10/05/2019
ವಜ್ರ, ಮಾಣಿಕ್ಯ ಮುಂತಾದ ಕೇವಲ ಹರಳುಗಳಿವೆ ಎಂದರೂ ಅವನ್ನು ನಾವು ಮೈಮೇಲೆ ಧರಿಸಲು ಸಾಧ್ಯವಿಲ್ಲ. ಒಂದು ಬಂಗಾರದ ಗಟ್ಟಿ ಇದೆ ಎಂದರೂ ಅದನ್ನು ಧರಿಸಲು ಸಾಧ್ಯವಿಲ್ಲ. ಬಂಗಾರದ ಗಟ್ಟಿಯನ್ನು ಕರಗಿಸಿ, ಅದರಲ್ಲಿ ರತ್ನಗಳನ್ನು ಪೋಣಿಸಿದಾಗ ಆ ರತ್ನಮಾಲೆಯನ್ನು ಕಂಠದಲ್ಲಿ ಧರಿಸಲು ಸಾಧ್ಯ. ಹಾಗೆ ಪರಮಾತ್ಮನ ಮಾಹಾತ್ಮ್ಯಗಳೆಂಬ, ಸಕಲ ತತ್ವಗಳೆಂಬ ರತ್ನಗಳನ್ನು ಪರೀಕ್ಷಿತರ, ಶೌನಕರ ಪ್ರಶ್ನೆಗಳು ಎಂಬ ಬಂಗಾರದ ತಂತಿಯಲ್ಲಿ ವೇದವ್ಯಾಸದೇವರು ಹೆಣೆದು ಅದಕ್ಕೆ ಭಾಗವತ ಎಂದು ಹೆಸರಿನ್ನಿಟ್ಟಿದ್ದಾರೆ. ಪ್ರಶ್ನೆಗಳೆಂಬ ತಂತಿಯಲ್ಲಿರುವ ತತ್ವರತ್ನಗಳ ಈ ಹಾರವನ್ನು ಸಜ್ಜನರು ಸದಾ ಕಂಠದಲ್ಲಿ ನಾವು ಧರಿಸಬೇಕು, ಅರ್ಥಾತ್ ಇಡಿಯ ಭಾಗವತ ನಮ್ಮ ದೇಹ ಇಂದ್ರಿಯ ಮನಸ್ಸುಗಳನ್ನು ಅವರಿಸಿ ಅವಕ್ಕೆ ಭೂಷಣವಾಗಿ ನಿಲ್ಲಬೇಕು. ಭಾಗವತ ಅನೇಕ ಸಂವಾದರೂಪವಾದದ್ದು. ಪರೀಕ್ಷಿತ್-ಶುಕ ಸಂವಾದ, ಸೂತ-ಶೌನಕ ಸಂವಾದ, ವಿದುರ-ಮೈತ್ರೇಯಸಂವಾದ ಬ್ರಹ್ಮ-ನಾರದ ಸಂವಾದ, ಬ್ರಹ್ಮ-ನಾರಾಯಣ ಸಂವಾದ ಹೀಗೆ ಅನೇಕ ಸಂವಾದರೂಪವಾದದ್ದು. ನೇರವಾಗಿ ತತ್ವವನ್ನು ಹೇಳದೇ ಇಂತಹವರು ಇಂತಹ ಪ್ರಶ್ನೆ ಮಾಡಿದ್ದರು, ಇಂತವಹರು ಉತ್ತರ ನೀಡಿದರು ಎಂದು ಯಾಕೆ ಹೇಳಬೇಕು ಎಂಬ ಪ್ರಶ್ನೆಗೆ ಶಾಸ್ತ್ರ ನೀಡುವ ನಾಲ್ಕು ಉತ್ತರಗಳ ವಿವರಣೆ ಇಲ್ಲಿದೆ. ಶೌನಕರು ಸೂತರಿಗೆ ಮಾಡಿದ ಪ್ರಶ್ನೆ, ಅದಕ್ಕೆ ಉತ್ತರಗಳು, ವೇದವ್ಯಾಸದೇವರು ನಾರದರಿಗೆ ಮಾಡಿದ ಪ್ರಶ್ನೆ, ಅವರು ನೀಡಿದ ಉತ್ತರಗಳು, ಪರೀಕ್ಷಿದ್ರಾಜರು ಋಷಿಗಳಿಗೆ ಮಾಡಿದ ಪ್ರಶ್ನೆ, ಶುಕಾಚಾರ್ಯರ ಆಗಮನ, ಆ ಶುಕಾಚಾರ್ಯರು ನೀಡಿದ ಉತ್ತರ, ಆ ನಂತರ ನಾರದರು ಬ್ರಹ್ಮದೇವರ ಬಳಿಯಲ್ಲಿ ಮಾಡಿದ ಪ್ರಶ್ನೆಗಳು ಅವುಗಳಿಗೆ ಬ್ರಹ್ಮದೇವರು ನೀಡಿದ ಉತ್ತರ, ಆ ನಂತರ ಆ ನಂತರ ಮತ್ತೆ ಪರೀಕ್ಷಿದ್ರಾಜರು ಮಾಡಿದ ಪ್ರಶ್ನೆಗಳು ಹೀಗೆ ಮೊದಲನೆಯ ಸ್ಕಂಧದಿಂದ ಆರಂಭಿಸಿ ಎರಡನೆಯ ಸ್ಕಂಧದ ಕಡೆಯವರೆಗೆ ಭಾಗವತ ಪ್ರಶ್ನೋತ್ತರಗಳಲ್ಲಿ ಬೆಳೆದು ಬಂದ ಬಗೆಯ ಸಿಂಹಾವಲೋಕನ ಇಲ್ಲಿದೆ. ಇಲ್ಲಿಗೆ ಶ್ರೀಮದ್ ಭಾಗವತದ ಎರಡನೆಯ ಸ್ಕಂಧ ಮುಕ್ತಾಯವಾಗುತ್ತದೆ. ದೇವರ ನಾಮಸ್ಮರಣೆಯನ್ನೂ ನಿರಂತರವಾಗಿ ಮಾಡಲಿಕ್ಕೆ ಸಾಧ್ಯವಿಲ್ಲದ ಈ ಘೋರ ಕಲಿಯುಗದಲ್ಲಿ ಶ್ರೀಮದ್ ಭಾಗವತದ ಎರಡು ಸ್ಕಂಧಗಳಲ್ಲಿನ ಪ್ರತಿಯೊಂದು ಶ್ಲೋಕದ ಅರ್ಥಾನುಸಂಧಾನ, ಅದೂ ಶ್ರೀಮದ್ ಭಾಗವತತಾತ್ಪರ್ಯನಿರ್ಣಯ ಮತ್ತು ಶ್ರೀಮದ್ ವಿಜಯಧ್ವಜೀಯಸಹಿತವಾಗಿ ಮಾಡುವದು ನಮಗೆ ಅಸಾಧ್ಯವಾದ ಕಾರ್ಯ. ವಿದ್ವಚ್ಚಕ್ರವರ್ತಿಗಳಾದ ಪರಮಪೂಜ್ಯ ಶ್ರೀ ಗೌಡಗೆರೆ ಆಚಾರ್ಯರಿಂದ ಪದವಾಕ್ಯಪ್ರಮಾಣಜ್ಞರು, ಸರ್ವತಂತ್ರಸ್ವತಂತ್ರರು ಎಂದು ಸಂಸ್ತುತಿಸಲ್ಪಟ್ಟ, ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರರಾದ ಮಹಾತಪಸ್ವಿಗಳೂ, ಕರುಣಾಸಮುದ್ರರೂ ಆದ ಶ್ರೀಮದ್ ವಿದ್ಯಾವಾರಿಧಿತೀರ್ಥಗುರುವರೇಣ್ಯರ ಪರಮಾನುಗ್ರಹದಿಂದ, ಅವರ ತಪಃಶಕ್ತಿಯಿಂದಲೇ ನಡೆಯುತ್ತಿರುವ ಈ ಜ್ಞಾನಕಾರ್ಯವನ್ನು ಅವರ ಅಂತರ್ಯಾಮಿಯಾದ ಸಮಸ್ತ ಯತಿವರೇಣ್ಯರ ಅಂತರ್ಯಾಮಿಯಾದ ಶ್ರೀಮದ್ ವಿಜಯಧ್ವಜಾಚಾರ್ಯರ ಅಂತರ್ಯಾಮಿಯಾದ ಶ್ರೀಮನ್ ಮಧ್ವಾನುಜಾಚಾರ್ಯರ ಅಂತರ್ಯಾಮಿಯಾದ ಕಾವೇರಿ-ಗಣಪತಿ ಮುಂತಾದ ಸಕಲ ದೇವತಾಂತರ್ಯಾಮಿಯಾದ ಶ್ರೀಶುಕಾಚಾರ್ಯರ ಅಂತರ್ಯಾಮಿಯಾದ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಹೃತ್ಪದ್ಮ ಮಧ್ಯ ನಿವಾಸಿಯಾದ ಅನಂತಗುಣಪೂರ್ಣನಿಗೆ ಸರ್ವದೋಷ ದೂರನಿಗೆ ಜಗಜ್ಜನ್ಮಾದಿಕಾರಣನಿಗೆ ಲಕ್ಷ್ಮೀರಮಣನಿಗೆ ಕರುಣಾಸಿಂಧುವಿಗೆ ಶ್ರೀ ಲಕ್ಷ್ಮೀನೃಸಿಂಹ, ವಿಶ್ವನಾಮಕ ವ್ಯಾಸಮುಷ್ಟಿಗತ ವೇದವ್ಯಾಸ, ಹನೂಮತ್ಸಮೇತ ಸೀತಾಪತಿ ಮೂಲಪಟ್ಟಾಭಿರಾಮ, ಭೈಷ್ಮೀಸತ್ಯಾಸಮೇತ ಶ್ರೀಮನ್ಮೂಲಗೋಪಾಲಕೃಷ್ಣ ಶ್ರೀಮದ್ರಜತಪೀಠಪುರದ ಕಡೆಗೋಲು ಕೃಷ್ಣ ಮುಂತಾದ ಅನಂತರೂಪಾತ್ಮಕನಾದ ಜಗದೊಡೆಯನಿಗೆ ಸಮಗ್ರ ಜೀವಸರ್ವಸ್ವದ ಭಕ್ತಿಯಿಂದ ಸಮರ್ಪಿಸೋಣ. ಶ್ರೀಮದ್ ಭಾಗವತದ ಮುಂದಿನ ಸ್ಕಂಧಗಳ ಪ್ರವಚನ-ಶ್ರವಣಗಳೂ ಹೀಗೇ ನಡೆಯಲು ಎಂದು ಪ್ರಾರ್ಥಿಸೋಣ. ಎರಡು ಸ್ಕಂಧಗಳ ಪ್ರವಚನಗಳನ್ನು ಭಕ್ತಿ ಶ್ರದ್ಧೆಗಳಿಂದ ಶ್ರವಣ ಮಾಡಿರುವ ಎಲ್ಲ ಜಿಜ್ಞಾಸುಗಳಿಗೂ ಈ ಜ್ಞಾನಕಾರ್ಯ ನಡೆಯಲು ಸೇವೆಯನ್ನು ಸಲ್ಲಿಸಿರುವ ಎಲ್ಲ ಸಜ್ಜನರಿಗೂ ಹಾಗೂ ಹಗಲಿರುಳೆನ್ನದೆ ಕೆಲಸಗಳನ್ನು ಮಾಡುತ್ತಿರುವ ವಿಶ್ವನಂದಿನಿಯ ಎಲ್ಲ ಸಿಬ್ಬಂದಿವರ್ಗಕ್ಕೂ ದೇವರು ಪೂರ್ಣಾನುಗ್ರಹ ಮಾಡಲಿ ದೀರ್ಘವಾದ ಆಯುಷ್ಯ, ದೃಢವಾದ ಅರೋಗ್ಯ ಸಾತ್ವಿಕವಾದ ಸಂಪತ್ತು ದೇಹದಲ್ಲಿ ಶಕ್ತಿ ಮನಸ್ಸಿನಲ್ಲಿ ನೆಮ್ಮದಿ ನಿಶ್ಚಲವಾದ ಭಕ್ತಿ ಪರಿಶುದ್ಧ ಜ್ಞಾನ ಪ್ರಾಮಾಣಿಕವಾದ ವೈರಾಗ್ಯಗಳನ್ನು ಕರುಣಿಸಿ ಶ್ರೇಷ್ಠ ಸಾಧನೆಯನ್ನು ಮಾಡಿಸಲಿ ಎಂದು ಆ ಶ್ರೀಹರಿ ವಾಯು ದೇವತಾ ಗುರುಗಳಲ್ಲಿ ಪ್ರಾರ್ಥಿಸುತ್ತೇನೆ. ಅಕ್ಷಯಂ ಕರ್ಮ ಯಸ್ಮಿನ್ ಪರೇ ಸ್ವರ್ಪಿತಂ ಪ್ರಕ್ಷಯಂ ಯಾಂತಿ ದುಃಖಾನಿ ಯನ್ನಾಮತಃ ಅಕ್ಷರೋ ಯೋಜರಃ ಸರ್ವದೈವಾಮೃತಃ ಕುಕ್ಷಿಗಂ ಯಸ್ಯ ವಿಶ್ವಂ ಸದಾಜಾದಿಕಮ್ ಪ್ರೀಣಯಾಮೋ ವಾಸುದೇವಮ್। ದೇವತಾಮಂಡಲಾಖಂಡಮಂಡನಮ್।। ನಾಹಂ ಕರ್ತಾ ಹರಿಃ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್। ತಥಾಪಿ ಮತ್ಕೃತಾ ಪೂಜಾ ತತ್ಪ್ರಸಾದೇನ ನಾನ್ಯಥಾ। ತಥಾಪಿ ತತ್ಫಲಂ ಮಹ್ಯಂ ತತ್ಪ್ರಸಾದಃ ಪುನಃ ಪುನಃ। ಕರ್ಮನ್ಯಾಸೋ ಹರಾವೇವಂ ವಿಷ್ಣೋಸ್ತೃಪ್ತಿಕರಃ ಸದಾ। — ಶ್ರೀಕೃಷ್ಣಾರ್ಪಣಮಸ್ತು ಶ್ರೀ ಬ್ರಹ್ಮಣ್ಯತೀರ್ಥಗುರುಸಾರ್ವಭೌಮರ ಆರಾಧನೆಯ ದಿವಸದಿಂದ ಮೂರನೆಯ ಸ್ಕಂಧದ ಪ್ರವಚನವನ್ನು ಆರಂಭಿಸುವ ಸಂಕಲ್ಪ ಮಾಡಿದ್ದೇನೆ. ಸರ್ವವಿಘ್ನನಿವಾರಕನಾದ ಗಣಪತಿ, ಸಕಲ ಗುರು ದೇವತೆಗಳು ಶ್ರೀ ಲಕ್ಷ್ಮೀನೃಸಿಂಹದೇವರು ಅನುಗ್ರಹಿಸಿದರೆ ಮಾತ್ರ ಸಾಧ್ಯವಾಗುತ್ತದೆ.
Play Time: 61:05
Size: 5.51 MB