ಸಂನ್ಯಾಸಿಯಾದವನು ಮತ್ತೆ ಗೃಹಸ್ಥನಾಗಬಹುದೇ? ಶಾಸ್ತ್ರದಲ್ಲಿ ಅನುಮತಿ ಇದೆಯೇ?
ಸರ್ವಥಾ ಇಲ್ಲ. ಅಗ್ನಿಸಾಕ್ಷಿಯಾಗಿ ಹೆಣ್ಣನ್ನು ಕೈ ಹಿಡಿದು, ಮಕ್ಕಳನ್ನೂ ಪಡೆದ ಒಬ್ಬ ಗೃಹಸ್ಥ ಮತ್ತೆ ಬ್ರಹ್ಮಚಾರಿಯಾಗಲು ಸಾಧ್ಯವೇ? ಹಾಗೆ ಯಾವುದೇ ಆಶ್ರಮವನ್ನು ಸ್ವೀಕರಿಸಿದ ಬಳಿಕ ಮತ್ತೆ ಹಿಂತಿರುಗಲು ಸಾಧ್ಯವಿಲ್ಲ. ಸಂನ್ಯಾಸಿಗೆ ಮತ್ತೆ ಮರಳಿ ಗೃಹಸ್ಥನಾಗುವ ಯಾವ ವಿಧಿಯನ್ನೂ ಶಾಸ್ತ್ರವು ಎಲ್ಲಿಯೂ, ಎಲ್ಲೆಲ್ಲಿಯೂ ವಿಧಿಸಿಲ್ಲ. ಅರ್ಜುನ ಸಂನ್ಯಾಸಿಯಾಗಿ ಗೃಹಸ್ಥನಾಗಲಿಲ್ಲವೇ ಎಂದು ಪ್ರಶ್ನೆ ಮಾಡುವವರಿದ್ದಾರೆ. ಅರ್ಜುನ ಸರ್ವಥಾ ಸಂನ್ಯಾಸವನ್ನು ಸ್ವೀಕರಿಸಲಿಲ್ಲ. ಸಂನ್ಯಾಸ ಸ್ವೀಕರಿಸಿದ್ದರೆ ನೀಡಿದವರ್ಯಾರು? ಅರ್ಜುನ ಸಂನ್ಯಾಸಿಯ ವೇಷವನ್ನು ಹಾಕಿದ್ದಷ್ಟೆ. ಶ್ರೀಮದಾಚಾರ್ಯರು ಸ್ಪಷ್ಟವಾಗಿ ನಿರ್ಣಯಿಸಿದ್ದಾರೆ — “ ವಿಚಿಂತ್ಯ ಕಾರ್ಯಂ ಯತಿರೂಪಂ ಗೃಹೀತ್ವಾ” ಎಂದು. (ಮಹಾಭಾರತತಾತ್ಪರ್ಯನಿರ್ಣಯ, ಇಪ್ಪತ್ತನೆಯ ಅಧ್ಯಾಯ, 166ನೇ ಶ್ಲೋಕ.) ಅರ್ಜುನನಿಗೆ ಸುಭದ್ರೆಯ ಮನಸ್ಸನ್ನು ಸ್ಪಷ್ಟವಾಗಿ ತಿಳಿಯುವದಕ್ಕಾಗಿ ಅಂತಃಪುರದಲ್ಲಿ ಇರುವ ಅನಿವಾರ್ಯತೆಯಿತ್ತು. ಕನ್ಯಾಗೃಹದಲ್ಲಿ ಯಾವುದೇ ಪುರುಷನಿಗೆ ವಾಸವಿರುವ ಅಧಿಕಾರವಿಲ್ಲ. ಆ ಅಧಿಕಾರವಿರುವದು ಕಾಮನಿಗ್ರಹವನ್ನು ಮಾಡಿದ ಸಂನ್ಯಾಸಿವರೇಣ್ಯರಿಗೆ ಮಾತ್ರ. ಹೀಗಾಗಿ ಅರ್ಜುನ ಸಂನ್ಯಾಸಿವೇಷವನ್ನು ತೊಟ್ಟ “ಯತಿರೂಪಂ ಗೃಹೀತ್ವಾ” ಎನ್ನುತ್ತಾರೆ ಆಚಾರ್ಯರು. “ಯತಿರ್ಭೂತ್ವಾ” “ಸಂನ್ಯಾಸವನ್ನು ಸ್ವೀಕರಿಸಿದ” ಎನ್ನುವ ಶಬ್ದ ಬಳಸುವದಿಲ್ಲ. ಮುಂದೆ ಅಜ್ಞಾತವಾಸದಲ್ಲಿ ಧರ್ಮರಾಜರೂ ಸಹ ಸಂನ್ಯಾಸಿಯ ವೇಷವನ್ನು ತೊಡುತ್ತಾರೆ, ಎಂದೇ ಆಚಾರ್ಯರು ನಿರ್ಣಯಿಸಿರುವದು. “ಛನ್ನರೂಪಾ ಬಭೂವುಃ” ಎಂದು. ಹೀಗಾಗಿ ಸಂನ್ಯಾಸವನ್ನು ಸ್ವೀಕರಿಸಿದ ನಂತರ ಮತ್ತೆ ಗೃಹಸ್ಥಾಶ್ರಮಕ್ಕೆ ಮರಳಿದ ಯಾವ ಉದಾಹರಣೆಯೂ ಶಾಸ್ತ್ರದಲ್ಲಿಲ್ಲ, ಮರಳುವದಕ್ಕೆ ವಿಧಿಯೂ ಇಲ್ಲ. ಸಂನ್ಯಾಸವಾದ ನಂತರ ಮತ್ತೆ ಸ್ತ್ರೀಸಂಪರ್ಕವನ್ನು ಮಾಡಿದಲ್ಲಿ ಅವನು ಪತಿತ ಸಂನ್ಯಾಸಿ ಎಂದು ಕರೆಸಿಕೊಳ್ಳುತ್ತಾನೆ. ಸಕಲ ಕರ್ಮಗಳಲ್ಲಿಯೂ ಅವನು ಅನರ್ಹನಾಗುತ್ತಾನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ