ಪೂಜೆಯಲ್ಲಿ ಶ್ರೇಷ್ಠ,ನಿಷಿದ್ಧ ಲೋಹಗಳ್ಯಾವುವು?
ನಮಸ್ಕಾರ, ದೇವರ ಪೂಜೆಗೆ ಯಾವ ಲೋಹದಿಂದ ಮಾಡಿದ ಸಾಮಗ್ರಿಗಳನ್ನು ಬಳಸಬೇಕು ಹಾಗೂ ಬಳಸಬಾರದು? — ಅನಂತ್ ರಾಜ್. ದೇವರ ಪೂಜೆಗೆ ಕೆಳಕಂಡ ಲೋಹಗಳನ್ನು ಬಳಸಬೇಕು. ತಾರತಮ್ಯದ ಕ್ರಮದಲ್ಲಿಯೇ ಉಲ್ಲೇಖಿಸುತ್ತೇನೆ — 1. ಬಂಗಾರ 2. ಬೆಳ್ಳಿ 3. ತಾಮ್ರ 4. ಕಂಚು 5. ಹಿತ್ತಾಳೆ 6. ಮಣ್ಣು (ಮಣ್ಣು ಲೋಹವಲ್ಲ. ಆದರೆ ಮಣ್ಣಿನಿಂದ ಮಾಡಿದ ಮಡಿಕೆಗಳಿಂದ ಪಾತ್ರೆಗಳಿಂದ ಅವಶ್ಯವಾಗಿ ದೇವರನ್ನು ಪೂಜಿಸಬಹುದು ಎನ್ನುವದಕ್ಕಾಗಿ ಇಲ್ಲಿ ಉಲ್ಲೇಖಿಸಲಾಗಿದೆ.) ಕಬ್ಬಿಣವನ್ನು ಒಲೆ ಮುಂತಾದವುಗಳಲ್ಲಿ ಮಾತ್ರ ಬಳಸತಕ್ಕದ್ದು. ನೇರವಾಗಿ ದೇವರನ್ನು ಪೂಜಿಸುವ ಪಾತ್ರೆಗಳನ್ನು ಕಬ್ಬಿಣದಲ್ಲಿ ಮಾಡಿರಬಾರದು. ಸ್ಟೀಲುಪಾತ್ರೆಗಳನ್ನೂ ಸಹ ಕೇವಲ ಅಡಿಗೆ ಮುಂತಾದವಕ್ಕೆ ಬಳಸಬೇಕು. ನೈವೇದ್ಯವನ್ನಿಡಬೇಕಾದರೆ ಸ್ಟೀಲು ಪಾತ್ರೆಯಲ್ಲಿ ಇಡಬಾರದು. ಮತ್ತು ಸ್ಟೀಲನ್ನೂ ತೊರೆದು ಹಿತ್ತಾಳೆ ಕಂಚು ಪಾತ್ರೆಗಳಲ್ಲಿ ಅಡಿಗೆ ಮಾಡುವದು ಸರ್ವಶ್ರೇಷ್ಠ. ದೇವರ ಪೂಜಾಸಾಮಗ್ರಿಗಳಲ್ಲಿ ಕೆಳಕಂಡ ಲೋಹಗಳನ್ನು ಸರ್ವಥಾ ಬಳಸಬಾರದು — 1. ಕಬ್ಬಿಣ 2. ಸ್ಟೀಲು Stainless steel 3. ಅಲ್ಯೂಮಿನಿಯಮ್ (Aluminium) 4. ಪ್ಲಾಸ್ಟಿಕ್ಕು. ಇವುಗಳಲ್ಲಿ ಪ್ಲಾಸ್ಟಿಕ್ಕು ಮೈಲಿಗೆ. ಅದರ ಸ್ಪರ್ಶವಾದರೆ ಮತ್ತೊಮ್ಮೆ ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಬೇಕು. ಉಳಿದವು ಮೈಲಿಗೆಯಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ