Prashnottara - VNP122

ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?


					 	

ಬಾಡಿ ಹೋದ ತುಳಸಿಯನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ತಿಳಿಸಿ. — ಪದ್ಮಿನಿ. ಬೆಂಗಳೂರು. ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ ಹೋಗುತ್ತದೆ. ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು. ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯತಕ್ಕದ್ದಲ್ಲ. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು. ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು. (ಆದರೆ ದೇವರ ಪೂಜೆಗೆ ತುಳಸಿಯನ್ನು ಬಿಡಿಸುವಂತಿಲ್ಲ. ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.) ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು. ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ಸ್ವಲ್ಪ ದಪ್ಪ ಗಾತ್ರದ ಕಡ್ಡಿಗಳನ್ನು ದೀಪ ಹಚ್ಚಲು ಉಪಯೋಗಿಸಬೇಕು. ಬೆಂಕಿ ಕಡ್ಡಿಯಿಂದ ಮತ್ತು ಹೂಬತ್ತಿ ಮಂಗಳಾರತಿ ಬತ್ತಿಗಳಿಂದ ದೀಪ ಹಚ್ಚಬಾರದು. ಮೊದಲು ತುಳಸೀಕಾಷ್ಠವನ್ನು ಹಚ್ಚಿಕೊಂಡು ಆ ತುಳಸೀಕಾಷ್ಠದಿಂದಲೇ ದೀಪಗಳನ್ನು ಹಚ್ಚಬೇಕು. ಇನ್ನೂ ಸ್ವಲ್ಪ ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ. ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು. ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ. ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ದೇವರಿಗೆ ಅತ್ಯಂತ ಪ್ರಿಯ. ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ. ಯದ್ಯೇಕಂ ತುಲಸೀಕಾಷ್ಠಂ ಮಧ್ಯೇ ಕಾಷ್ಠಶತಸ್ಯ ಚ ದಾಹಕಾಲೇ ಭವೇನ್ಮುಕ್ತಿಃ ಪಾಪಕೋಟಿಯುತಸ್ಯ ಚ ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು. ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ಯಾವ ಕಾರಣಕ್ಕೂ ಬಿಸಾಡಬಾರದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
8780 Views

Comments

(You can only view comments here. If you want to write a comment please download the app.)
 • Abhishek p kumar,Tumkuru

  4:00 PM , 17/03/2022

  ಅಚಾರ್ಯರೇ ತುಳಸಿ ಕಟ್ಟೆ ಲಕ್ಷಣ ತಿಳಿಸಿ ದವಿಟ್ಟು🙏🙏
 • Vikram Shenoy,Doha

  4:32 PM , 22/10/2019

  ಉತ್ತಮ
 • Indira,Canberra

  10:52 AM, 19/08/2018

  We are old couple living in foreign country.i heard your godana upanyasa. We are unable to come to india.how can we do godana here? Can you please reply me?

  Vishnudasa Nagendracharya

  1.uttama desi hasugaLige nirantara gograsada vyavasthe maaDi.Gograsa neeDuvadu godanakkinta shreshta.2. Nimma bandhugaLa athava parichayadavara kaDeyinda nimma parawagi godana MaaDisi.
 • Latha Ramesh,Coimbatore

  7:12 PM , 05/07/2018

  🙏🙏🙏🙏
 • Jayashree Raghu,

  4:21 PM , 04/07/2018

  Baadida tulasi gidada bagge neevu kottiruva utthara adbutha .Dhanyavadagalu
 • Chandrashekar,

  10:21 PM, 03/07/2018

  Hoovu tulsi illade iruvaga, tulsi kashta upayogisi devaru pooje madabahude, tulsi kashta esthu Bari toledu maru upayogisa bahuda?

  Vishnudasa Nagendracharya

  ಮೊದಲ ಬಾರಿ ಕಾಷ್ಠವನ್ನು ಸಮರ್ಪಿಸುವಾಗ ತೊಳೆಯುವ ಆವಶ್ಯಕತೆಯಿಲ್ಲ. 
  
  ಸಮರ್ಪಿಸಿದ ತುಳಸಿಯನ್ನೇ ಮತ್ತೆ ಸಮರ್ಪಿಸಬೇಕು ಎನ್ನುವ ಅನಿವಾರ್ಯತೆಯಿದ್ದಾಗ, ಸಮರ್ಪಿತ ಕಾಷ್ಠವನ್ನು ಮೂರು ಬಾರಿ ತೊಳೆದು ಸಮರ್ಪಿಸಬೇಕು. 
 • Srinath Ramachandra,Bengaluru

  12:22 AM, 04/07/2018

  ಅಭಿವಾದಯೆ! ಸ್ತ್ರೀಯರು ತುಲಸಿಯನ್ನು ಬಿಡಿಸಬಾರದು ಎಂಬುದಕ್ಕೆ ಶಾಸ್ತ್ರಪ್ರಮಾಣವಿದೆಯೆ? ಅದಕ್ಕೆ ಕಾರಣವನ್ನೂ ತಿಳಿಸಿದೆಯೆ?

  Vishnudasa Nagendracharya

  ಸ್ತ್ರೀಯರು ತುಳಸಿಯನ್ನು ಬಿಡಿಸಬಾರದು ಮತ್ತು ತುಳಸಿಯಿಂದ ಪೂಜೆಯನ್ನು ಮಾಡಬಾರದು (ತುಳಸಿಗೆ ಪೂಜೆಯನ್ನು ಅವಶ್ಯವಾಗಿ ಅವರೇ ಮಾಡಬೇಕು, ಆದರೆ ತುಳಸೀದಳ ಮುಂತಾದವುಗಳಿಂದ ಹರಿಯ ಪೂಜೆ ಮಾಡಬಾರದು) ಎನ್ನುವದು ನಮ್ಮ ಮಾಧ್ವರಲ್ಲಿ ಅನೂಚಾನವಾಗಿ ಬಂದಿರುವ ಶಿಷ್ಟಾಚಾರ. 
  
  ಶ್ರೀ ವಿಜಯದಾಸಾರ್ಯರು ತಮ್ಮ ಸುಳಾದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ — 
  
  ಕವಿ ಮಂಗಳವಾರ ವೈಧೃತಿ ವ್ಯತೀಪಾತ
  ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
  ದಿವಸ ದ್ವಾದಶಿ ಶ್ರೇಷ್ಟಉಪರಾಗ ಪಿತೃಶ್ರಾದ್ದ
  ಇವುಗಳಲಿ ತೆಗೆಯಾದಿರಿ | 
  ನವವಸನಪೊದ್ದು ಊಟವ ಮಾಡಿ ತಾಂಬೂಲ
  ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ-
  ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ
  ದಿವಸ ದಿವಸಗೊಳೊಳಯ್ಯಾ ||
  
  ಇಲ್ಲಿ ಯುವತಿ ಶೂದ್ರರಿಂ ತರಿಸುವದುಚಿತವಲ್ಲ ಎಂದು ಶ್ರೀ ವಿಜಯದಾಸಾರ್ಯರು ತಿಳಿಸಿರುವದರಿಂದ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಈ ನಾಲ್ಕೂ ವರ್ಣಗಳ ಸ್ತ್ರೀಯರು ತುಳಸಿಯನ್ನು ಬಿಡಿಸಬಾರದು. 
  
  ಶ್ರೀಮಚ್ಚಂದ್ರಿಕಾಚಾರ್ಯರೂ ಸಹ ತಮ್ಮ ಎರಡು ಕೃತಿಗಳಲ್ಲಿ ಇದನ್ನು ಸೂಚ್ಯವಾಗಿ ತಿಳಿಸುತ್ತಾರೆ — 
  
  “ಅಡವಿಯಾ ಒಳಗೆಲ್ಲ ಗಿಡವಾಗಿ ಇರುವಳೆ
  ಹುಡುಗರ ಕೈಯಲ್ಲಿ ಚೂಟಿಸಿಕೊಂಬಳೆ”
  
  “ಅಡವಿಯಲಿ ಹುಟ್ಟುವಳು ಗಿಡವಾಗಿ ಬೆಳೆಯುವಳು
  ಹುಡುಗರಾ ಕೈಲಿ ಚಿವುಟಿಸಿಕೊಂಬಳು
  ಒಡೆಯ ಶ್ರೀಕೃಷ್ಣನ ವನಮಾಲೆಯಾಗಿಹಳು
  ಬೆಡಗಿನ ತುಳಸಿಗೆ ಆರುತಿಯೆತ್ತಿರೆ”
  
  ಹುಡುಗರ ಕೈಯಲ್ಲಿ ಚಿವುಟಿಸಿಕೊಂಬಳು ಎಂದು ನಿಂದಾಸ್ತುತಿಯಾಗಿ ಇಲ್ಲಿ ಬಂದಿದೆ. 
  
  ಸ್ತ್ರೀಯರು ಹೂಗಳನ್ನು ಅವಶ್ಯವಾಗಿ ಬಿಡಿಸತಕ್ಕದ್ದು. 
  
  ಕಾರಣ — 
  
  ಹೂಗಳನ್ನು ಗಿಡದಿಂದ ಕತ್ತರಿಸಬೇಕಾಗಿಲ್ಲ. ಅದರ ಕೋಶದಿಂದ ಹೂವನ್ನು ನಿಧಾನವಾಗಿ ಎಳೆದರೆ ಹೂ ಗಿಡದಿಂದ ಬೇರೆಯಾಗುತ್ತದೆ. 
  
  ಆದರೆ ತುಳಸೀದಳ ಹಾಗಲ್ಲ. ನಿಧಾನವಾಗಿ ಮುರಿದುಕೊಂಡು ತರಬೇಕು. 
  
  ಈ ರೀತಿಯಾಗಿ ಗಿಡವನ್ನು ಮುರಿಯುವದು, ಕತ್ತರಿಸುವದು ವಂಶದ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತ ಸ್ತ್ರೀಯರು ಮಾಡಬಾರದು ಎಂದು ಪ್ರಾಚೀನರು ವಿಧಿಸಿದ್ದಾರೆ. ಅದಕ್ಕಾಗಿಯೇ ಕುಂಬಳಕಾಯಿಯನ್ನು ಸಹಿತ ಸ್ತ್ರೀಯರು ಒಡೆಯಬಾರದು ಎನ್ನುತ್ತದೆ ಶಾಸ್ತ್ರ. 
  
 • Anandateertha P S,

  9:59 PM , 03/07/2018

  Namo namaha
 • krishnasushantha,

  9:24 PM , 03/07/2018

  Thank you gurugale
 • Mythreyi Rao,

  7:58 PM , 03/07/2018

  ಬಹಳ ಧನ್ಯವಾದಗಳು ಗುರುಗಳೆ, ಹೆಚ್ಚಾಗಿ ತುಳಸಿ ಸಿಕ್ಕರೆ ಅದನ್ನು ಮನೆಯ ಗಂಡಸರಿಂದಲೆ ಬಿಡಿಸಿಸಿ, ಹೆಂಗಸರು ಕಟ್ಟಿ

  Vishnudasa Nagendracharya

  ತುಳಸಿಯ ಹಾರವನ್ನು ಸ್ತ್ರೀಯರು ಕಟ್ಟುವಂತಿಲ್ಲ. 
  
  ಪುರುಷರೇ ಬಿಡಸಿ, ಹಾರ ಕಟ್ಟುವದಿದ್ದರೆ ಪುರುಷರೇ ಕಟ್ಟಿ ಸಮರ್ಪಿಸಬೇಕು. 
 • Mythreyi Rao,

  8:01 PM , 03/07/2018

  ದೇವರಿಗೆ ಅರ್ಪಿಸಬಹುದೇ?
 • Pavan,

  5:15 PM , 03/07/2018

  ದೇವರ ಪೂಜೆ ಮಾಡುವಾಗ ತುಳಸಿ ಕಾಷ್ಟದಿಂದ ದೇವರ ದೀಪ ಹಚ್ಚಲು ಬರುವುದಿಲ್ಲ ಅಂಥ ಹಲವರು ಹೇಳುತ್ತಾರೆ...ಅವಾಗ ಎನು ಮಾಡಬೇಕು

  Vishnudasa Nagendracharya

  ತುಲಸೀಪಾವಕೇನೈವ ದೀಪಂ ಯಃ ಕುರುತೇ ನರಃ
  ದೀಪಲಕ್ಷಸಹಸ್ರಾಣಾಂ ಪುಣ್ಯಂ ಭವತಿ ದೈತ್ಯಜ ಎಂದು ಸ್ಕಂದಪುರಾಣದ ವಚನವಿದೆ. ತುಲಸೀಕಾಷ್ಠದಿಂದ ದೀಪವನ್ನು ಹೊತ್ತಿಸಿದರೆ ಒಂದು ಲಕ್ಷ ದೀಪಗಳನ್ನು ಒಟ್ಟಿಗೆ ಬೆಳಗಿಸಿದಷ್ಟು ಪುಣ್ಯ. 
  
  ಹಚ್ಚಬಾರದು ಎನ್ನುವದಕ್ಕೆ ಪ್ರಮಾಣವಿದ್ದರೆ ತಿಳಿಸಿ. 
 • Vatsala,Mysuru

  4:56 PM , 03/07/2018

  Gurugale purushru matra tulasi elle keela beku endu ellidiri purushrige idara bage asakti illa diddaga enu maduvudu dayavittu thilisi

  Vishnudasa Nagendracharya

  ಮನೆಯ ಪುರುಷರು ವೇದಾಧ್ಯಯನ ಮಾಡುತ್ತಿಲ್ಲ, ದೇವರ ಪೂಜೆ ಮಾಡುತ್ತಿಲ್ಲ ಎಂದು ಹೇಗೆ ಸ್ತ್ರೀಯರು ವೇದಾಧ್ಯಯನ ಮತ್ತು ಸಾಲಿಗ್ರಾಮದ ಪೂಜೆಯನ್ನು ಮಾಡುವದಿಲ್ಲವೋ ಹಾಗೆ ತುಳಸಿಯನ್ನು ಸಹ ದೇವರ ಪೂಜೆಗಾಗಿ ಬಿಡಿಸತಕ್ಕದ್ದಲ್ಲ. 
  
  ಇನ್ನು ತುಳಸಿ ಗಿಡವನ್ನು ಸ್ವಚ್ಛ ಮಾಡಿಕೊಳ್ಳುವದು ಮುಂತಾದ್ದನ್ನು ಅವಶ್ಯವಾಗಿ ಸ್ತ್ರೀಯರು ಮಾಡಬಹುದು. 
  
  ಮನೆಯಲ್ಲಿನ ಗಂಡಸರು ಪೂಜೆಯನ್ನು ಮಾಡದೇ ಇದ್ದಲ್ಲಿ, ಹೂಗಿಡವೊಂದನ್ನು ಬೆಳೆಸಿ ಆ ಹೂವನ್ನು ತಂದು ದೇವರ ಪೆಟ್ಟಿಗೆಯ ಮೇಲೆ ಹಾಕಿ, ಮನೆಯಲ್ಲಿ ನಿರಂತರ ಪೂಜೆ ನಡೆಯುವಂತೆ ಪ್ರಾರ್ಥಿಸಬೇಕು. 
  
  ದೇವರು ಪ್ರಾರ್ಥನೆಯನ್ನು ಮನ್ನಿಸುತ್ತಾನೆ. 
  
  ಯಾವುದೇ ಪ್ರಸಂಗದಲ್ಲಿಯೂ ನಮಗೆ ಯೋಗ್ಯವಲ್ಲದ್ದನ್ನು ನಾವು ಮಾಡತಕ್ಕದ್ದಲ್ಲ. ಮಾಡುವವರು ಇಲ್ಲ ಎನ್ನುವದು ಕಾರಣವಲ್ಲ. 
  
  ಒಂದು ದೃಷ್ಟಾಂತ ನೀಡುತ್ತೇನೆ. 
  
  ಅಜ್ಞಾತವಾಸ ಮುಗಿದ ಬಳಿಕದ ಸಂದರ್ಭ. ಧೃತರಾಷ್ಟ್ರನಿಗೆ ಅತೀವ ಚಿಂತೆಯಾಗಿರುತ್ತದೆ. ಯುದ್ಧ ಮಾಡಲು ಭಯ, ಆದರೆ ರಾಜ್ಯ ನೀಡಲು ಮನಸ್ಸಿಲ್ಲ. ಹೀಗಾಗಿ ನಿದ್ರೆ ಬಾರದೆ ಇದ್ದಾಗ ವಿದುರರನ್ನು ಕರೆಸುತ್ತಾನೆ. ರಾಜನೀತಿ, ಧರ್ಮಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಅದೇ ಪ್ರಸಂಗದಲ್ಲಿ ದೇವರ ಸ್ವರೂಪದ ಕುರಿತು ಧೃತರಾಷ್ಟ್ರ ಪ್ರಶ್ನೆ ಮಾಡಿದಾಗ ವಿದುರರು ಹೇಳುವ ಮಾತು — ನಾನು ಶೂದ್ರನಾದ್ದರಿಂದ ನನಗೆ ಇಷ್ಟೇ ಉಪದೇಶ ಮಾಡಲು ಅರ್ಹತೆ. ದೇವರ ಕುರಿತು ಉಪದೇಶವನ್ನು ಹಿರಿಯ ಬ್ರಾಹ್ಮಣರೇ ಮಾಡಬೇಕು. ನಾನು ಸನಾತನರನ್ನು ಕರೆಸುತ್ತೇನೆ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡಿ ಸನಾತನರನ್ನು ಕರೆಯಿಸಿ ವಿದುರರು ಧೃತರಾಷ್ಟ್ರರಿಗೆ ಉಪದೇಶ ಮಾಡಿಸುತ್ತಾರೆ. 
  
  ತಾನು ಶೂದ್ರ, ತನ್ನ ಎಲ್ಲೆಯನ್ನು ತಾನು ಮೀರತಕ್ಕದ್ದಲ್ಲ ಎನ್ನುವ ಮಹತ್ತ್ವದ ಧರ್ಮವನ್ನು ವಿದುರರು ಪಾಲಿಸಿದ್ದು ನಮಗೆಲ್ಲ ಮೇಲ್ಪಂಕ್ತಿಯಾಗಬೇಕು. ನಮಗೆ ಯೋಗ್ಯವಾದುದನ್ನು ಮಾಡಿದಾಗ ಮಾತ್ರ ದೇವರು ಮೆಚ್ಚುತ್ತಾನೆ, ಯಾವುದೇ ಕಾರಣಕ್ಕೂ ನಮಗೆ ವಿಹಿತವಲ್ಲದ್ದನ್ನು ನಾವು ಮಾಡತಕ್ಕುದಲ್ಲ. 
 • H. Suvarna Kulkarni,

  4:56 PM , 03/07/2018

  ಗುರುಗಳಿಗೆ ಪ್ರಣಾಮಗಳು ಬಹು ಉಪಯುಕ್ತ ಮಾಹಿತಿ ನೀಡಿದಿರಿ.
 • ಪ್ರಭಂಜನ,

  4:56 PM , 03/07/2018

  ತುಂಬಾ ಉಪಯುಕ್ತವಾದ ಮಾಹಿತಿ. ಧನ್ಯವಾದಗಳು ಆಚಾರ್ಯರೆ
 • ಪ್ರಮೋದ,

  4:49 PM , 03/07/2018

  👌👌🙏🙏🙏🙏