Prashnottara - VNP131

ಜೀರ್ಣವಾದ ಪುಸ್ತಕಗಳನ್ನು ಹೇಗೆ ವಿಸರ್ಜಿಸಬೇಕು?


					 	

ಆಚಾರ್ಯರಿಗೆ ನಮಸ್ಕಾರಗಳು. ಹರಿದ ಅಥವಾ ಮಲಿನವಾದ ಮಂತ್ರಪುಸ್ತಕಗಳನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ. — ಉದ್ಯಾವರ ನಾಗರಾಜ್ ಪುಸ್ತಕಗಳನ್ನು ತುಂಬ ಉಪಯೋಗಿಸುತ್ತಿದ್ದಂತೆ ಅವು ಜೀರ್ಣವಾಗುತ್ತವೆ. ಓದಲಿಕ್ಕಾಗದಷ್ಟು ಹರಿದು ಹೋಗುತ್ತವೆ. ಪುಸ್ತಕಗಳು ಕೆಸರಿನಲ್ಲಿಯೋ ಅಥವಾ ಮತ್ತ್ಯಾವುದೋ ದ್ರವದ ಮಧ್ಯದಲ್ಲಿ ಬಿದ್ದಾಗ ಮಲಿನವಾಗಿಬಿಡುತ್ತವೆ. ಉಪಯೋಗಿಸಲಿಕ್ಕಾಗದ ಪರಿಸ್ಥಿತಿಯನ್ನು ಮುಟ್ಟುತ್ತವೆ. ಪುಸ್ತಕಗಳನ್ನು ಒಂದೇ ಕಡೆಯಲ್ಲಿಟ್ಟಿದ್ದಾಗ ಅವಕ್ಕೆ ಹುಳ ಹತ್ತುತ್ತವೆ. ಹುಳಗಳು ಅವನ್ನು ಓದಲಿಕ್ಕಾಗದಂತೆ ಹಾಳು ಮಾಡಿಬಿಡುತ್ತವೆ. ಆ ಪುಸ್ತಕಗಳು ಶಾಸ್ತ್ರಗ್ರಂಥಗಳನ್ನು ಒಳಗೊಂಡಿರುತ್ತವೆ. ಸ್ತೋತ್ರ ಮಂತ್ರಗಳಿರುತ್ತವೆ. ದೇವರ ಚಿತ್ರಗಳಿರುತ್ತವೆ. ಪವಿತ್ರವಾದ ಅವನ್ನು ಯಾವ ರೀತಿ ವಿಸರ್ಜಿಸಬೇಕು ಎನ್ನುವದು ಪ್ರಶ್ನೆ. ನ್ಯೂಸ್ ಪೇಪರುಗಳನ್ನು ತಕ್ಕಡಿಗೆ ಹಾಕುವಂತೆ ಅದನ್ನು ಗುಜರಿಯವರಿಗೆ ಮಾರಾಟ ಮಾಡಬಾರದು. ಅಂಗಡಿಗಳಲ್ಲಿ ಪೊಟ್ಟಣ ಕಟ್ಟಲು ಶಾಸ್ತ್ರಗ್ರಂಥಗಳ ಹಾಳೆಗಳು ಬಳಕೆಯಾಗಿದ್ದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಇಂತಹ ದುರಂತಗಳಿಗೆ ನಾವು ಕಾರಣರಾಗಬಾರದು ಎನ್ನುವ ಎಚ್ಚರ ಇರಬೇಕು. ಈ ರೀತಿಯ ಅಪಚಾರವಷ್ಟೇ ಅಲ್ಲ, ಆ ಪುಸ್ತಕಗಳನ್ನು ಯಾರೂ ತುಳಿಯದಂತೆ ವಿಸರ್ಜಿಸಬೇಕು. ಹಿಂದಿನ ಕಾಲದಲ್ಲಿ ಅವನ್ನು ನದಿಗೆ ಹಾಕುವ ಪದ್ಧತಿ ಇತ್ತು. ನಮ್ಮ ಹಿರಿಯರ ಕಾಲದಲ್ಲಿ ನದಿಗಳು ಕಲುಷಿತವಾಗಿಲ್ಲದ ಕಾರಣಕ್ಕೆ ಅವುಗಳೊಳಗೆ ಈ ರೀತಿಯ ಪುಸ್ತಕಗಳನ್ನು ಹಾಕುತ್ತಿದ್ದರು. ಆದರೆ, ಈಗಿನ ನದಿಗಳನ್ನು ಇಡಿಯ ಸಮಾಜ ಸಾಕಷ್ಟು ರೀತಿಯಲ್ಲಿ ಕಲುಷಿತ ಗೊಳಿಸುತ್ತಿವೆ. ನಾವು ಮತ್ತೆ ಈ ಪುಸ್ತಕಗಳನ್ನು ಹಾಕಿದರೆ ಮತ್ತಷ್ಟು ಕಲುಷಿತವಾಗುತ್ತದೆ. ನೀರಿನ ಹರಿವೇ ಕಡಿಮೆ ಇರುವದರಿಂದ ಕಾಲುಷ್ಯ ಮತ್ತಷ್ಟು ಜಾಸ್ತಿಯಾಗುತ್ತದೆ. ಹೀಗಾಗಿ ನದಿಗೆ, ಕೆರೆಗೆ, ಬಾವಿಗೆ ಹಾಕುವದು ಬೇಡ. ಅತ್ಯಂತ ಉತ್ತಮವಾದ ಮಾರ್ಗ ಒಂದು ಸಣ್ಣ ಗುಂಡಿಯನ್ನು ಮಾಡಿ ಅದನ್ನು ಆ ಗುಂಡಿಯಲ್ಲಿ ಮುಚ್ಚಿಬಿಡುವದು. ಅದರಲ್ಲಿಯೂ ಯಾವುದಾದರೂ ಮರದ ಬಳಿಯಲ್ಲಿ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಪುಸ್ತಕಗಳನ್ನಿಟ್ಟು ಮಣ್ಣಿನಿಂದ ಮುಚ್ಚಿಬಿಟ್ಟರೆ ಒಂದೆರಡು ವಾರಗಳಲ್ಲಿ ಅದು ಅತ್ಯುತ್ತಮಗೊಬ್ಬರವಾಗಿ ಮಾರ್ಪಾಟಾಗುತ್ತದೆ. ಆ ಮರದ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹೀಗಾಗಿ ಯಾರೂ ತುಳಿಯದ ಒಂದು ಮರದ ಬುಡದಲ್ಲಿ ಗುಂಡಿ ತೋಡಿ ಪುಸ್ತಕಗಳನ್ನು ಹಾಕಿ ಮಚ್ಚುವದು ಒಳಿತು. ಈ ರೀತಿ ಮಾಡುವಾಗ ಒಂದು ಎಚ್ಚರವಿರಬೇಕು. ದೇವರ ಫೋಟೋಗಳಿಗೆ ಪ್ಲಾಸ್ಟಿಕ್ಕಿನ ಫ್ರೇಮು, ಗಾಜು ಎಲ್ಲವೂ ಇರುತ್ತದೆ. ಅವನ್ನು ತೆಗೆದು ಗುಂಡಿಯಲ್ಲಿ ಬರಿಯ ಪುಸ್ತಕಗಳನ್ನು ಹಾಕಿ ಮುಚ್ಚಬೇಕು. ಗಾಜು ಯಾವತ್ತಿಗೂ ಮಣ್ಣಿನಲ್ಲಿ ಕರಗುವದಿಲ್ಲ. ಹೀಗಾಗಿ ಮುಂದೆ ಯಾರಾದರೂ ಅದನ್ನು ತೋಡಿದಾಗ ಅದರಿಂದ ಅಪಾಯವುಂಟಾಗುವ ಸಾಧ್ಯತೆಯಿರುತ್ತದೆ. ಮತ್ತೊಬ್ಬರಿಗೆ ತೊಂದರೆಯಾಗುವ ಯಾವುದನ್ನೂ ಮಾಡತಕ್ಕದ್ದಲ್ಲ. ಮನೆಯಲ್ಲಿಯೂ ಇದನ್ನು ಮಾಡಬಹುದು. ಆ ಪುಸ್ತಕಗಳು ಹಿಡಿಯುವಷ್ಟು ಒಂದು ದೊಡ್ಡ ಪಾಟನ್ನು ತನ್ನಿ. ಮೊದಲಿಗೆ ಸ್ವಲ್ಪ ಮಣ್ಣು ಹಾಕಿ. ಅದರ ಮೇಲೆ ಈ ಪುಸ್ತಕದ ಹಾಳೆಗಳನ್ನು ಹಾಕಿ, ಮತ್ತೆ ಮಣ್ಣು ಹಾಕಿ. ಮತ್ತೆ ಹಾಳೆಗಳನ್ನು ಹಾಕಿ, ಮತ್ತೆ ಮಣ್ಣು ಹಾಕಿ ಸ್ವಲ್ಪ ನೀರು ಹಾಕಿ ಅದನ್ನು ನಿಮ್ಮ ಮನೆಯ ತಾರಸಿಯ ಮೇಲಿಡಿ. ಸುಮಾರು ಒಂದು ತಿಂಗಳಾಗುವಷ್ಟರಲ್ಲಿ ಅದು ಉತ್ತಮ ಗೊಬ್ಬರವಾಗಿ ಮಾರ್ಪಾಟಾಗುತ್ತದೆ. ಅದನ್ನು ನಿಮ್ಮ ಮನೆಯ ತುಳಸೀಗಿಡಗಳಿಗೆ, ಹೂವಿನ ಗಿಡಗಳಿಗೆ ಹಾಕಿ. ಇದು ಪ್ರಕೃತಿಗೆ ಪ್ರಿಯವಾಗುವ ಮಾರ್ಗ. ಮರದಿಂದ ಹಾಳೆ. ಆ ಹಾಳೆ ಮತ್ತೆ ಗೊಬ್ಬರವಾಗಿ ಭೂಮಿಯನ್ನು ಸೇರಿ ಮರವಾಗಿ ಬೆಳೆಯುತ್ತದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Play Time: 3:00, Size: 1


Download Upanyasa Share to facebook View Comments
5349 Views

Comments

(You can only view comments here. If you want to write a comment please download the app.)
 • Abhilash,Dharwad

  5:20 PM , 25/09/2019

  ಪುಸ್ತಕಗಳನ್ನು ಒಂದೇ ಕಡೆಯಲ್ಲಿಟ್ಟಿದ್ದಾಗ ಅವಕ್ಕೆ ಹುಳ ಹತ್ತುತ್ತವೆ. ಹುಳಗಳು ಅವುಗಳನ್ನು ಓದಲಿಕ್ಕಾಗದಂತೆ ಹಾಳು ಮಾಡಿಬಿಡುತ್ತವೆ.. ಕೆಲವರು ಸ್ಟೀಲ್ ಡಬ್ಬಿಯಲ್ಲಿ ಪುಸ್ತಕಗಳನ್ನು ಇಡುವುದುಂಟು..ಆ ಪುಸ್ತಕಗಳು ಶಾಸ್ತ್ರಗ್ರಂಥಗಳನ್ನು ಒಳಗೊಂಡಿರುತ್ತವೆ... ಸ್ತೋತ್ರ -ಮಂತ್ರಗಳಿರುತ್ತವೆ.... ಇಂತಹ ಶ್ರೇಷ್ಠ ಪುಸ್ತಕಗಳು ಮನೆಯಲ್ಲಿದ್ದಾಗ ಹುಳ ಹತ್ತದಂತೆ ಹೇಗೆ ನೋಡಿಕೊಳ್ಳಬೇಕು.. ದಯವಿಟ್ಟು ನಿಮಗೆ ಸಮಯವಾದಾಗ ತಿಳಿಸಿಕೊಡಿ.....

  Vishnudasa Nagendracharya

  ಪುಸ್ತಕಗಳನ್ನು ವಾರಕ್ಕೊಮ್ಮೆಯಾದರೂ ತೆಗೆದು ಓದಬೇಕು. ಅರ್ಥಾತ್ ಉಪಯೋಗಿಸಬೇಕು. 
  
  ಪುಸ್ತಕ ಇರುವ ಪ್ರದೇಶವನ್ನು ಸ್ವಚ್ಛವಾಗಿಡೇಬೇಕು. ನೀರಿನ ಹನಿಯೂ ಸೇರದಂತೆ ನೋಡಿಕೊಳ್ಳಬೇಕು. 
  
  ಪುಸ್ತಕ ಇರುವ ಕಪಾಟು ಮುಂತಾದವುಗಳಿಗೆ ಬೇವಿನ ಎಣ್ಣೆಯನ್ನು ಲೇಪಿಸುವದರಿಂದ ಕೀಟಗಳು ಬರುವದಿಲ್ಲ. 
 • Vishwanandini User,Bangalore

  4:31 PM , 07/12/2018

  ನನಗೂ ಈ ಪ್ರಶ್ನೆಗೆ ಉತ್ತರ ಬೇಕಿತ್ತು. ಸೂಕ್ತ ಹಾಗೂ ಉತ್ತಮ ಸಲಹೆ ಕೊಟ್ಟಿದ್ದೀರಿ ಗುರುಗಳೇ. ಧನ್ಯವಾದಗಳು 🙏
 • Ajit,

  7:31 PM , 19/08/2018

  ಆಚಾರ್ಯರಿಗೆ ನಮಸ್ಕಾರಗಳು ಮನೆಯಲ್ಲಿರುವ ಹಳೆಯ ದೇವರ ಫೋಟೊಗಳನ್ನು ತೆಗೆಯಬೇಕಾಗಿದೆ ಏನು ಮಾಡಬೇಕು ಆಚಾರ್ಯರೇ
  
  ಅನಿಲಕುಮಾರ ಉಮರ್ಜಿ

  Vishnudasa Nagendracharya

  ಲೇಖನದಲ್ಲಿ ತಿಳಿಸಿರುವ ಕ್ರಮವನ್ನೇ ಅನುಸರಿಸಿ.
 • Venkatesan,Chennai

  11:01 AM, 13/08/2018

  Swamigalige namaskara. Benkiyalli sudabahuda swami

  Vishnudasa Nagendracharya

  PustakagaLannu Benkiyalli Suduvadu ashtu prashastavalla. Tumba Anivaryavadaga haage maadabeku. Aadare adar boodiyanoo yaroo tuliyadante ecchara vahisabeku. Sudade manninalli mucchuvadu shreshtha. 
 • ಜಯರಾಮಾಚಾರ್ಯ ಬೆಣಕಲ್,

  8:27 PM , 12/08/2018

  ಇತ್ತೀಚೆಗೆಬೆಂಗಳೂರಲ್ಲಿಗಣಪತಿವಿಸರ್ಜನೆಬಕೇಟಲ್ಲಿಮಾಡಿಮರುದಿನಹೂಕುಂಡಕ್ಕೆಹಾಕುತ್ತೇವೆ ಅದರಂತೆ ಮಾಡಬಹುದಲ್ಲವೇ?

  Vishnudasa Nagendracharya

  ಅವಶ್ಯವಾಗಿ