25/03/2017
ಘನಘೋರವಾದ ಕುರುಕ್ಷೇತ್ರದ ಯುದ್ಧ. ಜಯದ್ರಥನನ್ನು ಇಂದು ಸಂಜೆಯ ಒಳಗೆ ಕೊಂದೇ ಕೊಲ್ಲುತ್ತೇನೆ, ಎಂದು ಅರ್ಜುನ ಪ್ರತಿಜ್ಞೆ ಮಾಡಿ ಹೊರಟಿರುತ್ತಾನೆ. ಜಯದ್ರಥನನ್ನು ಕೊಲ್ಲಲಿಕ್ಕಾಗದಿದ್ದರೆ ಅರ್ಜುನ ಅಗ್ನಿಪ್ರವೇಶ ಮಾಡುತ್ತಾನೆ, ಸುಲಭವಾಗಿ ಅವನ ಸಾವಾಗುತ್ತದೆ ಎಂದು ಎಣಿಸಿದ ಕೌರವರು ಮಹಾಪ್ರಯತ್ನ ಮಾಡಿ ಅರ್ಜುನನ್ನು ಎಲ್ಲ ಕಡೆಯಿಂದಲೂ ತಡೆಹಿಡಿದಿರುತ್ತಾರೆ. ಅಂತಹ ಭೀಕರ ಪರಿಸ್ಥಿತಿಯಲ್ಲಿಯೂ ರಥಕ್ಕೆ ಸ್ಥಳ ಮಾಡಿಕೊಳ್ಳುತ್ತ ಕೃಷ್ಣ ರಥ ಮುನ್ನಡೆಸುತ್ತಿರುತ್ತಾನೆ. ಬಳಲಿದ ಕುದುರೆಗಳು ಬಾಯಾರಿ ಬಿಡುತ್ತವೆ. ಆಗ ಯುದ್ಧದ ಮಧ್ಯದಲ್ಲಿಯೇ ರಥವನ್ನು ನಿಲ್ಲಿಸಿ, ರಥದಿಂದ ಕುದುರೆಗಳನ್ನು ಬಿಚ್ಚಿ, ಅವುಗಳಿಂದ ತಗುಲಿದ್ದ ಬಾಣಗಳನ್ನು ತೆಗೆದು, ಮುಲಾಮು ಹಚ್ಚಿ, ನೀರು ಕುಡಿಸಿ, ಆಹಾರ ತಿನ್ನಿಸಿ ಅವುಗಳ ಶ್ರಮವನ್ನು ಶ್ರೀಕೃಷ್ಣ ಪರಿಹಾರ ಮಾಡುತ್ತಾನೆ. ನೀರು ಸಾಲದು ಎಂದಾಗ ಅರ್ಜುನ ಸರೋವರವನ್ನೇ ನಿರ್ಮಿಸುತ್ತಾನೆ. ರಣರಂಗದ ಮಧ್ಯದಲ್ಲಿ ಒಂದು ಉದ್ಯಾನವನದಲ್ಲಿ ಇದ್ದಂತೆ ವರ್ತಿಸಿದ ಆ ಕೃಷ್ಣಾರ್ಜುನರ ಅದ್ಭುತ ಸಾಹಸದ ಚಿತ್ರಣ ಈ ಭಾಗದಲ್ಲಿದೆ. ನರಗೆ ಸಾರಥಿಯಾಗಿ ರಣದೊಳು ತುರಗ ನೀರಡಿಸಿದರೆ ವಾರಿಯ ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ | ಶಿರವ ಕೆಡಹಿಸಿ ಅವನ ತಂದೆಯ ಕರತಳಕೆ ನೀಡಿಸಿದೆ ಹರ ಹರ ಪರಮಸಾಹಸಿ ನೀನು ರಕ್ಷಿಸು ನಮ್ಮನನವರತ ॥ ೩೪ ॥
Play Time: 38:34
Size: 7.18 MB