ನಾವು ಮಾಡುವ ಅಲ್ಪ ಧರ್ಮಾಚಾರಣೆಯನ್ನು ದೇವರು ಸ್ವೀಕರಿಸುತ್ತಾನೆಯಾ?
ಪೂಜ್ಯ ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. ತಮ್ಮ ಭಾಗವತ ನಮ್ಮ ಜೀವನವನ್ನು ಬದಲಾಯಿಸುತ್ತಿದೆ. ತಮಗೆ ಏನು ನೀಡಿದರೂ ಕಡಿಮೆಯೇ. ಬೆಳಿಗ್ಗೆ ಸ್ನಾನ ಮುಗಿಸಿದ ತಕ್ಷಣ ನಿಮ್ಮ ಭಾಗವತ ಪ್ರವಚನ ಕೇಳುತ್ತೇವೆ. ಆಫೀಸಿಗೆ ಹೋಗಿ ಬರುವಾಗ ಹರಿಭಕ್ತಿಸಾರವನ್ನು ಕೇಳುತ್ತಿದ್ದೇನೆ. ರಾತ್ರಿ ಮಲಗುವ ಮುನ್ನ ನಮ್ಮ ಗುರುಪರಂಪರೆಯ ಚರಿತ್ರೆಯನ್ನು ಕೇಳುತ್ತಿದ್ದೇನೆ. ರಾತ್ರಿ ಮಲಗಿದಾಗ ಸ್ವಲ್ಪವ ಎಚ್ಚರವಾದರೂ ನಿಮ್ಮ ಧ್ವನಿಯೇ ನನ್ನ ಮನಸ್ಸಿನಲ್ಲಿ ಕೇಳುತ್ತಿರುತ್ತದೆ. ನಮ್ಮಂತಹ ಪಾಮರರಿಗೆ ನೀವು ನೀಡುತ್ತಿರುವದು ಮೃಷ್ಟಾನ್ನ ಗುರುಗಳೆ. ಅನೇಕ ದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ಇದೆ. ಪ್ರಶ್ನೆ ಬಾಲಿಶವಾಗಿದ್ದಲ್ಲಿ, ಅಥವಾ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ. ಆಚಾರ್ಯರೇ, ನಮ್ಮ ಮನೆಯಲ್ಲಿ ನಾವು ಪೂರ್ಣವಾಗಿ ಸದಾಚಾರಿಗಳಲ್ಲ. ಹಾಗೆಂದು ನಿಷಿದ್ಧ ಕೆಲಸ ಮಾಡುತ್ತಿಲ್ಲ. ಉದಾಹರಣೆಗೆ ನಿತ್ಯ ಪೂಜೆ ಮಾಡಬೇಕು. ಆಗುತ್ತಿಲ್ಲ. ಶುದ್ಧ ಮಡಿಯಲ್ಲಿ ಅಡಿಗೆ ಮಾಡಿ ತಿನ್ನಬೇಕು. ಅದನ್ನು ಮಾಡುತ್ತಿಲ್ಲ. ಹಾಗೆಂದು ಹೋಟೆಲ್ಲಿನಲ್ಲಿ ತಿನ್ನುತ್ತಿಲ್ಲ. ನಿಷಿದ್ಧ ಪದಾರ್ಥಗಳನ್ನೂ ತಿನ್ನುತ್ತಿಲ್ಲ. ದೇವರಲ್ಲಿ ಭಕ್ತಿಯಿದೆ. ಸಾಧನೆಯಲ್ಲಿ ನಮ್ಮಂತಹವರಿಗೆ ಸ್ಥಾನವಿದೆಯೇ ಆಚಾರ್ಯರೆ. ನಮ್ಮ ಭಕ್ತಿಯನ್ನು ದೇವರು ಸ್ವೀಕರಿಸುತ್ತಾನೆಯಾ. ಕೆಲವು ನಿಯಮಗಳನ್ನು ಅನುಸರಿಸುತ್ತಿದ್ದೇವೆ. ಕೆಲವು ನಿಯಮಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಮಾಡಬಾರದು ಎಂದು ಹೇಳಿರುವದನ್ನು ಖಂಡಿತ ಮಾಡುವದಿಲ್ಲ. ಆದರೆ ಮಾಡಬೇಕಾದ ಎಲ್ಲವನ್ನೂ ಪಾಲಿಸದೇ ಇದ್ದಾಗ ದೇವರು ನಾವು ಮಾಡಿದ್ದಕ್ಕೆ ಉತ್ತಮ ಫಲವನ್ನು (ಲೌಕಿಕ ಫಲವಲ್ಲ. ನೀವು ಭಾಗವತದಲ್ಲಿ ಹೇಳಿದಂತೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ) ಕರುಣಿಸುತ್ತಾನೆಯಾ. ದಯವಿಟ್ಟು ತಿಳಿಸಿ. — ಅರವಿಂದ್ ಭಾರದ್ವಾಜ್