Prashnottara - VNP136

ಪಂಢರಪುರದ ವಿಠ್ಠಲ ದೇವರೋ. ಪ್ರತಿಮೆಯೋ?


					 	

ಆಚಾರ್ಯರಿಗೆ ನಮಸ್ಕಾರಗಳು. ಪಂಡರಾಪುರದ ಪಾಂಡುರಂಗನನ್ನು ನಾವು ಸಾಕ್ಷಾತ್ ದೇವರೆಂದು ತಿಳಿಯಬೇಕೊ ಇಲ್ಲವೇ ದೇವರ ಮೂತಿ೯ ಎಂದು ನಾವು ಚಿಂತಿಸಬೇಕೆ ? ದಯವಿಟ್ಟು ತಿಳಿಸಿ. ಪ್ರಶಾಂತ ಕುಲಕರ್ಣಿ, ಬಾಗಲಕೋಟೆ ಸೊಂಟದ ಮೇಲೆ ಕೈಗಳನ್ನಿಟ್ಟು, ಇಟ್ಟಿಗೆಯ ಮೇಲೆ ನಿಂತಿರುವ ಪಂಢರಪುರದ ವಿಠ್ಠಲ ಒಂದು ಪ್ರತಿಮೆ. ದೇವರಲ್ಲ. ದೇವರು ಆ ಪ್ರತಿಮೆಯಲ್ಲಿ ಸನ್ನಿಹಿತನಾಗಿದ್ದಾನೆ, ಆದ್ದರಿಂದ ಆ ಪ್ರತಿಮೆಗೆ ನಾವು ಪೂಜಾದಿಗಳನ್ನು ಸಲ್ಲಿಸಬೇಕು. ದೇವರ ಶರೀರ ಚಿದಾನಂದಾತ್ಮಕವಾದದ್ದು. ಅಪ್ರಾಕೃತವಾದದ್ದು. ನಾಶರಹಿತವಾದದ್ದು. ನಾವು ನೋಡುವ ಪ್ರತಿಮೆ ಪ್ರಾಕೃತವಾದದ್ದು. ಜಡವಾದದ್ದು. ನಾಶ ಹೊಂದುವಂತದ್ದು. ಭಕ್ತರ ಮೇಲೆ ಅನುಗ್ರಹ ಮಾಡುವದಕ್ಕಾಗಿ ಭಗವಂತ ಈ ಪ್ರತಿಮೆಯಲ್ಲಿ ಸನ್ನಿಹಿತನಾಗಿದ್ದಾನಷ್ಟೇ ಹೊರತು, ಪ್ರತಿಮೆಯೇ ದೇವರಲ್ಲ. ವಿಠ್ಠಲನ ಪ್ರತಿಮೆಯಷ್ಟೇ ಅಲ್ಲ, ಬದರಿಯ ನಾರಾಯಣ ಪ್ರತಿಮೆ, ತಿರುಪತಿಯ ಶ್ರೀನಿವಾಸನ ಪ್ರತಿಮೆ, ಉಡುಪಿಯ ಶ್ರೀಕೃಷ್ಣನ ಪ್ರತಿಮೆಗಳಿಂದ ಆರಂಭಿಸಿ ನಮ್ಮ ಮನೆಯಲ್ಲಿರುವ ಪ್ರತಿಮೆ ಸಾಲಿಗ್ರಾಮಗಳವರೆಗೆ ಯಾವುದೂ ದೇವರಲ್ಲ. ಅವುಗಳ ಒಳಗೆ ದೇವರು ಸನ್ನಿಹಿತನಾಗಿದ್ದಾನೆ. ಇದು ಕೇವಲ ದೇವರ ವಿಷಯದಲ್ಲಷ್ಟೇ ಅಲ್ಲ. ಕಾಶಿಯ ವಿಶ್ವೇಶ್ವರಲಿಂಗದಿಂದ ಆರಂಭಿಸಿ ಸಕಲ ಲಿಂಗಗಳು, ಗಣಪತಿಯ ಪ್ರತಿಮೆಗಳು ಯಾವುದೂ ಆ ದೇವತೆಯಲ್ಲ. ಆ ಪ್ರತಿಮೆಗಳ ಒಳಗೆ ದೇವತೆಗಳು ಸನ್ನಿಹಿತರಾಗಿದ್ದಾರೆ. ಇಷ್ಟೇ ವ್ಯತ್ಯಾಸ, ದೇವರಿಗೆ ಕೇವಲ ಅಪ್ರಾಕೃತ ಶರೀರವಿದೆ. ಸಂಸಾರದಲ್ಲಿರುವ ಈ ದೇವತೆಗಳಿಗೆ ಪ್ರಾಕೃತವಾದ ಶರೀರವೂ ಇದೆ. ಮುಕ್ತಿಯನ್ನು ಪಡೆದ ಬಳಿಕ ಈ ದೇವತೆಗಳೂ ಸಹ ಕೇವಲ ಅಪ್ರಾಕೃತಶರೀರದಿಂದ ಇರುತ್ತಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ ದೇವರ ಶರೀರದ ಕುರಿತ ರಹಸ್ಯ ಮತ್ತು ಮಹತ್ತ್ವದ ವಿಷಯಗಳನ್ನು ಈಗಾಗಲೇ ಶ್ರೀಮದ್ ಭಾಗವತದ ಪ್ರಥಮಸ್ಕಂಧದ 75 ನೆಯ ಪ್ರವಚನದಲ್ಲಿ ತಿಳಿಸಲಾಗಿದೆ. [VNU579 ಶ್ರೀಮದ್ ಭಾಗವತಮ್ - 01 Folder ] ಕೇಳಿ. ಎಲ್ಲ ಸಂಶಯಗಳೂ ಪರಿಹಾರವಾಗುತ್ತವೆ. ತತ್ವ ಪರಿಸ್ಪಷ್ಟವಾಗಿ ಅರಿವಾಗುತ್ತದೆ. http://vishwanandini.com/fullupanyasa.php?serialnumber=VNU579


Play Time: 04:01, Size: 5.30 MB


Download Upanyasa Share to facebook View Comments
4826 Views

Comments

(You can only view comments here. If you want to write a comment please download the app.)
 • Ramagiri,Mysore

  8:21 PM , 20/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ನಾನು ಹೊಸ
  ಅಭ್ಯರ್ಥಿ. ನಾನು ನಾಂದಿಯ ಬಗ್ಗೆ ಮಾಹಿತಿ ತಮ್ಮಿಂದ ಪಡೆಯಲಿಚ್ಚಿಸುತ್ತೇನೆ.
  
  1 ನಾಂದಿ ಊಟ ಕೆಲ ಮಡಿವಂತರು ಮಾಡಲ್ಲ ಯಾಕೆ. 
  
  2.ನಾಂದಿ ಎನ್ನುವುದು ಎಲ್ಲಾ ಮಂಗಳಕಾರ್ಯಗಳಲ್ಲಿ ನಡೆಸುತ್ತಾರೆ. 
  ಇದರಲ್ಲಿ ಯಾವ ನಾಂದಿ ಊಟ ಮಾಡುತ್ತಾರೆ ಯಾವ ನಾಂದಿ ಊಟ ಮಾಡಲ್ಲ.
  
  3.ಒಂದೇ ಕುಟುಂಬದವರು ಅವರ ಮನೆಯಲ್ಲಿ ನಡೆಯುವ ನಾಂದಿ ಊಟ ಮಾಡಬಹುದೆ.
  
    ದಯಮಾಡಿ ಮೇಲಿನ ಗೊಂದಲಗಳಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ಬೇಡುತ್ತೇನೆ.

  Vishnudasa Nagendracharya

  ಇಲ್ಲಿ ಮಡಿವಂತ ಎನ್ನುವ ಶಬ್ದಕ್ಕಿಂತ ಸದಾಚಾರಿಗಳು ಎನ್ನುವ ಶಬ್ದವನ್ನು ಬಳಸುವದು ಒಳಿತು. ಕಾರಣ, ಸಾತ್ವಿಕ ಆಚರಣೆಯಿಲ್ಲದೆ, ವಿಷ್ಣುಭಕ್ತಿಯಿಲ್ಲದೆ, ಅನುಸಂಧಾನ ಇಲ್ಲದೇ ಕೇವಲ ಮಡಿ ಮಾಡುವವರು ಮಡಿವಂತರು. ಅನುಸಂಧಾನಯುಕ್ತವಾಗಿ ಮಡಿ ಮೈಲಿಗೆಗಳ ಆಚರಣೆ ಮಾಡುವವರು ಸದಾಚಾರಿಗಳು. 
  
  ನಾಂದಿ ಎಂದರೆ ಎಲ್ಲ ಮಂಗಳಕಾರ್ಯಗಳಲ್ಲಿ ಮಾಡುವ ವೃದ್ಧಿಶ್ರಾದ್ಧ. 
  
  ನಾಂದೀ ಊಟ ಮಾಡಬಾರದು ಎನ್ನುವದು ಶಾಸ್ತ್ರದ ವಿಧಿ ಎನ್ನುವದು ನನ್ನ ಕಣ್ಣಿಗೆ ಕಂಡಿಲ್ಲ. ಆದರೆ, ಕೆಲವು ಸದಾಚಾರಿಗಳು ಮಾಡದೇ ಇರಲಿಕ್ಕೆ ಎರಡು ಕಾರಣಗಳಿವೆ — 
  
  1. ಈಚಿನ ದಿವಸಗಳಲ್ಲಿ ನಾಂದಿಯನ್ನು ಮನೆಯಲ್ಲಿ ಮಾಡಿ ಆಮೇಲೆ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುತ್ತಾರೆ. ಮತ್ತು ನಾಂದೀಶ್ರಾದ್ಧ ಅತ್ಯಂತ ಶ್ರದ್ಧೆಯಿಂದ ಮಾಡಬೇಕಾದ್ದು, ಅನೇಕ ನಿಯಮಗಳಿವೆ. ಆ ನಿಯಮಗಳನ್ನು ಬಹುತೇಕರು ಅನುಸರಿಸುವದೇ ಇಲ್ಲ ಮತ್ತು ಗೊತ್ತೂ ಇರುವದಿಲ್ಲ. ಇದು ತಪ್ಪು. ನಾಂದಿ ಇಲ್ಲದ ಕಡೆಯಲ್ಲಿ ಮಂಗಳ ಕಾರ್ಯ ಮಾಡಬಾರದು ಎಂಬ ಧರ್ಮಸೂಕ್ಷ್ಮ ತಿಳಿದವರು ಮದುವೆಮನೆಗಳಲ್ಲಿ ಊಟ ಮಾಡುವದಿಲ್ಲ. 
  
  ಎರಡನೆಯದು — ಕಲ್ಯಾಣಮಂಟಪಗಳಲ್ಲಿ ಅಡಿಗೆಯಲ್ಲಿ ಯಾವುದೇ ರೀತಿಯ ಶುದ್ಧಿಯನ್ನು ಕಾಯ್ದುಕೊಂಡಿರುವದಿಲ್ಲ. ಹೀಗಾಗಿ ಅಲ್ಲಿ ಊಟ ಮಾಡುವದಿಲ್ಲವಷ್ಟೆ. 
  
  ಪರಿಶುದ್ಧವಾಗಿ ನಾಂದಿಯನ್ನು ಆಚರಿಸಿದರೆ, ಬಾಂಧವರಾಗಲೀ ಇತರರಾಗಲೀ ಅವಶ್ಯವಾಗಿ ಊಟ ಮಾಡಬಹುದು. 
  
  ವಿಶೇಷವಾದ ಶಾಸ್ತ್ರವಚನಗಳೇನಾದರೂ ಕಣ್ಣಿಗೆ ಕಂಡರೆ ತಿಳಿಸುತ್ತೇನೆ. 
 • Pandurang,Bangalore

  8:01 PM , 03/08/2019

  ಆಚಾರ್ಯ ರೇ ನಮ್ಮ ಮಗ ಓದುದಕ್ಕೆ ಕುತರೇ ಯಾರಾದರೂ ಫೋನ್ ಮಾಡುತ್ತಾರೆ ಇಲ್ಲಾಂದ್ರೆ ಅವನಿಗೆ ಆ ಸಮಯದಲ್ಲಿಯೇ ನಿದ್ರೆ ಕಂಟ್ರೋಲ್ ಗೆ ಬರುತ್ತಿಲ್ಲ ಏನು ಮಾಡಬೇಕು ಅಂತಾ ಗೊತ್ತಿಲ್ಲ ಪರಿಹಾರ ಇದ್ದರೆ ತಿಳಿಸಬೇಕು ಅಂತಾ ಮನವಿ
 • Pandurang,Bangalore

  5:55 PM , 30/07/2019

  ನಾವು ಈಗ ಅತ್ತಿ ವರದರಾಜ ರ ದರ್ಶನ ಕ್ಕೆ ಹೋಗಬೇಕು ಅಂತಾ ಇದ್ದೇವೆ ನಮ್ಮಲ್ಲಿ ಶ್ರಾವಣ ಮಾಸ ಸಂಪತ್ತು ಶುಕ್ರವಾರ ಇದೆ 2 ನೇ ಶುಕ್ರವಾರ ದಿಂದ ಇಡಬಹುದೆ

  Vishnudasa Nagendracharya

  ಇಡಬಹುದು. 
 • Mahadi Sethu Rao,Bengaluru

  10:28 AM, 14/06/2019

  GOOD INFORMATION GURUJI.
  HARE KRISHNA.
 • Vishwanandini User,Bangalore

  1:13 PM , 07/12/2018

  Dhanyavadagalu.