ತಂದೆ ಬದುಕಿದ್ದಾಗ ಮಾವನ ಶ್ರಾದ್ಧ ಮಾಡಬಹುದೇ?
ನಮಸ್ಕಾರ ಗುರುಗಳಿಗೆ ನನಗೆ ತಂದೆ ಇದ್ದಾರೆ. ತಾಯಿ ಇಲ್ಲ. ನಾನು ನನ್ನ ಹೆಂಡತಿಯ ತಂದೆಯವರ ಶ್ರಾದ್ಧ ಮಾಡಬಹುದಾ ದಯವಿಟ್ಟು ತಿಳಿಸಿರಿ. — ವಿನಾಯಕ ಕುಲಕರ್ಣಿ ಮಾಡಲು ಬರುವದಿಲ್ಲ. ತಂದೆ ಬದುಕಿರುವಾಗ ಮಾಡಬಹುದಾದ ಶ್ರಾದ್ಧಗಳು ಮೂರು. 1. ತಾಯಿಯ ಶ್ರಾದ್ಧ. 2. ಹೆಂಡತಿ ಸತ್ತು ಹೋಗಿ, ಮಗನಿಲ್ಲದೇ ಇದ್ದಲ್ಲಿ ಹೆಂಡತಿಯ ಶ್ರಾದ್ಧ. 3. ಆಶ್ವೀನ ಶುದ್ಧ ಪ್ರತಿಪದೆಯಂದು ಮಾತಾಮಹಶ್ರಾದ್ಧ. (ತಾಯಿಯ ತಂದೆಯ ಶ್ರಾದ್ಧ.) ಇವುಗಳಲ್ಲಿ ಮೂರನೆಯ ಮಾತಾಮಹಶ್ರಾದ್ಧ ಬೇರೆಯ ಶ್ರಾದ್ದಗಳಂತಲ್ಲ, ಸ್ವಲ್ವ ವ್ಯತ್ಯಾಸಗಳಿವೆ. ಇವತ್ತಿಗೆ ಈ ಮಾತಾಮಹ ಶ್ರಾದ್ಧದ ಆಚರಣೆ ಕಂಡು ಬರುವದಿಲ್ಲ. ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಈ ಶ್ರಾದ್ಧಗಳನ್ನು ಮಾಡಬೇಕಾದರೂ ಪೂರ್ಣ ಅಪಸವ್ಯ ಆಗುವಂತಿಲ್ಲ. ಜನಿವಾರವನ್ನು ಮಾಲಾಕಾರವಾಗಿ ಹಾಕಿಕೊಂಡ ನಂತರ ಎಡಗೈ ಹೆಬ್ಬೆರಳಿಗೆ ಹಾಕಿಕೊಳ್ಳುವದಷ್ಟೇ ಅಪಸವ್ಯ. ಮತ್ತು ಶ್ರಾದ್ಧಾಂಗ ತರ್ಪಣವನ್ನು ನೀಡುವಂತಿಲ್ಲ. ತರ್ಪಣವನ್ನು ತಂದೆಯೇ ನೀಡಬೇಕು. ತಂದೆಯ ಮರಣದ ನಂತರ ಪೂರ್ಣ ಅಪಸವ್ಯ ಮತ್ತು ತರ್ಪಣ ನೀಡುವ ಅಧಿಕಾರ ಬರುತ್ತದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ