Prashnottara - VNP192

ವೈರಾಗ್ಯ ಎಂದರೇನು?


					 	

ರಾಗ ಎಂದರೆ ಅಪೇಕ್ಷೆ. ವಿರಾಗ ಎಂದರೆ ಅಪೇಕ್ಷೆ ಇಲ್ಲದಿರುವದು. ವೈರಾಗ್ಯ ಎಂದರೆ ಅಪೇಕ್ಷೆ ಇಲ್ಲದಿರುವಿಕೆ. ನಿಷಿದ್ಧವಾದ ಯಾವುದೇ ಪದಾರ್ಥವನ್ನೂ ಸರ್ವಥಾ ಅಪೇಕ್ಷಿಸಿದೇ ಇರುವದು. ಉದಾಹರಣೆಗಳು ಆಹಾರದಲ್ಲಿ ನಿಷಿದ್ಧವಾದ ಈರುಳ್ಳಿ ಮುಂತಾದವನ್ನು ಅಪೇಕ್ಷಿಸದೇ ಇರುವದು. ನಿಷಿದ್ಧವಾದ ಬಟ್ಟೆಗಳನ್ನು ತೊಡದೇ ಇರುವದು. ನಿಷಿದ್ಧವಾದ ಸ್ಥಳಗಳಲ್ಲಿ ವಾಸ ಮಾಡದೇ ಇರುವದು. ನಿಷಿದ್ಧವಾದ ಮಾತನ್ನು ಆಡದೇ ಇರುವದು. ನಿಷಿದ್ಧರಾದ ಜನರಿಂದ ದೂರ ಇರುವದು. ವಿಹಿತವಾಗಿದ್ದರೂ, ಅನವಶ್ಯಕವಾಗಿದ್ದರೆ ಅದನ್ನು ತ್ಯಾಗ ಮಾಡುವದು. ಉದಾಹರಣೆಗೆ, ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತು ಇಲ್ಲದೆಯೂ ನಾವು ಬದುಕಬಹುದು. ಪ್ರಯಾಸ ಪಟ್ಟು ಅದನ್ನು ಪಡೆಯಲಿಕ್ಕೆ ಹೋಗಬಾರದು. ಅತ್ಯಂತ ಸರಳವಾದ ಜೀವನವನ್ನು ನಡೆಸುವದು ಎರಡನೆಯ ಹಂತದ ವೈರಾಗ್ಯ. ಅನಿವಾರ್ಯವಾದ ವಸ್ತುಗಳನ್ನು ಧರ್ಮಕ್ಕೆ ಅನುಸಾರಿಯಾಗಿ, ಅಧ್ಯಾತ್ಮಶಾಸ್ತ್ರದ ಚಿಂತನೆಯೊಂದಿಗೆ ಅನುಭವಿಸುವದು . ಉದಾಹರಣೆಗೆ ಆಹಾರ ವಸ್ತ್ರ ಮನೆಗಳಿಲ್ಲದೇ ಬದುಕಲಿಕ್ಕಾಗುವದಿಲ್ಲ. ಅನ್ನವನ್ನು ಶುದ್ಧವಾದ ಕ್ರಮದಲ್ಲಿ ಮಾಡಿ, ದೇವರಿಗೆ ನೈವೇದ್ಯ ಮಾಡಿ, ವೈಶ್ವದೇವ ಬಲಿಹರಣಗಳ ನಂತರ ಶುದ್ಧವಾದ ಕ್ರಮದಲ್ಲಿ ಊಟಮಾಡುವದು. ಇದು ಧರ್ಮ. ಅಕ್ಕಿಯಲ್ಲಿ, ಬೆಂಕಿಯಲ್ಲಿ, ಪಾತ್ರೆಯಲ್ಲಿ, ನೀರಿನಲ್ಲಿ, ಅಡಿಗೆ ಮಾಡುವವರಲ್ಲಿ, ಅನ್ನದಲ್ಲಿ, ನೈವೇದ್ಯದ ಪ್ರಕ್ರಿಯೆಯಲ್ಲಿ, ಊಟದ ಪ್ರಕ್ರಿಯೆಯಲ್ಲಿ ಭಗವಂತನ ರೂಪಗಳ ಚಿಂತನೆ ಮಾಡುತ್ತ, ತುತ್ತು ತುತ್ತಿಗೆ ಸರ್ವೋತ್ತಮನ ಚಿಂತನೆ ಮಾಡುತ್ತ ಉಣ್ಣುವದು ಅಧ್ಯಾತ್ಮಶಾಸ್ತ್ರ. ಇದು ಮೂರನೆಯ ಹಂತ. ಕಟ್ಟ ಕಡೆಯ ಹಂತ, ದೇಹ, ಇಂದ್ರಿಯಗಳ ಮೇಲೂ ಅಭಿಮಾನವನ್ನು ತ್ಯಾಗ ಮಾಡುವದು. ಅದು ಅಪರೋಕ್ಷಜ್ಞಾನವನ್ನು ನೇರವಾಗಿ ನೀಡುತ್ತದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2329 Views

Comments

(You can only view comments here. If you want to write a comment please download the app.)
 • GURURAJ DODDIHAL,Muddebihal

  8:17 AM , 01/06/2020

  ನಿಷಿದ್ಧ ಗಳ ಬಗ್ಗೆ ಇನ್ನಷ್ಟ್ರು ವಿವರಿಸಿದರೆ ಅನುಷ್ಠಾನಕ್ಕೆ ತಿಳುವಳಿಕೆ ನೀಡಿ
  ದ
  ಅನಂತ ನಮನಗಳು