Prashnottara - VNP249

ದಿಗ್ವಿಜಯ ಎಂದರೇನು?


					 	

ಆಚಾರ್ಯರೇ ದಿಗ್ವಿಜಯ ಎಂದರೆ ಏನು, ಈಗಿನ ಮಠಾಧಿಶರು ಏಕೆ ಹಾಗೆ ಹಾಕಿರುತ್ತಾರೆ, ಮೊದ್ಲು ಹಾಗೂ ಇಂದಿನ ದಿಗ್ವಿಜಯಕ್ಕೆ ಏನು ವ್ಯತ್ಯಾಸ? — ಹರೀಶ್ ಕಲ್ಕೋಟಿ ದಿಗ್ವಿಜಯ ಎನ್ನುವ ಶಬ್ದದ ಅರ್ಥವನ್ನು ಸ್ವಯಂ ಶ್ರೀಮದಾಚಾರ್ಯರೇ ತಿಳಿಸಿದ್ದಾರೆ. "ದಿಶಾಂ ವಿಜಯಮಾದಿಶತ್" ಎಂದು. ಪರಾಕ್ರಮಿಯಾದ ಕ್ಷತ್ರಿಯನು ಸಕಲ ದಿಕ್ಕುಗಳಲ್ಲಿರುವ ರಾಜರ ಮೇಲೆ ಆಕ್ರಮಣ ಮಾಡಿ ಅವರನ್ನು ವಶಕ್ಕೆ ತೆಗೆದುಕೊಳ್ಳುವದು ದಿಗ್ವಿಜಯ. ಜ್ಞಾನಿಗಳಾದ ಯತಿಗಳು, ವಿದ್ವಾಂಸರು ಸಕಲ ದಿಕ್ಕುಗಳಲ್ಲಿರುವ ವಾದಿಗಳ ಬಳಿಗೆ ಹೋಗಿ ಅವರನ್ನು ಗೆದ್ದರೆ ಅದು ದಿಗ್ವಿಜಯ. ಈಗಿನ ಮಠಾಧೀಶರು ಆಯಾಯ ಊರಿಗೆ ಹೋಗುವದನ್ನು ದಿಗ್ವಿಜಯ ಎಂದು ಭ್ರಮಿಸಿದ್ದಾರೆ. ಅರ್ಜುನರು, ತಾವು ಹಾಕಿಕೊಂಡ ನಿಯಮವನ್ನು ಮೀರಿದ್ದಕ್ಕಾಗಿ, ಒಂದು ವರ್ಷ ಇಡಿಯ ಭರತ ಭೂಮಂಡಲವನ್ನು ಸಂಚಾರ ಮಾಡುತ್ತಾರೆ, ಅದನ್ನು ಮಹಾಭಾರತ ದಿಗ್ವಿಜಯ ಎನ್ನುವದಿಲ್ಲ. ಪಾಂಡವರು ಹದಿನಾಲ್ಕುವರ್ಷಗಳಲ್ಲಿ ಅನೇಕ ವರ್ಷ ಭರತ ಭೂಮಂಡಲದ ಸಂಚಾರ ಮಾಡುತ್ತಾರೆ, ಮೇರು ಪರ್ವತದಲ್ಲಿರುವ ದೇವತೆಗಳ ಅರಮನೆಗಳಿಗೂ ಹೋಗಿಬರುತ್ತಾರೆ ಅದನ್ನು ಮಹಾಭಾರತ ದಿಗ್ವಿಜಯ ಎನ್ನುವದಿಲ್ಲ. ಆದರೆ ನಮ್ಮ ಮಠಾಧೀಶರು ಒಂದು ಊರಿಗೆ ಹೋದರೆ ಅದನ್ನು ದಿಗ್ವಿಜಯ ಎಂದು ಬರೆಸಿಕೊಳ್ಳುತ್ತಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1537 Views

Comments

(You can only view comments here. If you want to write a comment please download the app.)
 • Hari,Bangalore

  6:35 PM , 25/05/2022

  ಅನಂತ ಧನ್ಯವಾದಗಳು
 • RR Kulkarni,Mumbai

  10:31 PM, 22/05/2022

  ಉತ್ತಮ ಉತ್ತರ, ಬಿಜಯಶಬ್ದಕ್ಕೆ)ನಿರ್ಗ ಮನ ಎಂಬ ಅರ್ಥ ಕೂಡ ಹೊಸ ಜಾೢನ.
  
  ನಿಮ್ಮ ಜಾೢನ ಅಪ್ರತಿಮ.
 • ರಿತ್ತಿ ವಾಸುದೇವಾಚಾರ್,ಬೆಂಗಳೂರು

  6:35 PM , 16/04/2022

  ನಿಮ್ಮ ಉತ್ತರಕ್ಕೆ ತುಂಬ ಧನ್ಯವಾದಗಳು ಆಚಾರ್ಯರೇ
  🙏🙏
 • ರಿತ್ತಿ ವಾಸುದೇವಾಚಾರ್,ಬೆಂಗಳೂರು

  11:46 AM, 16/04/2022

  ಆದ್ರೆ ಕನ್ನಡದಲ್ಲೂ ಸಹ ಬಿಜಯಂಗೈದರು ಎಂದೇ ಹೇಳುತ್ತೀವಲ್ಲ!? ಅದು ತಪ್ಪಾ?

  Vishnudasa Nagendracharya

  ಕನ್ನಡದಲ್ಲಿ ಬಿಜಯ ಎನ್ನುವ ಶಬ್ದಕ್ಕೆ ವಿಜಯ ಎಂಬ ಅರ್ಥದ ಜೊತೆಯಲ್ಲಿ ಆಗಮನ (ಬರುವದು) ನಿರ್ಗಮನ (ತೆರಳುವದು) ಎಂದರ್ಥವಿದೆ. 
  
  ಕುಮಾರವ್ಯಾಸಭಾರತದಲ್ಲಿ ಪ್ರಯೋಗಗಳನ್ನು ನೋಡಿ 
  
  ಆಗಮನ ಎಂಬ ಅರ್ಥದಲ್ಲಿ
  
  ಕೇಳು ಜನಮೇಜಯ ದರಿತ್ರೀ
  ಪಾಲ ಪಾ೦ಡವ ಪುರಿಗೆ ಲಕ್ಷ್ಮೀ
  ಲೋಲ ಬಿಜಯ೦ಗೈದು ಭೀಮಾರ್ಜುನರ ಗಡಣದಲಿ
  ಬಾಲೆಯರ ಕಡೆಗಣ್ಣ ಮಿ೦ಚಿನ
  ಮಾಲೆಗಳ ಲಾಜಾಭಿವರುಷದ
  ಲಾಲನೆಯ ರಚನೆಯಲಿ ಹೊಕ್ಕನು ರಾಜಮ೦ದಿರವ ೧
  
  ಲಕ್ಷ್ಮೀಲೋಲ ಶ್ರೀಕೃಷ್ಣದೇವರು
  ಪಾಂಡವಪುರಿಗೆ ಇಂದ್ರಪ್ರಸ್ಥಕ್ಕೆ
  ಬಿಜಯಂಗೈದು ಆಗಮಿಸಿ. 
  
  
  ನಿರ್ಗಮನ ಎಂಬ ಅರ್ಥದಲ್ಲಿ — 
  
  ಅರಸ ಕೇಳ್ ಮುನಿಯಿತ್ತ ಮಂತ್ರಾ
  ಕ್ಷರದ ಕರಹಕೆ ತಳುವಿದರೆ ದಿನ
  ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ 
  ಧರೆಗೆ ಬಂದನು ಸೂರ್ಯನಾತನ
  ಕಿರಣ ಲಹರಿಯ ಹೊಯ್ಲಿನಲಿ ಸರ
  ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ೧೮
  
  ಸರಸಿರುಹಮುಖಿ ಕಮಲದಂತಹ ಮುಖವುಳ್ಳ ಕುಂತೀದೇವಿಯರು
  ನೀವು ಬಿಜಯಂಗೈಯಿ ನೀವು ಹೊರಡಿ 
  ಎನುತ ಎಂದು ಹೇಳುತ್ತ
  ಬೆಚ್ಚಿದಳು, ಸೂರ್ಯದೇವರು ಬಂದಾಗ ಗಾಬರಿಯಾದರು.
  
  ದಿಗ್ವಿಜಯಶಬ್ದಕ್ಕೆ ಆಗಮನ ನಿರ್ಗಮನ ಎಂದರ್ಥವಿಲ್ಲ.