ಪ್ರತಿ ಸೃಷ್ಟಿಯಲ್ಲಿಯೂ ಬೇರೆ ಬೇರೆ ಲಕ್ಷ್ಮಿಯರಿರುರಾತ್ತರಾ?
ನಮಸ್ಕಾರ ಆಚಾರ್ಯರಿಗೆ, ನನ್ನ ಪ್ರಶ್ನೆ ಏನೆಂದರೆ ಬ್ರಹ್ಮಪದವಿ, ಇಂದ್ರಪದವಿ ತರಹ ಲಕ್ಷ್ಮೀಪದವಿಯಾ, ಇಲ್ಲ ಯಾವಾಗಲೂ ಒಬ್ಬಳೇ ಲಕ್ಷ್ಮೀನಾ? ದಯಮಾಡಿ ನನ್ನ ಸಂದೇಹವನ್ನು ಪರಿಹರಿಸಿ. —— ಕಮಲಾಕರ್ ಬ್ರಹ್ಮಪದವಿ, ಇಂದ್ರಪದವಿಯಂತೆ ಲಕ್ಷ್ಮೀದೇವಿಯದು ಪದವಿಯಲ್ಲ. ಅನಾದಿಕಾಲದಿಂದ ಅನಂತಕಾಲದವರೆಗೂ ಒಬ್ಬರೇ ಲಕ್ಷ್ಮೀದೇವಿ. ಪದವಿಗಳಿರುವದು ಜೀವರಿಗೆ ಮಾತ್ರ. ಲಕ್ಷ್ಮೀದೇವಿ ಜೀವರ ಮಧ್ಯದಲ್ಲಿ ಪರಿಗಣಿತರಾಗಿಲ್ಲ. ಅವರು ಈಶಕೋಟಿಯಲ್ಲಿ ಸೇರಿರುವ ಚೇತನ. ಆ ಮಹಾಲಕ್ಷ್ಮಿದೇವಿ ಶ್ರೀ, ಭೂ, ದುರ್ಗಾ ಮುಂತಾದ ಅನಂತಾನಂತರೂಪಗಳಿಂದ ಪರಮಾತ್ಮನ ಸೇವೆಯನ್ನು ಮಾಡುತ್ತಾರೆ. ಮಹಾಲಕ್ಷ್ಮೀದೇವಿಯೊಬ್ಬರೇ ಪರಮಾತ್ಮನ ಪಟ್ಟದರಾಣಿ. ಮಹಾಲಕ್ಷ್ಮಿಯಲ್ಲದೇ ಪರಮಾತ್ಮನಿಗೆ ಅನೇಕ ಮಡದಿಯರಿದ್ದಾರೆ. ವರಾಹರೂಪದ ಪರಮಾತ್ಮನನ್ನು ಪತಿಯನ್ನಾಗಿ ಪಡೆಯುವ ಭೂದೇವಿ. ನಾವಿರುವ ಭೂಮಿಗೆ ಅಭಿಮಾನಿನಿನಯಾದ ದೇವತೆ. ಮಹಾಲಕ್ಷ್ಮಿಗೂ ಭೂದೇವಿ ಎಂಬ ರೂಪವಿದೆ. ಆ ಲಕ್ಷ್ಮಿಯ ಭೂದೇವಿರೂಪದ ಸನ್ನಿಧಾನವಿರುವದರಿಂದಲೇ ಈ ಭೂಮಿಯ ಅಭಿಮಾನಿನಿಗೆ ಭೂದೇವಿ ಎಂಬ ಹೆಸರು ಬಂದಿರುವದು. ಹಾಗೆಯೇ ಕೃಷ್ಣಾವತಾರದಲ್ಲಿ ಜಾಂಬವತೀ, ನೀಲಾ, ಭದ್ರಾ, ಕಾಳಿಂದೀ, ಮಿತ್ರವಿಂದಾ, ಲಕ್ಷಣಾ ಎಂಬ ಆರು ಜನರು ಪರಮಾತ್ಮನ ಮಡದಿಯರಾಗುತ್ತಾರೆ. ಈ ಭೂದೇವಿ, ಮತ್ತು ಷಣ್ಮಹಿಷಿಯರು ಪರಮಾತ್ಮನ ಮಡದಿಯರು. ಇವರು ಪ್ರತಿಕಲ್ಪಕ್ಕೂ ಬದಲಾಗುತ್ತಾರೆ. ಅಂದರೆ ಈ ಸೃಷ್ಟಿಯಲ್ಲಿರುವವರು ಪ್ರಳಯವಾದಾಗ ಮುಕ್ತರಾಗುತ್ತಾರೆ. ಆ ನಂತರ ಆ ಪದವಿಗೆ ಅದೇ ಗುಂಪಿನ ಬೇರೆ ಜೀವರು ಆ ಪದವಿಗೆ ಬಂದು ಪರಮಾತ್ಮನ ಮಡದಿಯರಾಗುತ್ತಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ