್ಯಕ್ತಿಯನ್ನು ಮಲಮೂತ್ರ ಮಾಡದಂತೆ ತಡೆದು ಹಿಂಸಿಸಿದರೂ ಕಣ್ಣು ಕಾಣದಾಗುತ್ತದೆ. ಹೀಗೆ ಕುರುಡುತನಕ್ಕೆ ಹತ್ತಾರು ತರಹದ ಕಾರಣಗಳಿವೆ. ಯಾವುದೇ ರೀತಿಯ ಕುರುಡುತನಕ್ಕಾಗಲೀ ಅಥವಾ ಯಾವುದೇ ನ್ಯೂನತೆಗಾಗಲಿ, ವಿಕಲತೆಗಾಗಲೀ ನಮ್ಮ ಪಾಪವೇ ಕಾರಣ. 
  
  ಆದರೆ ಈ ಬಿಳುಪುರೋಗಕ್ಕೆ ಕಾರಣವಾದದ್ದು ಬೇರೆ. ಬ್ರಹ್ಮಹತ್ಯೆ ಮತ್ತು ಗೋಹತ್ಯೆಗಳನ್ನು ಮಾಡಿದ್ದಾಗಲೀ ಅಥವಾ ಅದಕ್ಕೆ ಪ್ರೋತ್ಸಾಹ ನೀಡಿದ್ದಾಗಲೀ ಮಾಡಿದರೆ ಅದು ಮುಂದಿನ ಜನ್ಮದಲ್ಲಿ ಈ ಖಾಯಿಲೆಯ ರೂಪದಿಂದ ಕಾಡುತ್ತದೆ. ಬ್ರಹ್ಮಹತ್ಯೆ ಮತ್ತು ಗೋಹತ್ಯೆಗಳು ಅತ್ಯಂತ ಹೀನಾಯ ಕೃತ್ಯಗಳು ಎನ್ನುವ ಕಾರಣಕ್ಕೆ, ಮುಂದಿನ ಜನ್ಮದಲ್ಲಿಯೂ ಅದರ ಶಿಕ್ಷೆಯನ್ನು ಅನುಭವಿಸಲು ಶಾಸ್ತ್ರ ತಿಳಿಸುತ್ತದೆ. 
  
  ಮತ್ತು, ತಂತ್ರಸಾರ ಎನ್ನುವ ಗ್ರಂಥದಲ್ಲಿ (ಆಚಾರ್ಯರ ತಂತ್ರಸಾರಸಂಗ್ರಹವಲ್ಲ, ಆಚಾರ್ಯರೂ ತಂತ್ರಸಾರ ಎಂಬ ಗ್ರಂಥವನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ) ಗುರುಗಳಲ್ಲಿ ಯಾವ ದೋಷಗಳಿರಬಾರದು ಎಂದು ಹೇಳಬೇಕಾದರೆ, “श्वित्री चैव गलत्कुष्ठी नेत्ररोगी च वामनः । हीनाङ्गः कपटी रोगी बह्वाशी बहुजल्पकः । एतैर्दोषैर्व्विहीनो यः स गुरुः शिष्यसम्मतः ॥” ಎಂದು ಶ್ವೇತರೋಗವಿರುವ ವ್ಯಕ್ತಿ ಗುರುವಾಗಲು ಯೋಗ್ಯನಲ್ಲ ಹೇಳಿದ್ದಾರೆ. 
  
  ಹೀಗಾಗಿ, ನಾವು ಇವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲೇ ಬಾರದು. 
  
  ಮತ್ತು ನಾವು ಅವರನ್ನು ನಿಕೃಷ್ಟವಾಗಿಯೂ ಕಾಣಬಾರದು. ಯಾವ ಕಾರ್ಯವನ್ನು ಮಾಡಬಾರದು ಎಂದು ಶಾಸ್ತ್ರ ಹೇಳಿದೆಯೋ ಅಂತಹ ಕಾರ್ಯವನ್ನು ಅವರೂ ಮಾಡಬಾರದು. ಅವರನ್ನು ಹೀನಾಯವಾಗಿ ಕಾಣದೆ, ಅವರಿಗೆ ಸಲ್ಲಬೇಕಾದ ಮರ್ಯಾದೆಯನ್ನು ಮಾಡಬೇಕಾದ್ದೂ ಸಮಾಜದ ಕರ್ತವ್ಯ, ನಮ್ಮ ಕರ್ತವ್ಯ. 
  
  ಮತ್ತೂ ಬ್ರಹ್ಮಹತ್ಯೆ ಗೋಹತ್ಯೆಗಳನ್ನು ಮಾಡಿದವರಿಗೆ ಸರ್ವಥಾ ಅಸ್ಪೃಶ್ಯತ್ವವನ್ನು ಶಾಸ್ತ್ರ ಹೇಳುತ್ತದೆ. ಅಂದರೆ ಬ್ರಹ್ಮಹತ್ಯೆ ಮಾಡಿದ ವ್ಯಕ್ತಿಯನ್ನು ಸಮಾಜದಿಂದಲೇ ಬಹಿಷ್ಕರಿಸಬೇಕು. ಈ ರೀತಿಯ ಘೋರ ಅಸ್ಪೃಶ್ಯತ್ವವನ್ನು ಚರ್ಮರೋಗ ಇರುವವರಿಗೆ ಹೇಳುತ್ತಿಲ್ಲ. ಕೇವಲ ಮಡಿಯ ಕಾರ್ಯಗಳಿಗೆ ಅವರನ್ನು ತೆಗೆದುಕೊಳ್ಳುವದಿಲ್ಲ. 
  
  ಇನ್ನು ಕುರೂಪದ ಉಲ್ಲೇಖ ನನ್ನ ವಿವರಣೆಯಲ್ಲಿ ಬಂದಿರುವದು ಪ್ರಾಸಂಗಿಕವಾಗಿ. ನಮಗೆ ಕುರೂಪ ಇದ್ದಾಗ ಜನ ನಮ್ಮನ್ನು ದೂರ ಮಾಡುವದು ನಮ್ಮ ಅನುಭವಕ್ಕೇ ಬಂದಿದೆ, ಬಾಹ್ಯ ರೂಪಕ್ಕೆ ಬೆಲೆ ಕೊಡುವ ಈ ಜನರಿಂದ ದೂರವಾಗಿ ನಾವು ಹೇಗಿದ್ದೇವೆಯೋ ಹಾಗೆ ನಮ್ಮನ್ನು ಸ್ವೀಕರಿಸಿ, ನಮ್ಮ ಪಾಪಗಳನ್ನು ಕಳೆದು ನಮ್ಮನ್ನು ಉದ್ಧರಿಸುವ ಶ್ರೀಹರಿಯಲ್ಲಿ ಮನಸ್ಸನ್ನು ನೆಡಬೇಕು ಎನ್ನುವ ದೃಷ್ಟಿಯಿಂದ. 
  
  ಇನ್ನು, ಬ್ರಹ್ಮಹತ್ಯೆಯನ್ನು ಮಾಡಿದವರನ್ನು ಉದ್ಧಾರ ಮಾಡಿದ ಶ್ರೀ ಶ್ರೀಪಾದರಾಜರು, ನೀವು ಹೇಳಿದಂತೆ ಕುಷ್ಠದ ಬಾಧೆಯಿಂದ ಬಳಲುತ್ತಿದ್ದು ಬಾಲಕನ್ನು ಮೋಹನದಾಸರನ್ನಾಗಿ ಮಾಡಿದ ವಿಜಯದಾಸರು ಮುಂತಾದವರು ಇದೇ ಕಾರಣಕ್ಕಾಗಿಯೇ ಮಹಾನುಭಾವರ ಪಟ್ಟದಲ್ಲಿ ಕುಳಿತವರು. ಅಸಾಮಾನ್ಯರಿಗೂ ಅಸಾಧ್ಯವಾದುದನ್ನು ಮಾಡಿದವರು ಎಂದು ಹೇಳಿ. 
  
  ಇನ್ನು ಅಷ್ಟಾವಕ್ರ ಮತ್ತು ಕುಬ್ಜೆಯರದು ಈ ರೀತಿಯ ಸಮಸ್ಯೆಯಲ್ಲ. ಅಷ್ಟಾವಕ್ರರು ಮಹಾಜ್ಞಾನಿವರೇಣ್ಯರು ಮತ್ತು ಕುಬ್ಜೆ, ತನ್ನ ಹಿಂದಿನ ಜನ್ಮದ ಪಾಪದ ಫಲವಾಗಿ ಗೂನಿಯಾಗಿ ಹುಟ್ಟಿ ಭಗವದ್ಭಕ್ತಿಯಿಂದ ಉನ್ನತಸ್ಥಾನವನ್ನು ಗಳಿಸಿದ ಪುಣ್ಯವಂತೆ. 
  
  ಪಾಂಡು ಮಹಾರಾಜರಿಗೆ ಇದ್ದದ್ದು ತೊನ್ನುರೋಗವಲ್ಲ. ಪಾಂಡುರೋಗ. ಎರಡಕ್ಕೂ ವ್ಯತ್ಯಾಸವಿದೆ. ಶುದ್ಧ ಬಿಳುಪಿಗೂ ಬಿಳಿಚಿಕೊಂಡ ಬಿಳುಪಿಗೂ ವ್ಯತ್ಯಾಸ ಇರುತ್ತದೆಯಲ್ಲ ಆ ರೀತಿಯಾದದ್ದು. 
  
  ಇನ್ನು ಗುಣಪಡಿಸಲಾಗದ ಖಾಯಿಲೆ ಎನ್ನುವ ಕಾರಣಕ್ಕೂ ಇದು ನಿಂದ್ಯವಾದುದಲ್ಲ. ಪೀತಪರ್ಣೀ ಎಂಬ ಮರ ತೊನ್ನುರೋಗಕ್ಕೆ ದಿವ್ಯೌಷಧಿ ಎಂಬ ಮಾತು ಆಯುರ್ವೇದದ ಗ್ರಂಥಗಳಲ್ಲಿದೆ. ಅದಕ್ಕಾಗಿ ಹತ್ತಾರು ರೀತಿಯ ಮದ್ದುಗಳನ್ನು ಶಾಂರ್ಗಧರಸಂಹಿತೆ ವಿಸ್ತಾರವಾಗಿ ತಿಳಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಶ್ರೀ ಬ್ರಹ್ಮಣ್ಯತೀರ್ಥಗುರುಸಾರ್ವಭೌಮರ, ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ವೃಂದಾವನದ ಸೇವೆ, ಅವರ ಪಾದೋದಕದ ಪ್ರಾಶನ ಶ್ವೇತರೋಗವನ್ನು ನಿವಾರಿಸುವ ರಾಮಬಾಣ ಎಂದು ಸ್ವಯಂ ಶ್ರೀಮಚ್ಚಂದ್ರಿಕಾಚಾರ್ಯರು ಹೇಳಿದ್ದಾರೆ. ಕುಷ್ಠಶ್ವೇತೋರುಗುಲ್ಮಕ್ಷಯಕಠಿನತರವ್ಯಾಧಿವೈದ್ಯಾಧಿನಾಥೋ ಎಂದು. 
  
  ಶ್ವೇತರೋಗ ಅಂಟುರೋಗವಲ್ಲ. 
  
  ಶ್ವೇತರೋಗ ಪರಿಹರಿಸಲ್ಪಡಬಹುದಾದ ರೋಗ. 
  
  ಶ್ವೇತರೋಗವಿದ್ದವರೂ ಅವಶ್ಯವಾಗಿ ಮುಕ್ತಿಯೋಗ್ಯರು, ಸಾಧನೆ ಮಾಡಿಕೊಳ್ಳಬೇಕು. 
  
  ಆದರೆ ಶ್ವೇತರೋಗವಿದ್ದವರು ಮತ್ತೊಬ್ಬರ ಆಚಾರಕ್ಕೆ ತೊಂದರೆಯಾಗದಂತೆ ತಾವು ಅವಶ್ಯವಾಗಿ ಸಂಧ್ಯಾವಂದನೆ, ದೇವರಪೂಜೆ ಮುಂತಾದ ಸಾಧನೆಯನ್ನು ಮಾಡಿಕೊಳ್ಳಬೇಕು ಎನ್ನುವದಷ್ಟೇ ನಮ್ಮ ಆಶಯ. 
  
  
  ಪ್ರಶ್ನೆಯಿದ್ದರೆ, ಖಂಡಿತ ಚರ್ಚೆಯನ್ನು ಮುಂದುವರೆಸೋಣ. 
  
  ಖಂಡಿತವಾದ ಧ್ವನಿಯಲ್ಲಿ ಪ್ರಶ್ನೆ ಮಾಡುವ ನಿಮ್ಮ ಜಿಜ್ಞಾಸುತನ ನನಗೆ ಹಿಡಿಸಿದೆ, ರಾಮಮೂರ್ತಿಯವರೆ. ತುಂಬ ಸಂತೋಷ. 
  
 • Pranesh ಪ್ರಾಣೇಶ,

  5:21 PM , 21/07/2017

  ಆಚಾರ್ಯ ಬಿಳಿ ರೋಗ ನಿವಾರಣೆ ಈಗಿನ ವೈದ್ಯಕೀಯ ಸಹಾಯದಿಂದ ಗುಣಪಡಿಸಬಹುದಾಗಿದೆ 
  ಇತರ ಆದಾಗ ಶಾಸ್ತ್ರಾ ಏನು ಹೇಳುತ್ತದೆ

  Vishnudasa Nagendracharya

  ಬಿಳಿರೋಗದ ನಿವಾರಣೆ ಸಾಧ್ಯ ಎಂದು ಆಯುರ್ವೇದದ ಗ್ರಂಥಗಳು ಮುಖ್ಯವಾಗಿ ಶಾರ್ಙ್ಗಧರ ಸಂಹಿತೆ ಸ್ಪಷ್ಟವಾಗಿ ತಿಳಿಸುತ್ತದೆ. ಪೀತಪರ್ಣೀ ಎಂಬ ಮರ ಶ್ವೇತರೋಗವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. 
 • Pranesh ಪ್ರಾಣೇಶ,

  5:21 PM , 21/07/2017

  ಆಚಾರ್ಯ ಬಿಳಿ ರೋಗ ನಿವಾರಣೆ ಈಗಿನ ವೈದ್ಯಕೀಯ ಸಹಾಯದಿಂದ ಗುಣಪಡಿಸಬಹುದಾಗಿದೆ 
  ಇತರ ಆದಾಗ ಶಾಸ್ತ್ರಾ ಏನು ಹೇಳುತ್ತದೆ