ನವಗ್ರಹಗಳನ್ನು ತಾರತಮ್ಯದ ಕ್ರಮದಲ್ಲಿ ಪೂಜಿಸಬೇಕಲ್ಲವೇ?
ಆಚಾರ್ಯರಿಗೆ ನಮಸ್ಕಾರಗಳು. ನವಗ್ರಹ ದೇವತೆಗಳನ್ನು ಪೂಜಿಸುವಾಗ ತಾರತಮ್ಯ ರೀತಿ ಯಿಂದ ಪೂಜಿಸ ಬೇಕೇ? ಗುರು, ಸೂರ್ಯ, ಚಂದ್ರ......... ಅಥವಾ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ......... ಹೀಗೆ ಪೂಜಿಸ ಬಹುದೇ? ದಯವಿಟ್ಟು ತಿಳಿಸಿ. ಸರಿಯಾದ ತಾರತಮ್ಯ ತಿಳಿ ಸ ಬೇಕಾಗಿ ವಿನಂತಿಸುತ್ತೇನೆ. — ವಸುಧೇಂದ್ರ ತಾರತಮ್ಯದ ತಿಳುವಳಿಕೆಯಿಲ್ಲದೇ ಯಾವುದೇ ದೇವತೆಯ ಪೂಜೆಯನ್ನೂ ಮಾಡಬಾರದು. ಆದರೆ, ಇದರೊಡನೆ ತಿಳಿಯಬೇಕಾದ ಒಂದು ವಿಶೇಷವಿದೆ. ದೇವತೆಗಳ ಪೂಜೆ ಅನೇಕ ರೀತಿಯಾದದ್ದು. ಪ್ರಧಾನ ದೇವತೆಯಾಗಿ ಪೂಜೆ. ಅವಾಂತರದೇವತೆಯಾಗಿ ಪೂಜೆ. ಆವರಣ ದೇವತೆಯಾಗಿ ಪೂಜೆ. ವ್ಯೂಹದೇವತೆಯಾಗಿ ಪೂಜೆ. ನಾವು ಗೌರೀಹಬ್ಬದಂದು ಪೂಜೆ ಮಾಡುವಾಗ ಸ್ವರ್ಣಗೌರೀ ಪ್ರಧಾನ ದೇವತೆ. ಸಾಲಿಗ್ರಾಮದ ಪೂಜೆ ಮಾಡುವಾಗ ಶ್ರೀಹರಿಯೇ ಪ್ರಧಾನ ದೇವತೆ. ಗಣಪತಿಯ ಹಬ್ಬದಂದು ಗಣಪತಿಯೇ ಪ್ರಧಾನ ದೇವತೆ. ಯಾವುದೇ ಪೂಜೆಯನ್ನು ಮಾಡುವಾಗ, ಮೊದಲಿಗೆ ಗಣಪತಿಯನ್ನು ಪೂಜಿಸುತ್ತೇವಲ್ಲ, ಅದು ಗಣಪತಿಯನ್ನು ಅವಾಂತರದೇವತೆಯಾಗಿ ಪೂಜಿಸುವದು. ಹಾಗೆಯೇ ನಾವು ದೇವರ ಪೂಜೆಯನ್ನು ಮಾಡುವಾಗ ವಾಯುದೇವರನ್ನು ಪೂಜಿಸುವದು ಸಹ ಅವಾಂತರದೇವತೆಯನ್ನಾಗಿ ಪೂಜಿಸುತ್ತೇವೆ. ಆವರಣದೇವತೆಯನ್ನಾಗಿ ಪೂಜಿಸುವ ವಿಧಾನ ಸ್ವಲ್ಪ ಎತ್ತರ ಮಟ್ಟದ್ದು. ಪ್ರತಿಯೊಬ್ಬ ದೇವತೆಗೂ ಅವನದೇ ಆದ ಆವರಣದೇವತೆಗಳಿರುತ್ತಾರೆ. ಕೆಲವು ಬಾರಿ ಉತ್ತಮ ದೇವತೆಯೂ ಅಧಮ ದೇವತೆಯ ಆವರಣದಲ್ಲಿರುತ್ತಾರೆ. ದೇವರ ಪೂಜೆಯನ್ನು ಮಾಡುವಾಗ ಸ್ವಯಂ ದೇವರ ಇತರ ರೂಪಗಳೇ ಆವರಣದೇವತೆಯ ರೂಪದಲ್ಲಿರುತ್ತವೆ. ವ್ಯೂಹ ಎಂದರೆ ಗುಂಪು. ಕೆಲವು ಭಗವಂತನ ರೂಪಗಳು, ಕೆಲವು ದೇವತೆಗಳು ಯಾವಾಗಲೂ ಗುಂಪಿನಲ್ಲಿಯೇ ಇರುತ್ತಾರೆ. ಉದಾಹರಣೆಗೆ ಭಗಂವತನ ಮತ್ಸ್ಯಾದಿ ದಶ ರೂಪಗಳು. ಕೇಶವಾದಿ 24 ರೂಪಗಳು. ಇಲ್ಲಿ ಯಾವ ಕ್ರಮದಲ್ಲಿ ಭಗವಂತ ರೂಪಗಳಿವಿಯೋ ಅದೇ ಕ್ರಮದಲ್ಲಿಯೇ ನಾವು ಪೂಜಿಸಬೇಕು. ಹಿಂದೆ ಮುಂದೆ ಮಾಡುವಂತಿಲ್ಲ. ಹಾಗೆ ಅನೇಕ ದೇವತೆಗಳೂ ಸೇರಿ ಒಂದು ವ್ಯೂಹ ನಿರ್ಮಾಣವಾಗಿರುತ್ತದೆ. ಉದಾಹರಣೆಗೆ ದ್ವಾದಶ ಆದಿತ್ಯರು. ಏಕಾದಶ ರುದ್ರರು. ಅಷ್ಟ ವಸುಗಳು. ದ್ವಾದಶ ಆದಿತ್ಯರಲ್ಲಿ ಶ್ರೀಹರಿ ಹನ್ನೆರಡೆನಯವನು. ಏಕಾದಶರುದ್ರರಲ್ಲಿ ರುದ್ರದೇವರು ಹನ್ನೊಂದನೆಯವರು. ಉಳಿದ ಹತ್ತು ಜನ ರುದ್ರದೇವರಿಗಿಂತ ಸಣ್ಣವರು. ಈ ವ್ಯೂಹದಲ್ಲಿ ಆ ದೇವತೆಯ ಸ್ಥಾನ ಎಷ್ಟನೆಯದೊ ಆ ಸ್ಥಾನದಲ್ಲಿಯೇ ಅವರನ್ನು ಪೂಜಿಸಬೇಕು. ಹಾಗೆಯೇ ನವಗ್ರಹಗಳೂ ಎನ್ನುವದೂ ಸಹ ಒಂದು ವ್ಯೂಹ. ಈ ಗುಂಪಿಗೆ ಸೂರ್ಯನೇ ನಾಯಕ. ಉಳಿದವರು ಸೂರ್ಯನನ್ನೇ ಹಿಂಬಾಲಿಸುತ್ತಾರೆ. ಗುರು ಎಂದು ಕರೆಸಿಕೊಳ್ಳುವ ಬೃಹಸ್ಪತ್ಯಾಚಾರ್ಯರು ಸೂರ್ಯನಿಗಿಂತ ದೊಡ್ಡವರು. ಆದರೆ ನವಗ್ರಹಗಳ ಗುಂಪಿನಲ್ಲಿ ಐದನೆಯವರಾಗಿಯೇ ಇರುತ್ತಾರೆ. ಅವರನ್ನು ಹಾಗೆಯೇ ಪೂಜಿಸಬೇಕು. ಹೀಗೆ ಪೂಜೆ ಮಾಡಿದಾಗ ತಾರತಮ್ಯದ ಭಂಗವಾಗುವದಿಲ್ಲವೇ? ಆಗುವದಿಲ್ಲ. ಕಾರಣ ಅವರು ಭಗವಂತನ ಆಜ್ಞೆಯಂತೆ ಆ ವ್ಯೂಹದಲ್ಲಿದ್ದಾರೆ. ಸೂರ್ಯನ ಅಪಾರ ತೇಜಸ್ಸು, ಚಂದ್ರನ ಅದ್ಭುತ ಕಾಂತಿ ಬೃಹಸ್ಪತ್ಯಾಚಾರ್ಯರ ಅಧೀನವಾದರೂ ಅವರಿಗಿಂತ ಮಿಗಿಲಾದ ತೇಜಸ್ಸು ಕಾಂತಿಗಳು ಬೃಹಸ್ಪತ್ಯಾಚಾರ್ಯರಿಗಿದ್ದರೂ ಗುರುಗ್ರಹವಾಗಿ ಅವರು ಆ ತೇಜಸ್ಸು ಕಾಂತಿಗಳನ್ನು ಪ್ರಕಟ ಮಾಡುವದಿಲ್ಲ. ಹೊರತಾಗಿ ಸೂರ್ಯ, ಚಂದ್ರರನ್ನೇ ಅನುಸರಿಸುತ್ತಾರೆ. ಹೇಗೆ ಭಗವಂತ ಸರ್ವೋತ್ತಮನಾದರೂ, ದ್ವಾದಶಾದಿತ್ಯರಲ್ಲಿ ಹನ್ನೆರಡೆನಯವನಾಗಿ ಪೂಜೆಯನ್ನು ಸ್ವೀಕರಿಸುತ್ತಾನೆಯೋ ಹಾಗೆ ಆಯಾಯ ವ್ಯೂಹದಲ್ಲಿರುವ ದೇವತೆಗಳು ತಾವು ಇತರರಿಗಿಂತ ಉತ್ತಮರಾಗಿದ್ದರೂ ತಾವಿರುವ ಸ್ಥಾನಕ್ಕೆ ತಕ್ಕಂತೆ ಪೂಜಾದಿಗಳನ್ನು ಸ್ವೀಕರಿಸುತ್ತಾರೆ. ಹೇಗೆ ವಾಯುದೇವರು ಸರ್ವದೇವೋತ್ತಮರಾದರೂ, ಧರ್ಮರಾಜನ ತಮ್ಮನಾಗಿ ಹುಟ್ಟಿ ಬಂದಾಗ ಪಾಂಡು, ಕುಂತಿ, ಧರ್ಮರಾಜ ಮುಂತಾದವರ ನಂತರವೇ ಗೌರವಾರ್ಹರೋ ಹಾಗೆ. ಆದರೆ ನಾವು ಪೂಜಿಸುವಾಗ ನಮಗೆ ತಾರತಮ್ಯ ಎಚ್ಚರದಲ್ಲಿರಬೇಕು. ಅದು ಮಹತ್ತರವಾದ ಫಲದಾಯಕ. ಪ್ರಧಾನದೇವತೆಯಾಗಿ ಪೂಜೆಯನ್ನು ಮಾಡುವಾಗ ತಾರತಮ್ಯದ ಕ್ರಮದಲ್ಲಿಯೇ ಮಾಡಬೇಕು. ಅಂದರೆ ದೇವರ ಪೂಜೆಯನ್ನು ಮಾಡಿಯೇ ಸ್ವರ್ಣಗೌರಿಯ ಪೂಜೆಯನ್ನು ಮಾಡಬೇಕು. ಸ್ವರ್ಣಗೌರಿಯ ಪೂಜೆಯನ್ನು ಮಾಡಿ ದೇವರ ಪೂಜೆ ಮಾಡಬಾರದು. ದೇವರ ಪೂಜೆಯನ್ನು ಮಾಡಿಯೇ ಶ್ರಾದ್ಧವನ್ನು ಮಾಡಬೇಕು. ಶ್ರಾದ್ಧವನ್ನು (ಪಿತೃಪೂಜೆಯನ್ನು) ಮಾಡಿ ದೇವರ ಪೂಜೆಯನ್ನು ಮಾಡಬಾರದು. ಆವರಣಪೂಜೆ, ಅವಾಂತರದೇವತೆಯಾಗಿ ಪೂಜೆ, ಮತ್ತು ವ್ಯೂಹದೇವತೆಗಳ ಪೂಜೆಯನ್ನು ಮಾಡುವಾಗ ಅವರ ಸ್ಥಾನದ ತಾರತಮ್ಯವನ್ನು ಅನುಸರಿಸಬೇಕೇ ಹೊರತು ಅವರ ಸ್ವಭಾವದ ತಾರತಮ್ಯವನ್ನು ಅನುಸರಿಸಬಾರದು. ಆದರೆ ಅವರ ಸ್ವಭಾವದ ತಾರತಮ್ಯ ಎಚ್ಚರದಲ್ಲಿ ಇರಲೇ ಬೇಕು. ದ್ವಾದಶಾದಿತ್ಯರಲ್ಲಿ ಉರುಕ್ರಮನನ್ನು ಹನ್ನೆರಡನೆಯವನನ್ನಾಗಿ ಪೂಜಿಸಿದರೂ ಅವನು ಲಕ್ಷೀಪತಿ, ಸರ್ವೋತ್ತಮ ಎಂಬ ಎಚ್ಚರ ಇರಲೇಬೇಕು. ತಾರತಮ್ಯದ ಚಿಂತನೆಯಿಂದ ಕೂಡಿದ ಪೂಜೆ ಮಹಾಫಲಪ್ರದವಾದದ್ದು. ನವಗ್ರಹಗಳ ಸ್ಥಾನದ ತಾರತಮ್ಯ ಹೀಗಿದೆ — ಸೂರ್ಯ ಚಂದ್ರ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು ನವಗ್ರಹದೇವತೆಗಳ ಸ್ವಭಾವ ತಾರತಮ್ಯ ಹೀಗಿದೆ — ಗುರು [10ನೆಯ ಕಕ್ಷೆ ] ಸೂರ್ಯ-ಚಂದ್ರ [12ನೆಯ ಕಕ್ಷೆ ] ಶುಕ್ರ [19ನೆಯ ಕಕ್ಷೆ ] ಬುಧ [23ನೆಯ ಕಕ್ಷೆ ] ಕುಜ [25ನೆಯ ಕಕ್ಷೆ ] ಶನಿ [26ನೆಯ ಕಕ್ಷೆ ] ರಾಹು-ಕೇತುಗಳು ದೈತ್ಯರು. ಇವರಲ್ಲಿ ದೇವತೆಗಳಿದ್ದು ಅವರಿಗೆ ಪೂಜ್ಯತ್ವವನ್ನು ನೀಡುತ್ತಾರೆ. ಭಗವಂತನ ಆಜ್ಞೆಯಂತೆ. — ವಿಷ್ಣುದಾಸ ನಾಗೇಂದ್ರಾಚಾರ್ಯ