Prashnottara - VNP121

ಯಾವ ಶ್ರಾದ್ಧವನ್ನು ಎಲ್ಲಿ ಮಾಡಬೇಕು?


					 	

ಆಚಾರ್ಯರಿಗೆ ನಮಸ್ಕಾರಗಳು. ಪಿತೃಕಾಯರ್ಯವನ್ನು (ತಿಲ ತರ್ಪಣ/ಪಿಂಡಪ್ರದಾನ) ಕತೃಗಳೇ ನದಿ ಅಥವಾ ಮನೆಯಲ್ಲಿ ಮಾಡಬಹುದಾ... ದಯವಿಟ್ಟು ವಿಧಿ ವಿದಾನಗಳನ್ನು ತಿಳಿಸಿ. — ನರಸಿಂಹ ಮೂರ್ತಿ ಪ್ರತೀವರ್ಷ ಮಾಡುವ ಶ್ರಾದ್ಧವನ್ನು, ಮಹಾಲಯಶ್ರಾದ್ಧವನ್ನು , ಮಾಸಿಕಶ್ರಾದ್ಧಗಳನ್ನು ಮನೆಯಲ್ಲಿ ಮಾಡುವದು ಅತ್ಯಂತ ಶ್ರೇಷ್ಠ. ಅದರಿಂದ ಪಿತೃಗಳು ಅತ್ಯಂತ ತೃಪ್ತರಾಗುತ್ತಾರೆ. ಮನೆಯಲ್ಲಿನ ಎಲ್ಲ ರೀತಿಯ ತೊಂದರೆಗಳಿಗೆ ಪರಿಹಾರ ಮನೆಯಲ್ಲಿ ಶ್ರಾದ್ಧ ಮಾಡುವದು. ಮನೆಯಲ್ಲಿ ಶ್ರಾದ್ಧ ಮಾಡಿದರೆ ಅನಾರೋಗ್ಯ, ಆರ್ಥಿಕ ಸಮಸ್ಯೆಗಳು, ದಾಂಪತ್ಯದ ಸಮಸ್ಯೆಗಳು, ಸಂತಾನದ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಎಲ್ಲವೂ ಪರಿಹಾರವಾಗುತ್ತವೆ. ಸತ್ತ ದಿವಸದಿಂದ ಸಪಿಂಡೀಕರಣದವರೆಗಿನ ಶ್ರಾದ್ಧಗಳನ್ನು ಮನೆಯಲ್ಲಿ ಸರ್ವಥಾ ಮಾಡಬಾರದು. ತೀರ್ಥಶ್ರಾದ್ಧವನ್ನು ತೀರ್ಥಕ್ಷೇತ್ರಗಳಲ್ಲಿಯೇ ಮಾಡಬೇಕು. ಮನೆಯಲ್ಲಿ ಮಾಡಬಾರದು. ಶ್ರಾದ್ಧಕ್ಕೆ ಉತ್ತಮ ಯೋಗ್ಯ ಬ್ರಾಹ್ಮಣರು ದೊರೆತಾಗ ಅವರು ದೊರೆತಿರುವ ಪ್ರದೇಶದಲ್ಲಿಯೇ ಶ್ರಾದ್ಧ ಮಾಡಬೇಕು. ಮನೆಗೇ ಬಂದಿದ್ದರೆ ಮನೆಯಲ್ಲಿ ಶ್ರಾದ್ಧ ಮಾಡಬಹುದು. ತರ್ಪಣದ ಕುರಿತು — ಮನೆಯಲ್ಲಿ ಮಾಡುವ ಎಲ್ಲಶ್ರಾದ್ಧಗಳ ತರ್ಪಣವನ್ನೂ ಮನೆಯಲ್ಲಿಯೇ ನೀಡಬಹುದು. ನದಿಯ ಹರಿವಿನಲ್ಲಿಯೇ ನಿಂತು, ಸಮುದ್ರದಲ್ಲಿಯೇ ನಿಂತು ತರ್ಪಣ ನೀಡುವದು ಪಿತೃಗಳಿಗೆ ಅತ್ಯಂತ ಪ್ರೀತಿಕರ. ಅದರಲ್ಲಿಯೂ ತಂಪನೆಯ ನದಿಯ ನೀರಿನಲ್ಲಿ ತರ್ಪಣ ನೀಡಿದರೆ ಪಿತೃಗಳಿಗೆ ಮಹತ್ತರ ತೃಪ್ತಿಯುಂಟಾಗುತ್ತದೆ. “ಶೀತಲಾಸು ಚ ತೋಯಾಸು” ಪ್ರತೀನಿತ್ಯ ಬ್ರಹ್ಮಯಜ್ಞದಲ್ಲಿ ನೀಡುವ ಪಿತೃತರ್ಪಣವನ್ನು ಮನೆಯಲ್ಲಿಯೇ ನೀಡಬಹುದು. ವಿಧಿ ವಿಧಾನಗಳ ಕುರಿತು ಖಂಡಿತ ಬರೆಯುತ್ತೇನೆ. ಆದರೆ ಸದ್ಯಕ್ಕೆ ಸಮಯಾವಕಾಶ ತುಂಬ ಕಡಿಮೆ. ಸಮಯ ದೊರೆತ ತಕ್ಷಣ (ಇನ್ನೂ ಪೂಜಾನಿರ್ಣಯವನ್ನೇ ಮುಗಿಸಿಲ್ಲ) ಬರೆಯುತ್ತೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
3287 Views

Comments

(You can only view comments here. If you want to write a comment please download the app.)
 • Ashwath Narayana,Bangalore

  8:56 PM , 22/06/2022

  ವಿಧಿ ವಿಧಾನಗಳಲ್ಲಿ ಸೂರ್ಯೋದಯದ ನಂತರ ಎಷ್ಟು ಗಳಿಗೆ ಅಥವಾ ಸಮಯದ ನಂತರ ಶ್ರಾದ್ಧ ಮಾಡಬಹುದು ದಯವಿಟ್ಟು ತಿಳಿಸಿ 🙏

  Vishnudasa Nagendracharya

  ಶ್ರೀ ಗೌತಮಮಹರ್ಷಿಗಳು ಸ್ಪಷ್ಟವಾಗಿ ತಿಳಿಸುತ್ತಾರೆ. 
  
  "आरभ्य कुतपे श्राद्धं कुर्यादारौहिणं बुधः ।
  विधिज्ञो विधिमास्थाय रौहिणं तु न लङ्घयेत्"
  
  ಕುತಪಕಾಲದಲ್ಲಿ ಶ್ರಾದ್ಧವನ್ನು ಮಾಡಬೇಕು. ರೌಹಿಣಕಾಲವನ್ನು ಸರ್ವಥಾ ಮೀರಬಾರದು. 
  
  ಸೂರ್ಯೋದಯ ಆದ ಮೇಲೆ ಎಂಟನೇ ಮುಹೂರ್ತ ಕುತಪಮುಹೂರ್ತ. ಒಂಭತ್ತನೇ ಮುಹೂರ್ತ ರೌಹಿಣ ಮುಹೂರ್ತ.
  
  ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಅವಧಿಯನ್ನು ತೆಗೆದುಕೊಳ್ಳಬೇಕು. 
  
  ಅದನ್ನು ಹದಿನೈದು ಭಾಗ ಮಾಡಬೇಕು. 
  
  ಅದರಲ್ಲಿ ಎಂಟನೆಯ ಭಾಗದಲ್ಲಿ ಶ್ರಾದ್ಧ ನಡೆಯಬೇಕು. 
  
  ಒಂಭತ್ತನೆಯ ಭಾಗ ಮುಗಿಯುವದರ ಒಳಗೆ ಶ್ರಾದ್ಧ ಸಂಪೂರ್ಣವಾಗಿ ಮುಗಿದುಬಿಡಬೇಕು. 
  
  ಉದಾಹರಣೆಗೆ ಆರು ಗಂಟೆಗೆ ಸೂರ್ಯೋದಯ, ಆರು ಗಂಟೆಗೆ ಸೂರ್ಯಾಸ್ತ ಎಂದಿಟ್ಟುಕೊಳ್ಳಿ. ಆಗ ಹನ್ನೆರಡು ಗಂಟೆಗಳು ಸೂರ್ಯೋದಯದಿಂದ ಸೂರ್ಯಾಸ್ತದ ಅವಧಿಯಾಯಿತು. 
  
  ಇದನ್ನು ಹದಿನೈದು ಭಾಗ ಮಾಡಿದಾಗ, ಪ್ರತೀ ಭಾಗದಲ್ಲಿ 48 ನಿಮಿಷಗಳು ಬಂದವು. 
  
  ಮೇಲಿನ ಲೆಕ್ಕದಲ್ಲಿ ಎಂಟನೆ ಭಾಗ ಎಂದರೆ 336ನೆಯ ನಿಮಿಷದಿಂದ 384ನೆಯ ನಿಮಿಷ. ಅಂದರೆ ಮಧ್ಯಾಹ್ನ 11:36 ರಿಂದ 12:24 ಕುತಪಕಾಲವಾಯಿತು. ಹಾಗೆಯೇ 12:24 ರಿಂದ 1:12 ರವರೆಗೆ ರೌಹಿಣ ಕಾಲವಾಯಿತು. 
  
  ಶ್ರಾದ್ಧವು 1:12 ರ ಒಳಗೆ ಮುಗಿಯಲೇ ಬೇಕು. ಸರ್ವಥಾ ದಾಟಬಾರದು. 
  
  ಪೂರ್ಣವಾಗಿ ಶ್ರಾದ್ಧಧ ವಿಧಿ ವಿಧಾನ ಮಾಡಲು ಎರಡು ಗಂಟೆಯ ಸಮಯ ಬೇಕು. ಹೀಗಾಗಿ 11 ಗಂಟೆಗೆ ಶ್ರಾದ್ಧ ಆರಂಭ ಮಾಡಿ, ಬ್ರಾಹ್ಮಣಭೋಜನ, ಪಿಂಡಪ್ರದಾನಗಳನ್ನು ಕುತಪಕಾಲದೊಳಗೆ ಮುಗಿಸಿ, ಮಧ್ಯಾಹ್ನ ಒಂದು ಗಂಟೆಯ ಒಳಗೆ ಶ್ರಾದ್ಧದ ಉಳಿದ ವಿಧಿವಿಧಾನಗಳನ್ನು ಸಂಪೂರ್ಣ ಮುಗಿಸುವದು ಉತ್ತಮ. 
  
  ಇನ್ನೂ ಸರಳವಾಗಿ ಹೇಳಬೇಕೆಂದರೆ, ಸೂರ್ಯ ನಡು ನೆತ್ತಿಯ ಮೇಲೆ ಇರುವದು ಕುತಪದ ಮಧ್ಯಕಾಲ. Solar noon (ನಡು ಮಧ್ಯಾಹ್ನ) ದ ಕಾಲವನ್ನು Internet ನಿಂದ ತಿಳಿಯಬಹುದು. ಅದರ ಹಿಂದಿನ 24 ನಿಮಿಷ ಮತ್ತು ಮುಂದಿನ 24 ನಿಮಿಷ ಕುತಪಕಾಲ ಎಂದು ಕರೆಸಿಕೊಳ್ಳುತ್ತದೆ. 
  
  ಶ್ರಾದ್ಧಕ್ಕೆ ಕುತಪ ಅತ್ಯಗತ್ಯ. ತೀರ್ಥಶ್ರಾದ್ಧ, ದ್ವಾದಶೀಶ್ರಾದ್ಧ, ಗ್ರಹಣ,ಸಂಕ್ರಾಂತಿಗಳ ಶ್ರಾದ್ಧಗಳಲ್ಲಿ ಕುತಪದ ನಿಯಮವಿಲ್ಲ. ಆದರೆ ಕಾಲಶ್ರಾದ್ಧ, ಮಾಸಿಕಶ್ರಾದ್ಧ ಮುಂತಾದವುಗಳಿಗೆ ಬಿಡುವಂತಿಲ್ಲ. ಮಹಾಪ್ರಯತ್ನ ಪಟ್ಟು ಕುತಪಕಾಲದಲ್ಲಿಯೇ ಶ್ರಾದ್ಧ ಮಾಡಬೇಕು. 
  
  
  
  
  
  
  
  
  
 • Ashwath Narayana,Bangalore

  5:07 PM , 12/06/2022

  ಆಚಾರ್ಯರಿಗೆ ನಮಸ್ಕಾರಗಳು. ಕಾರಣಾಂತರದಿಂದ ನನಗೆ ವಿದೇಶ ಪ್ರವಾಸಕ್ಕೆ ಹೋಗಲೇಬೇಕಾಗಿದೆ, ಆ ದಿನಗಳಲ್ಲಿ ನನ್ನ ಪತ್ನಿಯ ಶ್ರಾದ್ಧವಿದ, ಅದನ್ನು ಹೇಗೆ ಆಚರಿಸಬೇಕು, ದಯಮಾಡಿ ಪರಿಹಾರ ತಿಳಿಸಿ 🙏

  Vishnudasa Nagendracharya

  ವಿದೇಶಗಳು ಕರ್ಮಕ್ಕೆ ಅನರ್ಹವಾದುದರಿಂದ ಶ್ರಾದ್ಧ ಇತ್ಯಾದಿಗಳಿಗೆ ಫಲವಿಲ್ಲ. ಆದಷ್ಟು ಶ್ರಾದ್ಧವನ್ನು ಮುಗಿಸಿಕೊಂಡು ಹೋಗುವ, ಅಥವಾ ಶ್ರಾದ್ಧದ ವೇಳೆಗೆ ಹಿಂತಿರುಗುವ ವ್ಯವಸ್ಥೆ ಮಾಡಿಕೊಳ್ಳಿ. 
  
  ನೀವು ಹೋಗುತ್ತಿರುವ ಪ್ರದೇಶಕ್ಕೆ ಯಾವ ದಿವಸ ಯಾವ ಸಮಯದಲ್ಲಿ ಶ್ರಾದ್ಧದ ಸಮಯ ಬರುತ್ತದೆಯೋ ಆಗ, (ನೀವಿರುವ ಪ್ರದೇಶ, ಶ್ರಾದ್ಧ ತಿಥಿಗಳನ್ನು ತಿಳಿಸಿದರೆ ನೋಡಿ ಹೇಳುತ್ತೇನೆ) ಪೈತೃಕ ಸುಳಾದಿ, ಪಿತೃಗಣಸಂಧಿ ಮತ್ತು ಪಿತೃಸ್ತೋತ್ರಗಳನ್ನು ಪಠಿಸಿ. ಹರಿನಾಮಸ್ಮರಣೆಗೆ ಯಾವ ವಿಧಿ ನಿಷೇಧಗಳಿಲ್ಲ. ನೀವು ನಿಷಿದ್ಧ ಪ್ರದೇಶದಲ್ಲಿ ಮಾಡಿದರೂ ಫಲ ನಿಶ್ಚಿತವಾಗಿ ದೊರೆಯುತ್ತದೆ. ಹೀಗಾಗಿ ಶ್ರಾದ್ಧ, ಪಿಂಡಪ್ರದಾನ ಇತ್ಯಾದಿಗಳನ್ನು ಮಾಡದೇ, ಕೇವಲ ಮೇಲಿನ ಸ್ತೋತ್ರಗಳನ್ನು ಪಠಿಸತಕ್ಕದ್ದು. 
  
  ನೀವು ಒಬ್ಬ ಆಚಾರ್ಯರನ್ನು ಗೊತ್ತು ಮಾಡಿಕೊಂಡು ನಿಮ್ಮ ಪರವಾಗಿ, ಅವರು ಭರತಭೂಮಿಯಲ್ಲಿ ಪಿಂಡಪ್ರದಾನಯುಕ್ತವಾದ ಪೂರ್ಣ ಶ್ರಾದ್ಧ ಮಾಡುವ ವ್ಯವಸ್ಥೆ ಮಾಡಬೇಕು. 
  
  ಆ ದಿವಸ ಗೋಗ್ರಾಸ ಮತ್ತು ಬ್ರಾಹ್ಮಣ ಭೋಜನಗಳಿಗೆ ವ್ಯವಸ್ಥೆ ಮಾಡಬೇಕು. 
  
  
 • Shrikanta K Petakar,Bagalkot

  7:25 PM , 21/08/2018

  Gurugale namaskargalu Nanu somavansha arya kshatriya nanage sandhyavandane idiya dayavittu tilisi shri madhvacharyara prakara namma jatige takka hage dayavittu upadeshamadi
 • MAHADI SETHU RAO.,BENGALURU

  11:44 PM, 14/08/2018

  Thanks Guruji for clarifications.
  HARE KRISHNA.
 • MAHADI SETHU RAO.,BENGALURU

  6:18 PM , 05/08/2018

  Namaskaragalu.
  Naavu Shradha vannu Rayara mutt sannidhadalli maadutteve. Edarindagi naavu maneyalli nithya pooja kaikaryavannu madi matakke hogabeka athava devara deepa hachhi matakke hogabeka. Hagaadare andina pooja, naivaidyavann hege maadabeku. Dayavittu telisi.
  HARE KRISHNA.

  Vishnudasa Nagendracharya

  Maneyalli puje maaDi hannina naivedya maadi hoguvadu uttama paksha.
 • ನರಸಿಂಹ ಮೂರ್ತಿ,Bangalore

  9:24 PM , 28/05/2018

  ತುಂಬಾ ದನ್ಯವಾದಗಳು, ಸಾದ್ಯವಾದರೆ ದಯವಿಟ್ಟು ವಿಧಿ ವಿಧಾನಗಳ ಬಗ್ಗೆ ತಿಳಿಸಿ‌.
 • Murali SL,

  7:28 PM , 25/05/2018

  ಆಚಾರ್ಯರಿಗೆ ವಂದನೆಗಳು
  
  ದಯವಿಟ್ಟು ಷಣ್ಣವತಿ ಶ್ರಾದ್ಧಗಳ ಬಗ್ಗೆ ತಿಳಿಸಿದರೆ ಅನುಕೂಲವಾಗುತ್ತದೆ.
  
  ಮುರಳಿ.ಎಸ್.ಲಕ್ಷ್ಮೀನಾರಾಯಾಣ
  ಬೆಂಗಳೂರು

  Vishnudasa Nagendracharya

  ಸಮಯ ದೊರೆತ ತಕ್ಷಣ ಬರೆಯುತ್ತೇನೆ. 
 • Arun Kumar M N,

  6:57 PM , 25/05/2018

  Useful
 • Arun Kumar M N,

  6:57 PM , 25/05/2018

  Useful