ಆಪತ್ಕಾಲದಲ್ಲಿ ಸದಾಚಾರ ಮುಖ್ಯವೋ, ದೇಹರಕ್ಷಣೆ ಮುಖ್ಯವೋ
ಖಾಯಿಲೆ, ಅಪಾರವಾದ ದುಃಖದ ಸಂದರ್ಭಗಳಲ್ಲಿ ದೇಹರಕ್ಷಣೆ ಮುಖ್ಯವಾಗುತ್ತದೆಯೋ, ಅಥವಾ ಸದಾಚಾರವೇ ಮುಖ್ಯವಾಗುತ್ತದೆಯೋ? ಈ ಪ್ರಶ್ನೆಗೆ ವೇದವ್ಯಾಸದೇವರ ತಂದೆಯಾದ ಶ್ರೀ ಪರಾಶರಮಹರ್ಷಿಗಳು ತಮ್ಮ ಸ್ಮೃತಿಯಲ್ಲಿ ಉತ್ತರ ನೀಡಿದ್ದಾರೆ. ದೇಶಭಂಗೇ ಪ್ರವಾಸೇ ವಾ ವ್ಯಾಧಿಷು ವ್ಯಸನೇಷ್ವಪಿ। ರಕ್ಷೇದೇವ ಸ್ವದೇಹಾದಿ ಪಶ್ಚಾದ್ ಧರ್ಮಂ ಸಮಾಚರೇತ್ । ಯುದ್ಧ ಅತೀವೃಷ್ಟಿ ಮುಂತಾದವುಗಳಿಂದ ರಾಷ್ಟ್ರಕ್ಷೋಭವುಂಟಾದಾಗ ದೀರ್ಘವಾದ ಪ್ರಯಾಸಕರವಾದ ಪ್ರಯಾಣದಲ್ಲಿದ್ದಾಗ ಅತಿಯಾದ ಖಾಯಿಲೆಗಳಿಂದ ನರಳುವಾಗ ಅತ್ಯಂತ ಆಪ್ತರು ನಿಧನರಾಗಿಯೋ, ಸಂಪತ್ತಿನ ನಾಶವಾಗಿಯೋ ವ್ಯಸನವುಂಟಾದಾಗ ಮೊದಲಿಗೆ ದೇಹರಕ್ಷಣೆಯನ್ನು ಮಾಡಿಕೊಳ್ಳಬೇಕು. ಆ ಸಮಸ್ಯೆ ತೀರಿ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಸದಾಚಾರಾದಿ ಧರ್ಮಗಳನ್ನು ಪಾಲಿಸಬೇಕು.