Prashnottara - VNP191

ಗುರುಗಳನ್ನು ಸರ್ವತಂತ್ರಸ್ವತಂತ್ರರು ಎಂದು ಕರೆಯಬಹುದೇ?


					  	

ಗುರುಗಳೇ, ಪ್ರವಚನದ ಕೊನೆಯಲ್ಲಿ ಗುರುಗಳ ಸ್ಮರಣೆ ಮಾಡುವಾಗ ಅವರನ್ನು ನೀವು ಸರ್ವ ತಂತ್ರ ಸ್ವತಂತ್ರರು ಎಂದು ಹೇಳಿದ್ದೀರಿ. ಇದು ನನಗೆ ಗೊಂದಲವಾಗಿದೆ. ಭಗವಂತ ಮಾತ್ರ ಸರ್ವತಂತ್ರಸ್ವತಂತ್ರನಲ್ಲವೇ? ಇದು ಗುರುಗಳಿಗೆ ಅನ್ವಯವಾಗುವದು ಹೇಗೆ? — ಶ್ರೀಕರ್ ಕಮನೂರು ಸ್ವತಂತ್ರ ಭಗವಂತನೊಬ್ಬನೇ. ಮಹಾಲಕ್ಷ್ಮೀದೇವಿಯರೂ ಸ್ವತಂತ್ರರಲ್ಲ. ಇನ್ನು ಯಾವ ಗುರುಗಳೂ, ಯಾವ ಜೀವರೂ ಸ್ವತಂತ್ರರಲ್ಲ. ಆದರೆ, ಸರ್ವತಂತ್ರಸ್ವತಂತ್ರ ಎನ್ನುವ ಶಬ್ದಕ್ಕೆ ಬೇರೆಯ ಅರ್ಥವಿದೆ. ಶ್ರೀ ರಾಯರ ಸ್ತೋತ್ರದ ಅರ್ಥಾನುಸಂಧಾನದ ಸಂದರ್ಭದಲ್ಲಿ ಇದನ್ನು ವಿವರಿಸಿದ್ದೇನೆ. ತಂತ್ರ ಎಂದರೆ ಶಾಸ್ತ್ರ. ಸರ್ವತಂತ್ರ ಎಂದರೆ ಸರ್ವ ಶಾಸ್ತ್ರಗಳು. ಸಕಲ ಶಾಸ್ತ್ರಗಳ ಮೂಲ ಗ್ರಂಥಗಳನ್ನೂ ವ್ಯಾಖ್ಯಾನದ ಆವಶ್ಯಕತೆಯಿಲ್ಲದೇ ಮತ್ತೊಬ್ಬರಿಗೆ ಅರ್ಥ ಹೇಳಬಲ್ಲವರನ್ನು ಸರ್ವತಂತ್ರಸ್ವತಂತ್ರರು ಎಂದು ಕರೆಯುತ್ತಾರೆ. ಸುಪ್ರಸಿದ್ಧವಾದ ರಾಯರ ಸ್ತೋತ್ರವನ್ನು ಗಮನಿಸಿ — ಸರ್ವತಂತ್ರಸ್ವತಂತ್ರೋಸೌ ಶ್ರೀಮಧ್ವಮತವರ್ಧನಃ ಶ್ರೀ ಶ್ರೀಪಾದರಾಜಗುರುಸಾರ್ವಭೌಮರು, ಶ್ರೀಮಚ್ಚದ್ರಿಕಾಚಾರ್ಯರು, ಶ್ರೀಮದ್ವಾದಿರಾಜತೀರ್ಥಗುರುವರೇಣ್ಯರು, ಶ್ರೀಮದ್ವಿಜಯೀಂದ್ರತೀರ್ಥಗುರುರಾಜರು, ಮಂತ್ರಾಲಯಪ್ರಭುಗಳು, ಶೇಷಚಂದ್ರಿಕಾಚಾರ್ಯರು ಮುಂತಾದ ಮಹಾನುಭಾವರು ಸರ್ವತಂತ್ರಸ್ವತಂತ್ರರು ಎಂದು ಪ್ರಸಿದ್ಧರಾದವರು. ಕಳೆದ ಶತಮಾನದಲ್ಲಿ ಆಗಿಹೋದ ಶ್ರೀಮದ್ ವ್ಯಾಸರಾಜಸಂಸ್ಥಾನದ ಶ್ರೀ ವಿದ್ಯಾವಾರಿಧಿತೀರ್ಥಶ್ರೀಪಾದಂಗಳವರನ್ನು ವಿದ್ವಚ್ಚಕ್ರವರ್ತಿಗಳಾದ ಪರಮಪೂಜ್ಯ ಶ್ರೀ ಗೌಡಗೆರೆ ವೆಂಕಟರಮಣಾಚಾರ್ಯರು ಪದವಾಕ್ಯಪ್ರಮಾಣಜ್ಞರು, ಸರ್ವತಂತ್ರಸ್ವತಂತ್ರರು ಎಂದೇ ಉಲ್ಲೇಖಿಸಿ ನಮಸ್ಕಾರಗಳನ್ನು ಸಲ್ಲಿಸಿದ್ದಾರೆ. ಹೀಗೆ, ಸ್ವತಂತ್ರ ಭಗವಂತ ಮಾತ್ರ. ಶಾಸ್ತ್ರಗಳನ್ನು ಪೂರ್ಣವಾಗಿ ತಿಳಿದ ಗುರುಗಳನ್ನು ಸರ್ವತಂತ್ರಸ್ವತಂತ್ರರು ಎಂದು ಕರೆಯುತ್ತಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1718 Views

Comments

(You can only view comments here. If you want to write a comment please download the app.)
  • Padmanabha,Bangalore

    6:08 PM , 24/05/2020

    Gauna prayoga